Assembly; ಮುಡಾ ಗದ್ದಲ: ಮುಂದುವರಿದ ಆಡಳಿತ-ವಿಪಕ್ಷ ವಾಕ್ಸಮರ
ಪ್ರಕರಣದ ಚರ್ಚೆಗೆ ನಿಲುವಳಿ ಸೂಚನೆ ಮಂಡಿಸಲು ವಿಪಕ್ಷ ಮುಂದು, ಅವಕಾಶ ಕೊಡದ ಸ್ಪೀಕರ್ ವಿರುದ್ಧ ಆಕ್ಷೇಪ
Team Udayavani, Jul 25, 2024, 7:25 AM IST
ಬೆಂಗಳೂರು: ಬಹುಚರ್ಚೆಗೆ ಗ್ರಾಸವಾಗಿರುವ ಮುಡಾ ಪ್ರಕರಣ ಬುಧವಾರ ವಿಧಾನಸಭೆಯಲ್ಲೂ ಅನುರಣಿಸಿತಲ್ಲದೆ, ಆಡಳಿತ-ವಿಪಕ್ಷದ ನಡುವೆ ವಾಕ್ಸಮರಕ್ಕೂ ಕಾರಣವಾಯಿತು.
ಬುಧವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾವಿಸಿದ ವಿಪಕ್ಷದ ನಾಯಕ ಆರ್.ಅಶೋಕ್, ಈ ಕುರಿತು ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೋರಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಕುಟುಂಬದ ವಿರುದ್ಧವೇ ನೇರ ಆಪಾದನೆ ಇದ್ದು, ಈ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು ಎನ್ನುತ್ತಿದ್ದಂತೆ, ಆಕ್ಷೇಪವೆತ್ತಿದ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು, ಸಿಎಂ ಹೆಸರನ್ನು ಹೇಗೆ ಬಳಸುತ್ತೀರಿ ಎಂದರು. ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿರುವುದರಿಂದ, ಅವರೇ ಆರೋಪಿಯಾಗಿರುವುದರಿಂದ ಅವರ ಹೆಸರು ಬಳಸದೆ ಬೇರೆ ಯಾರ ಹೆಸರು ಬಳಸಬೇಕು ಎಂದು ಆಡಳಿತ ಪಕ್ಷದ ಸದಸ್ಯರು ತಿರುಗೇಟು ನೀಡಿದರು.
ಇದರಿಂದ ಆರಂಭದಲ್ಲೇ ಆಡಳಿತ-ವಿಪಕ್ಷ ಸದಸ್ಯರು ಮಾತಿನ ಸಮರಕ್ಕೆ ನಿಂತರು. ಮಧ್ಯಪ್ರವೇಶಿಸಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ನಿಯಮಾವಳಿಯಂತೆ ಮೊದಲು ಪ್ರಶ್ನೋತ್ತರ ಕಲಾಪ ಮುಗಿಯಲಿ, ಅನಂತರ ನೋಡುವ ಎಂದರು. ಇದನ್ನೊಪ್ಪದ ವಿಪಕ್ಷ ಸದಸ್ಯರು, ಪ್ರಶ್ನೋತ್ತರ ಬದಿಗೊತ್ತಿ ನಿಲುವಳಿ ಸೂಚನೆಯನ್ನು ಕೈಗೆತ್ತಿಕೊಳ್ಳಿ ಎಂದು ಆಗ್ರಹಿಸಿದರು.
ಮಾತಿಗೆ ನಿಂತ ಕಾನೂನು ಸಚಿವ ಎಚ್.ಕೆ. ಪಾಟೀಲ್, ನಿಯಮಾವಳಿಗಳನ್ನು ಉಲ್ಲೇಖೀಸಿ ಪ್ರಶ್ನೋತ್ತರ ಅನಂತರದ ಅವಕಾಶ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಸಾಕಷ್ಟು ವಾದ-ಪ್ರತಿವಾದಗಳ ಅನಂತರ ಸ್ಪೀಕರ್ ಭರವಸೆ ಮೇರೆಗೆ ವಿಪಕ್ಷ ಸದಸ್ಯರು ಪ್ರಶ್ನೋತ್ತರ ಕಲಾಪಕ್ಕೆ ಅನುವು ಮಾಡಿಕೊಟ್ಟರು.
ಪ್ರಶ್ನೋತ್ತರ ವೇಳೆ ಮುಗಿಯುತ್ತಿದ್ದಂತೆ ಮತ್ತೆ ವಿಷಯ ಮಂಡನೆಗೆ ವಿಪಕ್ಷ ನಾಯಕ ಆರ್. ಅಶೋಕ್ ಮುಂದಾದರು. ಅಷ್ಟರಲ್ಲಿ ತಡೆಯೊಡ್ಡಿದ ಸಚಿವ ಎಚ್. ಕೆ. ಪಾಟೀಲ್, ವಿಧಾನಮಂಡಲಗಳ ಕಾರ್ಯವಿಧಾನ ನಿಯಮ 62 ಮತ್ತು 63 ರ ಪ್ರಕಾರ ನ್ಯಾಯಾಂಗ ಅಥವಾ ಅರೆನ್ಯಾಯಿಕ ಸಂಸ್ಥೆಗಳಲ್ಲಿ ತನಿಖೆ ನಡೆಯುತ್ತಿರುವ ಪ್ರಕರಣವನ್ನು ಸದನದಲ್ಲಿ ಚರ್ಚಿಸಲು ಅವಕಾಶವಿಲ್ಲ ಎಂದರು.
ಇದಕ್ಕೆ ಆಕ್ಷೇಪಿಸಿದ ಬಿಜೆಪಿಯ ಎಸ್.ಸುರೇಶ್‌ಕುಮಾರ್, ವಾಲ್ಮೀಕಿ ನಿಗಮದ ಹಗರಣದ ಆರೋಪದಡಿ ಜಾರಿ ನಿರ್ದೇಶನಾಲಯದ (ಇ.ಡಿ.) ವಿಚಾರಣೆಗೆ ಒಳಗಾಗಿದ್ದ ಸಮಾಜ ಕಲ್ಯಾಣಾಧಿಕಾರಿಯೊಬ್ಬರು ಇ.ಡಿ. ಅಧಿಕಾರಿಗಳ ವಿರುದ್ಧವೇ ಆರೋಪಿಸಿ ದೂರು ಕೊಟ್ಟಿರುವ ವಿಚಾರವನ್ನು ಚರ್ಚಿಸಲು ನಿಮ್ಮ ಪಕ್ಷದ ಶಾಸಕ ಶಿವಲಿಂಗೇಗೌಡರಿಗೆ ಇದೇ ನಿಯಮಗಳಡಿ ಷರತ್ತುಬದ್ಧ ಒಪ್ಪಿಗೆ ಕೊಟ್ಟಿದ್ದಿರಿ. ತನಿಖೆಗೆ ಬಾಧಕವಾಗದಂತೆ ಚರ್ಚಿಸಬೇಕೆಂದು ಷರತ್ತು ವಿಧಿಸಿದ್ದೀರಿ. ನಾವೂ ಅದೇ ಷರತ್ತಿಗೆ ಬದ್ಧರಾಗಿ ಚರ್ಚಿಸುತ್ತೇವೆ. ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಪ್ಲೆಕಾರ್ಡ್ ಪ್ರದರ್ಶನ
ಜನ ವಿರೋಧಿ ಭ್ರಷ್ಟ ಸರಕಾರಕ್ಕೆ ಧಿಕ್ಕಾರ, ಹಗರಣಗಳ ಸರಕಾರ ಕಾಂಗ್ರೆಸ್ ಸರಕಾರ, ದೇಶ ಕಂಡ ಕಡು ಭ್ರಷ್ಟ ಸಿಎಂ ಸಿದ್ದರಾಮಯ್ಯಗೆ ಧಿಕ್ಕಾರ, ಮುಡಾ ಹಗರಣದ ಪಿತಾಮಹ ಸಿಎಂ ಅವರೇ ರಾಜೀನಾಮೆ ಯಾವಾಗ, ಹಗರಣ ಮುಚ್ಚಿ ಹಾಕಲು ಹುನ್ನಾರ ನಡೆಸುತ್ತಿರುವ ಸಚಿವ ಬೈರತಿ ಸುರೇಶ್‌ಗೆ ಧಿಕ್ಕಾರ ಎಂಬಿತ್ಯಾದಿ ಬರಹಗಳುಳ್ಳ ಫಲಕಗಳನ್ನು ಹಿಡಿದು ವಿಪಕ್ಷ ಸದಸ್ಯರು ಘೋಷಣೆ ಕೂಗಿದರು.
“ತೀರಾ ಇತ್ತೀಚಿನ ತುರ್ತು ವಿಚಾರವನ್ನಷ್ಟೇ ನಿಲುವಳಿ ಸೂಚನೆಯಡಿ ತರಲು ನಿಯಮದಲ್ಲಿ ಅವಕಾಶ ಇದೆ. ಇದು ತೀರಾ ಇತ್ತೀಚಿನ ತುರ್ತು ವಿಷಯವಲ್ಲ. ನ್ಯಾಯಾಂಗ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿ ಸದನದಲ್ಲಿ ಚರ್ಚಿಸುವುದು ಸಾಧುವಲ್ಲ. ಇದರಲ್ಲಿ ಒಂದು ನಿರ್ದಿಷ್ಟ ವಿಷಯವಿಲ್ಲ. ಹೀಗಾಗಿ ಇದು ನಿಲುವಳಿ ಸೂಚನೆಗೆ ಯೋಗ್ಯವಲ್ಲ. ಹೀಗಾಗಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದೇನೆ.” -ಯು.ಟಿ. ಖಾದರ್, ಸ್ಪೀಕರ್
ನ್ಯಾ| ದೇಸಾಯಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ
ಮುಡಾ ಹಗರಣದ ತನಿಖೆಗೆ ಕುರಿತು ಸದನಕ್ಕೆ ವಿವರಣೆ ನೀಡಿದ ಸಚಿವ ಎಚ್.ಕೆ. ಪಾಟೀಲ್, 2006ರಿಂದ 2024ರ ಜು. 15ರ ವರೆಗೆ ಮುಡಾದಲ್ಲಿ ನಡೆದಿರುವ ಎಲ್ಲ ಅಕ್ರಮಗಳ ತನಿಖೆ ನಡೆಸಲು ನ್ಯಾ| ಪಿ.ಎನ್. ದೇಸಾಯಿ ಅವರ ನೇತೃತ್ವದಲ್ಲಿ ಆಯೋಗ ರಚಿಸಿ ಜು.14 ರಂದು ಆದೇಶಿಸಲಾಗಿದೆ. 6 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ಕೊರಲಾಗಿದೆ. ಹೀಗಾಗಿ ಚರ್ಚೆ ಬೇಡ ಎಂದು ವಿವರಿಸಿದರು. ಇದು ವಿಪಕ್ಷಗಳನ್ನು ಕೆರಳಿಸಿದ್ದು, ಸದನದಲ್ಲಿಯೇ ಅಹೋರಾತ್ರಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಸ್ಪೀಕರ್ ಸದನವನ್ನು ಗುರುವಾರಕ್ಕೆ ಮುಂದೂಡಿದರು.
ಮಸೂದೆ ಮಂಡನೆ ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ
ಮುಡಾ ಹಗರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ವಿಧಾನ ಮಂಡಲದ ಉಭಯ ಸದನಗಳಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರು ಅಹೋರಾತ್ರಿ ಧರಣಿ ಆರಂಭಿಸಿರುವುದರ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರು 2 ದಿನ ಸದನದಲ್ಲಿ ಕಡ್ಡಾಯ ಹಾಜರಿಗೆ ವಿಪ್ ಜಾರಿಗೊಳಿಸಲಾಗಿದೆ.
ವಿಧಾನಸಭೆಯಲ್ಲಿ ಸರಕಾರಿ ಮುಖ್ಯ ಸಚೇತಕ ಪಿ.ಎಂ.ಅಶೋಕ್ ಹಾಗೂ ವಿಧಾನ ಪರಿಷತ್ತಿನಲ್ಲಿ ಸಲೀಂ ಅಹ್ಮದ್ ಅವರು ಆಡಳಿತ ಪಕ್ಷದ ಶಾಸಕರಿಗೆ ವಿಪ್ ಜಾರಿಗೊಳಿಸಿದ್ದಾರೆ. ಅಧಿವೇಶನದಲ್ಲಿ ಮಹತ್ವದ ಮಸೂದೆಗಳು ಚರ್ಚೆಗೆ ಬರಲಿದ್ದು ಗುರುವಾರ ಹಾಗೂ ಶುಕ್ರವಾರದಂದು ಅಧಿವೇಶನದ ಪ್ರಾರಂಭದಿಂದ ಮುಗಿಯುವವರೆಗೂ ಕಾರ್ಯಕಲಾಪಗಳ ಸಂದರ್ಭದಲ್ಲಿ ಕಡ್ಡಾಯವಾಗಿ ಸದನದಲ್ಲಿ ಹಾಜರಿರುವಂತೆ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.