ಕಾಲಿಲ್ಲದಿದ್ದರೂ ಕುಣಿದು ಖ್ಯಾತಿ ಪಡೆದವ
Team Udayavani, Jul 3, 2022, 6:10 AM IST
ಎಲ್ಲವೂ ಇದ್ದರೂ ಏನೋ ಕಡಿಮೆಯಾಗಿದೆ ಎಂದು ಬದುಕುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಅಂಥವರ ನಡುವೆಯೇ ನ್ಯೂನತೆಗಳಿದ್ದರೂ ಸಾಧಿಸಿ ತೋರಿಸಬಲ್ಲೆ ಎನ್ನುವಂಥವರೂ ಸಾಕಷ್ಟು ಮಂದಿಯಿದ್ದಾರೆ. ಹುಟ್ಟಿ ಕೆಲವೇ ತಿಂಗಳುಗಳಲ್ಲಿ ಮೈಗಂಟಿಕೊಂಡ ಪೋಲಿಯೋ ರೋಗವು ಕಾಲುಗಳನ್ನೇ ಕಸಿದುಕೊಂಡರೂ, ಛಲ ಬಿಡದೆ ಭರತನಾಟ್ಯ ಕಲಿತು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಕೊಟ್ಟು, ಈಗ 90ಕ್ಕೂ ಅಧಿಕ ಮಕ್ಕಳಿಗೆ ಗುರುವಾಗಿರುವ ಭರತನಾಟ್ಯ ಕಲಾವಿದ ಹುಸ್ನೈನ್ ಅವರ ಜೀವನಗಾಥೆ ಇಲ್ಲಿದೆ.
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಹುಸ್ನೆ„ನ್(29) ಅವರಿಗೆ ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ಜ್ವರ ಕಾಣಿಸಿಕೊಂಡಿತ್ತು. ಜ್ವರ ಯಾವ ಪ್ರಮಾಣ ಕ್ಕೇರಿತ್ತೆಂದರೆ, ಅದರಿಂದಾಗಿ ಪೋಲಿಯೋ ಬಾಧಿಸಿತು. ಪೋಲಿಯೋದಿಂದಾಗಿ ಕಾಲುಗಳು ಸ್ವಾಧೀನ ಕಳೆದು ಕೊಂಡವು. ಹುಸ್ನೈನ್ ಅವರಿಗೆ ವೀಲ್‌ಚೇರ್ ಕಾಲಾಗ ಬೇಕಾಯಿತು. ಮುಂದೆ ಅವರಿಗೆ ಜೀವನವೇ ದೊಡ್ಡ ಸವಾಲಾಗಿತ್ತು. ಬದುಕಿನ ಬಗ್ಗೆ ಸಾಕಷ್ಟು ಪ್ರಶ್ನೆಗಳಿಟ್ಟು ಕೊಂಡು ಬದುಕಲಾರಂಭಿಸಿದ್ದ ಹುಸ್ನೆ„ನ್ ಅವರಿಗೆ 1995ರ ಕಾಲದಲ್ಲಿ ನೆರವಾಗಿ ಬಂದಿದ್ದು ದಿಲ್ಲಿಯ ಅಮರ ಜ್ಯೋತಿ ಚಾರಿಟೆಬಲ್ ಟ್ರಸ್ಟ್. ಅಲ್ಲಿ ಶಿಕ್ಷಣ ಕಲಿ ಯಲು ಆರಂಭಿಸಿದ ಅವರಿಗೆ ವಿದ್ಯಾಭ್ಯಾಸದ ಜತೆಯಲ್ಲಿ ನಾಟ್ಯದ ಬಗ್ಗೆಯೂ ಅಭಿರುಚಿ ಬೆಳೆಯಿತು. ವೀಲ್‌ಚೇರ್ ಮೂಲಕವೇ ಜೀವನ ನಡೆಯುತ್ತಿದ್ದರೂ, ಭರತನಾಟ್ಯದತ್ತ ಒಲವು ಬೆಳೆಯಿತು. ಅದರಂತೆ ಅವರು ಭರತನಾಟ್ಯ ಕಲಿಕೆಯಲ್ಲೂ ತೊಡಗಿಸಿಕೊಂಡರು. ಅಲ್ಲೇ ಅವರು ನರ್ಸರಿಯಿಂದ 8ನೇ ತರಗತಿ ವರೆಗೆ ಶಿಕ್ಷಣ ಪಡೆದರು.
ಭರತನಾಟ್ಯ ಅಭ್ಯಾಸ ಮಾಡಿದ್ದ ಹುಸ್ನೈನ್ ಅವರಿಗೆ 12 ವರ್ಷದವರಿದ್ದಾಗ, ಅಂದರೆ 2003ರಲ್ಲಿ ಮೊದಲ ಬಾರಿಗೆ ದಿಲ್ಲಿಯ ತಲಕಟೋರಾ ಸ್ಟೇಡಿಯಂನಲ್ಲಿ ವೇದಿಕೆ ಕಾರ್ಯಕ್ರಮ ಕೊಡಲು ಅವಕಾಶ ಸಿಕ್ಕಿತು. ಕಾರ್ಯಕ್ರಮದ ವೇದಿಕೆಯ ಮೇಲೆ 150 ಕಲಾವಿದರೊಂದಿಗೆ ಹುಸ್ನೆ„ನ್ ಇದ್ದಾರಾದರೂ, ಅವರಿಗೆ ಅದು ಬದುಕು ಬದಲಾ ಯಿಸುವ ಕ್ಷಣವಾಗಿತ್ತು. ವಿಕಲಚೇತನರಾದದ್ದೆ ಶಾಪ ಎನ್ನುವಂತೆ ನೋಡಿದ ಸಮಾಜದೆದುರು ವೇದಿಕೆ ಮೇಲೆ ಕಾರ್ಯಕ್ರಮ ಕೊಡುವಷ್ಟು ಸಾಮರ್ಥ್ಯ ನನ್ನಲ್ಲಿದೆ ಎನ್ನುವ ಆತ್ಮವಿಶ್ವಾಸ ಬೆಳೆಯಿತು.
ಇದೇ ರೀತಿ ಭರತನಾಟ್ಯದಲ್ಲಿ ಹೆಚ್ಚಿನ ಅಭ್ಯಾಸ ಮಾಡಿದ ಹುಸ್ನೈನ್ 2016ರಲ್ಲಿ ತಮ್ಮ ಕಲೆಯನ್ನು ಇತರರಿಗೂ ಹಂಚುವ ನಿಟ್ಟಿನಲ್ಲಿ “ವಿ ಆರ್ ಒನ್’ ಹೆಸರಿನ ಭರತನಾಟ್ಯ ಶಾಲೆ ಯೊಂದನ್ನು ಆರಂಭಿಸಿದರು. ಅವ ರೊಂದಿಗೆ ಅವರದ್ದೇ ರೀತಿಯಲ್ಲಿ ಅಂಗವೈಕಲ್ಯವಿದ್ದರೂ ನಾಟ್ಯದಲ್ಲಿ ಸಾಧನೆ ಮಾಡಿದ್ದ ಏಳು ಮಂದಿ ಕೈ ಜೋಡಿಸಿ ದರು. ಕಾಲಿಲ್ಲದವರು, ಕಿವುಡರು, ಮೂಗರು ಸೇರಿ ಕೊಂಡು ಆರಂಭಿಸಿದ ಭರತನಾಟ್ಯ ಶಾಲೆಯಲ್ಲಿ ಇಂದು 90ಕ್ಕೂ ಅಧಿಕ ವಿದ್ಯಾರ್ಥಿಗಳು ನೃತ್ಯಾಭ್ಯಾಸ ಮಾಡು ತ್ತಿದ್ದಾರೆ. 8ನೇ ವಯಸ್ಸಿನವರಿಂದ ಹಿಡಿದು 65ನೇ ವಯಸ್ಸಿನವರಿನವರೆಗೂ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.
ಹುಸ್ನೈನ್ ನೃತ್ಯ ಶಾಲೆ ಆರಂಭಿಸುವಾಗ ಒಂದೇ ಒಂದು ಉದ್ದೇಶ ಅವರಲ್ಲಿತ್ತು. “ಸಮಾಜ ನಮ್ಮನ್ನು ವಿಕಲಚೇತನರಂತೆ ನೋಡದೆಯೇ ಸಾಮಾನ್ಯ ಮನುಷ್ಯರಂತೆ ನೋಡಬೇಕು. ಸಾಮಾನ್ಯರು ಬದುಕುವಂತೆ ನಾವೂ ಬದುಕಬಲ್ಲೆವು’ ಎನ್ನುವುದನ್ನು ತೋರಿಸಬೇಕೆನ್ನುವ ಉದ್ದೇಶ ಅದಾಗಿತ್ತು.
ಆದರೆ ಸಮಾಜ ಅಷ್ಟು ಸುಲಭದಲ್ಲಿ ಹುಸ್ನೈನ್ ಅವರನ್ನು ಒಪ್ಪಿಕೊಂಡಿರಲಿಲ್ಲ. ಕಾರ್ಯಕ್ರಮ ಕೊಡು ತ್ತೇವೆ ಎಂದು ಹುಸ್ನೈನ್ ಅವರ ತಂಡ ಯಾರ ಬಳಿಯೇ ಹೋದರೂ ಎಲ್ಲರೂ ಅವರನ್ನು ಪ್ರಶ್ನಾರ್ಥಕವಾಗಿಯೇ ನೋಡುತ್ತಿದ್ದರು. “ನೀವು ಕಾರ್ಯಕ್ರಮ ಕೊಡುತ್ತೀರಾ? ನಿಮ್ಮಿಂದ ಅದು ಸಾಧ್ಯವೇ? ಕಾಲಿಲ್ಲದ ನೀವು ಕೇವಲ ಕೈಗಳಲ್ಲಿ ನೃತ್ಯ ಮಾಡುತ್ತೀರಾ? ನಿಮ್ಮ ಕಾರ್ಯಕ್ರಮ ಮಾಡುವ ನಮಗೆ ನಷ್ಟವಾಗಬಹುದು’ ಎನ್ನುವಂತಹ ಋಣಾತ್ಮಕ ಮಾತುಗಳೇ ಕೇಳಿಬರಲಾರಂಭಿಸಿದವು. ಕಾರ್ಯಕ್ರಮ ಮಾಡಿಸಲು ಒಪ್ಪಿದವರೂ ಅಂಗವೈಕಲ್ಯವೆಂಬ ಕನಿಕರ ದಿಂದಲೇ ಒಪ್ಪುತ್ತಿದ್ದರು. ಕಾರ್ಯಕ್ರಮ ನೋಡುವುದಕ್ಕೆ ಬರುವವರೂ ಅದೇ ಕನಿಕರದಿಂದಲೇ ಬರುತ್ತಿದ್ದರು. ಆದರೆ ಈ ಕನಿಕರವೆಲ್ಲ ನೃತ್ಯ ಆರಂಭವಾಗಿ ಒಂದೆರೆಡು ನಿಮಿಷಗಳ ಕಾಲ ಮಾತ್ರವೇ ಇರುತ್ತಿತ್ತು ಎನ್ನುತ್ತಾರೆ ಹುಸ್ನೈನ್. ಏಕೆಂದರೆ ನಮ್ಮ ನೃತ್ಯ ಎಷ್ಟರ ಮಟ್ಟಿಗೆ ಸುಂದರವಾಗಿರುತ್ತಿತ್ತು ಎಂದರೆ ಕಾರ್ಯಕ್ರಮ ಮುಗಿಯು ವುದರೊಳಗೆ ಎಲ್ಲರೂ ನಿಂತು, ಹುಬ್ಬೇರಿಸಿಕೊಂಡು, ಚಪ್ಪಾಳೆ ತಟ್ಟಲಾರಂಭಿಸುತ್ತಿದ್ದರು. ಸಾಮಾನ್ಯರು ನೃತ್ಯ ಮಾಡಿದಾಗ ನಿಮಗಾಗುವ ಅನುಭವಕ್ಕೂ ಮೀರಿದ ಅನುಭವವೊಂದನ್ನು ಈ ತಂಡ ನೀಡಲಾರಂಭಿಸಿತು.
ಹುಸ್ನೆ„ನ್ ಅವರಿಗೆ ಕೇವಲ ಅಂಗವೈಕಲ್ಯ ಒಂದೇ ಸಮಸ್ಯೆಯಾಗಿರಲಿಲ್ಲ. ಮುಸ್ಲಿಂ ಧರ್ಮಕ್ಕೆ ಸೇರಿದ ಕುಟುಂಬದವರಾದ ಅವರಿಗೆ ಭರತನಾಟ್ಯ ಕಲಿಯುವುದು ಒಂದು ರೀತಿಯಲ್ಲಿ ಸವಾಲಿನ ಕೆಲಸವಾಗಿತ್ತು. ತನ್ನ ಆಯ್ಕೆಯನ್ನು ಕುಟುಂಬಸ್ಥರಿಗೆ ತಿಳಿಸಿ, ಅವರನ್ನು ಒಪ್ಪಿಸುವುದು ಕಷ್ಟವಾಗಿತ್ತು. ಮೊದ ಮೊದಲಿಗೆ ಹುಸ್ನೈನ್ ಅವರ ಭರತನಾಟ್ಯಕ್ಕೆ ಕುಟುಂಬದ ಕಡೆಯಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಹುಸ್ನೈನ್ ತಮ್ಮ ಕಲೆಯ ಮೂಲಕ ಆ ವಿರೋಧ ಗೆಲ್ಲುವಲ್ಲಿ ಯಶಸ್ವಿ ಯಾದರು. ವಿಆರ್‌ಒನ್ ತಂಡದ ಕಾರ್ಯಕ್ರಮಗಳ ಬಗ್ಗೆ ಸುದ್ದಿ ಹೆಚ್ಚಲಾರಂಭಿಸಿತು. ಮಾಧ್ಯಮಗಳು ತಂಡವನ್ನು ಹೊಗಳಿ ಬರೆಯಲಾರಂಭಿಸಿದವು. ಅದನ್ನು ಕಂಡ ಹುಸ್ನೈನ್ ಕುಟುಂಬ ಮಗನ ಬಗ್ಗೆಯಿದ್ದ ಹೆಮ್ಮೆಯನ್ನು ಹೆಚ್ಚಿಸಿಕೊಂಡಿತು.
“ಅಂಗವೈಕಲ್ಯ ಇರುವ ನೀವು ಬೇರೆ ಕ್ಷೇತ್ರಗಳಲ್ಲೂ ಸಾಧನೆ ಮಾಡಬಹುದಿತ್ತು, ಜೀವನ ರೂಪಿಸಿ ಕೊಳ್ಳಬಹುದಿತ್ತು. ಆದರೆ ಭರತನಾಟ್ಯವನ್ನೇ ಏಕಾಗಿ ಆಯ್ಕೆ ಮಾಡಿಕೊಂಡಿರಿ?’ ಎನ್ನುವುದು ಹುಸ್ನೈನ್ ಅವರಿಗೆ ಅನೇಕರು ಕೇಳುವ ಪ್ರಶ್ನೆ. ಅದಕ್ಕೆ ಅವರು, “ಬಾಲಿವುಡ್ ನಟ ಶಾರುಖ್ ಖಾನ್ ಪ್ರಸಿದ್ಧ ನಟರಾಗಿದ್ದಾರೆ. ಅವರನ್ನು ಏಕಾಗಿ ನಟರಾದಿರಿ ಎಂದು ಪ್ರಶ್ನಿಸಲಾಗುತ್ತದೆಯೇ? ಅವರು ನಟರಾಗುವು ದಕ್ಕಾಗಿಯೇ ಹುಟ್ಟಿದ್ದು ಎನ್ನಬಹುದು. ಅದೇ ರೀತಿ ನಾನು ಕೂಡ. ನಾನು ಭರತನಾಟ್ಯ ಕಲಾವಿದ ನಾಗುವುದಕ್ಕೇ ಹುಟ್ಟಿದ್ದು ಎನ್ನುವುದು ನನ್ನ ಭಾವನೆ. ನನಗೆ ವೇದಿಕೆ, ಅದರ ಮೇಲಿನ ನೃತ್ಯ ಕೊಡುವಷ್ಟು ಸಂತೋಷವನ್ನು ಬೇರಾವುದೂ ಕೊಡುವುದಕ್ಕೆ ಸಾಧ್ಯವಿಲ್ಲ’ ಎಂದು ಮನಮುಟ್ಟುವ ಉತ್ತರವನ್ನು ಕೊಡುತ್ತಾರೆ.
ಈಗ ಹುಸ್ನೈನ್ ಅವರ ವಿಆರ್‌ಒನ್ ತಂಡ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಕಾರ್ಯಕ್ರಮ ಕೊಡುತ್ತಿದೆ. ಎಂಟು ದೇಶಗಳಲ್ಲಿ ಕಾರ್ಯ ಕ್ರಮಗಳನ್ನು ಕೊಟ್ಟಿದೆ. 1500ಕ್ಕೂ ಹೆಚ್ಚು ವೇದಿಕೆ ಕಾರ್ಯಕ್ರಮಗಳನ್ನು ಕೊಟ್ಟಿದೆ. ವಿಆರ್ ಒನ್ ಡ್ಯಾನ್ಸ್ ಅಕಾಡೆಮಿಗೆ ಇಂದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಹೆಸರಿದೆ. ಇದೇ ಗುಂಪಿನ ಒಬ್ಬರಾದ ಗುಲ್ಶನ್ ಕುಮಾರ್ ಅವರು ವೀಲ್‌ಚೇರ್ ಮೇಲೆಯೇ ಒಂದೇ ನಿಮಿಷದಲ್ಲಿ ಅತೀ ಹೆಚ್ಚು ಸ್ಟಂಟ್‌ಗಳನ್ನು ಮಾಡುವ ಮೂಲಕ ಗಿನ್ನೆಸ್ ರೆಕಾರ್ಡ್‌ನೂ° ಮಾಡಿದ್ದಾರೆ. ವಿಆರ್‌ಒನ್ ಅಕಾಡೆಮಿಯು ಕೇವಲ ಭರತನಾಟ್ಯಕ್ಕೆ ಮಾತ್ರವೇ ಸೀಮಿತವಾಗದೆ, ವಿಶೇಷಚೇತನ ಮಕ್ಕಳಿಗಾಗಿಯೇ ಸಂಗೀತ, ನೃತ್ಯ, ಕಲೆ, ನಟನೆ ತರಗತಿಗಳನ್ನೂ ನಡೆಸುತ್ತಿದೆ. ಅದಷ್ಟೇ ಅಲ್ಲದೆ ವೀಲ್‌ಚೇರ್‌ನಲ್ಲೇ ಯೋಗ ತರಗತಿಗಳನ್ನೂ ಮಾಡುತ್ತಿದೆ. ಮಾರ್ಷಲ್ ಆರ್ಟ್ಸ್ನ್ನೂ ಬಿಟ್ಟುಕೊಟ್ಟಿಲ್ಲ.
“ವೀಲ್‌ಚೇರ್ ಎಂದಾಕ್ಷಣ ಎಲ್ಲರೂ ಕಾಲಿಲ್ಲದವರಿಗೆ ನಡೆದಾಡುವುದಕ್ಕೆ ಇರುವ ಸಾಧನ ಎಂದು ಕಲ್ಪನೆ ಮೂಡಿಸಿಕೊಳ್ಳುತ್ತಾರೆ. ಆದರೆ ನಮಗೆ ಈ ವೀಲ್‌ಚೇರ್‌ಗಳೇ ಸಶಕ್ತೀಕರಣದ ಸಂಕೇತ. ಕಳೆದ 15 ವರ್ಷಗಳಿಂದ ಇದೇ ವೀಲ್‌ಚೇರ್‌ಗಳ ಮೇಲೆ ಕುಳಿತೇ ಪ್ರದರ್ಶನ ನೀಡಿರುವ ನನಗೆ ಇದರಲ್ಲೇ ಅತ್ಯಂತ ಸುಂದರವಾದ ಹೊಸ ಪ್ರಪಂಚವೊಂದು ಕಂಡಿದೆ. ನನ್ನ ಮನಸ್ಸನ್ನು ನಾನು ಹೊರಹಾಕಲು ಇರುವ ಮಾಧ್ಯಮ ನೃತ್ಯ. ನನಗಿರುವ ಆಸ್ತಿ ನನ್ನ ವೀಲ್‌ಚೇರ್. ಪ್ರಪಂಚ ಸಮಾನ ವಾಗಬೇಕು, ಅಭಿವೃದ್ಧಿ ಕಾಣಬೇಕೆಂದರೆ ನಮ್ಮಂಥ ವಿಕಲಾಂಗಚೇತನರೊಂದಿಗೆ ಇತರರೂ ಕೈ ಜೋಡಿಸ ಬೇಕು. ಅದಕ್ಕಾಗಿ ನಾವು ನಮ್ಮ ಪ್ರತೀ ಪ್ರದರ್ಶನ ದಲ್ಲಿ ನಮ್ಮಂತವರೊಂದಿಗೆ ಒಬ್ಬರು ಸಾಮಾನ್ಯರನ್ನು ಸೇರಿಸಿ ಕೊಳ್ಳುತ್ತೇವೆ. ಆ ಮೂಲಕ ಒಳಗೊಳ್ಳುವಿಕೆಯ ಸಂದೇಶವನ್ನು ರವಾನಿಸಲು ಪ್ರಯತ್ನಿಸುತ್ತಿದ್ದೇವೆ’ ಎನ್ನುತ್ತಾರೆ ವಿಆರ್‌ಒನ್ ಸಂಸ್ಥಾಪಕ ಹುಸ್ನೈನ್.
“ನನ್ನ ಅಂಗವೈಕಲ್ಯವೇ ನನ್ನ ಕುಟುಂಬಕ್ಕೆ ದೊಡ್ಡ ಸವಾ ಲಾಗಿತ್ತು. ಮನೆಗೆ ಆಧಾರವಾಗಿ ಸಾಕಬೇಕಿದ್ದ ನಾನು ಅಪ್ಪ-ಅಮ್ಮನಿಗೆ ಹೊರೆಯಾಗಿದ್ದೆ ಎಂದು ನನಗನ್ನಿಸುತ್ತಿದ್ದ ಕಾಲವೊಂದಿತ್ತು. ಆದರೆ ವಿಆರ್‌ಒನ್ ತಂಡ ಸೇರಿ, ವೇದಿಕೆ ಮೇಲೆ ಕಾರ್ಯಕ್ರಮಗಳನ್ನು ಕೊಡಲಾರಂಭಿಸಿದ ಮೇಲೆ ನನ್ನ ಆಲೋಚನೆಗಳು ಬದಲಾದವು. ಇದೀಗ ನನ್ನ ಅಪ್ಪ ನನ್ನ ಬಗ್ಗೆ ಹೆಮ್ಮೆಯಿಂದ ಎದೆ ಉಬ್ಬಿಸಿಕೊಂಡು ನಡೆಯುತ್ತಾರೆ’ ಎನ್ನುತ್ತಾರೆ ವಿಆರ್‌ಒನ್ ತಂಡದ ಇನ್ನೋರ್ವ ಸದಸ್ಯ.
“ನನ್ನ ಮಗಳಿಗೆ ಹುಟ್ಟುವಾಗಲೇ ಕೇಳುವ ಮತ್ತು ಮಾತನಾಡುವ ಶಕ್ತಿಯನ್ನು ದೇವರು ಕಸಿದುಕೊಂಡಿದ್ದ. ಪೋಷಕರಾಗಿ ನಮಗೆ ಅವಳ ಭವಿಷ್ಯದ ಬಗ್ಗೆ ಸಾಕಷ್ಟು ಚಿಂತೆಯಿತ್ತು. ಆದರೆ ಬಾಲ್ಯದಿಂದಲೂ ಅವಳಿಗೆ ನೃತ್ಯದ ಬಗ್ಗೆ ಇದ್ದ ಆಸಕ್ತಿಯನ್ನು ಗಮನಿಸಿ, ವಿಆರ್‌ಒನ್ ತಂಡಕ್ಕೆ ಅವಳನ್ನು ಸೇರಿಸಿದೆವು. ಅವಳು ಸನ್ನೆಯ ಮೂಲಕವೇ ನೃತ್ಯ ಕಲಿಯುತ್ತಿದ್ದಾಳೆ. ಈ ತಂಡದಲ್ಲಿ ಇರುವುದರಿಂದ ಅವಳನ್ನು ಯಾರೂ ಕರುಣೆಯ ದೃಷ್ಟಿಕೋನದಲ್ಲಿ ನೋಡದೆ ಕೇವಲ ಪ್ರತಿಭೆಯನ್ನು ಗುರುತಿಸುತ್ತಿದ್ದಾರೆ’ ಎನ್ನುವುದು ವಿಆರ್‌ಒನ್ ನೃತ್ಯ ಅಕಾಡೆಮಿಯಲ್ಲಿ ನೃತ್ಯ ಕಲಿಯುತ್ತಿರುವ ಬಾಲಕಿಯ ತಾಯಿಯ ಮಾತು.
ಕೃಪೆ : ಬೆಟರ್ ಇಂಡಿಯಾ
– ಮಂದಾರ ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
MUST WATCH
ಹೊಸ ಸೇರ್ಪಡೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.