ದಿಲ್ಲಿಗೆ ಬಿಎಸ್‌ವೈ ಖಾತೆ ಕುತೂಹಲ
ಅನರ್ಹ ಶಾಸಕರ ಬಗ್ಗೆ ಚರ್ಚೆ?
Team Udayavani, Aug 23, 2019, 6:15 AM IST
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ಯಂತ್ರ ಸಹಜ ಸ್ಥಿತಿಗೆ ಮರಳುವ ಲಕ್ಷಣ ಕಾಣುತ್ತಿದ್ದಂತೆಯೇ, ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಕಂಗಾಲಾಗಿರುವ ಅನರ್ಹಗೊಂಡಿರುವ ಕೆಲ ಶಾಸಕರು ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು, ಬಿಜೆಪಿ ವರಿಷ್ಠರ ಭೇಟಿ ನಿರೀಕ್ಷೆಯಲ್ಲಿದ್ದಾರೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ರಾತ್ರಿ ದೆಹಲಿಗೆ ತೆರಳಿದ್ದು, ಕುತೂಹಲ ಮೂಡಿಸಿದೆ.
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆ ಹಂಚಿಕೆ ಸಂಬಂಧ ವರಿಷ್ಠರನ್ನು ಭೇಟಿಯಾಗಿ ಚರ್ಚಿಸಲು ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ ಎಂದು ಆಪ್ತ ವಲಯ ಹೇಳುತ್ತಿದೆ. ಆದರೆ ಅನರ್ಹಗೊಂಡಿರುವ ಶಾಸಕರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಬಿಜೆಪಿ ವರಿಷ್ಠರಿಂದ ಖಾತರಿ ಪಡೆಯುವ ಸಲುವಾಗಿಯೇ ದೆಹಲಿಗೆ ತೆರಳಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಯಡಿಯೂರಪ್ಪ ರಾಜಧಾನಿ ಪ್ರವಾಸ ಕೈಗೊಂಡಿದ್ದಾರೆ ಎಂಬ ಮಾತುಗಳೂ ಇವೆ.
ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿರುವುದರಿಂದ ಕೇವಲ ಬಿಜೆಪಿ ಶಾಸಕರಷ್ಟೇ ಅಲ್ಲ, ಇವರ ವಿರುದ್ಧ ಗೆದ್ದು ಈಗ ಅನರ್ಹರಾಗಿರುವ ಮಹೇಶ್ ಕುಮಟಳ್ಳಿ ಅವರೂ ಆತಂಕಗೊಂಡಿದ್ದಾರೆ. ಒಂದೊಮ್ಮೆ ಇಲ್ಲಿ ಉಪಚುನಾವಣೆ ನಡೆದರೆ ಸವದಿ ಅವರೇ ಅಭ್ಯರ್ಥಿಯಾಗಬಹುದು ಎಂಬ ಆತಂಕ ಕುಮಟಳ್ಳಿ ಅವರದ್ದು ಎಂದು ಹೇಳಲಾಗುತ್ತಿದೆ.
ಹಾಗೆಯೇ ತಮಗೆ ಹಂಚಿಕೆ ಮಾಡುವುದಾಗಿ ಭರವಸೆ ನೀಡಿದ್ದ ಖಾತೆಗಳನ್ನು ಇತರರಿಗೆ ನೀಡುವ ಬಗ್ಗೆ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಯಡಿಯೂರಪ್ಪರನ್ನು ಭೇಟಿಯಾಗಿ ಅನರ್ಹಗೊಂಡಿರುವ ಶಾಸಕರು ಸುದೀರ್ಘ ಚರ್ಚೆ ನಡೆಸಿದ್ದರು. ಸದ್ಯ ಕೆಲ ಅನರ್ಹಗೊಂಡ ಶಾಸಕರ ಕೆಲಸ ಕಾರ್ಯಗಳು, ಅವರು ಬಯಸಿದ ವರ್ಗಾವಣೆಗಳಿಗೆ ಸಿಎಂ ಸ್ಪಂದಿಸಿದ್ದಾರೆ. ಮುಂದೆಯೂ ಹಿಂದಿನ ಮಾತುಕತೆಯಂತೆ ನೀಡಿದ್ದ ಭರವಸೆಗಳ ಈಡೇ ರಿಸುವ ಬಗ್ಗೆ ವರಿಷ್ಠರಿಂದ ಭರವಸೆ ಕೊಡಿಸಬೇಕು ಎಂಬುದು ಅನರ್ಹಗೊಂಡಿರುವ ಶಾಸಕರ ಒತ್ತಾಯ ಎಂದು ಹೇಳಲಾಗಿದೆ.
ಅನರ್ಹಗೊಂಡ ಶಾಸಕರ ಪೈಕಿ ಎಚ್.ವಿಶ್ವನಾಥ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಪ್ರತಾಪಗೌಡ ಪಾಟೀಲ್, ಕೆ.ಗೋಪಾಲಯ್ಯ, ಬೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಇತರರು ದೆಹಲಿಗೆ ತೆರಳಿದ್ದಾರೆ. ಜತೆಗೆ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಸೇರಿದಂತೆ ಕೆಲವರು ದೆಹಲಿಯಲ್ಲಿದ್ದಾರೆ. ಈ ನಡುವೆ, ಸೋತರೂ ಸಚಿವ ಸ್ಥಾನ ಗಿಟ್ಟಿಸಿಕೊಂಡು ಎಲ್ಲರ ಕಣ್ಣು ಕೆಂಪಾಗಿಸಿರುವ ಲಕ್ಷ್ಮಣ ಸವದಿ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದೆ ಎನ್ನಲಾಗಿದೆ.
ಖಾತೆ ಹಂಚಿಕೆ- ಶಾಸಕರ ಅತೃಪ್ತಿ ಬಗ್ಗೆ ಚರ್ಚೆ?: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗುರುವಾರ ರಾತ್ರಿ ದೆಹಲಿಗೆ ತೆರಳಿದ್ದು, ಖಾತೆ ಹಂಚಿಕೆ ಸೇರಿದಂತೆ ಸಂಪುಟ ವಿಸ್ತರ ಣೆ ಬಳಿಕ ಉಂಟಾಗಿರುವ ಕೆಲ ಶಾಸಕರ ಅತೃಪ್ತಿ ಬಗ್ಗೆ ವರಿಷ್ಠರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಶುಕ್ರವಾರ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗುವ ಚಿಂತನೆಯಲ್ಲಿದ್ದಾರೆ ಎಂದು ಹೇಳಲಾಗಿದೆ.
ಶಾ ಭೇಟಿ ಮಾಡ್ತೇವೆ: ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವಿರುವುದರಿಂದ ದೆಹಲಿಗೆ ಭೇಟಿ ನೀಡಿದ್ದು, ವಕೀಲರೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ. ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೂ ಸಮಯ ಕೋರಲಾಗುವುದು, ಭೇಟಿ ಸಂದರ್ಭದಲ್ಲಿ ನೆರೆ ಪರಿಹಾರಕ್ಕೆ ಹೆಚ್ಚಿನ ಅನುದಾನ ಕೋರಲಾಗುವುದು ಎಂದು ಅವರು ತಿಳಿಸಿದ್ದಾರೆ.
ದೆಹಲಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜಕೀನಾಮೆ ನೀಡಿರಬಹುದು. ಆದರೆ ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ಪರಿಹಾರ ಕೋರಲಾಗುವುದು ಎಂದು ತಿಳಿಸಿದರು.
ಅನರ್ಹಗೊಂಡಿರುವ ಶಾಸಕರು ಬ್ಲೂ ಬಾಯ್ಸ ಆದರೆ ಡಿ.ಕೆ.ಶಿವಕುಮಾರ್ ಅವರು ರೆಡ್ ಬಾಯ್ ನಾ?ಡಿ.ಕೆ.ಶಿವಕುಮಾರ್ ಅವರು ತಮಾಷೆಗೆ ಬಾಂಬೆ ಬ್ಲೂ ಬಾಯ್ಸ ಅಂತಾ ಹೇಳಿದ್ದಾರೆ. ಅವರು ನಮ್ಮ ಸ್ನೇಹಿತರು ಬಿಡಿ. ಪ್ರಮುಖ ಖಾತೆಗಳನ್ನು ನೀಡಬೇಕು ಎಂದು ಸಲಹೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೂ ಅಭಿನಂದನೆ ಸಲ್ಲಿಸಲಾಗುವುದು ಎಂದು ನಗುತ್ತಾ ಹೇಳಿದರು.
ವರಿಷ್ಠರೊಂದಿಗೆ ಮಾತುಕತೆ
ಅನರ್ಹಗೊಂಡ ಶಾಸಕರಿಗೂ ಆಯ್ದ ಖಾತೆ ಹಂಚಿಕೆ ಮಾಡಬೇಕಿರುವ ಹಿನ್ನೆಲೆಯಲ್ಲಿ ವರಿಷ್ಠರೊಂದಿಗೆ ಖಾತೆ ಹಂಚಿಕೆ ಬಗ್ಗೆ ಮುಖ್ಯಮಂತ್ರಿಗಳು ಚರ್ಚೆ ನಡೆಸುವ ಸಾಧ್ಯತೆ ಇದೆ. ಒಮ್ಮೆ ವರಿಷ್ಠರೊಂದಿಗೆ ಚರ್ಚಿಸಿ ಖಾತೆ ಹಂಚಿಕೆ ಮಾಡಿದರೆ ಮುಂದೆ ಸಚಿವರು ಅಪಸ್ವರ ಎತ್ತಲು ಸಾಧ್ಯವಿರುವುದಿಲ್ಲ. ಜತೆಗೆ ಸಂಪುಟ ವಿಸ್ತರಣೆ ಬಳಿಕ ಕರಾವಳಿ, ಹೈದರಾಬಾದ್ ಕರ್ನಾಟಕ ಸೇರಿದಂತೆ ಇತರೆ ಕೆಲ ಪ್ರದೇಶಗಳ ಶಾಸಕರು ಅಸಮಾಧಾನಗೊಂಡಿರುವ ಬಗ್ಗೆಯೂ ವರಿಷ್ಠರಿಗೆ ಮಾಹಿತಿ ನೀಡುವ ಸಾಧ್ಯತೆ ಇದೆ.
ಕತ್ತಿಯತ್ತ ಗಮನ
ಶಾಸಕರಲ್ಲದ ಲಕ್ಷ್ಮಣ ಸವದಿ ಅವರನ್ನು ಸಂಪುಟಕ್ಕೆ ಸೇರಿಸಿರುವ ಬಗ್ಗೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಶಾಸಕ ಉಮೇಶ್ ಕತ್ತಿಯತ್ತ ಈಗ ರಾಜ್ಯ ರಾಜಕೀಯದ ಗಮನ ಕೇಂದ್ರೀಕೃತವಾಗಿದೆ. ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದ ಕತ್ತಿ ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತಾರೆ ಎನ್ನುವ ಗುಲ್ಲೆದ್ದಿತ್ತು. ಇನ್ನೊಂದೆಡೆ ಅವರು ಬುಧವಾರ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ, ‘ಕತ್ತಿಯವರ ಜತೆ ಸಂಪರ್ಕದಲ್ಲಿದ್ದೇವೆ. ಅವರು ಬಿಜೆಪಿ ಬಿಡುವುದಿಲ್ಲ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.