ಕೆಲಸಗಾರ ಖೂಬಾಗೆ ಕೇಂದ್ರ ಸಚಿವ ಕಸುಬು
ಬೀದರ್ ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ
Team Udayavani, Jul 8, 2021, 6:30 AM IST
ಬೀದರ್: ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಬೆಳೆದು ಸತತ 2ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಭಗವಂತ ಖೂಬಾ ಅವರಿಗೆ ಪ್ರಧಾನಿ ಮೋದಿ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಒಲಿದಿದೆ. ಬೀದರ ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೇಂದ್ರ ಸರಕಾರದಲ್ಲಿ ಸಚಿವ ಸ್ಥಾನ ಪಡೆದು ದಾಖಲೆ ಸೃಷ್ಟಿಸಿದ್ದಾರೆ.
ಗಡಿ ತಾಲೂಕು ಕೇಂದ್ರ ಔರಾದನ, ಯಾವುದೇ ರಾಜಕೀಯ ಹಿನ್ನೆಲೆ ಹೊಂದಿರದ ಭಗವಂತ ಖೂಬಾ ಮೊದಲ ಬಾರಿಗೆ ಬಿಜೆಪಿ ಸಂಸದರಾಗಿ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದರು. ಈಗ ಕೇಂದ್ರದಲ್ಲಿ ಮಂತ್ರಿ ಪದವಿಗೆ ಏರುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ. ಪ್ರಧಾನಿ ಮೋದಿ ಆಪ್ತರಲ್ಲಿ ಗುರುತಿಸಿಕೊಂಡಿರುವ ಖೂಬಾ ಲಿಂಗಾಯತ, ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ತುಮಕೂರು ಸಿದ್ಧಗಂಗಾ ಮಠದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿರುವ ಖೂಬಾ ಗುತ್ತಿಗೆದಾರರಾಗಿದ್ದು, 1991ರಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಬಿಜೆಪಿಗೆ ಸೇರಿದ್ದರು. ಅನಂತರ 3 ಬಾರಿ ಜಿಲ್ಲಾ ಉಪಾಧ್ಯಕ್ಷ, ಒಮ್ಮೆ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಯೋಗ ಗುರು ಬಾಬಾ ರಾಮದೇವ್ ಪ್ರಭಾವದಿಂದ 2014ರ ಲೋಕಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿ ಮಧ್ಯ ಟಿಕೆಟ್ ದಕ್ಕಿಸಿಕೊಂಡ ಖೂಬಾ, ಮಾಜಿ ಸಿಎಂ ಧರಂಸಿಂಗ್ ವಿರುದ್ಧ 1 ಲಕ್ಷಕ್ಕೂ ಅಧಿಕ ಮತ ಪಡೆದು ಜಯಗಳಿಸಿದ್ದರು. ಬಳಿಕ 2017ರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿರುದ್ಧ 1.25 ಲಕ್ಷ ಮತ ಪಡೆದು 2ನೇ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ.
ಸಂಸದರಾಗಿ ಆಯ್ಕೆಯಾದ ಅನಂತರ ಜಿಲ್ಲೆಗೆ ಹಲವು ರೈಲ್ವೇ ಯೋಜನೆಗಳ ಕೊಡುಗೆ ನೀಡಿರುವ ಸಂಸದ ಖೂಬಾ ಮುಖ್ಯವಾಗಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ದೇಶದಲ್ಲಿ ಬೀದರ ಮುಂಚೂಣಿ ಸ್ಥಾನ ಪಡೆಯುವಲ್ಲಿ ಶ್ರಮಿಸಿದ್ದಾರೆ. ಸತತ 4 ವರ್ಷಗಳಿಂದ ಯೋಜನೆಯಲ್ಲಿ ನೋಂದಣಿ ಮತ್ತು ಪರಿಹಾರ ತೆಗೆದುಕೊಳ್ಳುವುದರಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಗಮನಾರ್ಹ ಸಾಧನೆಗೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದರು.
ಒಂದೂವರೆ ದಶಕದಿಂದ ನನೆಗುದಿಗೆ ಬಿದ್ದಿದ್ದ ಬೀದರ- ಕಲಬುರಗಿ ರೈಲ್ವೇ ಲೈನ್ ಪೂರ್ಣಗೊಳಿಸಿ ಪ್ರಧಾನಿಯಿಂದ ಲೋಕಾರ್ಪಣೆ ಮಾಡಿಸಿ ಸೈ ಎನಿಸಿಕೊಂಡಿದ್ದರು. ಇನ್ನೂ ಎರಡು ದಶಕಗಳ ಕನಸಾಗಿದ್ದ ಬೀದರನಿಂದ ನಾಗರಿಕ ವಿಮಾನಯಾನ ಸೇವೆಯನ್ನು “ಉಡಾನ್’ ಯೋಜನೆಯಡಿ ಆರಂಭಿಸಿ, ಜಿಲ್ಲೆಯ ಜನ ಲೋಹದ ಹಕ್ಕಿಯಲ್ಲಿ ಹಾರಾಡುವ ಕನಸನ್ನು ನನಸು ಮಾಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.