ಸ್ತನ ಕ್ಯಾನ್ಸರ್ ತಪಾಸಣೆ
Team Udayavani, Feb 5, 2023, 1:48 PM IST
ಕಾಲ ಬದಲಾಗಿದೆ, ಹಾಗೆಯೇ ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳ ಪ್ರಮಾಣವೂ ಹೆಚ್ಚಿದೆ. ಈಗ ಭಾರತೀಯ ಮಹಿಳೆಯರಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವ ಕ್ಯಾನ್ಸರ್ ಇದೇ ಆಗಿದೆ. ಪ್ರತೀ ನಾಲ್ಕು ನಿಮಿಷಗಳಿಗೆ ಒಬ್ಬ ಭಾರತೀಯ ಮಹಿಳೆಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತಿದೆ. ಐಸಿಎಂಆರ್ ಅಧ್ಯಯನದ ಪ್ರಕಾರ, ಪ್ರತೀ 29 ಮಂದಿ ಭಾರತೀಯ ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವಿತಕಾಲ (0- 74 ವರ್ಷಗಳು) ದಲ್ಲಿ ಸ್ತನದ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ಹೊಂದಿರುತ್ತಾರೆ ಮತ್ತು ಇದು ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಲಿದೆ. 2020ರಲ್ಲಿ ಸ್ತನ ಕ್ಯಾನ್ಸರ್ ಪೀಡಿತ ಪ್ರತೀ 10 ಮಹಿಳೆಯರಲ್ಲಿ ಹೆಚ್ಚು ಕಡಿಮೆ ಒಬ್ಬರು ಅದರಿಂದಾಗಿ ಸಾವನ್ನಪ್ಪಿರುವುದಾಗಿ ಅಂಕಿಅಂಶಗಳು ಹೇಳುತ್ತವೆ. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಭಾರತೀಯ ಮಹಿಳೆಯರ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್ ಒಂದು ದಶಕದಷ್ಟು ಬೇಗನೆ ಕಾಣಿಸಿಕೊಳ್ಳುವುದು ಮತ್ತು ಅದು ಹೆಚ್ಚು ಕ್ಷಿಪ್ರ ಹಾಗೂ ಆಕ್ರಮಣಕಾರಿಯಾಗಿರುವುದು ನಿಜಕ್ಕೂ ಎಚ್ಚರಿಕೆಯ ಘಂಟೆಯಾಗಿದೆ. ಇದರ ಜತೆಗೆ, ಅದು ಕಾಣಿಸಿಕೊಳ್ಳುವವಯೋಮಾನದಲ್ಲಿಯೂ ಪರಿವರ್ತನೆ ಕಂಡುಬರುತ್ತಿದ್ದು, 50-70 ವಯೋಮಾನದಿಂದ ಅದು 30-50ಕ್ಕಿಳಿದಿದೆ. ಸ್ತನ ಕ್ಯಾನ್ಸರ್ ಜತೆಗೆ ಸಂಬಂಧ ಹೊಂದಿರುವ ಅಂಶಗಳು
ಒಂದು ಸ್ತನದಲ್ಲಿ ಕ್ಯಾನ್ಸರ್ ಹೊಂದಿರುವ ಮಹಿಳೆಯರ ಇನ್ನೊಂದು ಸ್ತನದಲ್ಲಿಯೂ ಅದು ತಲೆದೋರುವ ಸಾಧ್ಯತೆ 3-4 ಪಟ್ಟು ಹೆಚ್ಚು.
ಸಾಂದ್ರ ಸ್ತನಗಳು
ತಾಯಿ, ಸಹೋದರಿ ಅಥವಾ ಮಗಳು ತಮ್ಮ ಋತುಚಕ್ರ ಬಂಧಕ್ಕೆ ಮುನ್ನ ಸ್ತನ ಕ್ಯಾನ್ಸರ್‌ಗೆ ತುತ್ತಾಗಿರುವ ನೇರ ಕೌಟುಂಬಿಕ ಇತಿಹಾಸ.
ಸ್ತನ ಕ್ಯಾನ್ಸರ್ ತಪಾಸಣೆ
ಸ್ತನಗಳಿಗೆ ಸಂಬಂಧಿಸಿದ ವಂಶವಾಹಿಗಳಲ್ಲಿ ಆನುವಂಶಿಕ ಬದಲಾವಣೆ ಹೊಂದಿರುವ ಮಹಿಳೆಯರು.
ಈ ಹಿಂದೆ ಮಾಡಿಸಿರುವ ಬಯಾಪ್ಸಿಯಲ್ಲಿಸ್ತನದ ಜೀವಕೋಶಗಳಲ್ಲಿ ಕ್ಯಾನ್ಸರೇತರ ಅಸಹಜ ಬದಲಾವಣೆ ಕಂಡುಬಂದಿರುವವರು.
ವಿಳಂಬವಾಗಿ ಶಿಶುಜನನ (35 ವರ್ಷಗಳಿಗಿಂತ ಹೆಚ್ಚು ಅಥವಾ ಮಕ್ಕಳನ್ನು ಹೊಂದದೆ ಇರುವವರು)
ಋತುಚಕ್ರ ಬೇಗನೆ ಆರಂಭವಾಗಿರುವವರು (12 ವರ್ಷಕ್ಕಿಂತ ಕಡಿಮೆ ವಯೋಮಾನ)
ವಿಳಂಬವಾಗಿ ಋತುಚಕ್ರ ಬಂಧ ಆಗಿರುವವರು (55 ವರ್ಷಕ್ಕಿಂತ ಹೆಚ್ಚು)
ಅತಿಯಾದ ದೇಹತೂಕ (ವಿಶೇಷವಾಗಿ ವಿಶಾಲವಾದ ಸೊಂಟ ಭಾಗ) (ವಿಶೇಷವಾಗಿ ಋತುಚಕ್ರ ಬಂಧದ ಬಳಿಕ ಹೆಚ್ಚು ಕ್ಯಾಲೊರಿ ಮತ್ತು ಕೊಬ್ಬು ಸೇವನೆ)
ಧೂಮಪಾನ ಮೇಲೆ ಹೇಳಲಾದ ಅಂಶಗಳನ್ನು ಹೊಂದಿರುವ ಮಹಿಳೆಯೊಬ್ಬರು ಸ್ತನದ ಕ್ಯಾನ್ಸರ್‌ಗೆ ತುತ್ತಾಗಬಲ್ಲರು ಎಂದು ಖಚಿತವಾಗಿ ಹೇಳಲಾಗದು. ಸ್ತನ ಕ್ಯಾನ್ಸರ್‌ಗೆ ತುತ್ತಾದ ಮಹಿಳೆಯರಲ್ಲಿ ಈ ಮೇಲಿನ ಅಂಶಗಳು ಹೆಚ್ಚು
ಸಾಮಾನ್ಯವಾಗಿ ಕಂಡುಬರುತ್ತವೆ ಎಂಬುದು ಇದರ ಅರ್ಥವಾಗಿದೆ. ಮೇಲೆ ಹೇಳಲಾದಅಂಶಗಳನ್ನು ಹೊಂದಿಲ್ಲದ ಮಹಿಳೆಯರು ಕೂಡಸ್ತನ ಕ್ಯಾನ್ಸರ್‌ಗೆ ತುತ್ತಗಬಹುದು. ಹೀಗಾಗಿ ಎಲ್ಲ ಮಹಿಳೆಯರು ಕೂಡನಿಯಮಿತವಾಗಿ ಸ್ತನದ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂಬುದು ತುಂಬ ಮುಖ್ಯವಾದ ಅಂಶವಾಗಿದೆ.
ಸ್ತನ ಕ್ಯಾನ್ಸರನ್ನು ಅದರ ಪ್ರಾರಂಭಿಕ ಹಂತಗಳಲ್ಲಿಯೇ ಪತ್ತೆ ಮಾಡಬಹುದಾದ ಅನೇಕ ವಿಧಾನಗಳಿವೆ. ಸರಳವಾದ ವಿಧಾನವೆಂದರೆ ಸ್ತನದ ಗಾತ್ರ, ಆಕಾರ, ಸಂರಚನೆಯಲ್ಲಿ ಯಾವುದೇ ಅಸಹಜ ಬದಲಾವಣೆಗಳು ಉಂಟಾಗಿವೆಯೇ, ಗಂಟು ಅಥವಾ ಗಡ್ಡೆ ಇದೆಯೇ ಎಂಬುದನ್ನು ಸ್ವಯಂ ಪರೀಕ್ಷೆಯ ಮೂಲಕ ತಿಳಿದುಕೊಳ್ಳುವುದು. ನಿಯಮಿತವಾಗಿ ನಿಮ್ಮ ವೈದ್ಯರನ್ನು ಸಂದರ್ಶಿಸಿ ಸ್ತನದ ಪರೀಕ್ಷೆಯನ್ನು ಮಾಡಿಸಿಕೊಳ್ಳಬಹುದು. ಆದರೆ ಮ್ಯಾಮೊಗ್ರಫಿಯಂತಹ ಆಧುನಿಕ ತಂತ್ರಜ್ಞಾನದ ಮೂಲಕ ಸ್ತನ ಕ್ಯಾನ್ಸರನ್ನು ಸ್ವಯಂ ಪರೀಕ್ಷೆಯ ಮೂಲಕ ಅಥವಾ ವೈದ್ಯರ ಮೂಲಕ ಕಂಡುಕೊಳ್ಳುವುದಕ್ಕಿಂತ ಮೂರು ವರ್ಷಗಳಷ್ಟು ಮುನ್ನವೇ ಪತ್ತೆ ಮಾಡಬಹುದಾಗಿದೆ. ಸ್ತನ ಕ್ಯಾನ್ಸರ್ ತುಂಬ ಸಣ್ಣದು ಮತ್ತು ಗುಣಪಡಿಸಬಹುದಾದ ಹಂತದಲ್ಲಿ ಇರುವಾಗಲೇ ಅದನ್ನು ಪತ್ತೆ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸುವುದಕ್ಕೆ ಮ್ಯಾಮೊಗ್ರಫಿಯಷ್ಟು ಪರಿಣಾಮಕಾರಿಯಾದ ವಿಧಾನ ಇನ್ನೊಂದಿಲ್ಲ. ಮ್ಯಾಮೊಗ್ರಫಿ ಎಂದರೆ ಕಡಿಮೆ ಡೋಸ್‌ನ ಎಕ್ಸ್‌ರೇ ಮೂಲಕ ಸೆರೆಹಿಡಿಯಲಾದ ಸ್ತನದ ಚಿತ್ರಣ. 40ಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರು ವರ್ಷಕ್ಕೆ ಒಂದು ಬಾರಿ ಮ್ಯಾಮೊಗ್ರಫಿ ಮಾಡಿಸಿಕೊಳ್ಳುವುದನ್ನು ಶಿಫಾರಸು ಮಾಡಲಾಗಿದೆ. ಆರ್ಥಿಕ ಕಾರಣಗಳಿದ್ದರೆ ಮ್ಯಾಮೊಗ್ರಫಿಯನ್ನು ಕನಿಷ್ಠ 2 ವರ್ಷಗಳಿಗೆ ಒಮ್ಮೆ ಮಾಡಿಸಿಕೊಳ್ಳಬೇಕು. 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾದರೆ, ಸಾಮಾನ್ಯವಾಗಿ ಅಲ್ಟ್ರಾಸೌಂಡ್ ಅಥವಾ ಕೆಲವು ಪ್ರಕರಣಗಳಲ್ಲಿ ಎಂಆರ್‌ಐ – ಇವುಗಳಲ್ಲಿ ಯಾವ ವಿಧಾನವನ್ನು ಅನುಸರಿಸಬೇಕು ಎಂಬ ಬಗ್ಗೆ ವೈದ್ಯರ ಜತೆಗೆ ಸಮಾಲೋಚಿಸಿ ಸಲಹೆ ಪಡೆಯಬೇಕು. ಮ್ಯಾಮೊಗ್ರಫಿ ಮಾಡಿಸುವಾಗ, ವೈದ್ಯರಿಗೆ ಸ್ತನದ ಸ್ಪಷ್ಟ ಚಿತ್ರಣ ಲಭಿಸುವುದಕ್ಕಾಗಿ ಮತ್ತು ಸ್ತನಗಳಿಗೆ ವಿಕಿರಣವನ್ನು ಕಡಿಮೆ ಮಾಡುವುದಕ್ಕಾಗಿ ಉಪಕರಣದ ಎರಡು ಪ್ಲೇಟ್‌ಗಳ ನಡುವೆ ಸ್ತನಗಳನ್ನು ಮಟ್ಟಸವಾಗಿ ಒತ್ತಲಾಗುತ್ತದೆ. ಕೆಲವು ಬಾರಿ ಕೆಲವು ಮಹಿಳೆಯರಿಗೆ ಇದು ಅನನುಕೂಲವನ್ನು ಉಂಟು ಮಾಡಬಹುದು. ಆದರೆ ಈ ಅನನುಕೂಲದ ಕೆಲವು ಕ್ಷಣಗಳು ಒಂದು ಜೀವನವನ್ನು ಕಾಪಾಡುವುದಕ್ಕಿಂತ ದೊಡ್ಡದಲ್ಲವಲ್ಲ!
ಇಷ್ಟೆಲ್ಲ ಹೇಳಿದ ಬಳಿಕ ಮ್ಯಾಮೊಗ್ರಫಿಯ ಬಗ್ಗೆ ಸಮಾಜದಲ್ಲಿ ಇರುವ ತಪ್ಪುಕಲ್ಪನೆಗಳು ಮತ್ತು ಅಡ್ಡಿ ಆತಂಕಗಳ ಬಗ್ಗೆ ಪ್ರಸ್ತಾವಿಸದೆ ಇರಲಾಗದು. ಅರಿವಿನ ಕೊರತೆ, ನಿರ್ಲಕ್ಷ್ಯ ಮತ್ತು ಸಮಯದ ಕೊರತೆಯಿಂದಾಗಿ ಈ ಪರೀಕ್ಷೆಗಳೆಲ್ಲ ತಮಗೆ ಅಗತ್ಯವಿಲ್ಲ ಎಂಬುದಾಗಿ ಅನೇಕ ಮಹಿಳೆಯರು ಭಾವಿಸುತ್ತಾರೆ. ಅನೇಕ ಮಹಿಳೆಯರು ಭಯ ಮತ್ತು ಮುಜುಗರದ ಕಾರಣದಿಂದಾಗಿ ವೈದ್ಯರನ್ನು ಸಂದರ್ಶಿಸಲು ಹಿಂದೇಟು ಹಾಕುತ್ತಾರೆ. ಆದರೆ ಪ್ರತೀ ಮಹಿಳೆಯೂ ಒಂದು ವಾಸ್ತವ ಸಂಗತಿಯನ್ನು ಮನದಟ್ಟು ಮಾಡಿಕೊಳ್ಳಬೇಕು ಮತ್ತು ಆ ವಾಸ್ತವ ಏನು ಎಂದರೆ ಪ್ರತೀ ಮಹಿಳೆಗೂ ಸ್ತನ ಕ್ಯಾನ್ಸರ್‌ನ ಅಪಾಯ ತಪ್ಪಿದ್ದಲ್ಲ. ಆದಷ್ಟು ಬೇಗನೆ ಪತ್ತೆ ಹಚ್ಚುವುದು ಸ್ತನ ಕ್ಯಾನ್ಸರ್ ವಿರುದ್ಧ ಅತ್ಯುತ್ತಮ ಸಂರಕ್ಷಣೆಯಾಗಿದೆ. ಇದಲ್ಲದೆ, ಮ್ಯಾಮೊಗ್ರಫಿ ಮಾಡಿಸಿಕೊಂಡರೆ ವಿಕಿರಣದಿಂದಾಗಿ ಸ್ತನ ಮತ್ತು ಥೈರಾಯ್ಡ ಗ್ರಂಥಿಗಳಲ್ಲಿ ಕ್ಯಾನ್ಸರ್ ಉಂಟಾಗುತ್ತದೆ ಎಂಬ ಸಂದೇಶಗಳು ವ್ಯಾಟ್ಸ್‌ಆ್ಯಪ್ ಮತ್ತು ಇಮೇಲ್ ಗಳಲ್ಲಿ ಹರಿದಾಡುತ್ತವೆ. ಇದು ಕೂಡ ಸುಳ್ಳು ಎಂಬುದು ವಾಸ್ತವ. ಮ್ಯಾಮೊಗ್ರಾಮ್‌ನಲ್ಲಿ ಅತ್ಯಂತ ಕಡಿಮೆ ಡೋಸ್‌ನ ಎಕ್ಸ್‌ರೇ ಬಳಕೆಯಾಗುತ್ತದೆಯಾಗಿದ್ದು, ಇದು ಸಂಪೂರ್ಣ ಸುರಕ್ಷಿತ ಮಟ್ಟದ್ದಾಗಿರುತ್ತದೆ. ನಾವು ಜೀವಿಸುವ ಪರಿಸರದಲ್ಲಿ ಸಹಜವಾಗಿ ಇರುವ ಇಂತಹ ಕಡಿಮೆ ಪ್ರಮಾಣದ ವಿಕಿರಣಗಳಿಗೆ ನಾವೆಲ್ಲರೂ ದಿನನಿತ್ಯವೂ ಒಡ್ಡಿಕೊಂಡಿರುತ್ತೇವೆ.
ಮ್ಯಾಮೊಗ್ರಾಮ್ ಪರೀಕ್ಷೆ ಮತ್ತು ಕ್ಯಾನ್ಸರ್ ಉಂಟಾಗುವುದರ ನಡುವೆ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಕಳೆದ ನೂರಕ್ಕೂ ಹೆಚ್ಚು ವರ್ಷಗಳಲ್ಲಿ ನಡೆದಿರುವ ಅಧ್ಯಯನಗಳು ಸಾಬೀತುಪಡಿಸಿವೆ. ಆದಷ್ಟು ಬೇಗನೆ ಪತ್ತೆ ಹಚ್ಚುವುದೇ ಗುಣ ಹೊಂದುವುದರ ಕೀಲಿಕೈ ಎಂಬುದನ್ನುನಾವೆಲ್ಲರೂ ಮನದಟ್ಟು ಮಾಡಿಕೊಳ್ಳಬೇಕು. ನಮ್ಮ ದೇಶದಲ್ಲಿ ಸ್ತನ ಕ್ಯಾನ್ಸರ್‌ನ ಹೊರೆ ಅಗಾಧ ಪ್ರಮಾಣದಲ್ಲಿದ್ದು, ಸ್ತನ ಕ್ಯಾನ್ಸರ್ ಪ್ರಕರಣಗಳನ್ನು ಆದಷ್ಟು ಬೇಗನೆ ಪತ್ತೆ ಹಚ್ಚುವತ್ತ ನಾವು ನಮ್ಮ ಸಂಪನ್ಮೂಲಗಳನ್ನು ಹೆಚ್ಚಿಸಬೇಕಾಗಿದ್ದು, ಮ್ಯಾಮೊಗ್ರಫಿ ಇಂತಹ ಶಕ್ತಿಶಾಲಿ ವಿಧಾನಗಳಲ್ಲಿ ಒಂದಾಗಿದೆ. ನಿಯಮಿತವಾಗಿ ಮ್ಯಾಮೊಗ್ರಫಿ ಮಾಡಿಸಿಕೊಳ್ಳುವುದರ ಮೂಲಕ ಜೀವಗಳನ್ನುಉಳಿಸಬಹುದು. ಅದು ಶತ್ರುವಲ್ಲ; ಪ್ರಾಣ ಸ್ನೇಹಿತ.
ಡಾ.ಗ್ರಿಸೆಲ್ಡಾ ನೊರೋನ್ಹಾ
ಅಸಿಸ್ಟೆಂಟ್ ಪ್ರೊಫೆಸರ್
ರೇಡಿಯಾಲಜಿ ವಿಭಾಗ
ಕೆಎಂಸಿ ಆಸ್ಪತ್ರೆ,ಅತ್ತಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.