ದೇಗುಲದಲ್ಲೇ BJP ಆಕಾಂಕ್ಷಿಗಳಿಂದ ಪ್ರತಿಜ್ಞೆ; list ಬಿಡುಗಡೆ ಮುನ್ನವೇ ಮೂಗುದಾರ ಯತ್ನ
ಪಕ್ಷ ದ್ರೋಹ ಮಾಡದಂತೆ ಶಪಥ ; ಬಂಡಾಯ ಶಮನಕ್ಕೆ ಕಂಕಣ ಪ್ರಯೋಗ!
Team Udayavani, Apr 8, 2023, 7:00 AM IST
ಹುಬ್ಬಳ್ಳಿ: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಕ್ಕಿಂತ ಮುನ್ನವೇ ಸಂಭಾವ್ಯ ಬಂಡಾಯ ಶಮನಕ್ಕೆ ಬಿಜೆಪಿ ಹೊಸ ಪ್ರಯೋಗ-ತಂತ್ರಕ್ಕೆ ಮುಂದಾಗಿದೆ. ಧಾರವಾಡ-ಗದಗ-ಹಾವೇರಿ ಜಿಲ್ಲೆಗಳನ್ನೊಳಗೊಂಡ ಧಾರವಾಡ ವಿಭಾಗದಲ್ಲಿ ರಾಜ್ಯದಲ್ಲಿಯೇ ಮೊದಲೆನ್ನುವ “ಕಂಕಣ ಅಭಿಯಾನ’ ಶುರುವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೂಮ್ಮೆ ಅಧಿಕಾರ ಹಿಡಿಯಲೇಬೇಕೆಂಬ ಛಲದೊಂದಿಗೆ ಬಿಜೆಪಿ ಪಟ್ಟಿ ಪ್ರಕಟ ಅನಂತರದಲ್ಲಿ ಸಂಭಾವ್ಯ ಬಂಡಾಯ ಶಮನ ಹಾಗೂ ಒಳಹೊಡೆತ ತಡೆ ನಿಟ್ಟಿನಲ್ಲಿ ಸ್ಥಳೀಯ ದೇವಸ್ಥಾನದಲ್ಲಿ ಪ್ರಬಲ ಆಕಾಂಕ್ಷಿಗಳಿಗೆ ಪರಸ್ಪರ ಕಂಕಣ ಕಟ್ಟಿಸಿ ದೇವರ ಹೆಸರಲ್ಲಿ ಪ್ರತಿಜ್ಞೆ ಮಾಡಿಸಲಾಗುತ್ತಿದೆ.
ಬಿಜೆಪಿ ಟಿಕೆಟ್ ವಿಚಾರವಾಗಿ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಈಗಾಗಲೇ ಬಂಡಾಯದ ಎಲ್ಲ ಲಕ್ಷಣಗಳು ಗೋಚರವಾಗಿವೆ. ಪ್ರಬಲ ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ಟಿಕೆಟ್ ಖಾತ್ರಿ ಎಂಬ ಆತ್ಮವಿಶ್ವಾಸದೊಂದಿಗೆ ಕ್ಷೇತ್ರದಲ್ಲಿ ಮತ ಪ್ರಚಾರ ನಡೆಸಿದ್ದಾರೆ. ಕೆಲವೆಡೆ ಟಿಕೆಟ್ ದೊರೆಯದಿದ್ದರೆ ಬಂಡಾಯ ಅಥವಾ ಪಕ್ಷೇತರವಾದರೂ ಸ್ಪರ್ಧೆ ಖಚಿತ ಎಂಬ ಮಾತುಗಳು ಕೇಳಿಬಂದಿವೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಅನಂತರ ಎದ್ದಿರುವ ಬಂಡಾಯದಿಂದ ಎಚ್ಚೆತ್ತಿರುವ ಬಿಜೆಪಿಗರು ಪಕ್ಷದ ಪಟ್ಟಿ ಬಿಡುಗಡೆಯಾದರೆ ತಮ್ಮಲ್ಲಿಯೂ ಬಂಡಾಯ ಶತಃಸಿದ್ಧ ಎಂದು ಅರಿತು ಈಗಾಗಲೇ ಬಂಡಾಯ ಇಲ್ಲವೆಂಬ ಪ್ರತಿಜ್ಞೆ ಮಾಡಿಸಲು ಮುಂದಾಗಿದ್ದಾರೆ.
ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗಿ ರುವುದರ ಜತೆಗೆ ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದು ಎಂಬ ಒತ್ತಡ ಹೆಚ್ಚಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಹಾಲಿ ಶಾಸಕರಿಗೆ ಟಿಕೆಟ್ ನೀಡುವಂತಿಲ್ಲ. ಆದರೆ ನಮ್ಮಲ್ಲಿ ಯಾರೊಬ್ಬರಿಗೆ ಟಿಕೆಟ್ ನೀಡಿದರೆ ಎಲ್ಲರೂ ಸೇರಿ ಗೆಲುವಿಗೆ ಶ್ರಮಿಸುತ್ತೇವೆ ಎಂದು ಇತರ ಟಿಕೆಟ್ ಆಕಾಂಕ್ಷಿಗಳು ಒಗ್ಗೂಡಿ ಹೇಳುತ್ತಿರುವುದು ಬಂಡಾಯ ಖಚಿತ ಎನ್ನುವುದಕ್ಕೆ ಸಾಕ್ಷಿ. ಇದು ಪಕ್ಷದ ನಾಯಕರಿಗೆ ಚಿಂತೆಗೀಡು ಮಾಡಿದ್ದು, ಹೀಗಾಗಿ ಕಂಕಣ ಅಭಿಯಾನ’ದ ಮೊರೆ ಹೋಗಿದ್ದಾರೆ.
ಕಂಕಣ ಮಂತ್ರ: ಪ್ರತೀ ಕ್ಷೇತ್ರಕ್ಕೆ ಮೂವರು ಅಭ್ಯರ್ಥಿಗಳಂತೆ ಪಟ್ಟಿ ಸಿದ್ಧಗೊಂಡು ಪಕ್ಷದ ಹೈಕಮಾಂಡ್ ಅಂಗಳ ಸೇರಿದ್ದು, ಮೂರ್‍ನಾಲ್ಕು ದಿನಗಳಲ್ಲಿ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದಕ್ಕೂ ಮೊದಲೇ ಬಂಡಾಯ ಶಮನಕ್ಕಾಗಿ ಏನಾದರೂ ಮಾಡಬೇಕೆಂಬ ಚಿಂತನೆ ನಿಟ್ಟಿನಲ್ಲಿ ಧಾರವಾಡ ವಿಭಾಗ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರೊಬ್ಬರು ಕಂಕಣ ಕಟ್ಟುವ ಹಾಗೂ ದೇವಸ್ಥಾನಗಳಲ್ಲಿ ಪ್ರತಿಜ್ಞೆ ಮಾಡಿಸುವ ಸೂತ್ರ ರೂಪಿಸಿದ್ದು, ಹಲವು ಪ್ರಯೋಗಗಳಲ್ಲಿ ಇದೊಂದು ಪ್ರಯೋಗವಾಗಲಿ ಎಂಬ ಉದ್ದೇಶದಿಂದ ಅನುಷ್ಠಾನಗೊಳಿಸಲಾಗಿದೆ. ಕೆಲವೆಡೆ ಉತ್ತಮ ಫಲಿತಾಂಶ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಸಂಸ್ಥಾಪಕರ ದಿನದಿಂದಲೇ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದಲ್ಲಿ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ಹಾಗೂ ಹಿರಿಯ ನಾಯಕ ಎಂ.ಆರ್.ಪಾಟೀಲರ ನಡುವೆ ಟಿಕೆಟ್ ಫೈಟ್ ಜೋರಾಗಿದ್ದರಿಂದ ಕಂಕಣ ಕಟ್ಟುವ ಮೊದಲ ಪ್ರಯೋಗವಾಗಿದೆ. ಗುರುವಾರ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಅನಂತರ ಇಬ್ಬರು ಮುಖಂಡರನ್ನು ಕುಂದಗೋಳದ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಕರೆದ್ಯೊಯ್ದು ಪಕ್ಷದ ವಿವಿಧ ಪದಾಧಿಕಾರಿಗಳು, ಮುಖಂಡರ ಸಮ್ಮುಖದಲ್ಲಿ ದೇವರ ಮೂರ್ತಿ ಮುಂದೆ ನಿಲ್ಲಿಸಿ ಪರಸ್ಪರ ಕಂಕಣ ಕಟ್ಟಿಸಲಾಗಿದೆ.
ಕಂಕಣದ ಜತೆಗೆ ಇಬ್ಬರಲ್ಲಿ ಯಾರೊಬ್ಬರಿಗೂ ಟಿಕೆಟ್ ದೊರೆತರೂ ಬಂಡಾಯ ಸಾರದೆ, ಪಕ್ಷಕ್ಕೆ ದ್ರೋಹ ಬಗೆಯದೆ, ಅನ್ಯ ಪಕ್ಷಕ್ಕೆ ಪಕ್ಷಾಂತರಗೊಳ್ಳದೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಪ್ರಮಾಣಿಕವಾಗಿ ಶ್ರಮಿಸುತ್ತೇನೆ ಎಂದು ದೇವರ ಹೆಸರಿನಲ್ಲಿ ಪ್ರತಿಜ್ಞೆ ಮಾಡಿಸಲಾಗಿದೆ. ಚಿಕ್ಕನಗೌಡ್ರ ಹಾಗೂ ಪಾಟೀಲ ಇಬ್ಬರೂ ಪರಸ್ಪರ ಕಂಕಣ ಕಟ್ಟಿ, ದೇವಸ್ಥಾನದಲ್ಲಿ ದೇವರ ಹೆಸರಲ್ಲಿ ಪ್ರತಿಜ್ಞೆ ಮಾಡಿದ್ದಾರೆ. ಕಲಘಟಗಿಯಲ್ಲಿಯೂ ಹಾಲಿ ಶಾಸಕ ಸಿ.ಎಂ.ನಿಂಬಣ್ಣವರ ಸಹಿತ ಹಲವು ಜನರು ಪ್ರಬಲ ಆಕಾಂಕ್ಷಿಗಳಿದ್ದು, ಅಲ್ಲಿಯೂ ಸಹ ದೇವಸ್ಥಾನದಲ್ಲಿ ಕಂಕಣ ಕಟ್ಟಿಸಲಾಗಿದೆ. ಇದೇ ರೀತಿ ಧಾರವಾಡ ಜಿಲ್ಲೆಯ ಧಾರವಾಡ ಗ್ರಾಮೀಣ, ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರಗಳಲ್ಲಿಯೂ ಕಂಕಣ ಪ್ರಯೋಗ ನಡೆಯಲಿದೆ. ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದಲ್ಲಿಯೂ ಕಂಕಣ ಪ್ರಯೋಗ ನಡೆಸಿದ್ದು, ಅಲ್ಲಿ ರೋಣ, ಗದಗ ಕ್ಷೇತ್ರದಲ್ಲಿಯೂ ನಡೆಯಲಿದೆ ಎನ್ನಲಾಗಿದೆೆ.
ಇನ್ನು ಹಾವೇರಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುತ್ತಿರುವ ಶಿಗ್ಗಾವಿ-ಸವಣೂರು ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿಯೂ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದು, ಕೆಲವೆಡೆ ಬಂಡಾಯದ ಸಾಧ್ಯತೆ ಹಿನ್ನೆಲೆಯಲ್ಲಿ ಅಲ್ಲಿಯೂ ಕಂಕಣ ಪ್ರಯೋಗ ನಡೆಯಲಿದೆ. ಬ್ಯಾಡಗಿ ಸಹಿತ ಒಂದೆರಡು ಕ್ಷೇತ್ರಗಳಲ್ಲಿ ಈಗಾಗಲೇ ಕಂಕಣ ಕಟ್ಟುವ, ಪ್ರತಿಜ್ಞೆ ಮಾಡಿಸುವ ಕಾರ್ಯ ಮುಗಿದಿದೆ.
ಒಟ್ಟಾರೆ ಕಂಕಣ ಕಟ್ಟಿಸಿಕೊಂಡವರು ಹಾಗೂ ಪ್ರತಿಜ್ಞೆ ಮಾಡಿದವರು ಮನಸಾರೆ ಅದನ್ನು ಕೈಗೊಂಡು ಪಾಲಿಸಲು ಮುಂದಾದರೆ ಬಿಜೆಪಿಯಲ್ಲಿ ಬಂಡಾಯ ಬಹುತೇಕ ಶಮನವಾಗುವ ಸಾಧ್ಯತೆ ಇದೆ. ಹೊಸ ಪ್ರಯೋಗವೂ ಯಶಸ್ವಿಯಾಗಲಿದೆ.
ಆಕಾಂಕ್ಷಿಗಳ ಸಂಖ್ಯೆ ಅಧಿಕ
ಬಿಜೆಪಿ ಗೆಲ್ಲುವ ಪಕ್ಷವಾಗಿರುವುದರಿಂದ ಸಹಜವಾಗಿ ಟಕೆಟ್ ಆಕಾಂಕ್ಷಿಗಳು ಅಧಿಕವಾಗಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ಇರುವುದರಿಂದ ಪಟ್ಟಿ ಬಿಡುಗಡೆ ಅನಂತರದಲ್ಲಿ ಬಂಡಾಯ ಶಮನಕ್ಕಾಗಿ ಅಗತ್ಯವಿರುವ ಎಲ್ಲ ಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಅದರ ಭಾಗವಾಗಿ ಕಂಕಣ ಕಟ್ಟುವ, ದೇವರ ಹೆಸರಲ್ಲಿ ಪ್ರತಿಜ್ಞೆ ಪ್ರಯೋಗ ನಮ್ಮ ಕಾರ್ಯಕರ್ತರೊಬ್ಬರ ಮನದಲ್ಲಿ ಬಂದಿದ್ದು, ಒಳ್ಳೆಯಾದಾದೀತು ಎಂದು ಧಾರವಾಡ ವಿಭಾಗ ಮಟ್ಟದಲ್ಲಿ ಜಾರಿಗೊಳಿಸಲಾಗಿದೆ. ಪಕ್ಷದ ನಾಯಕರು ಇದನ್ನು ರಾಜ್ಯಕ್ಕೆ ವಿಸ್ತರಿಸಿದರೂ ಅಲ್ಲಿಯೂ ಫಲಿತಾಂಶ ನೀಡುವ ನಿರೀಕ್ಷೆ ಇದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.