By Election: ಎಚ್‌ಡಿಕೆ ವಿರುದ್ಧ ಸಚಿವ ಜಮೀರ್ ಅವಹೇಳನಕಾರಿ ಹೇಳಿಕೆ; ಜೆಡಿಎಸ್ ಆಕ್ರೋಶ
ಚೌಕಟ್ಟು ಮೀರಿ ಮಾತಾಡಬಾರದು: ಬಿಎಸ್‌ವೈ, ಜನಾಂಗೀಯ ದಾಳಿ, ನಿಂದನೆಗಳ ಮಾಡುವುದೇ ಕಾಂಗ್ರೆಸ್ಸಿಗರ ಚಾಳಿ ಎಂದ ಜೆಡಿಎಸ್
Team Udayavani, Nov 11, 2024, 6:12 PM IST
ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರದ ವೇಳೆ ವಸತಿ ಹಾಗೂ ವಕ್ಫ್ ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಭಾಷಣದ ಮಧ್ಯೆ “ಕರಿಯ ಕುಮಾರಸ್ವಾಮಿ” ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಈ ಮೂಲಕ ಕಪ್ಪು ವರ್ಣದ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಜನತಾದಳ (ಜಾತ್ಯತೀತ) ಆರೋಪಿಸಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ರಾತ್ರಿ ಪ್ರಚಾರದ ವೇಳೆ ಬಹಿರಂಗ ಸಭೆಯಲ್ಲಿ ಸಾರ್ವಜನಿಕವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು, ಜಮೀರ್ ಅಹ್ಮದ್ ಖಾನ್ “ಕಾಲಾ ಕುಮಾರಸ್ವಾಮಿ” (ಕರಿಯ ಕುಮಾರಸ್ವಾಮಿ) ಎಂದು ಉರ್ದು ಭಾಷೆಯಲ್ಲಿ ನಿಂದಿಸಿದ್ದಾರೆ. ಈ ಮೂಲಕ ಕಪ್ಪು ವರ್ಣದವರ ಜನಾಂಗೀಯ ನಿಂದನೆ ಮಾಡಿ ವರ್ಣಭೇದ ತಾರತಮ್ಯ ಎಸಗಿದ್ದಾರೆ. ಅಷ್ಟೆ ಅಲ್ಲದೇ ಒಂದು ಸಮುದಾಯವನ್ನು ಎತ್ತಿಕಟ್ಟಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಲು ಜನರನ್ನು ಪ್ರಚೋದಿಸಿರುವ ಸಚಿವ ಜಮೀರ್ ಅಹ್ಮದ್ ಬಾಯಿಂದ ಬಂದಿರುವ ಈ ಜನಾಂಗೀಯ ದ್ವೇಷದ ಮಾತುಗಳು ಅಕ್ಷಮ್ಯ ಅಪರಾಧ ಎಂದು ಜನತಾದಳ ಟ್ವೀಟ್ ಮಾಡಿ ಟೀಕಿಸಿದೆ.
ಈ ಕೂಡಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಮನಗರ ಜಿಲ್ಲಾ ಪೊಲೀಸರು ಜನಾಂಗೀಯ ನಿಂದನೆ, ವರ್ಣಭೇದ ಹಾಗೂ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿರುವ ಸಚಿವ ಜಮೀರ್ ಅಹ್ಮದ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಉಳಿಸಿಕೊಂಡಿದ್ದರೇ ಮೊದಲು ಈ ಜನಾಂಗೀಯ ದ್ವೇಷಿ ಸಚಿವ ಜಮೀರ್ ರಾಜೀನಾಮೆ ಪಡೆಯಬೇಕು ಎಂದು ಜಾತ್ಯತೀತ ಜನತಾದಳ ಪಕ್ಷವು ಆಗ್ರಹಿಸಿದೆ.
ನಿಮ್ಮ ಕುಟುಂಬವನ್ನೇ ಖರೀದಿ
ಚನ್ನಪಟ್ಟಣದಲ್ಲಿ ರವಿವಾರ ಮಾತನಾಡಿದ್ದ ಜಮೀರ್, “ಯೋಗೇಶ್ವರ್ ನಮ್ಮ ಪಕ್ಷದಿಂದ ರಾಜಕೀಯ ಪ್ರಾರಂಭ ಮಾಡಿದರು. ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದರು. ಜೆಡಿಎಸ್‌ಗೆ ಹೋಗಬೇಕು ಅಂದುಕೊಂಡಿದ್ದರು. ಆದರೆ ಕರಿಯ ಕುಮಾರಸ್ವಾಮಿ ಬಿಜೆಪಿಗಿಂತ ಡೇಂಜರ್ ಅಂತ ಜೆಡಿಎಸ್‌ಗೆ ಹೋಗಿಲ್ಲ. ಈ ಹಿಂದೆ ಹಿಜಾಬ್ ಬೇಡ ಅಂದಿದ್ದೀರಿ. ಈಗ ನಿನಗೆ ಮುಸಲ್ಮಾನರ ಮತ ಬೇಕಾ, ಕುಮಾರಸ್ವಾಮಿ ಬಿಜೆಪಿಗೆ ಹೋಗಿ ಮುಸಲ್ಮಾನರನ್ನು ಖರೀದಿ ಮಾಡುತ್ತಾನಂತೆ. ಏ ಕುಮಾರಸ್ವಾಮಿ ನಿನ್ ರೇಟು ಹೇಳು, ಮುಸಲ್ಮಾನರು ಒಂದೊಂದ್ ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡುತ್ತಾರೆ’ ಎಂದು ಉರ್ದುವಿನಲ್ಲಿ ಟೀಕಿಸಿದ್ದರು.
ನಿಂದಿಸುವುದು ಕಾಂಗ್ರೆಸ್ ಚಾಳಿ:
ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ನಾಯಕರ ಮೇಲೆ ಜನಾಂಗೀಯ ದಾಳಿ, ನಿಂದನೆಗಳ ಮಾಡುವುದೇ ಕಾಂಗ್ರೆಸ್ಸಿಗರ ಚಾಳಿ. ಇದು ಕಾಂಗ್ರೆಸ್ ಪಕ್ಷದ ನಿಜಮುಖ. ದ್ವೇಷ ಹರಡುವುದು, ವಿಭಜಿಸುವುದು ಮತ್ತು ಅಗೌರವ ತೋರುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ. ಇದಕ್ಕೆಲ್ಲ ಜೆಡಿಎಸ್ ಪಕ್ಷ ಹೆದರಿ ಕೂರುವುದಿಲ್ಲ ಎಂದು ಹೇಳಿದೆ.
ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ವೇಳೆ ವಸತಿ ಖಾತೆ ಸಚಿವ @BZZameerAhmedK ಜನಾಂಗೀಯ ನಿಂದನೆ ಮಾಡಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ (10-11-2024) ರಾತ್ರಿ ಪ್ರಚಾರದ ವೇಳೆ ಬಹಿರಂಗ ಸಭೆಯಲ್ಲಿ ಸಾರ್ವಜನಿಕವಾಗಿ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರನ್ನು, ಜಮೀರ್ ಅಹ್ಮದ್ ಖಾನ್ “ಕಾಲಾ… pic.twitter.com/fPOGcbgBgX
— Janata Dal Secular (@JanataDal_S) November 11, 2024
ಚೌಕಟ್ಟು ಮೀರಬಾರದು: ಬಿಎಸ್‌ವೈ
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಕೇಂದ್ರ ಸಚಿವ ಕುಮಾರಸ್ವಾಮಿ ಕುರಿತು ಮಾಡಿರುವ ಅವಹೇಳನಕಾರಿ ಟೀಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಯಡಿಯೂರಪ್ಪ, ಯಾರೋ ಮಾಡಿದ ಕಾಮೆಂಟ್ ತಾನ್ಯಾಕೆ ಉತ್ತರಿಸಬೇಕು? ಆದರೆ ಯಾರೇ ಆಗಲಿ ಚೌಕಟ್ಟು ಮೀರಿ ಮಾತಾಡಬಾರದು ಎಂದು ಸಲಹೆ ನೀಡಿದರು.
ಜಮೀರ್ ಹೇಳಿಕೆಗೆ ಕೇಂದ್ರ ಸಚಿವ ಕಿರಣ್ ರಿಜಿಜು ಆಕ್ಷೇಪ:
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಹೇಳಿಕೆಯನ್ನು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಕಿರಣ್ ರಿಜಿಜು ತೀವ್ರವಾಗಿ ಖಂಡಿಸಿದ್ದಾರೆ. ʼಕಾಲಾ ಕುಮಾರಸ್ವಾಮಿʼ ಎಂದಿರುವುದು ಜನಾಂಗೀಯ ನಿಂದನೆ. ಇದು ರಾಹುಲ್ ಗಾಂಧಿಯವರ ಸಲಹೆಗಾರರೊಬ್ಬರು ದಕ್ಷಿಣ ಭಾರತದವರು ಆಫ್ರಿಕನ್ನರ ರೀತಿ, ಈಶಾನ್ಯ ಭಾರತೀಯರು ಚೈನೀಸರ ರೀತಿ, ಉತ್ತರ ಭಾರತದವರು ಅರಬ್‌ರಂತೆ ಎಂದಿದ್ದರು. ಅದರಂತೆ ಇದೂ ಜನಾಂಗೀಯ ನಿಂದನೆ ಎಂದರು.
“ದೇವೇಗೌಡರು ಚಾಮರಾಜ ಪೇಟೆಯಲ್ಲಿ ಜಮೀರ್ ಅವರನ್ನು ಗೆಲ್ಲಿಸಿ ರಾಜಕೀಯ ಜೀವನ ನೀಡಿದ್ದರು. ಈಗ ಅದೇ ಜಮೀರ್ ಗೌಡರ ಕುಟುಂಬ ಖರೀದಿಸುತ್ತೇನೆ ಎಂದಿದ್ದಾರೆ. ಇದು ಒಕ್ಕಲಿಗರನ್ನು ಖರೀದಿ ಸುತ್ತೇವೆ ಎಂದು ಅರ್ಥವೇ ಅಥವಾ ಹಿಂದೂ ಗಳನ್ನು ಖರೀದಿಸುತ್ತೇವೆ ಎಂದು ಅರ್ಥವೇ?” -ಆರ್. ಅಶೋಕ್, ವಿಧಾನಸಭೆ ವಿಪಕ್ಷ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.