ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ MO-4 ಭಿತ್ತನೆ ಬೀಜ ಕೊರತೆಯಾಗದಂತೆ ಕ್ರಮ : ಪಾಟೀಲ್
Team Udayavani, Jun 26, 2021, 6:24 PM IST
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಭತ್ತದ ಭಿತ್ತನೆಗೆ ಪ್ರತೀ ವರ್ಷ ಎಂಓ4 ಭಿತ್ತನೆ ಬೀಜದ ಕೊರತೆಯಾಗುತ್ತಿದ್ದು, ಮುಂದಿನ ವರ್ಷದಿಂದ ಭಿತ್ತನೆ ಬೀಜದ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಜಿ.ಪಂ.ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಡುಪಿಯ ಹಡಿಲು ಕೃಷಿ ಭೂಮಿಯಲ್ಲಿ ಭಿತ್ತನೆ ಮಾಡುವ ಕಾರ್ಯ ನಡೆಯುತ್ತಿದ್ದು, ಇದು ಇಡೀ ರಾಜ್ಯಕ್ಕೆ ಮಾದರಿ ಕಾರ್ಯಕ್ರಮವಾಗಿದೆ. ಜಿಲ್ಲೆಯ ಪ್ರತಿಯೊಬ್ಬ ರೈತರೂ ಸಹ ತಮ್ಮ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವಂತೆ ಕೃಷಿ ಇಲಾಖೆಯ ಮೂಲಕ ಮನವೊಲಿಸಿ ಪ್ರೋತ್ಸಾಹಿಸಲಾಗುವುದು. ಜಿಲ್ಲೆಯಲ್ಲಿ ಕೊರೊನಾ ಅನಂತರ ಕೃಷಿ ಚಟುವಟಿಕೆ ನಡೆಸುವವರ ಸಂಖ್ಯೆ ಹೆಚ್ಚಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಭಿತ್ತನೆ ಬೀಜ ದೊರೆಯದೇ ಇರುವುದರಿಂದ ಹೆಚ್ಚಿನ ಪ್ರದೇಶದಲ್ಲಿ ಭಿತ್ತನೆ ಕಾರ್ಯ ನಡೆಯುತ್ತಿಲ್ಲ. ಆದ್ದರಿಂದ ಜಿಲ್ಲೆಗೆ ಅಗತ್ಯವಿರುವ ಎಂಓ4 ಭಿತ್ತನೆ ಬೀಜವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು. ಹಿಂಗಾರು ಹಂಗಾಮಿನಲ್ಲಿ ಸಾಧ್ಯವಾದಲ್ಲಿ ಇಲ್ಲಿಯೇ ಭಿತ್ತನೆ ಭತ್ತವನ್ನು ಬೆಳೆಯುವಂತೆ ಸಚಿವರು ತಿಳಿಸಿದರು.
ವಿಮೆ ಮೊತ್ತ ಶೀಘ್ರ ಮಂಜೂರಾತಿಗೆ ಸೂಚನೆ
ಪ್ರಧಾನ ಮಂತ್ರಿಗಳ ಆತ್ಮ ನಿರ್ಭರ ಯೋಜನೆಯಲ್ಲಿ ರೈತರು ಕೃಷಿಗೆ ಸಂಬಂಧಿಸಿದ ಹಲವು ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಹವಾಮಾನ ಬೆಳೆ ಆಧಾರಿತ ವಿಮೆ ಯೋಜನೆಯಲ್ಲಿ ಬಾಕಿ ಇರುವ ರೈತರ ವಿಮಾ ಮೊತ್ತವನ್ನು ಶೀಘ್ರದಲ್ಲಿ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಕಡಿಮೆ ವೆಚ್ಚದಲ್ಲಿ ಯಂತ್ರೋಪಕರಣ ನೀಡಿ
ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರ ಸಮಸ್ಯೆ ಇರುವುದರಿಂದ ಯಾಂತ್ರೀಕರಣ ಕೃಷಿಗೆ ಆದ್ಯತೆ ನೀಡಿ ಸಕಾಲದಲ್ಲಿ ಕಡಿಮೆ ವೆಚ್ಚದಲ್ಲಿ ಯಂತ್ರೋಪಕರಣಗಳ ಸೇವೆಯನ್ನು ರೈತರಿಗೆ ದೊರಕಿಸುವಲ್ಲಿ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಇದನ್ನೂ ಓದಿ :2023ರ ಚುನಾವಣೆ ಬಳಿಕ ಶಾಸಕಾಂಗ ಸಭೆಯಲ್ಲಿ ಸಿಎಂ ಅಭ್ಯರ್ಥಿ ನಿರ್ಣಯ : ಎಸ್.ಆರ್. ಪಾಟೀಲ
ಸಚಿವರಿಗೆ ಮನವಿ
ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಕಾಡುಪ್ರಾಣಿಗಳ ಹಾವಳಿ ತಪ್ಪಿಸುವಂತೆ, ಹಣ್ಣು ಮತ್ತು ತರಕಾರಿ ಬೆಳೆಗಳ ಶೇಖರಣೆಗಾಗಿ ಕೋಲ್ಡ್ ಸ್ಟೋರೇಜ್ ನಿರ್ಮಾಣ, ಭತ್ತದ ಬೆಳಗೆ ಪ್ರೋತ್ಸಾಹ ಧನ ನೀಡುವುದು ಮತ್ತು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆರಂಭ ಸೇರಿದಂತೆ ಮತ್ತಿತರ ಬೇಡಿಕೆಗಳ ಕುರಿತು ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದರು. ಆತ್ಮನಿರ್ಭರ ಯೋಜನೆಯಡಿ ಕಲ್ಪರಸ ಮಾರುಕಟ್ಟೆ ವೃದ್ಧಿಸಲು ಅವಕಾಶ ಇದ್ದು, ಅದನ್ನು ಸದುಪಯೋಗಿಸಿಕೊಳ್ಳುವಂತೆ ಸಚಿವರು ತಿಳಿಸಿದರು.
ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಹಾಗೂ ಜಿಲ್ಲೆಯ ವಿವಿಧ ಕೃಷಿಕ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
“ರೈತರೊಂದಿಗೆ ಒಂದು ದಿನ’ ಶೀಘ್ರ ಆರಂಭ
ರೈತರೊಂದಿಗೆ ಒಂದು ದಿನ ಬೆರೆತು ಅವರ ಸಮಸ್ಯೆಗಳನ್ನು ಆಲಿಸುವ “ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮವನ್ನು ಕೊರೊನಾ ಕಾರಣದಿಂದ ಸ್ಥಗಿತಗೊಳಿಸಿದ್ದು, ಶೀಘ್ರದಲ್ಲಿ ಕಾರ್ಯಕ್ರಮವನ್ನು ಪುನಾರಾರಂಭಿಸುವುದರ ಮೂಲಕ ರೈತರ ಸಮಸ್ಯೆಗಳನ್ನು ಅರಿತು ಸ್ಥಳದಲ್ಲಿಯೇ ಅವುಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.