ತುರ್ತು ಪರಿಸ್ಥಿತಿ ಕಾರ್ಮೋಡ
ಕೈಕೊಟ್ಟ ಪಕ್ಷೇತರರು; ಎಲ್ಲ ಸಚಿವರ ರಾಜೀನಾಮೆ ;ಇಂದು ಬಿಜೆಪಿ ಪ್ರತಿಭಟನೆ
Team Udayavani, Jul 9, 2019, 6:00 AM IST
ರಾಜ್ಯದಲ್ಲೀಗ ‘ತುರ್ತು ಪರಿಸ್ಥಿತಿ’ಯ ಕಾರ್ಮೋಡ…. ಮಳೆ ಬಾರದೇ, ಕುಡಿಯಲೂ ನೀರು ಸಿಗದ ಸ್ಥಿತಿ. 156 ತಾಲೂಕುಗಳು ಬರಪೀಡಿತ ಎಂದು ಘೋಷಿಸಿಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವಂತೆಯೇ, ಬರಪೀಡಿತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತಿಂಗಳಾಂತ್ಯದವರೆಗೆ ತುರ್ತು ಪರಿಸ್ಥಿತಿ ಅವಧಿ ಎಂದು ಘೋಷಿಸಲಾಗಿದೆ.
ಇತ್ತ ರಾಜಕೀಯದಲ್ಲೂ ತುರ್ತು ಪರಿಸ್ಥಿತಿ! ಮಂತ್ರಿಗಳು ರಾಜೀನಾಮೆ ನೀಡಿದ ನಂತರ ಸರ್ಕಾರ ಕೋಮಾಕ್ಕೆ ಜಾರಿಬಿಟ್ಟಿದೆ. ಸರ್ಕಾರ ಅಲ್ಪಮತಕ್ಕೆ ಇಳಿದಿದೆ. ಅತೃಪ್ತ ಶಾಸಕರು ರೆಸಾರ್ಟಿನಲ್ಲಿ ಕೂತರೆ, ಇನ್ನುಳಿದ ಶಾಸಕರು ಕ್ಷೇತ್ರ ಬಿಟ್ಟು ಬೆಂಗಳೂರಿಗೆ ಧಾವಿಸಿದ್ದಾರೆ. ಸಿಎಂ ಆದಿಯಾಗಿ ಎಲ್ಲ ನಾಯಕರು ಸರ್ಕಾರ ಉಳಿಸಿಕೊಳ್ಳುವ ಧಾವಂತದಲ್ಲಿದ್ದಾರೆ.
ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರದ ಕೌಂಟ್ಡೌನ್ ಆರಂಭವಾಗಿದೆಯೇ?
ಹೌದು ಎನ್ನುತ್ತಿವೆ ಎಲ್ಲಾ ಬೆಳವಣಿಗೆಗಳು. ಒಂದೆಡೆ ದಿನದಿಂದ ದಿನಕ್ಕೆ ರಾಜೀನಾಮೆ ಕೊಡುವವರ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಇತ್ತ ಕುಮಾರಸ್ವಾಮಿ ಸರ್ಕಾರದ ಸಚಿವರೆಲ್ಲರೂ ರಾಜೀನಾಮೆ ನೀಡಿ ಸರ್ಕಾರ ಉಳಿಸಿಕೊಳ್ಳಲು ಪಣತೊಟ್ಟಿದ್ದಾರೆ. ವಾಪಸ್ ಬಂದರೆ ಸೂಕ್ತ ಸ್ಥಾನಮಾನ ನೀಡುವುದಾಗಿ ಅತೃಪ್ತರಿಗೆ ಕಾಂಗ್ರೆಸ್ ನೇರ ಆಫರ್ ಕೊಟ್ಟಿದೆ. ಆದರೆ, ಇದನ್ನು ರಾಜೀನಾಮೆ ನೀಡಿರುವ ಅತೃಪ್ತರು ತಿರಸ್ಕರಿಸಿ ಸರ್ಕಾರಕ್ಕೆ ಸೆಡ್ಡು ಹೊಡೆದು ನಿಂತಿದ್ದಾರೆ. ಇವೆಲ್ಲದರ ನಡುವೆ, ಅತೃಪ್ತ ಶಾಸಕರು ನೀಡಿರುವ ರಾಜೀನಾಮೆ ಬಗ್ಗೆ ಸ್ಪೀಕರ್ ರಮೇಶ್‌ಕುಮಾರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಸರ್ಕಾರದ ಭವಿಷ್ಯ ಅಡಗಿದೆ ಎಂದೇ ವಿಶ್ಲೇಷಿಸಲಾಗಿದೆ.
ಸೋಮವಾರ ರಾಜೀನಾಮೆ ನೀಡಿದವರ ಸಾಲಿಗೆ ಪಕ್ಷೇತರರಾದ ನಾಗೇಶ್ ಮತ್ತು ಶಂಕರ್ ಸೇರಿದ್ದಾರೆ. ಮಂಗಳವಾರ ರೋಷನ್ ಬೇಗ್ ಸೇರಿ ಇನ್ನಷ್ಟು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಹೀಗಾಗಿ, ರಾಜ್ಯ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತಲೇ ಇದೆ. ಅತ್ತ ಬಿಜೆಪಿ ತನ್ನ ಸಂಖ್ಯಾಬಲವನ್ನು 105 ರಿಂದ 107ಕ್ಕೆ ಏರಿಕೆ ಮಾಡಿಕೊಂಡಿದೆ.
30 ಸಚಿವರ ರಾಜೀನಾಮೆ: ಸರ್ಕಾರ ಉಳಿಸಿಕೊಳ್ಳಲು ಭಾನುವಾರ ರಾತ್ರಿಯಿಂದಲೂ ಸರಣಿ ಸಭೆ ನಡೆಸಿದ್ದ ಮೈತ್ರಿ ಪಕ್ಷಗಳ ಮುಖಂಡರು, ಸೋಮವಾರ ಬೆಳಗ್ಗೆ ಡಿಸಿಎಂ ಡಾ.ಜಿ. ಪರಮೇಶ್ವರ ಅವರ ನಿವಾಸದಲ್ಲಿ ನಡೆಸಿದ ಉಪಾ ಹಾರ ಕೂಟದಲ್ಲೇ ಎಲ್ಲ ಕಾಂಗ್ರೆಸ್ ಮತ್ತು ಜೆಡಿಎಸ್ ಸಚಿವರ ರಾಜೀನಾಮೆ ಪಡೆಯಲು ನಿರ್ಧರಿಸಿದರು. ಕಾಂಗ್ರೆಸ್ ಸಚಿವರೆಲ್ಲರೂ ಅಲ್ಲೇ ರಾಜೀನಾಮೆ ನೀಡಿದರೆ, ಜೆಡಿಎಸ್ ಸಚಿವರು ಸಿಎಂ ಕೈಯಲ್ಲಿ ರಾಜೀನಾಮೆ ಸಲ್ಲಿಸಿದರು.
ಈ ರಾಜೀನಾಮೆ ಪಡೆಯಲು ಕಾಂಗ್ರೆಸ್ ನಾಯಕರು ಕಾಮರಾಜ್ ಸೂತ್ರ ಅನುಸರಿಸಿದರು. ಅಂದರೆ, ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಕಾಮರಾಜ್ ಅವರು ಹಿಂದೊಮ್ಮೆ ಜವಾಹರ್ ಲಾಲ್ ನೆಹರು ಪ್ರಧಾನಿಯಾಗಿದ್ದಾಗ ಕೇಂದ್ರ ಸಂಪುಟದಲ್ಲಿ ಅಸಮಾಧಾನ ಉಂಟಾದಾಗ ಎಲ್ಲ ಸಚಿವ ರಿಂದ ರಾಜೀನಾಮೆ ಪಡೆದು ಹೊಸದಾಗಿ ಸಂಪುಟ ಪುನಾ ರಚನೆ ಸೂತ್ರ ಪ್ರಸ್ತಾಪವಿಟ್ಟಿದ್ದರು. ಆ ನಂತರ ಕರ್ನಾಟಕ ದಲ್ಲೂ ರಾಮಕೃಷ್ಣ ಹೆಗಡೆ, ಬಂಗಾರಪ್ಪ ಅವರ ಅವಧಿಯಲ್ಲಿ ಈ ಸೂತ್ರದಂತೆ ಸಚಿವರ ರಾಜೀನಾಮೆ ಪಡೆಯಲಾಗಿತ್ತು.
ಅಧಿವೇಶನ ಅನುಮಾನ?: ಜು.12ರಿಂದ ವಿಧಾನ ಮಂಡಲದ ಅಧಿವೇಶನ ನಡೆಯುವುದು ಅನುಮಾನ ಎಂದು ಹೇಳಲಾಗಿದೆ. ಸಿಎಂಕುಮಾರಸ್ವಾಮಿ ಅವರು ಡಾ.ಜಿ.ಪರಮೇಶ್ವರ್ ಅವರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ಅಧಿವೇಶನ ಮುಂದೂಡಿಕೆ ಕುರಿತು ಪ್ರಸ್ತಾ ಪಿಸಿದ್ದಾರೆ ಎಂದು ಹೇಳಲಾಗಿದೆ.
ಇಂದು ರಾಜೀನಾಮೆ?
ರಾಜೀನಾಮೆ ಪರ್ವ ಮಂಗಳವಾರವೂ ಮುಂದುವರಿಯುವ ಸಾಧ್ಯತೆ ಇದೆ. ರೋಷನ್ ಬೇಗ್ ಅವರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರುವುದಾಗಿ ಪ್ರಕಟಿಸಿದ್ದಾರೆ. ಇನ್ನು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಕೂಡ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಜತೆಗೆ ಶ್ರೀಮಂತ ಪಾಟೀಲ್ ಮತ್ತು ಗಣೇಶ್ ಹುಕ್ಕೇರಿ ಅವರೂ ಪದತ್ಯಾಗ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಎಂ ರಿಸೈನ್‌ಗೆ ಆಗ್ರಹ: ಇಂದು ಬಿಜೆಪಿ ಪ್ರತಿಭಟನೆ
ಅತೃಪ್ತ ಶಾಸಕರ ರಾಜೀನಾಮೆ ಹಾಗೂ ಪಕ್ಷೇತರ ಶಾಸಕರ ಬೆಂಬಲದಿಂದಾಗಿ ಬಿಜೆಪಿ ಪಾಳಯದಲ್ಲಿ ಚಟುವಟಿಕೆಗಳೂ ಜೋರಾಗಿವೆ. ಸೋಮವಾರ ಸಂಜೆ ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿರುವ ಬಿಜೆಪಿ, ಮಂಗಳವಾರ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿದೆ. ರಾಜ್ಯ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದ್ದಾರೆ. ಜತೆಗೆ ಕಾಂಗ್ರೆಸ್, ಜೆಡಿಎಸ್‌ನ 13 ಮಂದಿ ಶಾಸಕರ ರಾಜೀನಾಮೆ ಹಾಗೂ ಪಕ್ಷೇತರ ಶಾಸಕರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆಳವಣಿಗೆ ಕುರಿತು ಚರ್ಚೆ ನಡೆದಿದೆ. ಎಲ್ಲ ಶಾಸಕರಿಗೂ ಬೆಂಗಳೂರಲ್ಲೇ ಉಳಿಯಲು ಹೇಳಿರುವ ಪಕ್ಷ, ಮತ್ತೆ ಮಂಗಳವಾರ ಸಂಜೆಯೂ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ.
ಬನ್ನಿ, ಮಂತ್ರಿ ಮಾಡ್ತೀವಿ
ಅಳಿವಿನಂಚಿನಲ್ಲಿರುವ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದ್ದು, ಅತೃಪ್ತರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲು ಹಾಲಿ ಮಂತ್ರಿಗಳ ರಾಜೀನಾಮೆ ಪಡೆಯುವ ತಂತ್ರ ಬಳಸಿದೆ. ಸೋಮವಾರ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಸರ್ಕಾರಿ ನಿವಾಸದಲ್ಲಿ ಮಂತ್ರಿಗಳಿಗೆ ಉಪಾಹಾರ ಕೂಟದ ಹೆಸರಿನಲ್ಲಿ ಸಭೆ ನಡೆಸಿ, ಪಕ್ಷದ 21 ಸಚಿವರ ರಾಜೀನಾಮೆ ಪಡೆಯಲಾಗಿದೆ. ಕಾಂಗ್ರೆಸ್‌ನ 20 ಸಚಿವರಿಂದ ಪಕ್ಷದ ನಾಯಕರು ರಾಜೀನಾಮೆ ಪಡೆದುಕೊಂಡಿದ್ದಾರೆ. ಸಭೆಯಲ್ಲಿ ಹಾಜರಿದ್ದ ಎಲ್ಲ ಸಚಿವರು ಪಕ್ಷದ ನಾಯಕರ ಸೂಚನೆ ಮೇರೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆರ್.ವಿ.ದೇಶಪಾಂಡೆ, ಶಿವಾನಂದ ಪಾಟೀಲ್, ಇ. ತುಕಾರಾಂ ಹಾಗೂ ಎಂ.ಟಿ.ಬಿ. ನಾಗರಾಜ್ ಸಭೆಗೆ ಗೈರು ಹಾಜರಾಗಿದ್ದರು. ಆದರೆ, ಪರಮೇಶ್ವರ ನಾಯ್ಕ ರಾಜೀನಾಮೆಗೆ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ. ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜೀನಾಮೆ ಸಲ್ಲಿಸಿರುವ ಶಾಸಕರು ವಾಪಸ್ ಬಂದರೆ ಸಚಿವ ಸ್ಥಾನ ನೀಡಲಾಗುವುದು ಎಂಬ ಆಫರ್ ನೀಡಿದರು. ಹಾಲಿ ಸಚಿವರು ರಾಜೀನಾಮೆ ನೀಡಿರುವುದರಿಂದ ಶೀಘ್ರವೇ ಸಂಪುಟ ಪುನಾರಚನೆ ಮಾಡಲಾಗುವುದು ಎಂದರು.
ಮುಂಬೈಗೆ ಪಕ್ಷೇತರರು
ಸೋಮವಾರದ ಅಚ್ಚರಿಯ ಬೆಳವಣಿಗೆ ಎಂದರೆ, ಸಚಿವ ಸ್ಥಾನಕ್ಕೆ ಪಕ್ಷೇತರ ಶಾಸಕರಿಬ್ಬರ ರಾಜೀನಾಮೆ. ಇತ್ತೀಚೆಗಷ್ಟೇ ಸರ್ಕಾರಕ್ಕೆ ಸೇರ್ಪಡೆಯಾಗಿದ್ದ ಇವರಿಬ್ಬರು, ಸೋಮವಾರ ರಾಜ್ಯಪಾಲರ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮೊದಲಿಗೆ ನಾಗೇಶ್ ಪದತ್ಯಾಗ ಮಾಡಿದರೆ, ಇವರ ಬೆನ್ನಲ್ಲೇ ಆರ್. ಶಂಕರ್ ಸಹ ರಾಜಭವನಕ್ಕೆ ಹೋಗಿ ರಾಜೀನಾಮೆ ಕೊಟ್ಟರು. ಇಷ್ಟೇ ಅಲ್ಲ, ಇವರಿಬ್ಬರೂ ಮುಂಬೈಗೆ ಹೋಗಿ, ಅತೃಪ್ತ ಶಾಸಕರ ಜತೆಯಾದರು. ಜತೆಗೆ, ಬಿಜೆಪಿ ಬೆಂಬಲಿಸುವುದಾಗಿ ಇವರಿಬ್ಬರೂ ರಾಜ್ಯಪಾಲರಿಗೆ ಪತ್ರ ಮುಖೇನವೇ ತಿಳಿಸಿದ್ದಾರೆ.
ಆಫರ್‌ಗೆ ಡೋಂಟ್ ಕೇರ್
”ನಮ್ಮ ಒಗ್ಗಟ್ಟು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಯಾವುದೇ ಆಫರ್ ಕೊಟ್ಟರೂ ನಾವು ರಾಜೀನಾಮೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ” ಎಂದು ಎಚ್.ವಿಶ್ವನಾಥ್ ತಿಳಿಸಿದ್ದಾರೆ. ಮುಂಬೈನಿಂದ ಮಾಧ್ಯಮದವರ ಜತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ಹೋಗಿರುವ ಬಗ್ಗೆಯೂ ಪ್ರತಿಕ್ರಿಯಿಸಿ, ‘ಪಾಪ ಅವರು ಎಐಸಿಸಿ ನಾಯಕರಿಗೆ ಏನಾದರೂ ಮಾಡುತ್ತಿದ್ದೇನೆ, ಸರ್ಕಾರ ಉಳಿಸಲು ಎಂಬುದನ್ನು ತೋರಿಸಬೇಕಲ್ಲವೇ’ ಎಂದು ಲೇವಡಿ ಮಾಡಿದ್ದಾರೆ.
ರೆಸಾರ್ಟ್‌ಗೆ ಜೆಡಿಎಸ್ ಶಾಸಕರು
ಅತೃಪ್ತ ಶಾಸಕರ ಸಾಮೂಹಿಕ ರಾಜೀನಾಮೆಯಿಂದಾಗಿ ಕಂಗೆಟ್ಟಿರುವ ಜೆಡಿಎಸ್ ಸಹ, ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್ ರಾಜಕೀಯ ಆರಂಭಿಸಿದೆ. ಎಲ್ಲ ಶಾಸಕರನ್ನು ದೇವನಹಳ್ಳಿ ಸಮೀಪದ ಪ್ರಸ್ಟೀಜ್ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿಯವರು ಸೋಮವಾರ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿ ಸಚಿವರಿಂದ ರಾಜೀನಾಮೆ ಪಡೆದರು. ನಂತರ ಎಲ್ಲ ಶಾಸಕರು ಬಸ್‌ನಲ್ಲಿ ರೆಸಾರ್ಟ್‌ಗೆ ಪ್ರಯಾಣ ಬೆಳೆಸಿದರು. ಆದರೆ, ಬೇಲೂರು ಶಾಸಕ ಲಿಂಗೇಶ್ ಅವರು ಕ್ಷೇತ್ರದಲ್ಲಿ ಕೆಲಸ ಇದೆ ಎಂದು ಹೇಳಿ ರೆಸಾರ್ಟ್‌ಗೆ ಹೋಗಲಿಲ್ಲ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಪಕ್ಷದ ನಾಯಕರು ಇದನ್ನು ತಳ್ಳಿಹಾಕಿದ್ದಾರೆ.
ಸ್ಪೀಕರ್‌ಗೆ ಕಾಂಗ್ರೆಸ್ ದೂರು
ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಕಾನೂನು ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ಸಿದ್ಧ್ದತೆ ನಡೆಸುತ್ತಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ಗೆ ದೂರು ದಾಖಲಿಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ಕುರಿತು ಸೋಮವಾರ ಡಿಸಿಎಂ ಡಾ.ಜಿ.ಪರಮೇಶ್ವರ್, ಎಂ.ಬಿ. ಪಾಟೀಲ್ ಹಾಗೂ ಕೃಷ್ಣ ಬೈರೇಗೌಡ ಕುಮಾರಕೃಪ ಅತಿಥಿ ಗೃಹದಲ್ಲಿ ಪ್ರತ್ಯೇಕ ಸಭೆ ನಡೆಸಿ, ತಮಿಳುನಾಡು ಮಾದರಿಯಲ್ಲಿ ಸಂವಿಧಾನದ ಹತ್ತನೇ ಪರಿಚ್ಛೇದದ 164 (1ಬಿ) ಪ್ರಕಾರ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅವರ ಶಾಸಕತ್ವವನ್ನು ಅನರ್ಹಗೊಳಿಸುವಂತೆ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಬಿಜೆಪಿಯವರು ಏನ್ ಮಾಡ್ತಾರೋ, ಬೇರೆಯವರು ಏನ್ ಮಾಡ್ತಾರೋ ನನಗೆ ಸಂಬಂಧವಿಲ್ಲ. ರಾಜ್ಯದ ಆಡಳಿತ ಜವಾಬ್ದಾರಿ ನನ್ನ ಮೇಲಿದ್ದು ಅದನ್ನು ನಾನು ನಿರ್ವಹಿಸುತ್ತೇನೆ. ರಾಜಕೀಯ ಬೆಳವಣಿಗೆಗಳ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಬಿಜೆಪಿಯವರ ಕನಸು ನನಸಾಗುವುದಿಲ್ಲ. ಮುಂಬೈನಲ್ಲಿರುವ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರ ಬೇಡಿಕೆಗಳಿಗೂ ಸ್ಪಂದಿಸಲಾಗುವುದು. ಎಲ್ಲರೂ ವಾಪಸ್ ಬರುವಂತೆ ಮನವಿ ಮಾಡಲಾಗಿದೆ.
-ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ
ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲದಿರುವುದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಮಂಗಳವಾರ ಪ್ರತಿಭಟನೆ ನಡೆಸಲಾಗುವುದು.
-ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
Christmas: ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್ ಸಂಭ್ರಮ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.