ಸೂರ್ಯ-ಚಂದ್ರ ಗ್ರಹಣವೆಂಬ ಖಗೋಳ ಶಿಕ್ಷಣ
Team Udayavani, Dec 26, 2019, 6:10 AM IST
ಗಗನವೇ ಅಸದೃಶ. ಅನಂತತೆ, ನಿಗೂಢತೆಯೇ ಅದಕ್ಕೆ ಭೂಷಣ. ಎಂದ ಮೇಲೆ ಸೂರ್ಯಗ್ರಹಣ, ಚಂದ್ರಗ್ರಹಣಕ್ಕೂ ಮಿಗಿಲಾಗಿ ಸೂರ್ಯ, ಚಂದ್ರರೇ ನಮಗೆ ಅಚ್ಚರಿಯೆನ್ನಿಸಬೇಕಿದೆ. ನೆನಪಿಡೋಣ, ಗ್ರಹಣವೆಂದರೆ ಯಾರು ಯಾರನ್ನೂ ನುಂಗುವುದಿಲ್ಲ. ಮುಖ್ಯವಾಗಿ, ಅಂಧಶ್ರದ್ಧೆ ನಮ್ಮನ್ನು ನುಂಗಬಾರದಷ್ಟೆ!
“ಸೂರ್ಯನಿಗೆ ಚಂದ್ರ ಅಡ್ಡವಾದರೆ ಸೂರ್ಯಗ್ರಹಣ. ಹಕ್ಕಿಗಳು ಅಡ್ಡವಾದರೆ ಏಕೆ ಸೂರ್ಯಗಹ್ರಣವಲ್ಲ?’
-ಕಿಂ ಯಂಗ್ ಹ (ದಕ್ಷಿಣ ಕೊರಿಯಾದ ಖ್ಯಾತ ಸಾಹಿತಿ) ಮಾನವ ಧರೆಯ ಮೇಲೆ ಉಗಮಿಸಿದ ಲಾಗಾಯ್ತಿನಿಂದಲೂ ಆಕಾಶವೆಂಬ ರಂಗಸ್ಥಳದಲ್ಲಿ ಗ್ರಹಣವೆಂಬ ನೆರಳು-ಬೆಳಕಿನ ಆಟವನ್ನು ಅನುಸಂಧಾನಿಸುತ್ತಲೇ ಬಂದಿದ್ದಾನೆ. ಮನುಷ್ಯನ ಸ್ವಭಾವವೇ ಹಾಗೆ. ಅಂತರಿಕ್ಷದಲ್ಲಷ್ಟೆ ಅಲ್ಲ, ಎಲ್ಲೇ ಯಾವುದೇ ಅಪರೂಪದ ಅಥವಾ ವಿಸ್ಮಯದ ಘಟನೆ ಸಂಭವಿಸಲಿ, ಅದರ ಸುತ್ತ ಕಥೆ ಕಟ್ಟುತ್ತಾನೆ. ಅಂಥ ಪುಳಕಕ್ಕೆ ಮಾರುಹೋಗುತ್ತಾನೆ. ಅವನು ಪೋಣಿಸುವ ರೋಚಕತೆಗಳು ಕಲ್ಪನೆಗಳನ್ನೂ ನಾಚಿಸುತ್ತವೆ. ಗ್ರಹಣ ಎಂದರೆ ಮರೆ ಬಂದು ಕಾಣದ್ದು ಎನ್ನುವುದು ಸಿದ್ಧ ನಿರ್ವಚನ. ಗ್ರಹಣಗಳು ಸೂರ್ಯಾಸ್ತ, ಚಂದ್ರೋದಯದಷ್ಟೆ ಸಹಜವೂ ಸ್ವಾಭಾವಿಕವೂ ಆದ ಪ್ರಸಂಗಗಳು.
ಬುಧ, ಶುಕ್ರ ಗ್ರಹಗಳು ಸೂರ್ಯನಿಗೆ ಅಡ್ಡ ಬರುವುದಿದೆ. ಆದರೆ ಸೂರ್ಯನ ಪ್ರಖರತೆಯಲ್ಲಿ ಆ ಸನ್ನಿವೇಶಗಳನ್ನು ಕಾಣಲಾಗದು. ಉದಾಹರಣೆಗೆ, ಒಂದು ಊಟದ ತಟ್ಟೆಯನ್ನು ಸೂರ್ಯನಿಗೆ ಅಡ್ಡವಾಗಿ ಹಿಡಿದು ಸೂರ್ಯ ನಮ್ಮ ಕಣ್ಣಿಗೆ ಬೀಳದಂತೆ ಮಾಡಬಹುದು. ತಟ್ಟೆಯನ್ನು ಸೂರ್ಯನತ್ತ ಚಾಚಿದಂತೆ ಆತನ ಸುತ್ತಲ ಅಂಚು ಗೋಚರಿಸುತ್ತ ಅದು ಹಿರಿದಾದಂತೆ ಭಾಸವಾಗುತ್ತದೆ. ಅಗೋ ಸೂರ್ಯಗ್ರಹಣ! ಇನ್ನು ಚಂದ್ರಗ್ರಹಣ ಅರಿಯಲು ಮತ್ತೂ ಸುಲಭ. ಗೋಡೆಯನ್ನು ನಮ್ಮ ಹಿಂಬದಿಯಿರುವ ವಿದ್ಯುದ್ದೀಪ ಬೆಳಗುತ್ತಿದೆ. ನಾವೇ ಅಡ್ಡ ಬಂದು ನಮ್ಮ ನೆರಳೇ ಗೋಡೆಯ ಮೇಲೆ ಬಿದ್ದರೆ ಗೋಡೆ ಕಾಣದಾಗುತ್ತದೆ. ಅಂತೆಯೇ ಸೂರ್ಯ ಮತ್ತು ಚಂದ್ರನ ಮಧ್ಯೆ ನಮ್ಮ ಭೂಮಿ ಅಡ್ಡ ಬಂದರೆ ಚಂದ್ರನು ಕತ್ತಲೆಗೆ ಶರಣಾಗಿ ಅಗೋಚರವಾಗುವನು. ಇಗೋ ಚಂದ್ರಗ್ರಹಣ! ಇಲ್ಲೊಂದು ಗಮನಿಸಬೇಕಾದ ಸೂಕ್ಷ್ಮವಿದೆ. ಪ್ರತೀ ಅಮಾವಾಸ್ಯೆಗೆ ಸೂರ್ಯ ಗ್ರಹಣವಾಗಲಿ, ಪ್ರತೀ ಪೂರ್ಣಿಮೆಗೆ ಚಂದ್ರ ಗ್ರಹಣವಾಗಲಿ ಅಸಂಭವ. ಚಂದ್ರ ಭೂಮಿಯನ್ನು ಸುತ್ತುವ ಕಕ್ಷೆಯು ಭೂಮಿ ಸೂರ್ಯನನ್ನು ಸುತ್ತುವ ಕಕ್ಷೆಗೆ ಸಂಬಂಧಿಸಿದಂತೆ 5 ಡಿಗ್ರಿಯಷ್ಟು (ಮೇಲೆ, ಕೆಳಗೆ) ಜೋಲಾಡುತ್ತಿರುತ್ತದೆ. ಹಾಗಾಗಿ ಅಮಾವಾಸ್ಯೆ/ಪೂರ್ಣಿಮೆ ಎಂದರೆ ಸೂರ್ಯ/ಚಂದ್ರಗ್ರಹಣ ಬಂತೆಂದಲ್ಲ. ಆ ದಿನಗಳು ಗ್ರಹಣಗಳು ಆಗಬಲ್ಲವು ಮಾತ್ರ. ಗ್ರಹಣವಾಗಲು ಸೂರ್ಯ, ಚಂದ್ರ, ಭೂಮಿ ಅಥವಾ ಸೂರ್ಯ, ಭೂಮಿ, ಚಂದ್ರ ಸರಳರೇಖೆಯಲ್ಲಿದ್ದರೆ ಪ್ರಶಸ್ತವೆನ್ನಿ. ಗ್ರಹಣ ಸೂರ್ಯನದೋ ಇಲ್ಲವೆ ಚಂದ್ರನದೋ. ಅದು ಪಾರ್ಶ್ವ(partial), ಅಥವಾ ಪೂರ್ಣ(total) ಇರಬಹುದು.
ಇದೇ 26 ಡಿಸೆಂಬರ್ 2019 ರಂದು ಸಂಭವಿಸಲಿರುವ “ಕಂಕಣ ಸೂರ್ಯಗ್ರಹಣ’ ನಿಜಕ್ಕೂ ವಿರಳವೂ ಕುತೂಹಲಕರವೂ ಆದ ಖಗೋಳ ವಿದ್ಯಮಾನ. ಚಂದ್ರನ ಗೋಚರ ವ್ಯಾಸ ಸೂರ್ಯನದ್ದಕ್ಕಿಂತ ಚಿಕ್ಕದಾಗಿರುತ್ತದೆ. ಅದು ಬಹುತೇಕ ಸೌರಕಿರಣಗಳನ್ನು ಮರೆಮಾಚಿ ಸೂರ್ಯನು ಉಂಗುರದ ಹಾಗೆ ಕಾಣುವಂತೆ ಮಾಡುತ್ತದೆ. ಭೂಮಿಯ ಸಾವಿರಾರು ಕಿ.ಮೀ.ಗಳ ವ್ಯಾಪ್ತಿಯಲ್ಲಿ ವೀಕ್ಷಿಸಬಹುದಾದ ಈ ಬಗೆಯ ಗ್ರಹಣವೂ ಪಾರ್ಶ್ವಗ್ರಹಣವೇ ಹೌದು. ಅಂದಹಾಗೆ 26ರಂದು ಸಂಭವಿಸಲಿರುವುದು 2019ರ ಮೂರನೆಯ ಹಾಗೂ ಕೊನೆಯ ಸೂರ್ಯಗ್ರಹಣ. ಮೈಸೂರಿಗರು, ಮಡಕೇರಿ, ಮಂಗಳೂ ರಿಗರು ಅದೃಷ್ಟ ಶಾಲಿಗಳೆನ್ನಬೇಕು. ಅಲ್ಲಿ ಶೇ. 93ರಷ್ಟು ಸೂರ್ಯನನ್ನು ಚಂದ್ರನು ಬಚ್ಚಿಡುವನು. ಇನ್ನು ಬೆಂಗಳೂರಿನಲ್ಲಿ ಚಂದ್ರ ಶೇ. 90ರಷ್ಟು ಸೂರ್ಯನನ್ನು ಬಚ್ಚಿಡುತ್ತಾನೆ. ಹೋಲಿಕೆಯಾಗಿ ಮುಂಬೈನಲ್ಲಿ ಶೇ.78.8 ದೆಹಲಿಯಲ್ಲಿ ಶೇ.44.7, ಹೈದರಾಬಾದ್‌ನಲ್ಲಿ ಶೇ. 74.3 ಬೆಂಗಳೂರಿನಲ್ಲಿ ಗ್ರಹಣ ಪ್ರವೇಶ ಬೆಳಗ್ಗೆ 8 ಗಂಟೆ 6 ನಿಮಿ ಷ, ಗ್ರಹಣ ಮೋಕ್ಷ 11 ಗಂ ಟೆ 11 ನಿಮಿಷ, ಮಧ್ಯ ಕಾಲ 9 ಗಂಟೆ 29 ನಿಮಿ ಷ. ಒಟ್ಟು 3 ನಿಮಿಷ 4 ಸೆಕೆಂಡ್ ಅವಧಿಗೆ ಗಗನದಲ್ಲಿ “ಬೆಂಕಿ ಉಂಗುರ’ದ ರುದ್ರ ರಮಣೀಯ ದರ್ಶನ. ಈ ನಿಟ್ಟಿನಲ್ಲಿ ಒಂದು ಷರಾ; ಇಂಥ ಕಂಕಣ ಗ್ರಹಣ ಭಾರತದಲ್ಲಿ ಮತ್ತೆ ಕಾಣಸಿಗಲು ಫೆಬ್ರವರಿ 17, 2064ರ ತನಕ ಕಾಯಬೇಕು. ಭೂಮಿ- ಸೂರ್ಯ ಅಂತರ ಸುಮಾರು 1500,00000 ಕಿ.ಮೀ, ಭೂಮಿ -ಚಂದ್ರ ಅಂತರ ಸುಮಾರು 385000 ಕಿ.ಮೀ. ಸೂಕ್ತ ಅನುಪಾತದಲ್ಲಿ ಗ್ರಹಣದ ನಕ್ಷೆ ರಚನೆಗೆ 50 ಕಿ.ಮೀ.ಉದ್ದದ, 30 ಕಿಮೀ ಅಗಲದ ಹಾಳೆ ಬೇಕು!
ಪ್ರಕೃತಿ ಮೊಗೆದಷ್ಟೂ ಮುದ. ಅದರ ವಿದ್ಯಮಾನಗಳು ನಮ್ಮಲ್ಲಿ ಹಿಗ್ಗು, ಉತ್ಸಾಹ, ಬೆರಗು ತರಬೇಕೇ ಪರಂತು ಭಯ, ಭೀತಿಯನ್ನಲ್ಲ. ಗ್ರಹಣಗಳನ್ನು ಯುಕ್ತ ಸಲಕರಣೆಗಳನ್ನು ಧರಿಸಿ, ಮುನ್ನಚ್ಚರಿಕೆ ವಹಿಸಿ ಆಸ್ವಾದಿಸಬೇಕಷ್ಟೆ.
ಎಂದಿನ ದಿನಮಾನಗಳಲ್ಲಿ ತಾನೆ ಸೂರ್ಯನನ್ನು ನಾವೇನು ದಿಟ್ಟಿಸಿ ನೋಡುವುದಿಲ್ಲವಲ್ಲ! ಜಾಗರೂಕತೆಗೆ ತಂತಾವೆ ನಮ್ಮ ಕಣ್ಣುಗಳು ಬದ್ಧವಾಗುತ್ತವೆ. ಗ್ರಹಣ ಕಣ್ತುಂಬಿಕೊಳ್ಳಬೇಕೇ? ಗ್ರಹಣ ವೀಕ್ಷಣೆಗೆಂದೇ ವೈಜ್ಞಾನಿಕವಾಗಿ ತಯಾರಿಸಲಾದ ಕನ್ನಡಕ ಧರಿಸಿದರಾಯಿತು. ಈ ವಿದ್ಯುನ್ಮಾನ ಯುಗದಲ್ಲೂ, ಈ ವ್ಯೋಮ ಯುಗದಲ್ಲೂ, ಈ ಪರಮಾಣು ಯುಗದಲ್ಲೂ ಮೌಡ್ಯ ನಮ್ಮನ್ನು ಬಿಟ್ಟಿಲ್ಲ! ಗ್ರಹಣವೆಂದರೆ ಸದ್ಯದಲ್ಲೇ ಏನೋ ಅನಾಹುತ, ಅನರ್ಥ ಘಟಿಸುವುದರ ಮುನ್ಸೂಚಕವೆಂಬ ಬಾಲಿಶ ನಂಬಿಕೆ ತಾಂಡವವಾಡುತ್ತದೆ. ವಿಚಾರವಾದಿ ಡಾ.ಹೆಚ್. ನರಸಿಂಹಯ್ಯನವರು “”ಗ್ರಹಣಕ್ಕೆ ಆದಿಮಾನವನಂತೆ ಆಧುನಿಕ ಮಾನವನೂ ಹೆದರುತ್ತಿದ್ದಾನೆ.
ಒಂದೇ ವ್ಯತ್ಯಾಸವೆಂದರೆ ಅವನು ಗುಹೆ ಹೊಕ್ಕ, ಇವನಾದರೋ ಮನೆಯಲ್ಲಿ ಅವಿತ” ಎಂದು ಮಾರ್ಮಿಕವಾಗಿ ಉದ್ಗರಿಸುತ್ತಿದ್ದರು. ಗ್ರಹಣ ಕಾಲದಲ್ಲಿ ಸ್ವತಃ ತಿಂಡಿ, ಎಳನೀರು ಸವಿದು ಅವರು ಏನೂ ಆಗದು ನೋಡಿ ಎಂದು ಪ್ರಾತ್ಯಕ್ಷಿಕೆ ನೀಡುತ್ತಿದ್ದರು. ಕೆಲವೊಮ್ಮೆ, ಚಂದ್ರ ಸೂರ್ಯನಿಗೆ ಅಡ್ಡ ಬಂದು ಆಟವಾಡುತ್ತಾನೆ, ಸೂರ್ಯ/ಚಂದ್ರರನ್ನು “ರಾಹು’, “ಕೇತು’ಗಳೆಂಬ ರಕ್ಕಸರು ನುಂಗುತ್ತಾರೆ, ಚಂದ್ರ ರಕ್ತ ಕಾರಿಕೊಳ್ಳತ್ತಾನೆ….ಇತ್ಯಾದಿ ಅತಿರಂಜಿತ, ಅಸಂಬದ್ಧ ಸುದ್ದಿಗಳು ಮೂಢನಂಬಿಕೆಗಳನ್ನು ಪೋಷಿಸುತ್ತವೆ. ವಾಸ್ತವವಾಗಿ “ರಾಹು’, “ಕೇತು’ ಕಾಲ್ಪನಿಕ ಬಿಂದುಗಳಷ್ಟೆ. ನಿಜವೆ, ಬ್ರಹ್ಮಾಂಡದಲ್ಲಿ ಎಲ್ಲ ಆಕಾಶಕಾಯಗಳೂ ಪುರುಸೊತ್ತಿಲ್ಲದೆ ಚಲನಶೀಲವಾಗಿವೆ. ಪರಸ್ಪರ ಗುರುತ್ವದ ನಿರ್ದೇಶನದಂತೆ ಒಂದು ತಂತಾನೆ (ಬುಗುರಿಯಂತೆ) ತಿರುಗುತ್ತಲೇ ಇನ್ನೊಂದನ್ನು ಪರಿವರಿಸುತ್ತದೆ. ನಾವು ಖಗೋಳ ಅಧ್ಯಯನಾರ್ಥ ಭೂಮಿ ಸ್ಥಿರವೆಂದು ಭಾವಿಸಬೇಕು. ರೈಲಿನಲ್ಲಿ ಪ್ರಯಾಣಿಸುವಾಗ ಯಾತ್ರಿ ರೈಲು ಸ್ಥಿರ, ಹೊರಗಿನ ಮರ, ಗಿಡಗಳೇ ಚಲಿಸುತ್ತಿವೆ ಎನ್ನುವ ಹಾಗೆ!
ಸರಿ, ಈಗ ಸೂರ್ಯನು ಕಾಂತಿವೃತ್ತ ಎಂಬ ಕಕ್ಷೆಯಲ್ಲೂ, ಚಂದ್ರನು ಚಾಂದ್ರಕಕ್ಷೆಯಲ್ಲೂ ಭೂಮಿಯನ್ನು ಬಳಸುವನೆಂದಾಯಿತು. ಇವೆರಡು ಹಳಿಗಳು ಒಂದಕ್ಕೊಂದು 5 ಡಿಗ್ರಿ ವಾರೆಯಾಗಿರುವುದರಿಂದ ಎರಡು ಬಿಂದುಗಳಲ್ಲಿ ಸಂಧಿಸುತ್ತವೆ. ಸಂಧಿಸುವ ಬಿಂದುಗಳೇ “ರಾಹು’, “ಕೇತು’. ಗ್ರಹಣಗಳು ಘಟಿಸಲು ಸೂರ್ಯ, ಚಂದ್ರ ಆ ಬಿಂದುಗಳಲ್ಲಿ ಅಥವಾ ಅವುಗಳ ಸಮೀಪದಲ್ಲಿದ್ದರಾಯಿತು. ನೆನಪಿಡೋಣ, ಗ್ರಹಣವೆಂದರೆ ಯಾರು ಯಾರನ್ನೂ ನುಂಗುವುದಿಲ್ಲ. ಮುಖ್ಯ, ಅಂಧಶ್ರದ್ಧೆ ನಮ್ಮನ್ನು ನುಂಗಬಾರದಷ್ಟೆ! ನಮ್ಮ ಪಾಲಿಗೆ ಸೂರ್ಯ, ಚಂದ್ರ ಸಮ ಸಮ ಗಾತ್ರದಂತೆ ತೋರುತ್ತದೆ. ಹಾಗಾಗಿಯೇ ಗ್ರಹಣಗಳು ಅಷ್ಟು ಮನೋಹರ. ಇಂಥ ಸೌಭಾಗ್ಯ ಮತ್ತಾÂವ ಆಕಾಶನೆಲೆಗುಂಟು?
ಬ್ರಿಟನ್ನಿನ ಖಗೋಳ ವಿಜ್ಞಾನಿ ಸರ್ ಅರ್ಥರ್ ಎಡಿಂಗ್ಟನ್ ಮೇ.29, 1919ರಂದು ಘಟಿಸಿದ ಸಂಪೂರ್ಣ ಸೂರ್ಯಗ್ರಹಣದ ಸಂದರ್ಭದ ಛಾಯಾಚಿತ್ರಗಳನ್ನು ತೆಗೆದರು. ವಾಸ್ತವವಾಗಿ ಅವರ ಉದ್ದೇಶ ಸೂರ್ಯನು “ಹೈಡೆಸ್ ನಕ್ಷತ್ರಗುತ್ಛ’ದ ಮೂಲಕ ಹಾದುಹೋಗುವಾಗ ಅವನೇನಾದರೂ ಗುತ್ಛದ ತಾರೆಗಳನ್ನು ಪಲ್ಲಟಗೊಳಿಸಿಯಾನೋ ಗಮನಿಸುವುದು. ಅದೇ ಫೆಬ್ರವರಿಯಲ್ಲಿ ಅವರು ಅವೇ ತಾರೆಗಳನ್ನು ಎಲ್ಲೆಲ್ಲಿ ತಿಳಿದಿದ್ದರು. ಹೇಗೂ ಸಂಪೂರ್ಣ ಸೂರ್ಯಗ್ರಹಣ-ಚಂದ್ರ ಕೃತಕ ಇರುಳು ಸೃಷ್ಟಿಸುವ ಮುಹೂರ್ತ. ಸೂರ್ಯನ ಪ್ರಖರ ರಶ್ಮಿಗಳ ಕಾಟವಿಲ್ಲ. ಇದಲ್ಲವೆ ತಾರೆಗಳ ಪಲ್ಲಟ(ಏನಾದರೂ ಆಗಿದ್ದರೆ) ಪ್ರಕಟವಾಗುವ ತಕ್ಕ ಸಮಯ! ಹೌದು, ಅಕ್ಷರಸಃ ಪಲ್ಲಟವನ್ನು ಅವರು ಕಂಡೇ ಬಿಟ್ಟಿದ್ದರು. ಸೂರ್ಯ ಹೀಗೇಕೆ ವರ್ತಿಸಿದ?
ಹೇಳಿಕೇಳಿ ಮಹಾಕಾಯ. ಐನ್‌ಸ್ಟಿàನ್ “ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತ’ವು ದ್ರವ್ಯರಾಶಿ ತನ್ನ ಗುರುತ್ವಾಕರ್ಷಣ ಸಾಮರ್ಥ್ಯಕ್ಕೆ ತಕ್ಕಂತೆ ತನ್ನತ್ತ ಸುಳಿಯುವ ಬೆಳಕನ್ನು ಬಾಗಿಸುತ್ತದೆ ಎನ್ನು ತ್ತದೆ. ಸತ್ಯಕ್ಕೆ ಮತ್ತೇನು ಪುರಾವೆ ಬೇಕು? ಸಂಪೂರ್ಣ ಸೂರ್ಯಗ್ರಹಣ ವೀಕ್ಷಿಸಲೆಂದೇ ಆಫ್ರಿಕಾದ ಪಶ್ಚಿಮ ತೀರದ ಪ್ರಿನ್ಸಿಪ್ ಎಂಬ ದ್ವೀಪದಲ್ಲಿ ಬಿಡಾರ ಹೂಡಿದ್ದ ಎಡಿಂಗ್ಟನ್‌ನ ತಪಸ್ಸು ಸಾರ್ಥಕವಾಗಿತ್ತು. ಐನ್‌ಸ್ಟಿàನ್ ತಾನೇನು ಒಂದೇ ರಾತ್ರಿಯಲ್ಲಿ ಜಗಮೆಚ್ಚುವ ವಿಜ್ಞಾನಿಯಾಗಿಬಿಟ್ಟಿದ್ದರು. ಗ್ರಹಣದ ಮಾತಿರಲಿ, ಗಗನವೇ ಅಸದೃಶ. ಅನಂತತೆ, ನಿಗೂಢತೆಯೇ ಅದಕ್ಕೆ ಭೂಷಣ. ಎಂದಮೇಲೆ ಸೂರ್ಯಗ್ರಹಣ, ಚಂದ್ರಗ್ರಹಣಕ್ಕೂ ಮಿಗಿಲಾಗಿ ಸೂರ್ಯ, ಚಂದ್ರರೇ ನಮಗೆ ಅಚ್ಚರಿಯೆನ್ನಿಸಬೇಕಿದೆ.
– ಬಿಂಡಿಗನವಿಲೆ ಭಗವಾನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.