ಕೋವಿಡ್ ನಿಂದ ಮಕ್ಕಳ ರಕ್ಷಣೆ : ಇರಲಿ ಎಚ್ಚರಿಕೆ
Team Udayavani, Jun 21, 2021, 6:55 AM IST
ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳೇ ಹೆಚ್ಚಾಗಿ ಬಾಧಿತರಾಗುತ್ತಾರೆ ಎಂಬ ತಜ್ಞರ ಅಭಿಪ್ರಾಯಗಳು ರಾಜ್ಯವನ್ನು ಆತಂಕಕ್ಕೆ ದೂಡಿದ್ದು ಸುಳ್ಳಲ್ಲ. ಇದಕ್ಕೆ ಪೂರಕವಾಗಿ ಎರಡನೇ ಅಲೆಯಲ್ಲೇ ಬಹಳಷ್ಟು ಮಕ್ಕಳು ಕೊರೊನಾಗೆ ಬಾಧಿತರಾಗಿದ್ದಾರೆ. ಜತೆಗೆ ಈಗ 18 ವರ್ಷ ಮೀರಿದವರಿಗೆ ಮಾತ್ರ ಲಸಿಕೆ ನೀಡುತ್ತಿರುವುದರಿಂದ ಈ ಪ್ರಕ್ರಿಯೆ ಪೂರ್ತಿಯಾದ ಮೇಲೆ ಮಕ್ಕಳಷ್ಟೇ ಬಾಕಿ ಉಳಿಯಲಿದ್ದಾರೆ. ಇವರ ಮೇಲೆ ಮೂರನೇ ಅಲೆ ಹೆಚ್ಚು ಬಾಧಿಸಲಿದೆ ಎಂದೇ ಹೇಳುತ್ತಿದ್ದರು.
ಈ ನಡುವೆಯೇ ಮೂರನೇ ಅಲೆ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ರಾಜ್ಯದಲ್ಲಿ ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ| ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ಮಕ್ಕಳ ತಜ್ಞ ವೈದ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯು ಸರಕಾರಕ್ಕೆ ಪ್ರಾಥಮಿಕ ವರದಿಯೊಂದನ್ನು ನೀಡಿದ್ದು, ಮೂರನೇ ಅಲೆಯಲ್ಲಿ ಒಂದರಿಂದ ಒಂದೂವರೆ ಲಕ್ಷ ಮಕ್ಕಳಿಗೆ ಕೊರೊನಾ ತಗಲಬಹುದು ಎಂದು ಅಂದಾಜಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 1.75 ಕೋಟಿ ಮಕ್ಕಳಿದ್ದಾರೆ. ಇವರಲ್ಲಿ ಒಂದರಿಂದ ಒಂದೂವರೆ ಲಕ್ಷ ಎಂದರೆ, ಕೇವಲ ಶೇ.1ರಷ್ಟಾಗುತ್ತದೆ. ಅಲ್ಲದೆ ಒಂದರಿಂದ ಒಂದೂವರೆ ಲಕ್ಷ ಮಕ್ಕಳು ಎಂದಾಕ್ಷಣ ಭಯ ಮೂಡುವುದು ಸಹಜ. ಆದರೆ ಇಲ್ಲಿ ಬೇರೆ ವಿಚಾರಗಳೂ ಇವೆ. ಈ ಎಲ್ಲ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುವುದಿಲ್ಲ. ಅರ್ಧದಷ್ಟು ಮಕ್ಕಳಿಗೆ ಮಾತ್ರ ಕೊರೊನಾ ಸೋಂಕು ಕಾಣಿಸಿಕೊಳ್ಳಬಹುದು. ಉಳಿದವರಲ್ಲಿ ಯಾವುದೇ ಲಕ್ಷಣಗಳು ಇಲ್ಲದೆಯೇ ಬಂದು ಹೋಗಬಹುದು. ಈ ಅರ್ಧದಷ್ಟು ಮಕ್ಕಳಲ್ಲಿ 5 ಸಾವಿರ ಮಕ್ಕಳಿಗೆ ಮಾತ್ರ ಗಂಭೀರ ಪ್ರಮಾಣದ ಸೋಂಕು ಕಾಣಿಸಿಕೊಳ್ಳಬಹುದು. ಅಂದರೆ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಕಾಣಿಸಬಹುದು. ಇವರಲ್ಲಿ ಕೆಲವರಿಗೆ ಐಸಿಯು ಚಿಕಿತ್ಸೆ ಬೇಕಾಗಬಹುದು. ಜತೆಗೆ ಮಕ್ಕಳ ಆರೋಗ್ಯವನ್ನು ಪರೀಕ್ಷಿಸಿ, ರೋಗ ಲಕ್ಷಣ ಮತ್ತು ತೀವ್ರತೆ ಆಧಾರದ ಮೇಲೆ ಆಸ್ಪತ್ರೆ, ಕೊರೊನಾ ಆರೈಕೆ ಕೇಂದ್ರ, ಐಸಿಯುಗೆ ರವಾನಿಸಲು ಟ್ರಯಾಜ್ ಕೇಂದ್ರಗಳನ್ನು ರೂಪಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ದೇವಿಪ್ರಸಾದ್ ಶೆಟ್ಟಿ ಅವರ ಸಮಿತಿ ಹೇಳಿದೆ. ಆಸ್ಪತ್ರೆಯಲ್ಲಿ ಮಕ್ಕಳ ಜತೆ ಹೆತ್ತವರು ಇರಲೂ ಅವಕಾಶ ಮಾಡಿಕೊಡಬೇಕು ಎಂದು ಹೇಳಿದೆ ಈ ಸಮಿತಿ. ಸೋಂಕು ಗುಣಮುಖವಾಗಬೇಕು ಎಂದರೆ, ಮಕ್ಕಳ ಜತೆ ಹೆತ್ತವರು ಇರಲೇಬೇಕು ಎಂದು ಹೇಳಿದೆ.
ತಜ್ಞರ ಸಮಿತಿ ವರದಿ ಆಧಾರದ ಮೇಲೆ ಹೇಳುವುದಾದರೆ, ಮಕ್ಕಳಿಗೆ ಭಾರೀ ಪ್ರಮಾಣದಲ್ಲಿ ಕೊರೊನಾ ಬರುವುದಿಲ್ಲ. ಹಾಗಂತ ಜನ ಮೈಮರೆಯುವುದು ಸಲ್ಲದು. ತಜ್ಞರು ಅಧ್ಯಯನ ವರದಿ ನೀಡುವುದು ಈಗಿನ ಸೋಂಕಿನ ಆಧಾರದ ಮೇಲೆ ಹಾಗೂ ಪರಿಸ್ಥಿತಿ ಅವಲೋಕಿಸಿ. ಆದರೆ ಮೂರನೇ ಅಲೆಯಲ್ಲಿ ಬೇರೆ ಯಾವ ಪರಿಸ್ಥಿತಿ ಬರುತ್ತದೆ ಎಂಬುದನ್ನು ಈಗಲೇ ಅಂದಾಜು ಮಾಡುವುದು ಕಷ್ಟ. ಹೀಗಾಗಿ ಜನರು ಯಾವುದೇ ಕಾರಣಕ್ಕೂ ಕೊರೊನಾ ನಿಯಂತ್ರಣಕ್ಕಾಗಿ ಇರುವ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸರಕಾರದ ಮಾರ್ಗಸೂಚಿಗಳನ್ನೂ ಪಾಲನೆ ಮಾಡಬೇಕು. ಗುಂಪು ಸೇರಬಾರದು, ದೊಡ್ಡ ದೊಡ್ಡ ಸಮಾರಂಭಗಳಿಂದ ಸಾಕಷ್ಟು ದೂರವೇ ಉಳಿದು ಮಕ್ಕಳ ರಕ್ಷಣೆಗೆ ಮುಂದಾಗಬೇಕು. ಮಕ್ಕಳಿಗೆ ಕೊರೊನಾ ಬರಬಹುದು ಎಂದರೆ ಅದು ಹೆತ್ತವರಿಂದಲೇ ಎನ್ನುವುದನ್ನು ಮರೆಯಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.