Assembly Session; ವಕ್ಫ್ ವಿವಾದ ಜಟಾಪಟಿ; ಅರಣ್ಯ ಇಲಾಖೆ, ಶಿಕ್ಷಣ ಸಂಸ್ಥೆಗಳಿಗೂ ನೋಟಿಸ್
ವಕ್ಫ್ ಮಂಡಳಿ ಕತ್ತಲಲ್ಲಿರುವ ಕರಿಬೆಕ್ಕು; ರೈತರಿಗೆ ಪ್ರತಿನಿತ್ಯ ನೋಟಿಸ್‌ಗಳ ಹಾವಳಿ
Team Udayavani, Dec 14, 2024, 12:21 AM IST
ಬೆಳಗಾವಿ: ವಕ್ಫ್ ಆಸ್ತಿ ವಿವಾದ ವಿಧಾನಸಭೆಯಲ್ಲಿ ಶುಕ್ರವಾರ ಪ್ರತಿಧ್ವನಿಸಿತು. ವಕ್ಫ್ ಮಂಡಳಿಗೆ ನೀಡಿದ ಪರಮಾಧಿಕಾರ ಹಾಗೂ ಆಸ್ತಿ ವಿಚಾರದಲ್ಲಿ ನೀಡಲಾಗುತ್ತಿರುವ ನೋಟಿಸ್‌ಗಳಿಗೆ ಸಂಬಂಧಿಸಿದಂತೆ ಆಡಳಿತ ಪಕ್ಷ ಮತ್ತು ವಿಪಕ್ಷಗಳ ಪರಸ್ಪರ ಕೆಸರೆರಚಾಟಕ್ಕೆ ವೇದಿಕೆಯಾಯಿತು.
ವಿಪಕ್ಷ ನಾಯಕ ಅಶೋಕ್ ನಿಯಮ 69ರ ಅಡಿ ವಿಷಯ ಪ್ರಸ್ತಾವಿಸಿ, ವಕ್ಫ್ ಮಂಡಳಿ ಕತ್ತಲೆಯಲ್ಲಿರುವ ಒಂದು ಕರಿಬೆಕ್ಕಿನಂತೆ. ಅದರಿಂದ ರೈತರು, ಬಡವರು, ಶಿಕ್ಷಣ ಸಂಸ್ಥೆಗಳು ಆತಂಕದಲ್ಲಿ ಬದುಕುವಂತಾಗಿದೆ. ಈಗ ಅರಣ್ಯ ಮತ್ತು ಶಿಕ್ಷಣ ಸಂಸ್ಥೆಗಳೂ ತನ್ನ ಆಸ್ತಿ ಎಂದು ನೋಟಿಸ್ ನೀಡುತ್ತಿದೆ. ಈ ನೋಟಿಸ್‌ಗಳ ಹಾವಳಿಯಿಂದಾಗಿ ರೈತರು ಈಗ ಪ್ರತ್ಯಕ್ಷವಾಗಿ ತಮ್ಮ ಜಮೀನು ಇದ್ದರೂ ಪಹಣಿಯನ್ನೊಮ್ಮೆ ನೋಡಿ ಖಾತ್ರಿಪಡಿಸಿಕೊಂಡುಬಿಡೋಣ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಜನ ತಹಶೀಲ್ದಾರ್ ಕಚೇರಿಗಳ ಮುಂದೆ ಸರದಿ ನಿಲ್ಲುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ, ಸರಕಾರಿ ಶಾಲೆಗಳಿಗೂ ವಕ್ಫ್ ಮಂಡಳಿ ನೋಟಿಸ್ ನೀಡುತ್ತಿದೆ. ವಿಧಾನ ಸೌಧ, ಪುರಭವನ, ಕೆ.ಆರ್. ಮಾರುಕಟ್ಟೆ, ಅವೆನ್ಯು ರಸ್ತೆಯೂ ವಕ್ಫ್ಗೆ ಸೇರಿದ್ದು ಎಂಬ ಹೇಳಿಕೆಗಳು ಕೇಳಿಬರುತ್ತಿವೆ. ಮುಂದಿನ ದಿನಗಳಲ್ಲಿ ಯಾವುದೇ ಆಸ್ತಿಗೆ ವಕ್ಫ್ ಮಂಡಳಿಯ ನಿರಾಕ್ಷೇಪಣೆ ಪತ್ರ (ಎನ್‌ಒಸಿ) ಪಡೆಯುವ ಅನಿವಾರ್ಯ ಸೃಷ್ಟಿಯಾದರೂ ಅಚ್ಚರಿ ಇಲ್ಲ ಎಂದರು.
ಭಾರತ-ಪಾಕಿಸ್ಥಾನ ಇಬ್ಭಾಗವಾದ ಸಂದರ್ಭ ಪಾಕಿಸ್ಥಾನದಲ್ಲಿರುವ ಹಿಂದೂಗಳ ಆಸ್ತಿಯನ್ನು ಅಲ್ಲಿನ ಸರಕಾರಿ ಆಸ್ತಿ ಎಂದು
ಘೋಷಿಸಲಾಯಿತು. ಆದರೆ ಭಾರತದಲ್ಲಿ ಮುಸ್ಲಿಮರ ಆಸ್ತಿಯನ್ನು ವಕ್ಫ್ ಆಸ್ತಿಗೆ ನೀಡಲಾಯಿತು. ಅಲ್ಲಿಂದಲೇ ಕಾಂಗ್ರೆಸ್‌ನಿಂದ
ಮುಸ್ಲಿಮರ ತುಷ್ಟೀಕರಣ ಆರಂಭವಾಯಿತು. ಇದಾದ ಅನಂತರ 1954ರಲ್ಲಿ ಕಾಯ್ದೆ ತರಲಾಯಿತು. 1995ರಲ್ಲಿ ತಿದ್ದುಪಡಿ ತರಲಾಯಿತು. ದರ್ಗಾಗಳಲ್ಲಿ ಮುಸ್ಲಿಮೇತರರಿಗೆ ಅವಕಾಶ ಇಲ್ಲ. ವಕ್ಫ್ ಮಂಡಳಿಯಲ್ಲಿ ಕಾರ್ಯದರ್ಶಿಯಿಂದ ಹಿಡಿದು ಯಾವ ಹುದ್ದೆಯಲ್ಲೂ ಮುಸ್ಲಿಂ ಹೊರತಾಗಿ ಯಾರಿಗೂ ಅವಕಾಶ ಇಲ್ಲ. ಮುಜರಾಯಿ ದೇವಸ್ಥಾನಗಳು, ಇಲಾಖೆ, ತಸ್ತೀಖ್‌ನಲ್ಲಿ ಹಿಂದೂಗಳಿಗೆ ಮಾತ್ರ ಅಂತ ನಿಯಮ ಇಲ್ಲ. ಈ ನಿಟ್ಟಿನಲ್ಲಿ ಕಾಯ್ದೆಯಲ್ಲೇ ತಾರತಮ್ಯ ಇದೆ ಎಂದು ಆರೋಪಿಸಿದರು.
ಅದಾಲತ್ ಹೆಸರಿನಲ್ಲಿ ಸೃಷ್ಟಿಸುವ ಗೊಂದಲ ನಿವಾರಣೆ ಮಾಡಬೇಕು. ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಸವಾಲು-ಪಾಟಿಸವಾಲು
ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಮೈಸೂರಿನ ಗ್ರಾಮವೊಂದರ 110 ಕುಟುಂಬಗಳಿಗೆ ನೋಟಿಸ್ ವಿಚಾರದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಸವಾಲು-ಪಾಟಿಸವಾಲಿನ ಜಟಾಪಟಿಗೆ ಕೆಳಮನೆ ಸಾಕ್ಷಿಯಾ ಯಿತು. ಮೈಸೂರಿನ ಗ್ರಾಮವೊಂದರ 110 ಮನೆಗಳಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿದೆ. ಇದರಿಂದ ಪ್ರತೀ ತಿಂಗಳು ಆ ಕುಟುಂಬಗಳು ಮಂಡಳಿಗೆ ಅಲೆಯುವಂತಾಗಿದೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯಪ್ರವೇಶಿಸಿದ ಜಮೀರ್ ಅಹಮದ್ ಸಾರಾಸಗಟಾಗಿ ತಳ್ಳಿಹಾಕಿದರು. ಈ ಬಗ್ಗೆ ನನ್ನ ಬಳಿ ದಾಖಲೆ ಇವೆ. ಇದು ಸುಳ್ಳಾದರೆ ನಾನು ಕಟಕಟೆಯಲ್ಲಿ ನಿಲ್ಲುವುದಕ್ಕೂ ಸಿದ್ಧವಾಗಿದ್ದೇನೆ ಎಂದರು. ಈ ಸವಾಲು ಸ್ವೀಕರಿಸಿದ ಜಮೀರ್ ಅಹಮದ್, ಆರೋಪ ಸಾಬೀತಾದರೆ, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪಾಟಿಸವಾಲು ಹಾಕಿದರು.
ವಕ್ಫ್ ವಿಚಾರದಲ್ಲಿ ರಾಜ್ಯ ಸರಕಾರದ ನಡೆ ನೋಡಿದರೆ ಹಿಂದೂಗಳ ಮತದಿಂದ ಗೆದ್ದಿಲ್ಲ. ಕೇವಲ ಅಲ್ಪಸಂಖ್ಯಾಕರ ಮತದಿಂದಷ್ಟೇ ಗೆದ್ದಿದ್ದೇವೆ ಎಂಬ ಭ್ರಮೆಯಲ್ಲಿದೆ. ಅಲ್ಪಸಂಖ್ಯಾಕರನ್ನು ಖುಷಿಪಡಿಸುವ ನಿಟ್ಟಿನಲ್ಲಿ ದೇವಸ್ಥಾನಗಳನ್ನು, ಮಠ ಮಾನ್ಯಗಳನ್ನು ಬೀದಿಗೆ ತರುವ ಕೆಲಸವನ್ನು ಸರಕಾರ ಮಾಡಬಾರದು.
– ಬಿ.ವೈ. ವಿಜಯೇಂದ್ರ, ಬಿಜೆಪಿ ಶಾಸಕ
ವಕ್ಫ್ ವಿಚಾರದಲ್ಲಿ ರಾಜ್ಯ ಸರಕಾರ ಮಿನಿ ಪಾಕಿಸ್ಥಾನ ಮಾಡಲು ಹೊರಟಿದೆ. ಸರಕಾರಿ ಆಸ್ತಿಗಳು ಕೂಡ ವಕ್ಫ್ ಆಸ್ತಿ ಎಂದು ನಮೂದಾಗಿವೆ. ವಕ್ಫ್ ಬೋರ್ಡ್ ಹಸ್ತಾಂತರವಾಗಿರುವ ಬಗ್ಗೆ ದಾಖಲೆ ನೀಡುತ್ತೇನೆ. ವಕ್ಫ್ ಕಾಯ್ದೆ ರದ್ದತಿ ಆಗಬೇಕು, ಇಲ್ಲದೆ ಹೋದರೆ ಭಾರತ 3 ಪಾಕಿಸ್ಥಾನ ಆಗುವ ಸಾಧ್ಯತೆ ಇದೆ.
– ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ
ವಕ್ಫ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಲು ಹೊರಟಿದೆ. ಅನ್ವರ್ ಮಾಣಿಪ್ಪಾಡಿ ವರದಿ ಮಂಡಿಸಿದ್ದ ಇದೇ ಬಿಜೆಪಿ ಕೇಂದ್ರ ಸರಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಡುತ್ತಿದ್ದಂತೆ ಈಗ ಯೂಟರ್ನ್ ಹೊಡೆದಿದೆ. ವಿಪಕ್ಷಗಳು ಕುಳಿತು ವಕ್ಫ್ ಸಮಸ್ಯೆ ಬಗೆಹರಿಸಬಹುದು. ಶೇ. 60 ವಕ್ಫ್ ಆಸ್ತಿ ಮುಸ್ಲಿಂ ಜನಾಂಗದಲ್ಲಿರುವ ಬಲಾಡ್ಯರೆ ಒತ್ತುವರಿ ಮಾಡಿದ್ದಾರೆ.
-ರಿಜ್ವಾನ್ ಅರ್ಷದ್, ಕಾಂಗ್ರೆಸ್ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“ಉತ್ತಮ ಸಂಶೋಧಕನಿಗೆ ಉದಾಹರಣೆ ಬನ್ನಂಜೆ’
Karnataka Govt: 9 ಪ್ರತಿಷ್ಠಾನ, ಟ್ರಸ್ಟ್‌ಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ
ಕೃಷ್ಣರಿಗೆ ಸಂತಾಪ ವೇಳೆ ವಡ್ಡ ಪದ ಬಳಕೆಗೆ ಡಿಕೆಶಿ ವಿಷಾದ
Belagavi: ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ; ಮೈಸೂರು ದಸರಾ ಮಾದರಿ ಸಿಂಗಾರ!: ಡಿಕೆಶಿ
Session: ಬೆಳೆಗಳ ಹಾನಿಯುಂಟು ಮಾಡುವ ಕಾಡಾನೆಗಳ ಕೊಲ್ಲಲು ಅನುಮತಿ ನೀಡಿ: ಹರೀಶ್ ಪೂಂಜಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.