ಆಚರಣೆ ರೀತಿ ಬೇರೆಯಾದರೂ ಸಾರುವ ತಣ್ತೀ ಮಾತ್ರ ಒಂದೇ…
Team Udayavani, Mar 22, 2023, 11:23 AM IST
ಮನುಷ್ಯ ಭಾವಜೀವಿ, ಸಂಘಜೀವಿ, ಸಮಾಜಜೀವಿ ಎಂಬ ಹಲವು ಮಾತುಗಳಿವೆ. ಆದರೆ ನಿಜವಾಗಿಯೂ ಮನುಷ್ಯ ಪ್ರಕೃತಿ ಜೀವಿ. ಪ್ರಕೃತಿಮಾತೆಯ ಕೈಗೂಸು ಆತ. ಆತನ ನಡೆ, ನುಡಿ, ಆಚರಣೆ, ಉತ್ಸವ, ಸಂಭ್ರಮ, ಸಡಗರ ಇವೆಲ್ಲ ಪ್ರಕೃತಿಯೊಂದಿಗೆ, ಪ್ರಕೃತಿಯಿಂದ ಮತ್ತು ಪ್ರಕೃತಿಗಾಗಿ. ಭಾರತೀಯನ ಮಟ್ಟಿಗಂತೂ ಇದು ಅಕ್ಷರಶಃ ಸತ್ಯ. ಪ್ರಕೃತಿಯಲ್ಲಿ ಇರುವ ವೈವಿಧ್ಯ ಜೀವಗಳಲ್ಲೂ ಅಡಗಿದೆ. ಹಾಗಾಗಿಯೇ ಅವರ ಮನಸ್ಸು, ಮಾತು, ಅಭಿವ್ಯಕ್ತಿ, ಅಭಿರುಚಿ, ವರ್ತನೆ ಇವೆಲ್ಲ ವಿಭಿನ್ನವಾಗಿರುತ್ತದೆ. ಆದರೆ ಇವೆಲ್ಲವುಗಳ ಮರ್ಮ, ಅಂತಃಸತ್ವ ಒಂದೇ - ಜಗದ ಎಲ್ಲರ ಹಿತ, ಸುಖ. ಹೀಗಾಗಿ ಭಾರತದಲ್ಲಿ ಇಂದು ಹಲವು ಬಗೆಯ ಹಬ್ಬ, ಆಚರಣೆ, ಸಂಪ್ರದಾಯಗಳು ರೂಢಿಯಲ್ಲಿವೆ. ಒಂದೇ ಹಬ್ಬವನ್ನು ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ವಿಧವಾಗಿ ಆಚರಿಸಲಾಗುತ್ತದೆ. ಯುಗಾದಿಯೂ ಇದಕ್ಕೆ ಹೊರತಲ್ಲ.
ಯುಗಾದಿ ಎನ್ನುವುದು ಯುಗದ ಆದಿ ಅಂದರೆ ಹೊಸ ವರ್ಷದ ಮೊದಲ ದಿನ. ಹೊಸತನ ಎಂಬುದು ಕಾಲಗಣನೆಗೆ ಮಾತ್ರ ಸೀಮಿತವಾದದ್ದಲ್ಲ. ಪ್ರಕೃತಿಯೇ ಹೊಸತನಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುವ ಸಮಯವಿದು. ಹಣ್ಣೆಲೆಗಳು ಉದುರಿ ಹೊಸ ಚಿಗುರು ಮೂಡುವ ಸಮಯ. ತಳಿರುಗಳ ಕಂಪಿನಿಂದ, ಕೋಗಿಲೆ ಮೊದಲಾದ ಹಕ್ಕಿಗಳ ಇಂಪಾದ ಗಾನದಿಂದ, ದುಂಬಿಗಳ ಝೇಂಕಾರ ದಿಂದ ಮಧುಮಾಸಲಕ್ಷ್ಮಿ ಸರ್ವಾಲಂಕಾರ ಭೂಷಿತೆಯಾಗಿ ಕಂಗೊಳಿಸುವ ಈ ಸಮಯ ಪಶು- ಪಕ್ಷಿ- ಮಾನವನೆಂಬ ಸಕಲ ಜೀವಜಾತಗಳ ಮನಸ್ಸನ್ನು ಪ್ರಫುಲ್ಲವಾಗಿಸುತ್ತದೆ. ಹೊಸತನವನ್ನು ಮೂಡಿಸುವ ಇಡೀ ವಸಂತಮಾಸವೇ ಸಂಭ್ರಮಾಚರಣೆಯ ಕಾಲ. ಅದರಲ್ಲೂ ಮೊದಲ ದಿನವಂತೂ ಇನ್ನೂ ಹೆಚ್ಚಿನ ಸಂಭ್ರಮ. ಹೊಸವರ್ಷಾಚರಣೆಯ ಸಡಗರ.
ಫಾಲ್ಗುಣ ಮಾಸ ಕಳೆದು ಚೈತ್ರ ಮಾಸದ ಮೊದಲ ದಿನವೇ ಯುಗಾದಿ. ಮೀನ ಮಾಸ ಕಳೆದು ಮೇಷ ಮಾಸ ಪ್ರಾರಂಭವಾಗುವ ದಿನ ಸೌರ ಯುಗಾದಿ. ಎರಡೂ ಭಿನ್ನ ದಿನಗಳಾದರೂ ಆಚರಣೆ ಸಮಾನ. ಎರಡೂ ವಸಂತ ಮಾಸದಲ್ಲೇ ಬರುತ್ತವೆ. ಒಟ್ಟಿನಲ್ಲಿ ಪ್ರಕೃತಿ ಹೊಸತನವನ್ನು ತುಂಬಿಕೊಂಡಾಗ ನಮಗೂ ಹೊಸವರ್ಷದ ಸಂಭ್ರಮ. ಈ ಯುಗಾದಿ ಭಾರತದೆಲ್ಲೆಡೆ ವಿಭಿನ್ನ ಹೆಸರಿನಿಂದ, ವಿಭಿನ್ನವಾಗಿ ಆಚರಣೆಯಲ್ಲಿದೆ. ಮಹಾರಾಷ್ಟ್ರದ ಗುಡಿ ಪಾಡ್ವ, ಉತ್ತರ ಭಾರತದಲ್ಲಿ ಬೈಸಾಖೀ, ಸಿಂಧಿಜನಗಳ ಚೇತಿ ಚಂದ್, ಮಣಿಪುರಿಗಳ ಸಜಿಬು ನೋಂಗ್ಮಾ ಪನ್ಬಾ, ಬಂಗಾಳಿಗಳ ನಬ ಬರ್ಷ್, ದಕ್ಷಿಣಭಾರತದ ಯುಗಾದಿ – ಹೀಗೆ ಹೆಸರು, ಆಚರಣೆಯ ವಿಧಾನ ಬೇರೆಯಾದರೂ ಭಾವ, ತತ್ವ ಒಂದೇ.
ನಮ್ಮ ಹಿರಿಯರು ಎಂದೂ ಪ್ರಕೃತಿಯನ್ನು ಅತಿಕ್ರಮಿಸಿದವರಲ್ಲ. ಪ್ರಕೃತಿಯೊಂದಿಗೆ ಸಹಬಾಳ್ವೆಯನ್ನು ನಡೆಸಿದವರು. ಪ್ರಕೃತಿಯನ್ನು ದೇವತ್ವಕ್ಕೆ ಏರಿಸಿದವರು. ಪ್ರಕೃತಿಯು ನಮಗೆ ನೀಡಿದುದನ್ನು ಪ್ರಸಾದವೆಂದು ಸ್ವೀಕರಿಸಿದವರು. ತಮಗೆ ದೊರಕಿದುದನ್ನು ಎಲ್ಲರೊಂದಿಗೆ ಹಂಚಿ ಅನುಭವಿಸಿದವರು. ಇದನ್ನೇ ನಾವು ಯುಗಾದಿಯ ಆಚರಣೆಯಲ್ಲೂ ಕಾಣಬಹುದು.
ನಮ್ಮ ಕರಾವಳಿಯ ಈ ಭಾಗದಲ್ಲಿ ಚಾಲ್ತಿಯಲ್ಲಿರುವ ಪದ್ಧತಿಯಂತೆ ಯುಗಾದಿಯಂದು ಬೆಳಗ್ಗೆ ಸೂರ್ಯೋದಯಕ್ಕಿಂತಲೂ ಮೊದಲು ಎದ್ದು ಮೊದಲಿಗೆ ತೈಲಾಭ್ಯಂಗವನ್ನು ಮಾಡಬೇಕು. ಬಳಿಕ ದೇವಪೂಜೆ ಹಾಗೂ ತುಳಸೀಪೂಜೆ. ಅನಂತರ ದಿನದ ಅಧಿಪತಿಯಾದ ಸೂರ್ಯನಿಗೆ ಅರ್ಘ್ಯ ಪ್ರದಾನ ಮಾಡುವುದು ರೂಢಿ. ಅಂದೇ ಚತುರ್ಮುಖ ಬ್ರಹ್ಮ ಜಗದ ಸೃಷ್ಟಿಯನ್ನು ಆರಂಭಿಸಿರುವುದರಿಂದ ಆತನಿಗೂ ಅರ್ಘ್ಯವನ್ನು ಕೊಡುವ ಪದ್ಧತಿ ಕೆಲವೆಡೆ ಇದೆ. ಜತೆಗೆ ಪ್ರಕೃತಿ ಮಾತೆಯನ್ನು ಲಕ್ಷ್ಮಿಯೆಂದು ಭಾವಿಸಿ ಆಕೆಗೂ ಅರ್ಘ್ಯ ವನ್ನು ನೀಡುವ ಕ್ರಮ ಇದೆ. ಹಾಗೆಯೇ ಮಧುಮಾಸದ ಅಧಿಪತಿಯಾದ ವಸಂತನಿಗೂ ಅರ್ಘ್ಯ ವು ಸಲ್ಲುತ್ತದೆ. ಅರ್ಘ್ಯ ಪ್ರದಾನವನ್ನು ನದೀ ತೀರದಲ್ಲಿ, ಸಮುದ್ರತಟದಲ್ಲಿ ನೀಡುವುದು ಅತ್ಯಂತ ಪ್ರಶಸ್ತವೆನಿಸಿದೆ. ಒಟ್ಟಿನಲ್ಲಿ ಬೆಳಗಿನ ಸೂರ್ಯನ ಹಿತವಾದ ಕಿರಣಗಳಿಗೆ ಮೈಯೊಡ್ಡಿ ನಿಲ್ಲುವುದು ಹಿತಕರವೂ, ಆರೋಗ್ಯಕರವೂ ಹೌದು, ಪುಣ್ಯಪ್ರದವೂ ಹೌದು. ಕೆಲವೆಡೆ ನಮ್ಮ ಜೀವನದಲ್ಲಿ ನಮಗೆ ಸದಾ ಸಹಕಾರಿಗಳಾದ ಎತ್ತು, ದನಗಳನ್ನು ಅಲಂಕರಿಸಿ ಪೂಜಿಸುವ ಕ್ರಮವೂ ಇದೆ. ಆ ಬಳಿಕ ಬಣ್ಣಬಣ್ಣದ ಚಿಗುರಿನಿಂದ ಕೂಡಿದ ಹೊಸ ಸೀರೆಯುಟ್ಟ ಪ್ರಕೃತಿಯಂತೆಯೇ ಎಲ್ಲರೂ ಹೊಸ ದಿರಿಸನ್ನು ಧರಿಸಿ, ದೇವರಿಗೆ, ಗುರುಹಿರಿಯರಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆಯಬೇಕು.
ಯುಗಾದಿ ಆಚರಣೆಯ ಮುಂದಿನ ಭಾಗ ಬೇವು- ಬೆಲ್ಲಗಳ ಸೇವನೆ. ಬೇವು-ಬೆಲ್ಲ-ಮಾವಿನಚಿಗುರು ಇವೆಲ್ಲವನ್ನು ದೇವರಿಗೆ ಸಮರ್ಪಿಸಿದ ಬಳಿಕ ಅದನ್ನು ಸೇವಿಸಬೇಕು. ಜೀವನದಲ್ಲಿ ಬಂದೊದಗುವ ಸುಖ-ದುಃಖ, ಒಳಿತು-ಕೆಡುಕು, ಲಾಭ-ನಷ್ಟ, ಸೋಲು-ಗೆಲುವು, ನಗು-ಅಳು ಎಂಬ ದ್ವಂದ್ವಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ತತ್ವ ಇದರಲ್ಲಿ ಅಡಗಿದೆ. ಅದನ್ನೇ ಭಗವದ್ಗೀತೆಯಲ್ಲಿ ಭಗವಂತ ಸುಖದುಃಖೇ ಸಮೇ ಕೃತ್ವಾ… ಬೋಧಿಸಿರುವುದು.
ಇಂದಿನವರ ಭಾಷೆಯಲ್ಲೇ ಹೇಳುವುದಾದರೆ ಇದೇ ನ್ಯೂ ಇಯರ್ ರೆಸಲ್ಯೂಷನ್. ಸುಖವೇ ನಮಗಾಗಲಿ ಎಂದು ಆಶಿಸಬಹುದು. ಆದರೆ ಅದೊಂದು ಅವಾಸ್ತವಿಕ ಕಲ್ಪನೆಯಾಗಿದೆ. ಹೀಗಾಗಿ ದ್ವಂದ್ವಗಳನ್ನು ಸಮಾನವಾಗಿ ಸ್ವೀಕರಿಸುವ ಇಂತಹ ದೃಢ ನಿಶ್ಚಯ ನಮ್ಮನ್ನೆಂದೂ ಕುಗ್ಗಿಸದು. ಜೀವನದಲ್ಲಿ ಎದುರಾಗುವ ಎಂತಹ ದುರ್ಭರ ಸನ್ನಿವೇಶಗಳನ್ನು ಎದುರಿಸುವ ದಾರ್ಡ್ಯವನ್ನು ಇಂತಹ ಸಂಕಲ್ಪ ನಮಗೆ ಒದಗಿಸುತ್ತದೆ.
ಮುಂದಿನ ಆಚರಣೆ ಪಂಚಾಂಗ ಶ್ರವಣ. ದೇವರ ಮುಂದೆ ಮನೆಯವರೆಲ್ಲರೂ ಸೇರಿ ಕುಳಿತುಕೊಳ್ಳಬೇಕು. ಬಳಿಕ ಮನೆಯ ಹಿರಿಯರು ಪಂಚಾಂಗದಲ್ಲಿ ಬರೆದಿರುವ ವರ್ಷಫಲವನ್ನು ಓದಿ ಹೇಳುತ್ತಾರೆ. ಇದೊಂದು ಬಗೆಯ ತತ್ವದರ್ಶನ ಅಥವಾ ಸತ್ಯದರ್ಶನ. ಬೇವುಬೆಲ್ಲವನ್ನು ಈಗಷ್ಟೇ ಅರಗಿಸಿಕೊಂಡವರು ಈ ವರ್ಷದಲ್ಲಿ ಒದಗಿ ಬರಲಿರುವ ಶುಭಾಶುಭ ಫಲಗಳಿಗೆ ಮನಸ್ಸನ್ನು ಈಗಲೇ ಒಡ್ಡಿಕೊಳ್ಳುವ ಒಂದು ಪ್ರಕ್ರಿಯೆ. ಆಧುನಿಕ ಜೀವನದಲ್ಲಿ ನಾವು ನೋಡುವ ಯಾವ ಮಾರುಕಟ್ಟೆ ತಂತ್ರವೂ ಇಲ್ಲಿಲ್ಲ. ನಮ್ಮಲ್ಲಿಗೆ ಬನ್ನಿ ಎಲ್ಲ ಒಳ್ಳೆಯದು ಆಗುತ್ತದೆ ಎಂಬ ರೀತಿಯ ವ್ಯಾಪಾರೀಕರಣವೂ ಇಲ್ಲಿಲ್ಲ. ಕೇವಲ ವಾಸ್ತವ ಭವಿಷ್ಯದ ನಿರೂಪಣೆ. ಈ ವರ್ಷದಲ್ಲಿ ಆಗರುವ ಮಳೆ-ಬೆಳೆ, ದೇಶಕ್ಕೆ-ಜನತೆಗೆ ಒದಗಬಹುದಾದ ಸಂಕಟ-ಕಂಟಕ, ಅಥವಾ ಏಳಿಗೆ-ಉತ್ಕರ್ಷ ಇವೆಲ್ಲವನ್ನೂ ಪಂಚಾಂಗದಲ್ಲಿ ಬರೆದಿರುತ್ತಾರೆ. ಇದೊಂದು ರೀತಿಯಲ್ಲಿ ಜೀವನದಲ್ಲಿ ಒಳಿತು-ಕೆಡುಕುಗಳಿಗೆ ನಮ್ಮನ್ನು ನಾವೇ ಒಡ್ಡಿಕೊಳ್ಳಲು, ಜೀವನವನ್ನು ಇದ್ದಂತೆಯೇ ಒಪ್ಪಿಕೊಳ್ಳಲು ಮಾಡುವ ಮಾನಸಿಕ ಸಿದ್ಧತೆ ಎಂದರೂ ತಪ್ಪಾಗಲಾರದು.
ಹಬ್ಬದೂಟವಿಲ್ಲದೆ ಹಬ್ಬವು ಎಂದಿಗೂ ಕೊನೆಯಾಗಲಾರದು. ಹೋಳಿಗೆ, ಪಾಯಸ ಮೊದಲಾದ ಸವಿಯೊಂದಿಗೆ ಪಚಡಿಯಂತಹ ಷಡ್ರಸೋಪೇತವಾದ ದ್ರವ್ಯಗಳನ್ನು ಸಿದ್ಧಪಡಿಸಿ ಮನೆಯವರೊಂದಾಗಿ ಸವಿಯುವುದು ಹಬ್ಬದ ಮುಂದಿನ ಆಚರಣೆ. ದೇವಾಲಯಗಳಿಗೆ, ಹಿರಿಯರ ಮನೆಗೆ, ಗುರುಗಳ ಮನೆಗೆ ಭೇಟಿ ನೀಡಿ ಮುಂದಿನ ಜೀವನ ಸುಖಮಯವಾಗಿರಲೆಂದು ಎಲ್ಲ ದೇವರ-ಗುರು-ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳುವುದು ಮುಂದಿನ ಕ್ರಿಯೆ.
ಹೀಗೆ ನಮಗೆ ಎಲ್ಲವೂ ಆಗಿರುವ ಪ್ರಕೃತಿಯೊಂದಿಗೆ ಬೆರೆತು ಆಚರಿಸುವ, ದೇವರ ಗುರುಹಿರಿಯರ ಆಶೀರ್ವಾದ ಬಲವನ್ನು ಹೊಂದುವ, ಮನೆಯವರೆಲ್ಲರೂ ಒಂದಾಗಿ ಕಲೆತು ಸಂಭ್ರಮಿಸುವ ಈ ಯುಗಾದಿ ಹಬ್ಬದ ಮರ್ಮವನ್ನು ಅರಿತು ಆಚರಿಸೋಣ. ಆ ಮೂಲಕ ನಮ್ಮ ಉದಾತ್ತ ಸಂಸ್ಕೃತಿಯನ್ನು, ಶ್ರೀಮಂತ ಪರಂಪರೆಯನ್ನು ಉಳಿಸೋಣ.
~ ಡಾ| ವಿಜಯಲಕ್ಷ್ಮಿ ಎಂ. ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.