ಆಗಸ್ಟ್ 08: ಭೀಮನ ಅಮಾವಾಸ್ಯೆ ಪುರಾಣದ ಹಿನ್ನೆಲೆ ಏನು, ಏನಿದರ ಮಹತ್ವ
ರಾಜಕುಮಾರ ನೂರು ವರ್ಷ ಸುಖ, ಸಮೃದ್ಧಿಯಿಂದ ಜೀವನ ಸಾಗಿಸಿದ್ದ ಎಂಬುದು ಕಥೆ.
Team Udayavani, Aug 8, 2021, 9:10 AM IST
ಅಮಾವಾಸ್ಯೆ ಮತ್ತು ಹುಣ್ಣಿಮೆಗಳು ಸೌರಮಂಡಲದಲ್ಲಿನ ಸೂರ್ಯ ಮತ್ತು ಚಂದ್ರನ ಚಲನೆಗೆ ಸಂಬಂಧಪಟ್ಟ ಒಂದು ನೈಸರ್ಗಿಕ ಪ್ರಕ್ರಿಯೆಗಳು. ಸೂರ್ಯ ಮತ್ತು ಚಂದ್ರ ಶೂನ್ಯ ಡಿಗ್ರಿಯಲ್ಲಿ ಯುತಿ ಆದಾಗ ಅಮಾವಾಸ್ಯೆ ಬರುತ್ತದೆ, ಸೂರ್ಯನಿಂದ ಚಂದ್ರ 180 ಡಿಗ್ರಿ ದೂರ ಹೋದಾಗ ಹುಣ್ಣಿಮೆ ಬರುವುದು ಸ್ವಾಭಾವಿಕ ಕ್ರಿಯೆ.
ಹಿಂದೂ ಕ್ಯಾಲೆಂಡರ್ ನಲ್ಲಿ 12 ಮಾಸಗಳಿವೆ. ಪ್ರತಿ ಮಾಸದಲ್ಲೂ ಹುಣ್ಣಿಮೆ, ಅಮಾವಾಸ್ಯೆ 15 ದಿನಗಳಿಗೊಮ್ಮೆ ಬರುತ್ತದೆ. ಸೂರ್ಯ, ಚಂದ್ರ ಶೂನ್ಯ ಡಿಗ್ರಿಯಲ್ಲಿದ್ದಾಗ ಅಮಾವಾಸ್ಯೆ, ನಂತರ ಪ್ರತಿ 12 ಡಿಗ್ರಿ ದೂರವಾದಾಗ ಒಂದೊಂದು ತಿಥಿಗಳು ಬರುತ್ತಾ ಹೋಗುತ್ತದೆ. ಅಮಾವಾಸ್ಯೆ ನಂತರ ಶುಕ್ಲ ಪಕ್ಷವೂ, ಹುಣ್ಣಿಮೆ ನಂತರ ಕೃಷ್ಣ ಪಕ್ಷವು ಬರುತ್ತದೆ. ಕೃಷ್ಣ ಪಕ್ಷದ ಚತುರ್ದಶಿ ನಂತರ ಬರುವ ತಿಥಿ ಅಮಾವಾಸ್ಯೆ ಆಗಿರುತ್ತದೆ. ಹಿಂದೂ ಕ್ಯಾಲೆಂಡರ್ ನ 4ನೇ ಮಾಸ ಆಷಾಡದ ಕೊನೆಯ ದಿನವೇ ಭೀಮನ ಅಮಾವಾಸ್ಯೆ. ಈ ವರ್ಷ ಆಗಸ್ಟ್ ತಿಂಗಳ 8ನೇ ತಾರೀಕು ಭೀಮನ ಅಮಾವಾಸ್ಯೆ ಬಂದಿದೆ.
ಭೀಮನ ಅಮಾವಾಸ್ಯೆ ಪುರಾಣದ ಹಿನ್ನೆಲೆ ಏನು, ಏನಿದರ ಮಹತ್ವ:
ಸ್ಕಂದ ಪುರಾಣದಲ್ಲಿ ಆಷಾಢ ಮಾಸದ ಅಮಾವಾಸ್ಯೆ ಬಗ್ಗೆ ಉಲ್ಲೇಖವಿದೆ. ಪಾರ್ವತಿ ದೇವಿಯ ವ್ರತಕ್ಕೆ ಶಿವನು ಒಲಿದು, ತನ್ನ ಪತ್ನಿಯಾಗಿ ಸ್ವೀಕರಿಸಿದ ದಿನವೇ ಭೀಮನ ಅಮಾವಾಸ್ಯೆಯಾಗಿದೆ. ದೇಶದ ನಾನಾ ಭಾಗಗಳಲ್ಲಿ ಬೇರೆ, ಬೇರೆ ಹೆಸರಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಸತಿ ಸಂಜೀವಿನಿ ವ್ರತ, ಹರಿಯಾಲಿ ಅಮಾವಾಸ್ಯೆ, ಗಟಾರಿ ಅಮಾವಾಸ್ಯೆ, ದಿವಾಸೊ, ಆಟಿ ಅಮಾವಾಸ್ಯೆ, ಗಂಡನ ಪೂಜೆ ಹೀಗೆ ನಾನಾ ಹೆಸರಿನಲ್ಲಿ ಇದನ್ನು ಆಚರಿಸಲಾಗುತ್ತದೆ.
ಸಂಸ್ಕೃತದಲ್ಲಿ ಅಮಾ ಅಂದರೆ ಒಟ್ಟಿಗೆ, ವಾಸ್ಯ ಅಂದರೆ ಸಹಜೀವನ. ಅಮಾವಾಸ್ಯೆ ಅಂದರೆ ಸಹಬಾಳ್ವೆ ಎಂಬ ಅರ್ಥವೂ ಇದೆ. ನರಕ ಚತುದರ್ಶಿ, ಮಹಾಲಯ ಅಮಾವಾಸ್ಯೆ ಎಲ್ಲವೂ ಅಮಾವಾಸ್ಯೆಯಂದೇ ಆಚರಿಸಲಾಗುತ್ತದೆ. ಭೀಮನ ಅಮಾವಾಸ್ಯೆಯಂದು ಮದುವೆಯಾದ ಮಹಿಳೆಯರು ತನ್ನ ಗಂಡನ ಆಯುಷ್ಯ ಮತ್ತು ಶ್ರೇಯೋಭಿವೃದ್ಧಿಗಾಗಿ ಹಾಗೂ ಮದುವೆ ಆಗದ ಯುವತಿಯರು ಉತ್ತಮ ಗುಣನಡತೆಯ ಗಂಡ ಸಿಗಲಿ ಎಂಬ ಅಪೇಕ್ಷೆಯೊಂದಿಗೆ ವ್ರತವನ್ನು ಆಚರಿಸುತ್ತಾರೆ.
ಇದಕ್ಕೊಂದು ಪುರಾಣ ಕಥೆಯೂ ಇದೆ. ಹಿಂದೆ ಒಬ್ಬ ಬ್ರಾಹ್ಮಣ ದಂಪತಿ ಕಾಶಿ ಯಾತ್ರೆ ಕೈಗೊಳ್ಳುವಾಗ, ತಮ್ಮ ಅವಿವಾಹಿತ ಮಗಳ ಜವಾಬ್ದಾರಿಯನ್ನು ಮಗ ಮತ್ತು ಸೊಸೆಗೆ ಒಪ್ಪಿಸಿ ಹೊರಟಿದ್ದರು. ಆ ಸಮಯದಲ್ಲಿ ಆ ರಾಜ್ಯದ ರಾಜಕುಮಾರ ಸಾವನ್ನಪ್ಪುತ್ತಾನೆ. ಅವಿವಾಹಿತನಾದ ರಾಜಕುಮಾರನ ಶವವನ್ನು ವಿವಾಹವಾಗುವವರಿಗೆ ಅಪಾರ ಧನ, ಸಂಪತ್ತು ನೀಡುವುದಾಗಿ ರಾಜ್ಯದಲ್ಲಿ ಡಂಗುರ ಸಾರಲಾಗುತ್ತದೆ.
ಆಗ ಹಣದ ಆಸೆಗೆ ಬ್ರಾಹ್ಮಣ ದಂಪತಿಯ ಮಗ, ತನ್ನ ತಂಗಿಯನ್ನು ಶವದ ಜತೆ ವಿವಾಹ ಮಾಡಿಸಲು ಒಪ್ಪಿಗೆ ಸೂಚಿಸುತ್ತಾನೆ. ಕೊನೆಗೂ ಮುಗ್ದ ಹುಡುಗಿಯ ವಿವಾಹ ರಾಜಕುಮಾರನ ಶವದ ಜತೆ ನೆರವೇರಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆ ನಂತರ ರಾಜಕುಮಾರನ ಶವವನ್ನು ಅಂತ್ಯಸಂಸ್ಕಾರ ಮಾಡಲು ಗಂಗಾತೀರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಅಂತ್ಯಕ್ರಿಯೆ ನಡೆಸುವ ವೇಳೆ ಭಾರೀ ಮಳೆ ಬಂದಾಗ ಎಲ್ಲರೂ ಅಲ್ಲಿಂದ ಓಡಿ ಹೋಗುತ್ತಾರೆ. ಆದರೆ ಆ ಮದುಮಗಳು ಅಲ್ಲಿಂದ ಕದಲದೇ, ಅಲ್ಲಿಯೇ ಇದ್ದ ಮಣ್ಣಿಂದ ದೀಪ ಮಾಡಿ ಬೆಳಗಿಸಿ ವೃತ ಆಚರಿಸುತ್ತಾಳೆ. ತನ್ನ ತಾಯಿ ಆಚರಿಸುತ್ತಿದ್ದ ಭೀಮನ ಅಮಾವಾಸ್ಯೆಯ ಮಹತ್ವವನ್ನು ತಿಳಿದ ಆ ಹೆಣ್ಣು ವ್ರತ ಆಚರಿಸುತ್ತಿದ್ದ ಸಂದರ್ಭ ಅಲ್ಲಿಗೆ ಒಂದು ಜೋಡಿ ದಂಪತಿ ಬಂದು ವಿಚಾರಿಸುತ್ತಾರೆ.
ಆಗ ಆಕೆ ಹೇಳುತ್ತಾಳೆ, ತನ್ನ ಗಂಡನ ಆಯುಸ್ಸು ಮತ್ತು ಶ್ರೇಯೋಭಿವೃದ್ಧಿಗಾಗಿ ಈ ವ್ರತ ಆಚರಿಸುತ್ತಿದ್ದೇನೆ ಎನ್ನುತ್ತಾಳೆ. ಆಗ ಅಲ್ಲಿಗೆ ಬಂದ ದಂಪತಿ ಬೇರೆ ಯಾರೂ ಅಲ್ಲ ಸಾಕ್ಷಾತ್ ಶಿವ-ಪಾರ್ವತಿಯಾಗಿದ್ದರು. ಅವಳ ವ್ರತ, ಶ್ರದ್ಧೆಗೆ ಮೆಚ್ಚಿದ ಶಿವ, ಪಾರ್ವತಿ ವರ ಕೇಳುವಂತೆ ಹೇಳುತ್ತಾರೆ, ಆಗ ಆಕೆ ತನ್ನ ಗಂಡನನ್ನು ಬದುಕಿಸುವಂತೆ ಬೇಡಿಕೊಳ್ಳುತ್ತಾಳೆ. ಅದರಂತೆ ಮೃತ ಯುವರಾಜನಿಗೆ ಜೀವ ಬಂದು, ಅರಮನೆಗೆ ಹೋಗುತ್ತಾನೆ. ಹೀಗೆ ಪತ್ನಿಯ ವ್ರತಾಚರಣೆಯಿಂದ ಜೀವಂತವಾದ ರಾಜಕುಮಾರ ನೂರು ವರ್ಷ ಸುಖ, ಸಮೃದ್ಧಿಯಿಂದ ಜೀವನ ಸಾಗಿಸಿದ್ದ ಎಂಬುದು ಕಥೆ.
ಇದರ ಮಹತ್ವ ಅರಿತು, ಇಂದಿಗೂ ಭೀಮನ ಅಮಾವಾಸ್ಯೆಯಂದು ಮಹಿಳೆಯರು ಗಂಡನ ಆಯುಷ್ಯ ಮತ್ತು ಶ್ರೇಯಸ್ಸಿಗಾಗಿ ವ್ರತ ಆಚರಿಸುವ ಪದ್ಧತಿ ರೂಢಿಗೆ ಬಂದಿದೆ.
*ರವೀಂದ್ರ ಐರೋಡಿ, ಸಾಸ್ತಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.