ಪ್ರವಾಸಿ ತಾಣಗಳಲ್ಲಿ ಜವಾಬ್ದಾರಿಯುತ ವರ್ತನೆ ಇರಲಿ
Team Udayavani, Jul 26, 2023, 5:06 AM IST
ರಾಜ್ಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಬಹುತೇಕ ಜಲಾಶಯಗಳು, ಜಲಪಾತಗಳು, ನದಿಗಳು ಉಕ್ಕಿ ಹರಿಯುತ್ತಿವೆ. ಅದರಲ್ಲೂ ಮಲೆನಾಡಿನ ಸೆರಗಿನಲ್ಲಿರುವ ಕರಾವಳಿ ಭಾಗದ ಪಶ್ಚಿಮ ಘಟ್ಟದಲ್ಲಿ ಪ್ರಕೃತಿ ಸೌಂದರ್ಯ ಮತ್ತಷ್ಟು ಹೆಚ್ಚಾಗಿದ್ದು, ಮಳೆಯ ನಡುವೆಯೂ ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ. ಆದರೆ ಕೆಲವೊಂದು ಪ್ರದೇಶಗಳಲ್ಲಿ ಪ್ರವಾಸಿಗರ ಅತಿರೇಕದ ವರ್ತನೆಯಿಂದಾಗಿ ಸಾವು ಸಂಭವಿಸುತ್ತಿದ್ದು, ಬೇಜವಾಬ್ದಾರಿ ವರ್ತನೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ.
ಜು.23ರಂದು ಕರಾವಳಿಯ ಕೊಲ್ಲೂರು ಸಮೀಪ ಜಲಪಾತವೊಂದರ ಬಳಿಯಲ್ಲಿ ಭದ್ರಾವತಿಯ ಯುವಕನೊಬ್ಬ ಕಾಲುಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಜತೆಗೆ ಇದ್ದ ಆತನ ಸ್ನೇಹಿತನೇ ಈ ದೃಶ್ಯವನ್ನು ವೀಡಿಯೋ ಮಾಡಿದ್ದು ವೈರಲ್ ಆಗಿದೆ. ಈ ಸಂದರ್ಭದಲ್ಲಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಅನುಸರಿಸಬೇಕಾದ ಕನಿಷ್ಠ ನಿಯಮಗಳ ಬಗ್ಗೆ ಚರ್ಚೆಯಾಗುತ್ತಿದೆ. ಏಕೆಂದರೆ ಆ ಯುವಕ ಒಂಚೂರು ಎಚ್ಚರಿಕೆ ವಹಿಸಿದ್ದರೂ ಕಾಲು ಜಾರಿ ಬೀಳುತ್ತಿರಲಿಲ್ಲ. ಅಲ್ಲದೆ ಅಷ್ಟು ಮುಂದಕ್ಕೆ ಹೋಗಿ ನಿಲ್ಲುವ ಅಗತ್ಯವೂ ಇರಲಿಲ್ಲ.
ಹಾಗೆಯೇ ಮುಂಬಯಿಯ ಬೀಚ್‌ನ ಬಂಡೆಯೊಂದರ ಮೇಲೆ ಕುಳಿತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಜೋಡಿಯೊಂದಕ್ಕೂ ನೀರಿನ ಅಲೆ ಪೆಟ್ಟು ನೀಡಿತ್ತು. ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಬಂದ ಭಾರೀ ಅಲೆಗೆ ಪತ್ನಿ ಕೊಚ್ಚಿ ಹೋಗಿದ್ದಳು. ಅಲ್ಲದೆ ಹಿಂದೆಯೇ ಇದ್ದ ಮಕ್ಕಳು ಈ ಘಟನೆಗೆ ಸಾಕ್ಷಿಯಾಗಿ ಕಣ್ಣೆದುರಲ್ಲೇ ತಮ್ಮ ಅಮ್ಮನ ಕಳೆದುಕೊಂಡಿದ್ದರು. ಈ ಘಟನೆ ಜೂನ್ 9ರಂದು ನಡೆದಿದ್ದು, ಕಳೆದ ವಾರವಷ್ಟೇ ವೀಡಿಯೋ ಬಹಿರಂಗವಾಗಿ ವೈರಲ್ ಆಗಿತ್ತು.
ಅಷ್ಟೇ ಅಲ್ಲ ಎಲ್ಲಕ್ಕಿಂತ ಪ್ರಮುಖವಾಗಿ ಬೆಳಗಾವಿ ಬಳಿ ಇರುವ ದೂಧ್‌ಸಾಗರ ಜಲಾಶಯದ ಬಳಿ ಬರಬೇಡಿ. ಸದ್ಯ ಭಾರೀ ಮಳೆಯಾಗುತ್ತಿರುವುದರಿಂದ ಅಪಾಯದ ಸ್ಥಿತಿ ಇದೆ ಎಂದು ಅಧಿಕಾರಿಗಳು ಹೇಳಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹೋಗಿದ್ದರು. ಈ ಸಂದರ್ಭದಲ್ಲಿ ಕೆಲವರನ್ನು ಅಧಿಕಾರಿಗಳು ಬಸ್ಕಿ ಹೊಡೆಸಿ ಶಿಕ್ಷೆ ನೀಡಿ ವಾಪಸ್ ಕಳುಹಿಸಿದ್ದರು. ಮಳೆಗಾಲದಲ್ಲಿ ಅಪಾಯದ ಎಚ್ಚರಿಕೆ ನೀಡಿದರೂ, ಅದನ್ನು ಕಡೆಗಣಿಸಿ ಅಂಥ ಸ್ಥಳಗಳಿಗೆ ಹೋಗುವ ಅಪಾಯವನ್ನು ಪ್ರವಾಸಿಗರು ಮೈಮೇಲೆ ಎಳೆದುಕೊಳ್ಳದಿರುವುದು ವಾಸಿ.
ಇವು ಕೆಲವೇ ಕೆಲವು ಉದಾಹರಣೆಗಳಷ್ಟೇ. ಪ್ರತೀ ಬಾರಿಯ ಮಳೆಗಾಲದಲ್ಲೂ ಇಂಥ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ತುಂಬಿ ಹರಿಯುವ ಸೇತುವೆಗಳ ಮೇಲೆ ಬೈಕ್ ಮತ್ತು ಕಾರುಗಳಲ್ಲಿ ಪ್ರಯಾಣ ಮಾಡಲು ಯತ್ನಿಸುವುದು ಅಷ್ಟೇ ಅಲ್ಲ, ಬಸ್‌ಗಳನ್ನೇ ತೆಗೆದುಕೊಂಡು ಹೋಗಿ ಅದರಲ್ಲಿರುವ ಜನರನ್ನು ಅಪಾಯಕ್ಕೆ ತಳ್ಳುವಂಥ ಘಟನೆಗಳು ಕಾಣಸಿಗುತ್ತಿವೆ. ಜೋರಾಗಿ ಹರಿಯುವ ನೀರಿನ ಮುಂದೆ ಶಕ್ತಿ ಪ್ರದರ್ಶನ ಮಾಡುವ ಇಂಥ ಹುಡುಗಾಟಿಕೆಗಳನ್ನು ಕೈಬಿಡದಿದ್ದರೆ ಜೀವಕ್ಕೆ ಅಪಾಯ ಎಂಬುದನ್ನು ಮನಗಾಣಬೇಕು.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೇವಲ ಸಣ್ಣ ಪುಟ್ಟ ಹುಡುಗರು, ಕಾಲೇಜಿನ ಯುವಕರೇ ಗುಂಪುಕಟ್ಟಿಕೊಂಡು ಪ್ರವಾಸ ಹೋಗುತ್ತಾರೆ. ಇಂಥವರಿಗೂ ಪ್ರವಾಸಿ ತಾಣಗಳಲ್ಲಿ ಅನುಸರಿಸಬೇಕಾದ ಕನಿಷ್ಠ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು. ಒಂದು ಸಣ್ಣ ತಪ್ಪು ನಡೆ ಜೀವಕ್ಕೆ ಎರವಾದೀತು ಎಂಬುದನ್ನು ಎಲ್ಲರೂ ಮನಗಂಡು ಜವಾಬ್ದಾರಿಯಿಂದ ವರ್ತಿಸಬೇಕು. ಸರಕಾರವೂ ಈ ನಿಟ್ಟಿನಲ್ಲಿ ಪ್ರವಾಸಿ ತಾಣಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.