ಅನರ್ಹತೆಗೊಂಡವರಿಗೆ ಅಡ್ಡಿಯಂತಿದ್ದವರಿಗೆ ನಿಗಮ, ಮಂಡಳಿ ಸ್ಥಾನ
ಮೂವರು ಮಾಜಿ ಶಾಸಕರು, ಐದು ಮಂದಿ ಪರಾಜಿತ ಅಭ್ಯರ್ಥಿಗಳಿಗೆ ಸ್ಥಾನಮಾನ ಕಲ್ಪಿಸಿದ ಮುಖ್ಯಮಂತ್ರಿ
Team Udayavani, Oct 9, 2019, 9:00 PM IST
ಬೆಂಗಳೂರು: ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಅನರ್ಹತೆಗೊಂಡ ಶಾಸಕರು ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ವಿರೋಧ ತೋರಿ ಬಂಡಾಯವಾಗಿ ಸ್ಪರ್ಧಿಸಲು ಚಿಂತಿಸಿದ್ದ ಮೂವರು ಮಾಜಿ ಶಾಸಕರು ಸೇರಿದಂತೆ ಎಂಟು ಮಂದಿ ಪರಾಜಿತ ಅಭ್ಯರ್ಥಿಗಳಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಲು ಪ್ರಯತ್ನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದಾರೆ.
ಮಾಜಿ ಶಾಸಕರಾದ ಯು.ಬಿ.ಬಣಕಾರ್, ರಾಜು ಕಾಗೆ ಹಾಗೂ ಎನ್.ಎಸ್.ನಂದೀಶ್ ರೆಡ್ಡಿ ಅವರನ್ನು ಕ್ರಮವಾಗಿ ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣ ನಿಗಮ, ಬೆಳವಾಗಿ “ಕಾಡಾ’ ಹಾಗೂ ಬಿಎಂಟಿಸಿ ಅಧ್ಯಕ್ಷರನ್ನಾಗಿ ನೇಮಿಸಿ ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ.
ಜತೆಗೆ ಕಳೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಪರಾಜಿತ ಅಭ್ಯರ್ಥಿಗಳಾದ ಅಶೋಕ ನಿಂಗಯ್ಯಸ್ವಾಮಿ ಪೂಜಾರಿ ಅವರನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಬಸನಗೌಡ ತುರವಿಹಾಳ- ಕಾಡಾ (ತುಂಗಭದ್ರಾ ಯೋಜನೆ), ವಿ.ಎಸ್.ಪಾಟೀಲ್- ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಎಚ್.ಆರ್.ಗವಿಯಪ್ಪ- ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಹಾಗೂ ಶರತ್ ಬಚ್ಚೇಗೌಡ ಅವರನ್ನು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಆದರೆ ಶರತ್ ಬಚ್ಚೇಗೌಡ ಅವರು ಗೃಹ ಮಂಡಳಿ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ನೇಮಕ ಸಂಬಂಧ ಮುಖ್ಯಮಂತ್ರಿಗಳ ಆದೇಶ ಹೊರಬೀಳುತ್ತಿದ್ದಂತೆ ಹೊಸಕೋಟೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶರತ್ ಬಚ್ಚೇಗೌಡ, ನಾನು ಗೃಹ ಮಂಡಳಿ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಅಧಿಕಾರ ಕೂಡ ವಹಿಸಿಕೊಳ್ಳುವುದಿಲ್ಲ. ನಾನು ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಅವಕಾಶ ನೀಡದಿದ್ದರೆ ನನ್ನದೇ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಮೊದಲ ಸುತ್ತಿನಲ್ಲಿ ಎಂಟು ನಿಗಮ, ಮಂಡಳಿ, ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಿಸಿ ಯಡಿಯೂರಪ್ಪ ಅವರು ಬುಧವರ ಹೊರಡಿಸಿರುವ ಆದೇಶ ಆಧರಿಸಿ ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಈ ಸಂಬಂಧ ಬುಧವಾರವೇ ಆದೇಶ ಹೊರಡಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಸೂಚನೆ ನೀಡಿದ್ದಾರೆ.
ಹಿಂದಿನ ಮೈತ್ರಿ ಸರ್ಕಾರ ಪತನವಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣರಾದ ಅನರ್ಹತೆಗೊಂಡ ಶಾಸಕರ ಹಿತ ಕಾಪಾಡುವ ಜತೆಗೆ ಅವರ ರಾಜಕೀಯ ಭವಿಷ್ಯ ಮಂಕಾಗದಂತೆ ರಾಜ್ಯ ಸರ್ಕಾರ ಹಾಗೂ ಬಿಜೆಪಿಯು ಸಾಕಷ್ಟು ಎಚ್ಚರ ವಹಿಸುತ್ತಿದೆ. ಆ ಪ್ರಯತ್ನದ ಭಾಗವಾಗಿಯೇ ಈ ನೇಮಕ ಪ್ರಕ್ರಿಯೆ ನಡೆದಂತಿದೆ.
ಅನರ್ಹತೆಗೊಂಡ 17 ಶಾಸಕರ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದರೆ ಅನರ್ಹತೆಗೊಂಡ ಶಾಸಕರಿಗೆ ಪಕ್ಷದ ಟಿಕೆಟ್ ನೀಡುವುದು. ಒಂದೊಮ್ಮೆ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ಅವರು ಸೂಚಿಸಿದವರಿಗೆ ಟಿಕೆಟ್ ನೀಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಇದು ಪಕ್ಷದ ಪರಾಜಿತ ಅಭ್ಯರ್ಥಿಗಳು, ಮಾಜಿ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಮಾಜಿ ಶಾಸಕರ ಅತೃಪ್ತಿ
ಕೆ.ಆರ್.ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಡುತ್ತಲೇ ಬಂದ ಮಾಜಿ ಶಾಸಕ ಎನ್.ಎಸ್.ನಂದೀಶ್ ರೆಡ್ಡಿ ಅನರ್ಹತೆಗೊಂಡ ಶಾಸಕ ಬೈರತಿ ಬಸವರಾಜು ಅವರಿಗೆ ಪಕ್ಷದ ಟಿಕೆಟ್ ನೀಡುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಬೈರತಿ ಬಸವರಾಜು ಅವರಿಗೆ ತಲೆನೋವಾಗಿ ಪರಿಣಮಿಸಿತ್ತು. ಇದೀಗ ನಂದೀಶ್‌ರೆಡ್ಡಿ ಅವರನ್ನು ಬಿಎಂಟಿಸಿ ಉಪಾಧ್ಯಕ್ಷರನ್ನಾಗಿ ನೇಮಿಸಿ ಸಮಾಧಾನಪಡಿಸುವ ಪ್ರಯತ್ನ ನಡೆದಂತಿದೆ.
ಮಾಜಿ ಶಾಸಕ ರಾಜು ಕಾಗೆ ಕೂಡ ಕಾಗವಾಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಿಸಿದ್ದ ಅವರು ಅಗತ್ಯ ಬಿದ್ದರೆ ಪಕ್ಷೇತರರಾಗಿ ಕಣಕ್ಕಿಳಿಯುವ ಯೋಚನೆಯಲ್ಲಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿರುವ ಅಶೋಕ್ ನಿಂಗಯ್ಯಸ್ವಾಮಿ ಪೂಜಾರಿ ಅವರು ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಸ್ಪರ್ಧೆಗೆ ತೀವ್ರ ವಿರೋಧ ತೋರಿದ್ದಾರೆ. ಅಲ್ಲದೇ ಪಕ್ಷದ ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಸ್ಪರ್ಧಿಯುವ ಚಿಂತನೆಯಲ್ಲಿದ್ದಾರೆ. ಈ ಇಬ್ಬರಿಗೂ ಮಾಜಿ ಸಚಿವ ಉಮೇಶ್ ಕತ್ತಿಯವರ ಪರೋಕ್ಷ ಬೆಂಬಲವಿದೆ ಎನ್ನಲಾಗಿದೆ. ಹಾಗಾಗಿ ಇಬ್ಬರಿಗೂ ಸ್ಥಾನಮಾನ ನೀಡಿ ವಿಶ್ವಾಸದಲ್ಲಿಟ್ಟುಕೊಳ್ಳುವ ಪ್ರಯತ್ನ ನಡೆದಂತೆ ಕಾಣುತ್ತಿದೆ.
ಕಡಿಮೆ ಅಂತರದಲ್ಲಿ ಸೋತವರಿಗೆ ಸ್ಥಾನ
ಮಾಜಿ ಶಾಸಕ ಯು.ಬಿ.ಬಣಕಾರ್ ಅವರು ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ.ಪಾಟೀಲ್ ವಿರುದ್ಧ ಕೇವಲ 555 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿ ತಮಗೆ ಟಿಕೆಟ್ ನೀಡದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸುವ ಬಗ್ಗೆಯೂ ಚಿಂತಿಸಿದ್ದಾರೆ ಎನ್ನಲಾಗಿದೆ. ಇವರನ್ನು ಸಮಾಧಾನಪಡಿಸಿದ್ದ ಯಡಿಯೂರಪ್ಪ ಅವರು ಸ್ಥಾನಮಾನ ಕಲ್ಪಿಸಿದ್ದಾರೆ. ಹಾಗೆಯೇ ಮಸ್ಕಿ ಕ್ಷೇತ್ರದಲ್ಲಿ ಪ್ರತಾಪಗೌಡ ಪಾಟೀಲ್ ಅವರ ಎದುರು ಕೇವಲ 213 ಮತಗಳ ಅಂತರದಿಂದ ಸೋತಿದ್ದ ಬಸನಗೌಡ ತುರವಿಹಾಳ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರನ್ನು ಸಮಾಧಾನಪಡಿಸಲು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡದಂತಿದೆ. ಸದ್ಯಕ್ಕೆ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿಲ್ಲ.
ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಮ ಹೆಬ್ಟಾರ್ ಎದುರು ಕೇವಲ 1483 ಮತಗಳ ಅಂತರದಿಂದ ಪರಾಭವಗೊಂಡಿದ್ದ ವಿ.ಎಸ್.ಪಾಟೀಲ್ ಈ ಬಾರಿಯೂ ತಮಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅವರನ್ನು ತೃಪ್ತಿಪಡಿಸಲು ಸ್ಥಾನಮಾನ ನೀಡಿದಂತಿದೆ. ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಿ ಆನಂದ್ ಸಿಂಗ್ ವಿರುದ್ಧ ಸೋತಿರುವ ಎಚ್.ಆರ್. ಗವಿಯಪ್ಪ ಅವರು ಉಪಚುನಾವಣೆಯಲ್ಲಿ ಸ್ಪರ್ಧಿಸುವ ಚಿಂತನೆಯಲ್ಲಿದ್ದಾರೆ. ಇದರಿಂದ ಆನಂದ್ ಸಿಂಗ್ ಸ್ಪರ್ಧೆಗೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಅವರಿಗೂ ಸ್ಥಾನಮಾನ ನೀಡಿರುವಂತಿದೆ.
ಮುಖ್ಯವಾಗಿ ಕಳೆದ ಬಾರಿ ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ವಿರುದ್ಧ ಸ್ಪರ್ಧಿಸಿ 7597 ಮತಗಳ ಅಂತರದಿಂದ ಪರಾಭವಗೊಂಡಿದ್ದ ಶರತ್ ಬಚ್ಚೇಗೌಡ ಸದ್ಯ ಎದುರಾಗಿರುವ ಉಪಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವುದಾಗಿ ಯಡಿಯೂರಪ್ಪ ಅವರು ಈ ಹಿಂದೆ ಭರವಸೆ ನೀಡಿದ್ದರೂ ಅದನ್ನು ಶರತ್ ಬಚ್ಚೇಗೌಡ ನಯವಾಗಿ ತಿರಸ್ಕರಿಸಿದ್ದರು. ಅಲ್ಲದೇ ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಿಸಿ ಪಕ್ಷೇತರವಾಗಿ ಕಣಕ್ಕಿಳಿಯಲು ಚಿಂತಿಸಿದ್ದರು. ಇದು ಅನರ್ಹತೆಗೊಂಡಿರುವ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡರ ಪುತ್ರ ಪಕ್ಷೇತರವಾಗಿ ಕಣಕ್ಕಿಳಿದರೆ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂಬ ಕಾರಣಕ್ಕೆ ಅವರನ್ನು ಗೃಹ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಸಮಾಧಾನಪಡಿಸುವ ಕಸರತ್ತು ನಡೆಸಿದಂತಿದೆ. ಆದರೆ ಶರತ್ ಬಚ್ಚೇಗೌಡ ಅವರು ಮಂಡಳಿ ಅಧ್ಯಕ್ಷ ಸ್ಥಾನ ನಿರಾಕರಿಸಿರುವುದು ಬಿಕ್ಕಟ್ಟು ಇನ್ನಷ್ಟು ಉಲ್ಬಣವಾಗುವ ಲಕ್ಷಣ ಕಾಣುತ್ತಿದೆ.
ಹೀಗೆ ಅನರ್ಹತೆಗೊಂಡ ಶಾಸಕರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅದಕ್ಕೆ ಪೂರಕವಾಗಿ ಪಕ್ಷದ ಅಸಮಾಧಾನಿತರನ್ನು ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸುವ ಮೂಲಕ ಅರ್ನಹತೆಗೊಂಡವರ ಸ್ಪರ್ಧೆ ಹಾದಿ ಸುಗಮಗೊಳಿಸುವ ಪ್ರಯತ್ನ ನಡೆಸಿದಂತಿದೆ. ಇದು ಎಷ್ಟರ ಮಟ್ಟಿಗೆ ಪಕ್ಷದ ಅತೃಪ್ತರನ್ನು ಸಮಾಧಾನಪಡಿಸಲಿದೆ ಹಾಗೂ ಸರ್ಕಾರವನ್ನು ಸುಭದ್ರಗೊಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ನಿಗಮ, ಮಂಡಳಿ, ಪ್ರಾಧಿಕಾರಗಳ ನೂತನ ಅಧ್ಯಕ್ಷರು
ಅಶೋಕ್ ನಿಂಗಯ್ಯಸ್ವಾಮಿ ಪೂಜಾರಿ- ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ
ಭರಮಗೌಡ (ರಾಜು) ಕಾಗೆ- ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮತ್ತು ಮಲಪ್ರಭಾ- ಘಟಪ್ರಭಾ ಯೋಜನೆ (ಕಾಡಾ) ಅಧ್ಯಕ್ಷ
ಯು.ಬಿ.ಬಣಕಾರ್- ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣ ನಿಗಮ ಅಧ್ಯಕ್ಷ
ಬಸನಗೌಡ ತುರವಿಹಾಳ- ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ತುಂಗಭದ್ರಾ ಯೋಜನೆ - ಕಾಡಾ) ಅಧ್ಯಕ್ಷ
ವಿ.ಎಸ್. ಪಾಟೀಲ್- ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ
ಎಚ್.ಆರ್.ಗವಿಯಪ್ಪ- ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ
ಎನ್.ಎಸ್.ನಂದೀಶ್ ರೆಡ್ಡಿ- ಬಿಎಂಟಿಸಿ ಉಪಾಧ್ಯಕ್ಷ
ಶರತ್ ಬಚ್ಚೇಗೌಡ- ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.