Bangladesh Crisis: ಬಾಂಗ್ಲಾ ಶೇಕ್!; ದೇಶದ ಮೀಸಲು ವ್ಯವಸ್ಥೆಗೆ ವಿದ್ಯಾರ್ಥಿಗಳ ಆಕ್ರೋಶ
ಶೇಕ್ ಹಸೀನಾ ವಿರುದ್ಧ ಸಿಡಿದೆದ್ದ ಯುವ ಪ್ರತಿಭಟನಕಾರರು
Team Udayavani, Aug 6, 2024, 6:35 AM IST
ಮೀಸಲಾತಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಹಿಂಸಾತ್ಮಕ ಪ್ರತಿಭಟನೆಗಳು ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಯೊಂದಿಗೆ ಒಂದು ಹಂತಕ್ಕೆ ಬಂದು ನಿಂತಿವೆ. ಢಾಕಾದಲ್ಲಿ ಕೆಲವು ದಿನಗಳಿಂದ ರಕ್ತಸಿಕ್ತವಾಗಿದ್ದ ಪ್ರತಿಭಟನೆಯ ಹಿನ್ನೆಲೆಯೇನು, ಮೀಸಲಾತಿಗೆ ಏಕೆ ವಿರೋಧ, ವಿದ್ಯಾರ್ಥಿ ಪ್ರತಿಭಟನೆ ಚಳವಳಿಯಾಗಿ ಬದಲಾಗಿದ್ದು ಹೇಗೆ ಇತ್ಯಾದಿ ಮಾಹಿತಿ ಇಲ್ಲಿದೆ.
ಜುಲೈಯಲ್ಲೇ ಭುಗಿಲೆದ್ದ ಮೀಸಲು ಕಿಡಿ!
ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರ ಇಡೀ ಕುಟುಂಬಕ್ಕೆ ಸರಕಾರಿ ನೌಕರಿಗಳಲ್ಲಿ ಶೇ.30ರಷ್ಟು ಮೀಸಲಾತಿ ನೀಡುವ ವ್ಯವಸ್ಥೆ ಬಾಂಗ್ಲಾದಲ್ಲಿದೆ. ಸ್ವಾತಂತ್ರ್ಯ ಹೋರಾಟ ನಡೆದು 4 ದಶಕಗಳು ಕಳೆದರೂ ಹೋರಾಟಗಾರರ ಮಕ್ಕಳಿಗೆ, ಮರಿಮಕ್ಕಳಿಗೂ ಮೀಸಲಾತಿ ಮುಂದುವರಿದಿರುವುದು ಇಲ್ಲಿನ ನಿರುದ್ಯೋಗಿ ಯುವಕರನ್ನು ಕೆರಳಿಸಿತ್ತು. 2018ರಲ್ಲಿ ಬಾಂಗ್ಲಾ ಹೈಕೋರ್ಟ್ ಈ ಮೀಸಲನ್ನು ಅಲ್ಪ ಸಮಯದವರೆಗೆ ರದ್ದುಪಡಿಸಿತ್ತು. ಆದರೆ ಮತ್ತೆ ಮೀಸಲಾತಿ ಜಾರಿ ಮಾಡುತ್ತಿದ್ದಂತೆ ಮತ್ತೆ ಅಸಮಾಧಾನ ಹೊಗೆಯಾಡಲಾರಂಭಿಸಿತ್ತು. ಸಣ್ಣ ಕಿಡಿ ಬಾಂಗ್ಲಾದ ಕಾಲೇಜು ಕ್ಯಾಂಪಸ್‌ಗಳಲ್ಲಿ ಶುರುವಾಗಿತ್ತು ಪ್ರಧಾನಿಯಾಗಿ ಹಸೀನಾ ಈ ಮೀಸಲಾತಿಯನ್ನು ವೈಜ್ಞಾನಿಕವಾಗಿ ಕೈಗೊಳ್ಳದೇ ತಮ್ಮ ತಂದೆಯ ಕಾರಣಕ್ಕಾಗಿ ಭಾವನಾತ್ಮಕ ನೆಲೆಯಲ್ಲಿ ಕೈಗೊಂಡಿದ್ದರು ಎನ್ನಲಾಗಿದೆ. ಕೊನೆಗೆ ಮೀಸಲಾತಿ ಬೇಗುದಿ 2024ರ ಜುಲೈಯಲ್ಲಿ ಸ್ಫೋಟಗೊಂಡಿತು. ಜುಲೈ 16ರಂದು ಢಾಕಾದಲ್ಲಿನ ವಿವಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಲಾರಂಭಿಸಿದರು.
ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ
ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಸುಪ್ರೀಂ ಕೋರ್ಟ್ ಜುಲೈ 21ರಂದು ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದವರ ಕುಟುಂಬಗಳಿಗೆ ನೀಡಲಾದ ಶೇ.30 ಮೀಸಲಾತಿ ರದ್ದುಗೊಳಿಸಿ, ಅದನ್ನು ಶೇ.5ಕ್ಕೆ ಇಳಿಸಿತು. ಆದರೆ ಕೋರ್ಟ್‌ನ ಈ ಆದೇಶವು ಪ್ರತಿಭಟನಕಾರರಿಗೆ ತೃಪ್ತಿ ತರಲಿಲ್ಲ. ಜತೆಗೆ ಸುಪ್ರೀಂ ತೀರ್ಪಿನ ಹೊರತಾಗಿಯೂ ಮೀಸಲಾತಿ ಕುರಿತು ಮತ್ತೆ ಮಾತುಕತೆ ನಡೆಸುವ ಪ್ರಸ್ತಾವ ಮಾಡಿದ್ದು, ಆಕ್ರೋಶಕ್ಕೆ ಕಾರಣವಾಗಿತ್ತು. ಹಾಗಾಗಿ ಸಂಪೂರ್ಣವಾಗಿ ಮೀಸಲಾತಿಯನ್ನು ರದ್ದುಪಡಿಸುವಂತೆ ಜನರು ಪಟ್ಟು ಹಿಡಿದರು.
ಅಂತಿಮ ಪ್ರತಿಭಟನೆಗೆ ಕರೆ
ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಸ್ವಲ್ಪ ತಣ್ಣಗಾಗಿದ್ದ ಪ್ರತಿ ಭಟನೆ ಆಗಸ್ಟ್ ಆರಂಭದಲ್ಲೇ ಮತ್ತೆ ವ್ಯಾಪಕವಾಯಿತು. ಈ ಬಾರಿ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ನಾಗರಿಕ ಅಸಹ ಕಾರ ನಾಯಕರು ಈ ಬಾರಿ ಅಂತಿಮ ಪ್ರತಿಭಟನೆಗೆ ಕರೆ ನೀಡಿ ದ್ದರು. ಪ್ರತಿಭಟನಕಾರರು ಈಗ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಆಗ್ರಹಿಸಲಾರಂಭಿಸಿದರು. ಜತೆಗೆ ಪ್ರತಿಭಟನೆ ಯಲ್ಲಿ ಬಂಧಿಸಲಾಗಿರುವ ಎಲ್ಲರನ್ನೂ ಬಿಡುಗಡೆಗೊಳಿಸುವಂತೆ ಬೇಡಿಕೆ ಮುಂದಿಟ್ಟರು. ಆರಂಭದಲ್ಲಿ ಪ್ರತಿಭಟನಕಾರರ ಬೇಡಿಕೆ ಒಪ್ಪದ್ದರಿಂದ ಆ.3ರಂದು ಢಾಕಾದಲ್ಲಿ ನಡೆದ ಪ್ರತಿಭಟನೆಗೆ 100ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು.
“ರಜಾಕಾರರು’ ಎಂದಿದ್ದ ಕ್ಕೆ ಬೆಂಕಿ!
ಜುಲೈಯಲ್ಲಿ ನಡೆದ ಹಿಂಸಾಚಾರದ ವೇಳೆ ಪ್ರತಿಭಟನ ಕಾರರನ್ನು ರಜಾಕಾರರು (ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವೈರಿಗಳೊಂದಿಗೆ ಕೈಜೋಡಿಸಿದವರು) ಎಂದು ಪ್ರಧಾನಿ ಶೇಖ್ ಹಸೀನಾ ಟೀಕಿಸಿದ್ದರು. ಅಲ್ಲದೇ ವಿಪಕ್ಷ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ(ಬಿಎನ್‌ಪಿ) ಚಿತಾವಣೆಯಿಂದ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದರು. ರಜಾಕಾರರು ಎಂಬ ಹಣೆಪಟ್ಟಿಯು ಪ್ರತಿಭಟನಕಾರರಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ರಜಾಕಾರರು ಎಂಬುದು ಬಾಂಗ್ಲಾದೇಶದಲ್ಲಿ ಅತ್ಯಂತ ಅವಮಾನಕರ ಪದವಾಗಿದೆ.
ಪ್ರತಿಭಟನೆಯ ಕೇಂದ್ರ ಢಾಕಾ ವಿವಿ!
ಅವಿಭಜಿತ ಭಾರತದ ಕಾಲದಿಂದಲೂ ಢಾಕಾ ವಿಶ್ವವಿದ್ಯಾನಿಲಯವು ಉನ್ನತ ಬೌದ್ಧಿಕ ಮಟ್ಟದಿಂದ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಹೊಸ ಆಲೋಚನೆಗಳು, ಜನಪರವಾದ ನಿಲುವುಗಳು, ಸರಕಾರದ ದಬ್ಟಾಳಿಕೆಯ ವಿರುದ್ಧ ಹೋರಾಟದಲ್ಲಿ ಢಾಕಾ ವಿವಿ ಎಂದಿಗೂ ಹಿಂದೆ ಬಿದ್ದಿಲ್ಲ. ಅವಿಭಜಿತ ಪಾಕಿಸ್ಥಾನದಲ್ಲಿದ್ದಾಗ ಬಾಂಗ್ಲಾದೇಶದಲ್ಲಿ ಉರ್ದು ಭಾಷೆಯನ್ನು ಹೇರುವ ಪ್ರಯತ್ನ ನಡೆಸಲಾಯಿತು.
ಪಾಕಿಸ್ತಾನ ಸರಕಾರದ ಈ ನಿರ್ಧಾರದ ವಿರುದ್ಧ ತಿರುಗಿ ಬಿದ್ದಿದ್ದೇ ಈ ಢಾಕಾ ವಿವಿ. ಆಗ ಬಾಂಗ್ಲಾ ಭಾಷೆಗಾಗಿ ದೊಡ್ಡ ಮಟ್ಟದ ಚಳವಳಿಯೇ ನಡೆಯಿತು. ಅನೇಕ ವಿದ್ಯಾರ್ಥಿಗಳು ಹುತಾತ್ಮರಾದರು. ಆನಂತರವೂ ಅನೇಕ ಜನಪಲ ನಿಲುವುಗಳಿಗಾಗಿ ವಿವಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ ಉದಾಹರಣೆಗಳಿವೆ. ಈಗ ನಡೆಯುತ್ತಿರುವ ಪ್ರತಿಭಟನೆಯ ಕೇಂದ್ರ ಬಿಂದು ಢಾಕಾ ವಿವಿಯೇ ಆಗಿದೆ.
ಚಳವಳಿಯಾಗಿ ಬದಲಾದ ವಿದ್ಯಾರ್ಥಿಗಳ ಪ್ರತಿಭಟನೆ
ಆರಂಭದಲ್ಲಿ ಪ್ರತಿಭಟನೆಗಳು ವಿದ್ಯಾರ್ಥಿಗಳಿಗೆ ಮಾತ್ರವೇ ಸೀಮಿತವಾಗಿತ್ತು. ಆದರೆ ದಿನ ಕಳೆದಂತೆ ಅದು ಸಾಮೂಹಿಕ ಚಳವಳಿಯಾಗಿ ಬದಲಾಯಿತು. ಈ ಸಂಗತಿಯನ್ನು ಗುರುತಿಸುವಲ್ಲಿ ಶೇಖ್ ಹಸೀನಾ ಸರಕಾರ ವಿಫಲವಾಯಿತು. ಪರಿಣಾಮ ಅವರೇ ಈಗ ಪದವಿ ತ್ಯಜಿಸಿ ದೇಶ ಬಿಟ್ಟು ಹೋಗಬೇಕಾದ ಸ್ಥಿತಿ ನಿರ್ಮಾಣವಾಯಿತು.
ಆರಂಭದಲ್ಲಿ ಢಾಕಾ ವಿವಿಯಿಂದ ಆರಂಭವಾದ ಪ್ರತಿಭಟನೆಗಳು ಬಾಂಗ್ಲಾದ ಎಲ್ಲ ವಿವಿಗಳಿಗೂ ಪಸರಿಸಿತು. ನಿಧಾನವಾಗಿ ಈ ಪ್ರತಿಭಟನೆಯು ಜನಸಾಮಾನ್ಯರ ಚಳವಳಿಯಾಗಿ ಬದಲಾಯಿತು. ಇದಕ್ಕೆ ವಿಪಕ್ಷಗಳೂ ಕೈಜೋಡಿಸಿದ್ದರಿಂದ ರಾಜಕೀಯ ಲೇಪನವೂ ದೊರೆಯಿತು. ಅಂತಿಮವಾಗಿ ಬಾಂಗ್ಲಾದೇಶ ಸೇನೆಯು ತಾನು ಜನರ ಪರವಾಗಿ ಇರುವುದಾಗಿ ಘೋಷಿಸಿದ ಮೇಲೆ ಇಡೀ ಪ್ರತಿಭಟನೆಯ ಸ್ವರೂಪವೇ ಬದಲಾಗಿ ಹೋಯಿತು.
ಪ್ರತಿಭಟನೆಗೆ ಮೀಸಲಾತಿ ಜತೆಗೆ “ನೀಟ್’ ಕಾರಣ!
ಬಾಂಗ್ಲಾದೇಶದ ಈಗಿನ ಹಿಂಸಾಚಾರಕ್ಕೆ ಮೇಲ್ನೋಟಕ್ಕೆ ಮೀಸಲಾತಿಯೊಂದೇ ಕಾರಣದಂತೆ ಕಂಡರೂ ಇದಕ್ಕೆ ಬೇರೆ ಬೇರೆ ಆಯಾಮಗಳಿವೆ ಎನ್ನಲಾಗುತ್ತಿದೆ. ಆರ್ಥಿಕ ಅಸಮಾನತೆ ಮತ್ತು ಯುವಜನತೆಯಲ್ಲಿ ಮಡುಗಟ್ಟಿರುವ ಹತಾಶೆಯು ಪ್ರತಿಭಟನೆ ರೂಪದಲ್ಲಿ ಹೊರ ಬಂದಿದೆ ಎಂದು ವಿಶ್ಲೇಷಿ ಸಲಾಗುತ್ತಿದೆ.
ಹೆಚ್ಚುತ್ತಿರುವ ಹಣದುಬ್ಬರ, ಅಸಮಾನತೆ ಮತ್ತು ನಿರು ದ್ಯೋಗಗಳು ಪ್ರತಿಭಟನೆಗೆ ಹೆಚ್ಚಿನ ಕೊಡುಗೆ ನೀಡಿವೆ. 2023ರ ಲೆಕ್ಕಾಚಾರದ ಪ್ರಕಾರ, 15ರಿಂದ 29ವರ್ಷದೊಳಗಿನ ಸುಮಾರು ಶೇ.40ರಷ್ಟು ಯುವ ಜನರನ್ನು “ನೀಟ್’ ಎಂದು ಗುರುತಿಸಲಾಗುತ್ತದೆ. ಅಂದರೆ ಉದ್ಯೋಗ, ಶಿಕ್ಷಣ ಮತ್ತು ತರಬೇತಿ ಇಲ್ಲದ ಯುವಕರು . ಲೆಕ್ಕಾಚಾರದ ಪ್ರಕಾರ 1.8 ಕೋಟಿ ಯುವಕರಿಗೆ ಕೆಲಸ ಇಲ್ಲ! ಹಣದುಬ್ಬರ ಏರಿಕೆಯಿಂದ ನಿತ್ಯದ ಬದುಕಿಗೆ ಬೇಕಾದ ಎಲ್ಲ ಅಗತ್ಯವಸ್ತುಗಳ ಬೆಲೆ ಶೇ.10ರಷ್ಟು ಏರಿಕೆಯಾಗಿದೆ. ಜೀವನಮಟ್ಟ ದುಬಾರಿಯಾಗಿ ಪರಿಣಮಿಸಿದೆ.
ಕಳೆದ ವರ್ಷ 17.2 ಕೋಟಿ ಜನರ ಪೈಕಿ 3.7 ಕೋಟಿ ಜನರು ಆಹಾರ ಕೊರತೆಯನ್ನು ಎದುರಿಸಿದ್ದಾರೆ. ಗ್ಯಾಸ್ ಮತ್ತು ವಿದ್ಯುತ್ ಶುಲ್ಕ ಕೂಡ ಏರಿಕೆ ಮಾಡಿದ್ದು ಪ್ರತಿಕೂಲ ಪರಿಣಾಮ ಬೀರಿದೆ. ದೇಶದ ಒಟ್ಟು ಆದಾಯದ ಪೈಕಿ ಶೇ.14ರಷ್ಟನ್ನು ಶೇ.10ರಷ್ಟು ಶ್ರೀಮಂತರು ನಿಯಂತ್ರಿಸುತ್ತಿದ್ದಾರೆ. ಪಿರಮಿಡ್‌ನ ಕೆಳ ಹಂತದಲ್ಲಿರುವ ಶೇ.10ರಷ್ಟು ಜನರ ಬಳಿ ಶೇ.1.3ರಷ್ಟು ಸಂಪತ್ತಿದೆ!
- ಮಲ್ಲಿಕಾರ್ಜುನ ತಿಪ್ಪಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.