BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್
ಮೈಸೂರಿಗೆ ಪಾದಯಾತ್ರೆ ಮಾಡಿಸಿದ್ದೂ ಕಾಂಗ್ರೆಸ್ಸಿನವರೇ. ಮುಡಾ ಬೆನ್ನಲ್ಲೇ ಕಾಂಗ್ರೆಸ್ಸಿನವರೇ ಅರ್ಕಾವತಿ ಅಸ್ತ್ರ
Team Udayavani, Sep 30, 2024, 2:12 AM IST
ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ನಾವು ಯಾರೂ ಪಟ್ಟು ಹಿಡಿದಿಲ್ಲ. ಅದರ ಬಗ್ಗೆ ಚರ್ಚೆಯೇ ಆಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಚಿತ್ರದುರ್ಗದಲ್ಲಿ ಒಂದು ಸಂಸ್ಕಾರ ಆಗಿದೆ. ಇನ್ನೊಂದು ಅವರದ್ದೇ ಮನೆಯಲ್ಲಿ ಆಗಿದೆ. ನಾವು 38 ಜನ ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ದೇವೆ. ಮುಂದಿನ ಕ್ರಮ ಏನು ತೆಗೆದುಕೊಳ್ಳಬೇಕು ಎಂಬುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾವುದೇ ವಿಷಯದ ಬಗ್ಗೆ ಬಹಿರಂಗವಾಗಿ ಮಾತನಾಡದಂತೆ ಹೈಕಮಾಂಡ್ ಸೂಚನೆ ನೀಡಿದೆ. ವರಿಷ್ಠರು ಯೋಗ್ಯ ನಿರ್ಣಯ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ. 1,200 ಕೋಟಿ ರೂ. ಆಸ್ತಿ ಇರುವ ವ್ಯಕ್ತಿ ಮುಖ್ಯಮಂತ್ರಿ ಆಗಬೇಕು ಎಂದು ಬಯಸಿರುವ ಅನೇಕರು ಕಾಂಗ್ರೆಸ್, ಬಿಜೆಪಿಯಲ್ಲೂ ಇದ್ದಾರೆ.
ನಮ್ಮಲ್ಲೂ ದುಡ್ಡು ಇರುವಂತಹ ಕೆಲವರಿಗೆ ಕುದುರೆ ವ್ಯಾಪಾರದ ಆಸೆ ಇರಬಹುದು. ಆದರೆ ಬಿಜೆಪಿಯಲ್ಲಿ ಕುದುರೆ ವ್ಯಾಪಾರ ಒಪ್ಪುವುದೇ ಇಲ್ಲ. ಕಾಂಗ್ರೆಸ್ ಸರಕಾರ ವಿಸರ್ಜನೆಯಾದ ಅನಂತರ ಚುನಾವಣೆ ನಡೆದು ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ನಾನು ಮುಖ್ಯಮಂತ್ರಿ ಆಗಬೇಕು. ನಾನೇ ಮುಖ್ಯಮಂತ್ರಿ ಆಗಲೇಬೇಕು ಎಂದು ಕೆಲವರು ತುದಿಗಾಲ ಮೇಲೆಯೇ ನಿಂತಿದ್ದಾರೆ ಎಂದರು.
ತಮ್ಮ ತಲೆ ಮೇಲೆ ತಾವೇ ಕಲ್ಲು ಹಾಕಿಕೊಂಡ ಸಿಎಂ: ಯತ್ನಾಳ್
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸುವ ಆಟ ಜೋರಾಗಿ ನಡೆಯುತ್ತಿದೆ. ತಮ್ಮ ತಲೆ ಮೇಲೆ ತಾವೇ ಕಲ್ಲು ಎಳೆದುಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ಸಿದ್ದರಾಮಯ್ಯಗೆ ನಾನು ಯಾವಾಗಲೂ ಒಳ್ಳೆಯ ಸಲಹೆಗಳನ್ನೇ ಕೊಡುತ್ತ ಬಂದಿದ್ದೇನೆ. ರಾಜೀನಾಮೆ ಕೊಡಿ ಅಂತಾನೂ ಸಲಹೆ ಕೊಟ್ಟಿದ್ದೆ. ಮುಡಾ ವಿಚಾರದಲ್ಲಿ ಹೈಕೋರ್ಟ್‌ಗೆ ಹೋದವರು ಯಾರು. ಸಿದ್ದರಾಮಯ್ಯ ತಮ್ಮ ತಲೆ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ. ನಮ್ಮ ಒಳ್ಳೆಯ ಸಲಹೆಗಳನ್ನು ಅವರು ಕೇಳುವುದಿಲ್ಲ. ಬೇರೆಯವರ ಮಾತನ್ನಷ್ಟೇ ಕೇಳುತ್ತಾರೆ. ಸಿದ್ದರಾಮಯ್ಯ ವಿರುದ್ಧ ಬಿಜೆಪಿಯವರೇನೂ ಷಡ್ಯಂತ್ರ ಮಾಡುತ್ತಿಲ್ಲ. ಮುಡಾ ಹಗರಣದ ದಾಖಲೆಗಳನ್ನು ನೀಡಿ, ಅದನ್ನು ಹೊರ ತೆಗೆದಿದ್ದೇ ಕಾಂಗ್ರೆಸ್ಸಿನವರು.
ಮೈಸೂರಿಗೆ ಪಾದಯಾತ್ರೆ ಮಾಡಿಸಿದ್ದೂ ಕಾಂಗ್ರೆಸ್ಸಿನವರೇ. ಮುಡಾ ಬೆನ್ನಲ್ಲೇ ಕಾಂಗ್ರೆಸ್ಸಿನವರೇ ಅರ್ಕಾವತಿ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಸಂಬಂಧಿಸಿದ ದಾಖಲೆಗಳನ್ನೂ ಕಾಂಗ್ರೆಸ್ಸಿನವರೇ ಒದಗಿಸುತ್ತಿದ್ದಾರೆ. ಅವರನ್ನು ಕುರ್ಚಿಯಿಂದ ಕೆಳಗಿಳಿಸುವ ಕೆಲಸ ಕಾಂಗ್ರೆಸ್‌ನವರಿಂದಲೇ ಆಗುತ್ತಿದೆ. ಸಿದ್ದರಾಮಯ್ಯ ಹಿಂದೆ ಇದ್ದವರೇ ಈಗ ತಾವೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ 5 ಎಕರೆ ಜಮೀನು ವಿವಾದ ತೆಗೆದಿದ್ದು ಸಹ ಕಾಂಗ್ರೆಸ್‌ನವರೇ. ಅವರೇ ತಂದು ಕೊಟ್ಟ ದಾಖಲೆಗಳನ್ನು ಹಿಡಿದುಕೊಂಡೇ ನಾವು ಎಲ್ಲವನ್ನೂ ಹೇಳುತ್ತಿದ್ದೇವೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.