ಯಡಿಯೂರಪ್ಪಗೆ ಜಯದ ಆತ್ಮವಿಶ್ವಾಸ
ವಿಶ್ವಾಸಮತ ಸಾಬೀತುಪಡಿಸುವ ಆತ್ಮವಿಶ್ವಾಸದಲ್ಲಿ ಬಿಜೆಪಿ
Team Udayavani, Jul 28, 2019, 6:55 AM IST
ಬೆಂಗಳೂರು: ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಬಹುಮತ ಸಾಬೀತುಪಡಿಸಲು ಸಜ್ಜಾಗಿದ್ದಾರೆ. ವಿಶ್ವಾಸಮತ ಗೆದ್ದು ದಕ್ಷಿಣ ಭಾರತದ ರಾಜ್ಯವೊಂದರಲ್ಲಿ ಮತ್ತೆ ಕಮಲ ಪಕ್ಷದ ಆಡಳಿತ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.
ರವಿವಾರ ಅಪರಾಹ್ನ 3 ಗಂಟೆಗೆ ವಿಧಾನ ಸೌಧದಲ್ಲೇ ಅವರು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸದ್ಯ ಪಕ್ಷದ ಎಲ್ಲ ಶಾಸಕರು ಒಗ್ಗಟ್ಟಾಗಿದ್ದರೂ ಮುನ್ನೆಚ್ಚರಿಕೆಯಾಗಿ ರವಿವಾರದ ಮಟ್ಟಿಗೆ ರೆಸಾರ್ಟ್‌ನಲ್ಲಿ ಅವರನ್ನು ಇರಿಸುವ ಬಗ್ಗೆಯೂ ನಾಯಕರು ಚಿಂತನೆ ನಡೆಸಿದ್ದಾರೆ.
ಪಕ್ಷೇತರ ಶಾಸಕ ಆರ್. ಶಂಕರ್ ಮತ್ತು ಕಾಂಗ್ರೆಸ್‌ನ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಅನರ್ಹರಾಗಿರುವ ಹಿನ್ನೆಲೆಯಲ್ಲಿ ವಿಧಾನಸಭೆಯ ಸಂಖ್ಯಾಬಲ ಒಟ್ಟು 221 ಸದಸ್ಯರು ಮತ್ತು ಒಬ್ಬ ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡು 222ಕ್ಕೆ ಕುಸಿದಿದೆ. ಹಾಗಾಗಿ ಬಹುಮತ ಸಾಬೀತು ಪಡಿಸಲು 112 ಬಲ ಬೇಕು. ಕಾಂಗ್ರೆಸ್ 79 ಮತ್ತು ಜೆಡಿಎಸ್ 37 ಸದಸ್ಯ ಬಲದೊಂದಿಗೆ ಒಟ್ಟು 116 ಶಾಸಕರನ್ನು ಹೊಂದಿದೆ. ಆದರೆ 13 ಶಾಸಕರು ರಾಜೀನಾಮೆ ನೀಡಿದ್ದಾರೆ. ಜತೆಗೆ ಒಬ್ಬ ಪಕ್ಷೇತರ ಮತ್ತು ಬಿಎಸ್‌ಪಿ ಶಾಸಕರಿದ್ದಾರೆ.
ಕುಮಾರಸ್ವಾಮಿ ಜು.23 ರಂದು ವಿಶ್ವಾಸಮತ ಯಾಚಿಸಿದಾಗ ರಾಜೀ ನಾಮೆ ನೀಡಿದ್ದ ಶಾಸಕರು ಸೇರಿದಂತೆ ಕಾಂಗ್ರೆಸ್‌ನ ಇಬ್ಬರು, ಪಕ್ಷೇತರರಿಬ್ಬರು ಮತ್ತು ಬಿಎಸ್‌ಪಿ ಶಾಸಕ ಗೈರಾಗಿ ವಿಶ್ವಾಸಮತದ ಪರ 99 ಮತ್ತು ವಿರುದ್ಧ 105 ಮತಗಳು ಬಿದ್ದಿದ್ದವು. ಸ್ಪೀಕರ್ ಸೇರಿ ಸದನದಲ್ಲಿದ್ದ ಸದಸ್ಯ ಬಲ 205.
ಸದ್ಯ ರಾಜೀನಾಮೆ ನೀಡಿರುವ 13 ಶಾಸಕರು ಪುಣೆಯಲ್ಲೇ ವಾಸ್ತವ್ಯವಿದ್ದು, ಸೋಮವಾರದ ಅಧಿವೇಶನದಲ್ಲೂ ಪಾಲ್ಗೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅವರು ಸದನದಿಂದ ದೂರ ಉಳಿದರೆ ಸಂಖ್ಯಾಬಲ 209ಕ್ಕೆ ಇಳಿಯಲಿದೆ. ಆಗ ಬಹುಮತಕ್ಕೆ 105 ಬಲ ಅಗತ್ಯವಿದ್ದು, ಬಿಜೆಪಿ 105 ಶಾಸಕ ರನ್ನು ಹೊಂದಿದೆ. ಪಕ್ಷೇತರ ಶಾಸಕ ಎಚ್. ನಾಗೇಶ್ ಬೆಂಬಲ ನೀಡಿರುವುದರಿಂದ 106ಕ್ಕೆ ಏರಿಕೆಯಾಗಲಿದೆ.
ಪುಣೆಯ ಅತೃಪ್ತ ಮತ್ತು ಪಕ್ಷೇತರ ಶಾಸಕರೊಂದಿಗೆ ಬಿಜೆಪಿಯ ಇಬ್ಬರು ಶಾಸಕರಿದ್ದಾರೆ. ಅವರು ಸೋಮವಾರ ನಾಗೇಶ್ ಅವರನ್ನು ಸದನಕ್ಕೆ ಕರೆತರಲಿ ದ್ದಾರೆ ಎನ್ನಲಾಗಿದೆ.
ಮತ್ತೂಂದೆಡೆ ಕಾಂಗ್ರೆಸ್, ಜೆಡಿಎಸ್ ನಾಯಕರು ಮುಂದೆ ಎದುರಾಗ ಬಹುದಾದ ಉಪಚುನಾವಣೆಗೆ ಸಜ್ಜಾ ಗು ವತ್ತ ಗಮನ ಹರಿಸಿದ್ದಾರೆ. ಬಿಜೆಪಿ ವಿಶ್ವಾಸಮತ ಸೋಲಿಸಲು ಕಾರ್ಯತಂತ್ರ ರೂಪಿಸುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿಲ್ಲ. ಈ ನಡೆ ಬಿಜೆಪಿ ನಾಯಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.