ಬಂಟ್ವಾಳ: ಕೋವಿಡ್- 19 ಸೋಂಕಿನ ಮೂಲವೇ ನಿಗೂಢ!
Team Udayavani, Apr 24, 2020, 5:30 AM IST
ಮಂಗಳೂರು: ಕೋವಿಡ್- 19 ಸೋಂಕಿನಿಂದ ಬಂಟ್ವಾಳದ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದಾರೆ. ಆದರೆ ಅವರಿಗೆ ಎಲ್ಲಿಂದ ಕೋವಿಡ್ -19 ಸೋಂಕು ತಗಲಿತು ಎನ್ನುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ವೃದ್ಧೆಯ ಯೋಗಕ್ಷೇಮ ವಿಚಾರಿಸುವುದಕ್ಕೆ ಈಗಾಗಲೇ ಕೋವಿಡ್ -19 ದಿಂದ ಮೃತಪಟ್ಟಿರುವ ಸೊಸೆ ಬಂದು ಹೋಗಿದ್ದರು. ಹೀಗಿರುವಾಗ ಅತ್ತೆಯಿಂದ ಸೊಸೆಗೆ ಅಥವಾ ಸೊಸೆಯಿಂದ ಅತ್ತೆಗೆ ಸೋಂಕು ಹರಡಿರಬಹುದೇ ಎನ್ನುವುದು ಕೂಡ ಸದ್ಯಕ್ಕೆ ಗೊತ್ತಾಗಿಲ್ಲ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುವಾಗ ಆಸ್ಪತ್ರೆಯಿಂದ ಕೋವಿಡ್ -19 ಸೋಂಕು ಹರಡಿರಬಹುದೇ ಎಂಬ ಶಂಕೆಯೂ ಕಾಡುತ್ತಿದ್ದು, ಜಿಲ್ಲಾಡಳಿತ ಗಮನ ಹರಿಸುತ್ತಿದೆ.
ರವಿವಾರ ಮೃತಪಟ್ಟ ಮಹಿಳೆಯ ಪುತ್ರ ಎರಡು ತಿಂಗಳ ಹಿಂದೆ ಅಬುಧಾಬಿಯಿಂದ ಬಂದಿದ್ದು, ಆತನಲ್ಲಿ ಕೋವಿಡ್ -19 ರೋಗ ಲಕ್ಷಣಗಳಿರಲಿಲ್ಲ. ಕಳೆದೆರಡು ದಿನಗಳ ಹಿಂದೆ ಆತನನ್ನು ತಪಾಸಣೆ ಮಾಡಿದಾಗಲೂ ಆತನ ವರದಿ ನೆಗೆಟಿವ್ ಬಂದಿತ್ತು. ಈ ನಡುವೆ ವೃದ್ಧೆ ಚಿಕಿತ್ಸೆ ಪಡೆಯುತ್ತಿದ್ದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕೇರಳದ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತಿತ್ತು ಎಂಬ ವದಂತಿ ಹಬ್ಬಿದ್ದು, ಆ ಮುಖಾಂತರವೂ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಇಬ್ಬರಿಗೂ ವಿದೇಶ ಪ್ರಯಾಣದ ಹಿನ್ನೆಲೆ ಇಲ್ಲದಿರುವ ಕಾರಣ ಸ್ಥಳೀಯವಾಗಿಯೇ ಹರಡಿರುವ ಸಾಧ್ಯತೆ ಹೆಚ್ಚು ಇದೆ.
ಉಸಿರಾಟದ ತೊಂದರೆ:
8 ಮಂದಿ ವೆನ್ಲಾಕ್‌ಗೆ
ದ.ಕ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ತೀವ್ರ ಉಸಿರಾಟದ ತೊಂದರೆಗೆ ಚಿಕಿತ್ಸೆ ಪಡೆಯಲು 14 ಮಂದಿ ಗುರುವಾರ ದಾಖಲಾಗಿದ್ದು, ಈ ಪೈಕಿ 8 ಮಂದಿಯನ್ನು ವೆನ್ಲಾಕ್-ಕೋವಿಡ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
65 ಜನರನ್ನು ಗುರುವಾರ ತಪಾಸಣೆ ಗೊಳಪಡಿಸಲಾಗಿದೆ. 214 ಗಂಟಲ ದ್ರವ ಮಾದರಿ ಪರೀಕ್ಷಾ ವರದಿ ಆರೋಗ್ಯ ಇಲಾಖೆಯ ಕೈಸೇರಿದ್ದು, 1 ಪಾಸಿಟಿವ್ ಪ್ರಕರಣ ದಾಖಲಾಗಿದೆ. 39 ಮಂದಿಯನ್ನು ನಿಗಾದಲ್ಲಿರಿಸಲಾಗಿದೆ. ಒಟ್ಟು 376 ಮಂದಿಯ ಗಂಟಲ ದ್ರವ ಮಾದರಿ ಪರೀಕ್ಷಾ ವರದಿ ಬರಲು ಬಾಕಿ ಇದೆ. ಆಶಾ ಕಾರ್ಯಕರ್ತೆಯರು ಹಾಗೂ ಎಂಪಿಡಬ್ಲ್ಯೂ ಕಾರ್ಯಕರ್ತರು ದ.ಕ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 2,10,345 ಮನೆಗಳಲ್ಲಿ ಐಎಲ್‌ಐ ಸಮೀಕ್ಷೆ ಕಾರ್ಯಗಳನ್ನು ಪೂರ್ಣ ಗೊಳಿಸಿ ಮಾಹಿತಿ ಕಲೆಹಾಕಿದ್ದಾರೆ.
ಆಸ್ಪತ್ರೆ ಎಂಡಿಗೆ ಸಿಬಂದಿಯ ಹೊಣೆ
ಫಸ್ಟ್ ನ್ಯೂರೋ ಆಸ್ಪತ್ರೆಯ ಒಳಗಿರುವ ವೈದ್ಯರು, ನರ್ಸ್‌ಗಳು ಸೇರಿದಂತೆ ಯಾರೂ ಹೊರಗೆ ಬರುವಂತಿಲ್ಲ. ಅವರಿಗೆ ಊಟ ಸೇರಿದಂತೆ ಅಗತ್ಯ ಸೇವೆಗಳನ್ನು ಇದ್ದಲ್ಲಿಗೇ ಜಿಲ್ಲಾಡಳಿತದ ನೆರವಿನೊಂದಿಗೆ ಪೂರೈಕೆ ಮಾಡಲಾಗುತ್ತದೆ. ಹೊರಗಿ ನಿಂದಲೂ ಆಸ್ಪತ್ರೆ ಒಳಗೆ ಯಾರೂ ಪ್ರವೇಶ ಮಾಡು ವಂತಿಲ್ಲ. ಈ ಕಾರಣಕ್ಕೆ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ| ರಾಜೇಶ್ ಶೆಟ್ಟಿ ಅವರನ್ನೇ ನೋಡಲ್ ಅಧಿಕಾರಿ ಯನ್ನಾಗಿ ಜಿಲ್ಲಾಡಳಿತದಿಂದ ನೇಮಕಗೊಳಿಸಲಾಗಿದೆ. ಅವರು ಆಸ್ಪತ್ರೆಯೊಳಗೆ ಇರುವವರಿಗೆ ಅಗತ್ಯ ಸೇವೆ ಕಲ್ಪಿಸುವ ಹೊಣೆಗಾರಿಕೆ ಹೊಂದಿರುತ್ತಾರೆ.
ಶವ ಸಂಸ್ಕಾರ ಅತಂತ್ರ
ಶವಸಂಸ್ಕಾರವನ್ನು ವೈದ್ಯಕೀಯ ಶಿಷ್ಟಾಚಾರದಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮಾಡಬೇಕಿದೆ. ಆದರೆ ಮೃತರ ಕುಟುಂಬದ ಸದಸ್ಯರು ಈಗಾಗಲೇ ಕ್ವಾರಂಟೈನ್‌ನಲ್ಲಿ ಇರುವ ಕಾರಣ ವೃದ್ಧೆಯ ಶವ ಸಂಸ್ಕಾರದ ಬಗ್ಗೆ ಇನ್ನಷ್ಟೇ ತೀರ್ಮಾನವಾಗಬೇಕಾಗಿದೆ.
ಕೋವಿಡ್ -19ದಿಂದ ಆರು ದಿನಗಳ ಹಿಂದೆಯಷ್ಟೇ ಮೃತಪಟ್ಟಿದ್ದ ವೃದ್ಧೆಯ ಸೊಸೆ ಶವ ಸಂಸ್ಕಾರವನ್ನು ಮಂಗಳೂರಿನ ಬೋಳೂರಿನ ವಿದ್ಯುತ್ ಚಿತಾಗಾರದಲ್ಲಿ ಮಾಡಲಾಗಿತ್ತು. ಆಗ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಈಗ ವೃದ್ಧೆಯ ಶವ ಸಂಸ್ಕಾರಕ್ಕೂ ಮಂಗಳೂರು ಸುತ್ತಮುತ್ತ ಇರುವ ಎಲ್ಲ ರುದ್ರಭೂಮಿಗಳ ಪರಿಸರದ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಶವ ಸಂಸ್ಕಾರ ಪ್ರಕ್ರಿಯೆ ಅತಂತ್ರವಾಗಿದೆ.
ಒಂದೇ ಪ್ರದೇಶದ ಮೂವರು!
ಬಂಟ್ವಾಳ: ಒಂದೇ ಪ್ರದೇಶದ ಮೂವರು ಕೋವಿಡ್ -19 ಸೋಂಕು ಪೀಡಿತರಾಗಿರುವ ಕಾರಣ ಬಂಟ್ವಾಳ ಕಸ್ಬಾ ಪರಿಸರದಲ್ಲಿ ಹೆಚ್ಚಿನ ಆತಂಕ ನೆಲೆಸಿದೆ. ಈ ಪ್ರದೇಶ ಈಗಾಗಲೇ ಸೀಲ್‌ಡೌನ್ ಆಗಿದ್ದು ಕಟ್ಟೆಚ್ಚರ ವಹಿಸಲಾಗಿದೆ.ಸೋಂಕಿತರ ನೇರ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಉಳಿದಂತೆ ಎರಡನೇ ಹಂತ(ಸೆಕೆಂಡರಿ ಕಾಂಟೆಕ್ಟ್)ದ ಸಂಪರ್ಕ ಇದ್ದವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ಅವರು ಇದ್ದಲ್ಲಿಗೇ ಆರೋಗ್ಯ ಇಲಾಖೆಯ ತಂಡ ತೆರಳಿ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡುತ್ತಿದೆ.
ಆಸ್ಪತ್ರೆ ಸೂಪರ್‌ವೈಸ್ಡ್ ಐಸೊಲೇಶನ್ ಸೆಂಟರ್
ವೃದ್ಧೆಗೆ ಕೋವಿಡ್ -19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಕೆ ಪಾರ್ಶ್ವವಾಯುಗೆ ಚಿಕಿತ್ಸೆ ಪಡೆಯುತ್ತಿದ್ದ ಫಸ್ಟ್ ನ್ಯೂರೋ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣ ಸೀಲ್‌ಡೌನ್ ಮಾಡಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ. ಆಸ್ಪತ್ರೆಯ ಸನಿಹದಲ್ಲೇ ಇರುವ ಎರಡು ಮನೆ, ಐದು ಅಂಗಡಿಗಳನ್ನೂ ಸೀಲ್‌ಡೌನ್ ಮಾಡಲಾಗಿದೆ. ಇದರೊಂದಿಗೆ ಆಸ್ಪತ್ರೆಯನ್ನು ಸೂಪರ್‌ವೈಸ್ಡ್ ಐಸೊಲೇಶನ್ ಸೆಂಟರ್ ಎಂದೂ ಘೋಷಿಸಲಾಗಿದೆ. ಸೀಲ್‌ಡೌನ್ ಮಾಡಿದ ಪರಿಸರದ 5 ಕಿ.ಮೀ. ವ್ಯಾಪ್ತಿಯನ್ನು ಬಫರ್ ಝೋನ್ ಎಂದೂ ಘೋಷಣೆ ಮಾಡಲಾಗಿದೆ. 42 ಸಾವಿರ ಮನೆ, 1,800 ಅಂಗಡಿ ಮತ್ತು ಕಚೇರಿ, 1.8 ಲಕ್ಷ ಜನರು ಬಫರ್ ಝೋನ್ ಅಡಿಯಲ್ಲಿ ಬರುತ್ತಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಕೋವಿಡ್ -19 ಸೋಂಕು ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಮಂಗಳೂರು ತಹಶೀಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಯನ್ನು ಘಟನಾ ಕಮಾಂಡರ್ ಆಗಿ ನೇಮಕ ಮಾಡಲಾಗಿದ್ದು, ಅವರು ಈ ಕಂಟೈನ್ಮೆಂಟ್ ವಲಯದ ಒಟ್ಟು ಉಸ್ತುವಾರಿಯನ್ನು ವಹಿಸಲಿದ್ದಾರೆ.
ಜನ ಹೊರಗೆ ಬರುವಂತಿಲ್ಲ
ಸೀಲ್‌ಡೌನ್ ಮಾಡಿರುವ ಪ್ರದೇಶದಲ್ಲಿ ದಿನಸಿ, ಹಾಲು, ಮಾಂಸ, ಔಷಧ ಸೇರಿದಂತೆ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿರುತ್ತದೆ ಮತ್ತು ಯಾವುದೇ ತುರ್ತು ಅಗತ್ಯಗಳಿಗೆ ಜನರು ಮನೆಯಿಂದ ಹೊರಗೆ ಬರುವಂತಿಲ್ಲ. ಘಟಕ ನಿಯಂತ್ರಕರು ನಿಯಂತ್ರಿತ ವಲಯದೊಳಗೆ ಅಗತ್ಯ ವಸ್ತು ಮತ್ತು ಸೇವೆಗಳನ್ನು ಒದಗಿಸುವ ತಂಡವನ್ನು ರಚಿಸಿ ಅವಶ್ಯ ವಸ್ತುಗಳನ್ನು ಮನೆ ಬಾಗಿಲಿಗೆ ಒದಗಿಸುತ್ತಾರೆ. ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವ ರೇಷನ್ ಸೌಲಭ್ಯವನ್ನೂ ಇವರೇ ಮನೆ ಬಾಗಿಲಿಗೆ ತಲುಪಿಸುತ್ತಾರೆ. ಅಗತ್ಯ ಸೇವೆಗಳು ಮತ್ತು ವೈದ್ಯಕೀಯ ತುರ್ತು ಸಂದರ್ಭಗಳಿಗೆ ಎಮೆರ್ಜೆನ್ಸಿ ಪಾಸ್‌ಗಳನ್ನು ವಿತರಿಸುವ ಜವಾಬ್ದಾರಿ ಪೊಲೀಸ್ ಇಲಾಖೆಯದ್ದಾಗಿರುತ್ತದೆ.
ಆಸ್ಪತ್ರೆ ಸಿಬಂದಿಗೆ ಕ್ವಾರಂಟೈನ್
ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಗೆ ಕೋವಿಡ್ -19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆ ಆಸ್ಪತ್ರೆಯ ಎಲ್ಲ ವೈದ್ಯರು, ದಾದಿಯರು, ಸಿಬಂದಿಯನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗುವುದು. ಅಲ್ಲದೆ ವೈದ್ಯರು, ನರ್ಸ್ ಗಳು ಸಹಿತ ಅಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ರೋಗಿಗಳು, ಎಲ್ಲ ಸಿಬಂದಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯರಿ ತಿಳಿಸಿದ್ದಾರೆ.
ಕಂಟೈನ್ಮೆಂಟ್ ಝೋನ್
-ಆಸ್ಪತ್ರೆಯ ಪೂರ್ವಭಾಗದಿಂದ ಕನ್ನಗುಡ್ಡೆ
-ಪಶ್ಚಿಮದಿಂದ ರಮಾನಾಥ್ ಕೃಪಾ ರೈಸ್ ಮಿಲ್
-ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿ 73
-ದಕ್ಷಿಣಕ್ಕೆ ಸರಕಾರಿ ಜಾಗದ ಸುತ್ತ
ಬಫರ್ ಝೋನ್
-ಪೂರ್ವಕ್ಕೆ ಕಲ್ಲಾಪು
-ಪಶ್ಚಿಮಕ್ಕೆ ಕುಡುಪು
-ಉತ್ತರಕ್ಕೆ ಫರಂಗಿಪೇಟೆ
-ದಕ್ಷಿಣಕ್ಕೆ ಫಳ್ನೀರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.