Bangaladesh Crisis: ಬಾಂಗ್ಲಾ ಬೆಳವಣಿಗೆ ಭಾರತಕ್ಕೆ ಸೂಕ್ಷ್ಮ ಎಚ್ಚರಿಕೆಯ ಘಂಟೆ
Team Udayavani, Aug 7, 2024, 6:00 AM IST
ಭಾರತದ ನೆರೆಯ ಬಾಂಗ್ಲಾದೇಶದಲ್ಲಿ ಅನೂಹ್ಯ ದಂಗೆ ನಡೆದು ಶೇಖ್ ಹಸೀನಾ ನೇತೃತ್ವದ ಸರಕಾರ ಪತನಗೊಂಡಿದೆ. ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ತೊರೆದು ಸದ್ಯ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಸುದೀರ್ಘ ಕಾಲದಿಂದ ಪ್ರಧಾನಿಯಾಗಿ ಆಡಳಿತ ನಡೆಸುತ್ತಿದ್ದ, ಭಾರತದ ಪಾಲಿಗೆ ಬಾಂಗ್ಲಾದೇಶವನ್ನು ಆಪ್ತ ರಾಷ್ಟ್ರವನ್ನಾಗಿಸಿದ್ದ ಹಸೀನಾ ಅವರ ಪದಚ್ಯುತಿ ಒಂದು ಆಘಾತಕಾರಿ ಕಹಿ ಘಟನೆ ಎಂಬುದರಲ್ಲಿ ಎರಡು ಮಾತೇ ಇಲ್ಲ.
ಒಂದು ಕಾಲದಲ್ಲಿ ಭಾರತದ ಭಾಗವೇ ಆಗಿದ್ದ, ಭೌಗೋಳಿಕವಾಗಿ ಭಾರತದ ಕಂಕುಳಲ್ಲಿ ಸಿಲುಕಿ ಕೊಂಡಂತೆ ಇರುವ ಬಾಂಗ್ಲಾದೇಶದಲ್ಲಿ ನಡೆದಿರುವ ಈ ಕ್ಷಿಪ್ರ ಬೆಳವಣಿಗೆಯು ಭಾರತಕ್ಕೆ ಸೂಕ್ಷ್ಮ ಎಚ್ಚರಿಕೆಯಂತಿದೆ. ಮಾತ್ರವಲ್ಲದೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡಿಕೊಂಡು ಜಾಗರೂಕವಾಗಿ ಮುನ್ನಡೆಯಲು ಬೇಕಾದ ಅಗತ್ಯ ಮುನ್ನೆಚ್ಚರಿಕೆ, ಮುನ್ನೇರ್ಪಾಡುಗಳನ್ನು ಮಾಡಿಕೊಳ್ಳುವುದಕ್ಕೆ ಒಂದು ಕಾಲದ ಕರೆ ಎಂಬಂತಿದೆ.
ನಾವಿರುವ ದಕ್ಷಿಣ ಏಷ್ಯಾವನ್ನು ಗಮನಿಸಿದರೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರ ಪತನಗೊಂಡು ಅರಾಜಕತೆ ಸೃಷ್ಟಿಯಾದ ನಾಲ್ಕನೇ ಉದಾಹರಣೆ ಇದು. ಈ ಹಿಂದೆ ಶ್ರೀಲಂಕಾ, ಪಾಕಿಸ್ಥಾನ, ನೇಪಾಲ, ಮ್ಯಾನ್ಮಾರ್‌ನಲ್ಲಿಯೂ ಇಂಥದ್ದೇ ಕ್ಷಿಪ್ರ ಬಂಡಾಯ ನಡೆದು ಹೋಗಿವೆ. ಶ್ರೀಲಂಕಾದಲ್ಲಿ ದಂಗೆಯ ಪರಿಣಾಮವಾಗಿ ಈಗ ಬಾಂಗ್ಲಾದಲ್ಲಿ ಕಂಡುಬಂದಿರುವಂಥದ್ದೇ ಘಟನೆಗಳು ನಡೆದಿದ್ದವು. ಪಾಕಿಸ್ಥಾನದಲ್ಲಿ ಇಮ್ರಾನ್ ಖಾನ್ ನೇತೃತ್ವದ ಸರಕಾರ ಪತನಗೊಂಡಿತ್ತು. ನೇಪಾಲದಲ್ಲಿಯೂ ಇಂಥದ್ದೇ ಬೆಳವಣಿಗೆ ಸಂಭವಿಸಿದೆ. ಮ್ಯಾನ್ಮಾರ್‌ನಲ್ಲಿ ಪ್ರಜಾಸತಾತ್ಮಕ ಆಳ್ವಿಕೆಯ ಬದಲು ಅಧಿಕಾರ ಸೇನೆಯ ಕೈಯಲ್ಲಿದೆ. ಇನ್ನೊಂದೆಡೆ ನೆರೆ ದೇಶ ಮಾಲ್ದೀವ್ಸ್‌ನಲ್ಲಿ ಭಾರತ ಸ್ನೇಹಿ ಸರಕಾರ ತೊಲಗಿ ಚೀನದ ಮಿತ್ರ, ಭಾರತ ವಿರೋಧಿ ಮುಯಿಜ್ಜು ಅವರ ಸರಕಾರ ಅಧಿಕಾರಕ್ಕೆ ಬಂದಿದೆ.
ಅರಾಜಕತೆ ಸೃಷ್ಟಿಯಾದ ಹೆಚ್ಚಿನ ದೇಶಗಳು ಈಗಲೂ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಆ ದೇಶಗಳು ಆರ್ಥಿಕ ಪತನಕ್ಕೆ ಸಿಲುಕಿದ್ದೂ ಅಲ್ಲದೆ ಸಮರ್ಥ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರಿಯಾದ ಚುಕ್ಕಾಣಿ ಇಲ್ಲದೆ ಈಗಲೂ ಒದ್ದಾಡುತ್ತಿವೆ. ಇವೆಲ್ಲದರ ಒಟ್ಟು ಪರಿಣಾಮ ನೇರವಾಗಿ ಜನರ ಮೇಲೆಯೇ ಬೀಳುತ್ತಿದೆ.
ಬಾಂಗ್ಲಾ ದಂಗೆಯ ಹಿಂದೆ ಪಾಕಿಸ್ಥಾನ ಮತ್ತು ಚೀನದ ಕೈವಾಡ ಇದೆ ಎನ್ನಲಾಗುತ್ತಿದೆ. ಭಾರತದ ಶ್ರೇಯೋಭಿವೃದ್ಧಿಯನ್ನು ಸಹಿಸಲಾಗದ ಈ ಎರಡು ದೇಶಗಳು ಭಾರತದ ಆಂತರಿಕ ವಿಷಯಗಳಲ್ಲಿಯೂ ಹಸ್ತಕ್ಷೇಪವನ್ನು ಬಹಳ ಹಿಂದಿನ ಕಾಲದಿಂದ ನಡೆಸುತ್ತ ಬಂದಿವೆ. ಈ ಎಲ್ಲ ಕಾರಣಗಳಿಂದ ಬಾಂಗ್ಲಾದಲ್ಲಿ ನಡೆದಿರುವ ದಂಗೆ ಮತ್ತು ಭಾರತವನ್ನು ಸುತ್ತುವರಿದಂತೆ ಸೃಷ್ಟಿಯಾಗುತ್ತಿರುವ ಅರಾಜಕತೆಯ ವಾತಾವರಣದ ಬಗ್ಗೆ ನಾವು ಬಹಳಷ್ಟು ಎಚ್ಚರದಿಂದ ಇದ್ದು ಮೈಯೆಲ್ಲ ಕಣ್ಣಾಗಿ ಮುಂದುವರಿಯಬೇಕಾಗಿದೆ.
ನಮ್ಮ ದೇಶದಲ್ಲಿ ಆಂತರಿಕ ದಂಗೆ ನಡೆದ ಉದಾಹರಣೆಗಳು ಇಲ್ಲ. ಭಾರತದಂತಹ ವಿಶಾಲವಾದ, ವೈವಿಧ್ಯವಾದ ಜನಸಮೂಹವನ್ನು ಹೊಂದಿರುವ ದೇಶದಲ್ಲಿ ಆಂತರಿಕ ದಂಗೆ ಉಂಟಾಗುವುದು ಅಷ್ಟು ಸುಲಭ ಸಾಧ್ಯವಲ್ಲ. ಆದರೂ ಬದಲಾಗುತ್ತಿರುವ ಜಾಗತಿಕ ರಾಜಕೀಯ ಲೆಕ್ಕಾಚಾರಗಳು, ಆಂತರಿಕವಾಗಿಯೂ ಬೇರೂರಿರುವ ಕೆಲವು ಶಕ್ತಿಗಳ ಹಿನ್ನೆಲೆಯಲ್ಲಿ ನಾವು ಇಮ್ಮಡಿ- ಮುಮ್ಮಡಿ ಎಚ್ಚರಿಕೆಯಿಂದ ಇರಬೇಕಾದ ಸಮಯವಿದು.
ಈ ಹಿನ್ನೆಲೆಯಲ್ಲಿ ದೇಶದ ಸಾರ್ವಭೌಮತೆ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡಿಕೊಂಡು ಸ್ವತಂತ್ರ ಶಕ್ತಿಯಾಗಿ ದೇಶ ಮುನ್ನಡೆಯುವುದಕ್ಕೆ ಸರಕಾರ ಮತ್ತು ವಿಪಕ್ಷಗಳು ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಕೈಜೋಡಿಸಬೇಕು. ದೇಶದ ನಾಗರಿಕರು ಕೂಡ “ದೇಶವೇ ಮೊದಲು’ ಎಂಬ ಏಕೋಭಾವದಿಂದ ತಮ್ಮ ತಮ್ಮ ಯೋಗದಾನವನ್ನು ಸಲ್ಲಿಸಿ ಅರಾಜಕತೆಯನ್ನು ಬಯಸುವ ನೇತ್ಯಾತ್ಮಕ ಶಕ್ತಿಗಳು ತಲೆಯೆತ್ತದಂತೆ ನೋಡಿಕೊಳ್ಳುವುದಕ್ಕೆ ಬದ್ಧರಾಗಿರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Digital Arrest: ಡಿಜಿಟಲ್ ಅರೆಸ್ಟ್ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು
Emotions: ಭಾವನೆಗಳ ಬಸ್ ನಿಲ್ದಾಣ
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.