By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
ನಾನೇ.. ನಾನೇ ಎಂದ ಅಪೂರ್ವ ಸಹೋದರರು ಎಲ್ಲಿ ಹೋದರು?, ಸಿ.ಪಿ.ಯೋಗೇಶ್ವರ್ ಕನ್ವರ್ಟೆಡ್ ಕಾಂಗ್ರೆಸ್ ಜೆಂಟಲ್‌ಮ್ಯಾನ್: ಮಾಜಿ ಪ್ರಧಾನಿ ಟೀಕೆ
Team Udayavani, Nov 6, 2024, 7:50 AM IST
ರಾಮನಗರ: ಮುಖ್ಯಮಂತ್ರಿ ಅವರ ಗರ್ವದ ಸೊಕ್ಕನ್ನು ಮುರಿಯಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಗುಡುಗಿದ್ದಾರೆ.
ಚನ್ನಪಟ್ಟಣ ಚುನಾವಣೆ ಪ್ರಚಾರದಲ್ಲಿ ಮಂಗಳವಾರ ಮಾತನಾಡಿ, 6 ತಿಂಗಳಿಂದ ಅಣಕದ ಮಾತು. ಯಾರು ಅಭ್ಯರ್ಥಿ ಅಂದರೆ ನಾನೇ.. ನಾನೇ…ನಾನೇ.. ನಾನೇ.. ಆ ನಾನೇ ಎನ್ನುತ್ತಿದ್ದವರು ಎಲ್ಲಿ ಹೋದರು ಈಗ? ಈಗ ಅಪೂರ್ವ ಸಹೋದರರು ತೀರ್ಮಾನ ಮಾಡಿದ್ದಾರೆ. ನಾನು ಅವರ ಹೆಸರು ಹೇಳುವುದಿಲ್ಲ. ಅವರ ಹೆಸರು ಹೇಳಿದರೆ ದೇವೇಗೌಡರು ವೆಂಟಿಲೇಟರ್‌ನಲ್ಲಿ ಬಂದು ಭಾಷಣ ಮಾಡೋಕೆ ಬರುತ್ತಾರೆ ಎಂದು ಲಘುವಾಗಿ ಮಾತಾಡಿದರು. ಆದರೆ ನಾನು ನಿಮ್ಮ ಮುಂದೆ ಕೂತಿದ್ದೇನೆ. ಯಾವ ವೆಂಟಿಲೇಟರ್ ಇಲ್ಲ, ನನ್ನ ಕೈ ಕೂಡ ನಡುಗುತ್ತಿಲ್ಲ ಎಂದು ಡಿ.ಕೆ. ಸಹೋದರರ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರನ್ನು ಕನ್ವರ್ಟೆಡ್ ಕಾಂಗ್ರೆಸ್ ಜೆಂಟಲ್‌ಮ್ಯಾನ್ ಎಂದ ಗೌಡರು, ದೇವೇಗೌಡರ ಕೈ ನಡುಗುತ್ತವೆ, ಅವರು ಪ್ರಚಾರಕ್ಕೆ ಬರುತ್ತಾರಂತೆ ಎಂದು ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್‌ಮ್ಯಾನ್ ಹೇಳುತ್ತಾರೆ. ನಾನು ಪ್ರಚಾರಕ್ಕೆ ಬರುತ್ತೇನೆ. 11ನೇ ತಾರೀಕಿನವರೆಗೂ ಪ್ರಚಾರಕ್ಕೆ ಬರುತ್ತೇನೆ ಎಂದು ತಿರುಗೇಟು ನೀಡಿದರು.
ಆ್ಯಂಬುಲೆನ್ಸ್‌ನಲ್ಲಿ ಬಂದಿಲ್ಲ
ನಾನು ಆ್ಯಂಬುಲೆನ್ಸ್‌ನಲ್ಲೂ ಬಂದಿಲ್ಲ, ವ್ಹೀಲ್ ಚೇರ್ ಮೂಲಕವೂ ಬಂದಿಲ್ಲ. ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ತೋರಿಸಲು ಬಂದಿದ್ದೇನೆ. ನನ್ನ ಕೊನೆ ಉಸಿರಿರುವವರೆಗೆ ಈ ನಾಡಿಗಾಗಿ ಹೋರಾಡುತ್ತೇನೆ ಎಂದರು. ನನಗೆ ನಿಮ್ಮ ಆಶೀರ್ವಾದ ಇದೆ. ನಾನು ಶತಾಯುಷಿ ಆಗುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಬದುಕಿರುತ್ತೇನೆ ಎನ್ನುವ ಭರವಸೆ ಹೊಂದಿದ್ದೇನೆ.
ದೇವರ, ನಿಮ್ಮೆಲ್ಲರ ಆಶೀರ್ವಾದ ಇದ್ದರೆ ನೂರು ವರ್ಷ ಬದುಕುತ್ತೇನೆ. ಆದರೆ ಕಾಂಗ್ರೆಸ್ ನಾಯಕರಿಗೆ ನನ್ನ ಆರೋಗ್ಯದ ಬಗ್ಗೆಯೇ ಚಿಂತೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ನನ್ನ 60 ವರ್ಷಗಳ ರಾಜಕೀಯ ಜೀವನದಲ್ಲಿ ಎಂದೂ ನೋಡದ ಅತ್ಯಂತ ಕೆಟ್ಟ ರಾಜಕಾರಣವನ್ನು ನಾನು ಇಂದು ನೋಡುತ್ತಿದ್ದೇನೆ. ವಿರೋಧ ಪಕ್ಷದ ನಾಯಕ ಮಾತನಾಡಿದರೆ ಕನಿಷ್ಠ ಬೆಲೆ ಕೊಡುವ ಸೌಜನ್ಯವಿಲ್ಲ ಎಂದು ದೂರಿದರು.
ಕಣ್ಣೀರಿನ ಬಗ್ಗೆ ವ್ಯಂಗ್ಯ: ನಿಖಿಲ್ ಭಾವುಕ
ಚನ್ನಪಟ್ಟಣ: ನನ್ನ ಕಣ್ಣೀರಿನ ಬಗ್ಗೆ ಬಹಳ ಜನ ವ್ಯಂಗ್ಯ ಮಾಡ್ತಾರೆ. ಮನುಷ್ಯತ್ವ, ಭಾವನಾತ್ಮಕ ಮನೋಭಾವ ಇರುವವರಿಗೆ ಮಾತ್ರ ಕಣ್ಣೀರು ಬರುವುದು, ಕಟುಕರಿಗಲ್ಲ ಎಂದು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭಾವುಕವಾಗಿ ನುಡಿದರು.
ಸುದ್ದಿಗಾರರ ಜತೆ ಮಾತನಾಡಿ, ಹಣೆಬರಹ, ಅದೃಷ್ಟ ಇಲ್ಲ ಅನ್ನುತ್ತಾರೆ. ನನ್ನ ಹಣೆಬರಹ ಬರೆಯುವವರು ಕ್ಷೇತ್ರದ ಜನ. ಕಾಂಗ್ರೆಸ್ ನಾಯಕರು ನನ್ನನ್ನು ಹೊರಗಿನವರು ಅನ್ನುತ್ತಾರೆ. ನನಗೀಗ 36 ವರ್ಷ ವಯಸ್ಸು. ನಾನು ಹುಟ್ಟಿದ 5 ವರ್ಷದ ಹಿಂದಿನಿಂದಲೂ ದೇವೇಗೌಡರು ಮತ್ತು ಕುಮಾರಣ್ಣರ ಸಂಬಂಧ ಚನ್ನಪಟ್ಟಣಕ್ಕೆ ಇದೆ. ದೇವೇಗೌಡರ ಇಗ್ಗಲೂರು ಅಣೆಕಟ್ಟಿನ ಕೊಡುಗೆಯಿಂದ ಜನ ನನ್ನನ್ನು ಪ್ರೀತಿಯಿಂದ ಹರಸುತ್ತಿದ್ದಾರೆ ಎಂದರು.
“ಕಟುಕರಿಗೆ ಕಣ್ಣೀರು ಬರುವುದಿಲ್ಲ, ಹೃದಯವಿ ರುವ ಭಾವುಕ ಜೀವಿಗಳಿಗೆ ಮಾತ್ರ ಕಣ್ಣೀರು ಬರುತ್ತದೆ. ನಾನು ಇಲ್ಲಿಗೆ ನನ್ನ ಮೊಮ್ಮಗನನ್ನು ಗೆಲ್ಲಿಸಲು ಬರುತ್ತಿಲ್ಲ. ಈ ನಾಡಿನ ಜನರ ಕಷ್ಟಕ್ಕೆ ಸ್ಪಂದಿಸಲು ಬಂದಿದ್ದೇನೆ. ನನ್ನ ಮೊಮ್ಮಗ ಈ ಕ್ಷೇತ್ರವನ್ನು ಹೇಗೆ ಬೆಳೆಸುತ್ತಾನೆ ಎಂದು ನಾನು ನೋಡುತ್ತೇನೆ. ಅದಕ್ಕಾಗಿ ಅವನ ಪರವಾಗಿ ಮತ ಕೇಳುತ್ತಿದ್ದೇನೆ.” – ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uniform Civil Code: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಡಿ.ಕೆ.ಶಿವಕುಮಾರ್
ಗುರಿ ಸಾಧಿಸದಿದ್ರೆ ಅಧಿಕಾರಿಗಳೇ ಹೊಣೆ: ಚಲುವರಾಯಸ್ವಾಮಿ
KAS ಹುದ್ದೆ ಭರ್ತಿಯಲ್ಲಿ ಲೋಪ: ಕೆಪಿಎಸ್‌ಸಿಗೆ ಕೆಎಟಿಯಿಂದ ನೋಟಿಸ್
Mallikarjun Kharge: ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ 5 ಸಾವಿರ ನೀಡಿ
SSLC ಪ್ರವೇಶ ಪತ್ರ ತಿದ್ದುಪಡಿಗೆ ಫೆ.10ರವರೆಗೆ ಅವಕಾಶ