ಶಾ ಭೇಟಿ ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ತುಂಬುವ ನಿರೀಕ್ಷೆ
ಫೆ. 11ರಂದು ಮಂಗಳೂರಲ್ಲಿ ರೋಡ್ ಶೋ, 2 ವಿಭಾಗದ ಪ್ರಮುಖರ ಸಭೆ
Team Udayavani, Feb 8, 2023, 7:05 AM IST
ಮಂಗಳೂರು : ಚುನಾವಣೆಗೆ ಕೆಲವು ತಿಂಗಳಷ್ಟೇ ಉಳಿದಿರುವಾಗ ಕೇಂದ್ರ ಗೃಹ ಹಾಗೂ ಸಹಕಾರಿ ಖಾತೆ ಸಚಿವ ಅಮಿತ್ ಶಾ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದು ಕರಾವಳಿಯ ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ತುಂಬುವ ನಿರೀಕ್ಷೆ ಇದೆ.
ಮೇಲ್ನೋಟಕ್ಕೆ ಅವರು ಸಹಕಾರ ಸಂಸ್ಥೆ ಯಾದ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಹಾಗೂ ಹನುಮಗಿರಿಯ ಮಂದಿರ ಉದ್ಘಾ ಟನೆಗೆ ಬರುತ್ತಿರುವುದು. ಆದರೆ ಇದೇ ವೇಳೆ ಕರಾವಳಿ, ಮಲೆನಾಡಿನ ಪ್ರಮುಖ ಬಿಜೆಪಿ ನಾಯಕರನ್ನು ಒಟ್ಟುಗೂಡಿಸಿ, ಚುನಾವಣೆಗೆ ಸಜ್ಜುಗೊಳಿಸುವ ಮಹತ್ವದ ಕೆಲಸವನ್ನು ಶಾ ಮಾಡಲಿದ್ದಾರೆ.
ಫೆ. 11ರಂದು ಮಧ್ಯಾಹ್ನ 2.15ಕ್ಕೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ 2.45ಕ್ಕೆ ಈಶ್ವರಮಂಗಲ ಹೆಲಿಪ್ಯಾಡ್‌ಗೆ ಆಗಮಿಸುವರು. ಅಲ್ಲಿಂದ ರಸ್ತೆ ಮೂಲಕ ಹನುಮಗಿರಿಗೆ ತೆರಳಿ ಪಂಚಮುಖೀ ಆಂಜನೇಯ ಕ್ಷೇತ್ರದ ಪಕ್ಕ ನಿರ್ಮಿಸಲಾದ ಭಾರತಮಾತಾ ಮಂದಿರ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಬಳಿಕ 3.40ಕ್ಕೆ ಹೆಲಿಕಾಪ್ಟರ್ ಮೂಲಕ ಪುತ್ತೂರು ತಲುಪಿ, ಕ್ಯಾಂಪ್ಕೊದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಸಹಕಾರಿಗಳು, ಅಡಿಕೆ ಕೃಷಿಕ ರನ್ನು ಉದ್ದೇಶಿಸಿ ಮಾತನಾಡುವರು.
ಪದವಿನಂಗಡಿಯಲ್ಲಿ ಸಭೆ, ರೋಡ್ ಶೋ
ಪುತ್ತೂರಿನ ಕಾರ್ಯಕ್ರಮದ ಬಳಿಕ ಶಾ ಹೆಲಿಕಾಪ್ಟರ್‌ನಲ್ಲಿ 6 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಸಂಜೆ ಮಂಗಳೂರಿನ ಪದವಿನಂಗಡಿಯ ವನಿತಾ ಅಚ್ಯುತ್ ಪೈ ಸಭಾಂಗಣದಲ್ಲಿ ಬಿಜೆಪಿಯ ಶಿವಮೊಗ್ಗ, ಮಂಗಳೂರು ವಿಭಾಗದ ಪ್ರಮುಖ ನಾಯಕರ ಸಭೆಯಲ್ಲಿ ಸಚಿವ ಶಾ ಪಾಲ್ಗೊಂಡು ವಿಧಾನಸಭೆ ಚುನಾವಣೆಗೆ ಮಾರ್ಗದರ್ಶನ ನೀಡಲಿದ್ದಾರೆ. ರಾತ್ರಿ 8 ಗಂಟೆಗೆ ಮಂಗಳೂರಿನಿಂದ ನಿರ್ಗಮಿಸುವರು.
ಈ ಹಿಂದಿನ ವಿಧಾನಸಭೆ ಚುನಾವಣೆ ವೇಳೆ ಜಿಲ್ಲೆಗೆ ಭೇಟಿ ನೀಡಿದ್ದ ಶಾ ಕಾವೂರು ಬಿಜೆಪಿ ಕಚೇರಿಯಿಂದ ಮರಕಡದವರೆಗೆ ಭರ್ಜರಿ ರೋಡ್ ಶೋ ನಡೆಸಿದ್ದರು. ಈ ಬಾರಿಯೂ ಅವರನ್ನು ಕಾವೂರಿನಿಂದ ಪದವಿ ನಂಗಡಿಯ ಸಭಾಂಗಣದ ವರೆಗೂ ಸಹಸ್ರಾರು ಕಾರ್ಯ ಕರ್ತರ ನಡುವೆ ಮೆರವಣಿಗೆ ಮೂಲಕ ಕರೆ ತರುವ ಯೋಜನೆಯನ್ನು ಬಿಜೆಪಿ ಹೊಂದಿದೆ.
ಸಚಿವರಾಗಿ ಮೊದಲ ಭೇಟಿ
ಕಳೆದ ಚುನಾವಣೆಗೆ 2018ರ ಮೇಯಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ಮೂಡಿ ಸಲು ಅಮಿತ್ ಶಾ ಆಗಮಿಸಿ ಮಂಗಳೂರಿನ ಕೊಡಿಯಾಲ್‌ಬೈಲ್, ತೊಕ್ಕೊಟ್ಟು ಹಾಗೂ ಕಾವೂರಿನಲ್ಲಿ ಮೂವರು ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಿ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದರು. ಆಗ ರಾಷ್ಟ್ರೀಯ ಅಧ್ಯಕ್ಷರಾಗಿದ್ದರೆ ಪ್ರಸ್ತುತ ಕೇಂದ್ರ ಗೃಹಸಚಿವರಾಗಿ ಆಗಮಿಸುತ್ತಿರುವ ಅವರದ್ದು ಈ ಹುದ್ದೆಯೊಂದಿಗೆ ಜಿಲ್ಲೆಗೆ ಮೊದಲ ಭೇಟಿ.
ಕೇಂದ್ರ ಗೃಹ ಸಚಿವರ ಭೇಟಿ: ಉಸ್ತುವಾರಿ ಸಚಿವರಿಂದ ಸ್ಥಳ ಪರಿಶೀಲನೆ
ಪುತ್ತೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ತೆಂಕಿಲದಲ್ಲಿ ಫೆ. 11ರಂದು ನಡೆಯಲಿರುವ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದಲ್ಲಿ ಸುಮಾರು 1 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಶಾ ಭೇಟಿಯು ಚುನಾವಣೆಯ ದೃಷ್ಟಿಯಿಂದಲೂ ಬಿಜೆಪಿಗೆ ಹುರುಪು ತುಂಬಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ತೆಂಕಿಲ ವಿವೇಕಾನಂದ ಶಾಲೆಯ ಮೈದಾನದಲ್ಲಿ ನಡೆಯಲಿರುವ ಸುವರ್ಣ ಮಹೋತ್ಸವದ ಸಂಭ್ರಮಾಚರಣೆ ಸಮಾವೇಶ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯ ಎಲ್ಲ ರೈತರು ಮತ್ತು ಸಹಕಾರಿಗಳು ಪಾಲ್ಗೊಳ್ಳಲಿದ್ದಾರೆ. ರೈತರ ಪರವಾಗಿ ಇದ್ದ ಸರಕಾರವೆಂದರೆ ಅದು ಬಿಜೆಪಿ ಸರಕಾರ ಮಾತ್ರ. ಇಂತಹ ಸಂದರ್ಭದಲ್ಲಿ ಈ ಐತಿಹಾಸಿಕ ಸಮಾವೇಶ ಮುಂದಿನ ದಿನಗಳಲ್ಲಿ ರೈತರ ಚಟುವಟಿಕೆಗಳಿಗೆ ಇನ್ನಷ್ಟು ಶಕ್ತಿ ಹಾಗೂ ಉತ್ತೇಜನ ನೀಡಲು ಪ್ರೇರಣೆ ನೀಡಲಿದೆ ಎಂದರು.
ಸ್ಥಳ ಪರಿಶೀಲನೆ
ಸಮಾವೇಶಕ್ಕೆ ಜರ್ಮನ್ ಮಾದರಿಯಲ್ಲಿ ಪೆಂಡಾಲ್ ಅಳವಡಿಸಲಾಗುತ್ತಿದ್ದು ವೇದಿಕೆ ಮತ್ತು ಗಣ್ಯರ ಆಗಮನ-ನಿರ್ಗಮನದ ದಾರಿಗಳ ಕುರಿತು ಸಚಿವರು ವೇದಿಕೆ ನಿರ್ಮಾಣದ ಉಸ್ತುವಾರಿ ಪಿ.ಜಿ. ಜಗನ್ನಿವಾಸ ಅವರಿಂದ ಮಾಹಿತಿ ಪಡೆದುಕೊಂಡರು.
ಸಚಿವ ಎಸ್. ಅಂಗಾರ, ಶಾಸಕರಾದ ಸಂಜೀವ ಮಠಂದೂರು, ರಾಜೇಶ್ ನಾಯಕ್ ಉಳಿಪಾಡಿಗುತ್ತು, ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಜಿ.ಪಂ. ಸಿಇಒ ಕುಮಾರ್, ಎಸ್‌ಪಿ ಡಾ| ವಿಕ್ರಂ ಅಮ್ಟೆ, ಎಸಿ ಗಿರೀಶ್ ನಂದನ್, ಡಿವೈಎಸ್ಪಿ ಡಾ| ವೀರಯ್ಯ ಹಿರೇಮs…, ತಾ.ಪಂ. ಇಒ ನವೀನ್ ಕುಮಾರ್ ಭಂಡಾರಿ ಎಚ್., ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ಬಿಜೆಪಿ ಮುಖಂಡರಾದ ರಾಮದಾಸ್ ಬಂಟ್ವಾಳ, ಸಾಜ ರಾಧಾಕೃಷ್ಣ ಆಳ್ವ, ಗೋಪಾಲಕೃಷ್ಣ ಹೇರಳೆ, ಆರ್.ಸಿ. ನಾರಾಯಣ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಯುವರಾಜ್ ಪೆರಿಯತ್ತೋಡಿ, ನಿತೀಶ್ ಕುಮಾರ್ ಶಾಂತಿವನ, ಸಂತೋಷ್ ರೈ ಕೈಕಾರ, ಸೀತಾರಾಮ ರೈ ಕೆದಂಬಾಡಿ ಗುತ್ತು, ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್, ಮಾಜಿ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಗೆಲುವಿಗೆ ಪೂರಕ: ಸುನಿಲ್
ಅಮಿತ್ ಶಾ ಭೇಟಿ ನಮಗೆ ಹುರುಪು ತುಂಬಲಿದೆ. ಸಮಾವೇಶದ ಯಶಸ್ಸಿಗೆ ಗ್ರಾಮ ಮಟ್ಟದ, ಬೂತ್ ಮಟ್ಟದ ಕಾರ್ಯಕರ್ತರು ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಶಾ ಆಗಮನ ಮತ್ತು ಸಮಾವೇಶದ ಮೂಲಕ ಮುಂಬರುವ ಚುನಾವಣೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಸಚಿವ ಸುನಿಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.