ಬಡವರ “ಬೆಳಕು’ ಯೋಜನೆಗೆ ಕಾರ್ಮೋಡ! ಮಹತ್ವಾಕಾಂಕ್ಷಿ ಯೋಜನೆಗಿಲ್ಲ ಕಣ್ಗಾವಲು
ಗುತ್ತಿಗೆದಾರರ ಲೂಟಿಗೆ ಬೇಕಿದೆ ಕಡಿವಾಣ
Team Udayavani, Mar 16, 2022, 8:25 AM IST
ಕುಂದಾಪುರ: ಈವರೆಗೆ ವಿದ್ಯುತ್ ಬೆಳಕನ್ನೇ ಕಾಣದ ಬಡವರ ಮನೆಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ “ಬೆಳಕು’ ಲಕ್ಷಾಂತರ ಮನೆಗಳನ್ನು ಬೆಳಗಿದೆ. ಸಂಪೂರ್ಣ ಉಚಿತ ಎಂದು ಸರಕಾರ ಹೇಳಿದರೂ ಸ್ಥಳೀಯ ಮಟ್ಟದಲ್ಲಿ ಗುತ್ತಿಗೆದಾರರು ಸುಳ್ಳು ಹೇಳಿ ಫಲಾನುಭವಿಗಳಿಂದ ವಸೂಲಿಗಿಳಿದಿದ್ದಾರೆ.
ವಿ. ಸುನಿಲ್ ಕುಮಾರ್ ಇಂಧನ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ “ಬೆಳಕು’ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ. ಯೋಜನೆಯ ಉದ್ದೇಶ ಉತ್ತಮ ಹಾಗೂ ಗ್ರಾಮೀಣ ಭಾಗದ ತುರ್ತು ಅಗತ್ಯವಾಗಿದ್ದರೂ ತಳಮಟ್ಟದಲ್ಲಿ ಅನುಷ್ಠಾನ ಸಮರ್ಪಕವಾಗಿರದ ಕಾರಣ ಬಡವರಿಗೆ ಹೊರೆಯಾಗಿ ಪರಿಣಮಿಸಿದೆ.
ಬಡವರ ಲೂಟಿ
ವಿದ್ಯುತ್ ಕಂಬ, ಸಂಪರ್ಕ, ಸಲಕರಣೆ, ಜೋಡಣೆ ಎಲ್ಲವೂ ಉಚಿತ. ಗ್ರಾ.ಪಂ. ನಿರಾಕ್ಷೇಪಣ ಪತ್ರವೂ ಬೇಕಿಲ್ಲ. ವಾಸ್ತವ್ಯದ ದೃಢೀಕರಣವಷ್ಟೇ ಸಾಕು. ಆದರೆ ಇದರ ಅನುಷ್ಠಾನಕ್ಕೆ ಮೆಸ್ಕಾಂ ಇಲಾಖೆಯು ಸ್ಥಳೀಯವಾಗಿ ಖಾಸಗಿ ಗುತ್ತಿಗೆದಾರರಿಗೆ ಟೆಂಡರ್ ಕೊಟ್ಟಿರುವುದರಿಂದ ಸಮಸ್ಯೆ ಆಗಿದೆ. ಅವರು ಫಲಾನುಭವಿಗಳ ಮನೆಗಳಿಗೆ ಹೋಗಿ, “ನಿಮಗೆ ವಿದ್ಯುತ್ ಸಂಪರ್ಕ ಮಂಜೂರಾಗಿದೆ. ಆದರೆ ಸರಕಾರ ದಿಂದ ಬರಬೇಕಾದ ವಯರ್ ಅಥವಾ
ಸಲಕರಣೆ ಬರಲು ಕನಿಷ್ಠ 6 ತಿಂಗಳು ಆಗುತ್ತದೆ. ತುರ್ತಾಗಿ ಸಂಪರ್ಕ ಬೇಕಿದ್ದರೆ ಹಣ ಕೊಡಬೇಕಾಗುತ್ತದೆ’ ಎಂದು ಹೇಳಿ 4 ಸಾವಿರ ರೂ.ಗಳಿಂದ 10 ಸಾವಿರ ರೂ. ತನಕ ಕೇಳುತ್ತಿದ್ದಾರೆ. ಇದನ್ನು ನಂಬುವ ಬಡವರು ಯಾವುದಕ್ಕೋ ಕೂಡಿಟ್ಟ ಹಣವನ್ನು ಕೊಡುತ್ತಿದ್ದಾರೆ.
ಔಷಧಕ್ಕೆ ಕೂಡಿಟ್ಟ ಹಣ
ನಮ್ಮದು ಬಡ ಕುಟುಂಬ. ಇಷ್ಟು ವರ್ಷಗಳಿಂದ ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ. ಈಗ ಸರಕಾರ ಉಚಿತವಾಗಿ ಕೊಡುತ್ತದೆಂದು ತಿಳಿದು ಅರ್ಜಿ ಸಲ್ಲಿಸಿದ್ದೆವು. ಕೆಲವು ದಿನಗಳ ಹಿಂದೆ ಬಂದ ವ್ಯಕ್ತಿಗಳು “ನಿಮಗೆ ವಿದ್ಯುತ್ ಮಂಜೂರಾಗಿದೆ. ಆದರೆ ಇಲಾಖೆಯಿಂದ ವಯರ್ ಬಂದಿಲ್ಲ. ಈಗಲೇ ಹಾಕಿಕೊಡಬೇಕಾದರೆ 6 ಸಾವಿರ ರೂ. ಆಗುತ್ತದೆ’ ಎಂದರು. ಔಷಧಕ್ಕೆಂದು ಕೂಡಿಟ್ಟಿದ್ದ ಹಣವನ್ನು ಕೊಟ್ಟಿದ್ದೇವೆ ಎಂದು ಕುಂದಾಪುರ ಭಾಗದ ವೃದ್ಧೆಯೊಬ್ಬರು ವೇದನೆಯಿಂದ ಹೇಳಿದ್ದಾರೆ.
ಉಡುಪಿ, ದ.ಕ.: 9,306 ಅರ್ಜಿ
ಯೋಜನೆ ಆರಂಭಗೊಂಡ 100 ದಿನಗಳಲ್ಲಿಯೇ ರಾಜ್ಯದ 1.20 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಒಟ್ಟು 9,306 ಫಲಾನುಭವಿಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಉಡುಪಿ ಜಿಲ್ಲೆಯಲ್ಲಿ 4,066 ಮಂದಿ ಅರ್ಜಿ ಸಲ್ಲಿಸಿದ್ದು, 2,800 ಮಂದಿಗೆ ಸಂಪರ್ಕ ಕಲ್ಪಿಸಲಾಗಿದೆ. ದ.ಕ.ದಲ್ಲಿ 5,240 ಅರ್ಜಿ ಸಲ್ಲಿಕೆಯಾಗಿದ್ದು, 2,255 ಸಂಪರ್ಕ ಕಲ್ಪಿಸಲಾಗಿದೆ. ಎರಡೂ ಜಿಲ್ಲೆಗಳಲ್ಲಿ 5 ಸಾವಿರಕ್ಕೂ ಅಧಿಕ ಮನೆಗೆ ಸಂಪರ್ಕ ಬಾಕಿಯಿದೆ. ಈಗ ಎರಡನೇ ಹಂತದ ಸಮೀಕ್ಷೆ ನಡೆಯುತ್ತಿದೆ.
ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಹಣ ಪಡೆಯುತ್ತಿರುವ ದೂರು ಬಂದಲ್ಲಿ ಖಂಡಿತವಾಗಿಯೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
– ವಿ. ಸುನಿಲ್ ಕುಮಾರ್, ಇಂಧನ ಸಚಿವ
ಗುತ್ತಿಗೆ ವಹಿಸಿಕೊಂಡವರು ಹಣ ಪಡೆಯುತ್ತಿರುವ ಬಗ್ಗೆ ಮಾಹಿತಿಯಿಲ್ಲ. ಈ ಬಗ್ಗೆ ಸಂಬಂಧಪಟ್ಟವರಿಂದ ವರದಿ ತರಿಸಿಕೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಗಮನಕ್ಕೆ ಬಂದಲ್ಲಿ ಇಲಾಖಾ ಅಧಿಕಾರಿಗಳ ಗಮನಕ್ಕೆ ತನ್ನಿ.
– ಪ್ರಶಾಂತ್ ಕುಮಾರ್ ಮಿಶ್ರಾ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.