By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
ಕ್ಷೇತ್ರ ಸಮೀಕ್ಷೆ: ಆಡಳಿತ, ವಿಪಕ್ಷಗಳಿಗೆ ಪ್ರತಿಷ್ಠೆ ಕಣ ಬೊಮ್ಮಾಯಿ ಕುಟುಂಬದ 3ನೇ ತಲೆಮಾರಿಗೆ ಅಗ್ನಿಪರೀಕ್ಷೆ
Team Udayavani, Nov 9, 2024, 7:50 AM IST
ಹಾವೇರಿ: ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದ್ದು, ವಾಕ್ಸಮರ ತಾರಕಕ್ಕೇರಿದೆ. ಮತ ಗಳಿಕೆಗಾಗಿ ಉಭಯ ಪಕ್ಷಗಳ ನಾಯಕರ ಆರೋಪ-ಪ್ರತ್ಯಾರೋಪ, ಸವಾಲ್-ಜವಾಬ್ ಜೋರಾಗಿದೆ.
ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಕಣಕ್ಕಿಳಿದಿದ್ದರೆ, ಕಾಂಗ್ರೆಸ್ ನಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಯಾಸೀರ್‌ಖಾನ್ ಪಠಾಣ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕೆಆರ್‌ಎಸ್ ಪಕ್ಷದ ರವಿಕೃಷ್ಣ ರೆಡ್ಡಿ ಸೇರಿ ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಶಿಗ್ಗಾಂವಿಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಅದರಲ್ಲೂ ಈ ಉಪಚುನಾವಣೆ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರದ ನಡುವೆ ನಡೆ ಯುತ್ತಿರುವ ಕಾಳಗದಂತೆ ಬಿಂಬಿತವಾಗುತ್ತಿದೆ. ಬಿಜೆಪಿ ಭದ್ರಕೋಟೆ ಯಾಗಿರುವ ಶಿಗ್ಗಾಂವಿ ಯನ್ನು ಈ ಬಾರಿ ಶತಾಯ ಗತಾಯ ಕೈ ವಶ ಮಾಡಿಕೊಳ್ಳಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದೆ.
ಕ್ಷೇತ್ರದಲ್ಲಿ ಸಚಿವರಾದ ಸತೀಶ ಜಾರಕಿ ಹೊಳಿ, ಈಶ್ವರ ಖಂಡ್ರೆ, ಶಿವಾನಂದ ಪಾಟೀಲ ಸೇರಿದಂತೆ ಹತ್ತಾರು ಸಚಿವರು, ಶಾಸಕರು, ಮಾಜಿ ಶಾಸಕರು, ಘಟಾನುಘಟಿ ನಾಯಕರು ಬೀಡುಬಿಟ್ಟಿದ್ದಾರೆ. ಪ್ರಚಾರ ಸಭೆಗಳಲ್ಲಿ ನೇರವಾಗಿ ಬೊಮ್ಮಾಯಿ ಅವರನ್ನೇ ಗುರಿ ಮಾಡುತ್ತಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಎರಡು ದಿನ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ವಿವಿಧ ಸಮುದಾಯಗಳ ಸಭೆ ನಡೆಸಿ ಮತ ಕ್ರೋಡೀಕರಣಕ್ಕೆ ಯತ್ನಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಮತಬೇಟೆ ನಡೆಸಿದ್ದಾರೆ. ಮತ್ತೂಂದೆಡೆ ಟಿಕೆಟ್ ತಪ್ಪಿದರೂ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ವೈಮನಸ್ಸು ಮರೆತು ಯಾಸೀರ್ ಖಾನ್ ಪಠಾಣ ಜತೆ ಕೈ ಜೋಡಿಸಿರುವುದು ಕಾಂಗ್ರೆಸ್‌ಗೆ ಆನೆ ಬಲ ಬಂದಂತಾಗಿದೆ.
ಇನ್ನೊಂದೆಡೆ ಬಿಜೆಪಿಗೆ ತನ್ನ ಭದ್ರ ಕೋಟೆ ಉಳಿಸಿಕೊಳ್ಳಬೇಕಾದ ಅನಿ ವಾರ್ಯ ಎದುರಾಗಿದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಮಾಜಿ ಸಚಿವರು, ಶಾಸಕರು, ಮುಖಂಡರು, ಕಾರ್ಯಕರ್ತರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಭರತ್ ಪರ ಪ್ರಚಾರ ನಡೆಸುತ್ತಿದ್ದಾರೆ. ರೋಡ್ ಶೋ, ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್ ನಾಯಕರಿಗೆ ಕೌಂಟರ್ ನೀಡುತ್ತಿದ್ದಾರೆ.
ಯಾರು ನಿರ್ಣಾಯಕ?
ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಅಲ್ಪಸಂಖ್ಯಾಕರು ನಿರ್ಣಾ ಯಕ ರಾಗಿದ್ದು, ಎರಡೂ ಪಕ್ಷಗಳ ಓಲೈಕೆ ಮಿತಿ ಮೀರಿದೆ. ಪ್ರಬಲ ಜಾತಿ, ಧರ್ಮ ಗಳ ಜತೆಗೆ ಸಣ್ಣ ಸಣ್ಣ ಸಮುದಾಯ ದವರಿಗೂ ಮಣೆ ಹಾಕುತ್ತಿದ್ದಾರೆ. ಕಾಂಗ್ರೆಸ್ ಸಾಂಪ್ರ ದಾಯಿಕ ಮತಗಳೊಂದಿಗೆ ಲಂಬಾಣಿ, ಮರಾಠ ಹಾಗೂ ಕುರುಬ ಸಮು ದಾಯದ ಮುಖಂಡರನ್ನು ಕರೆ ತಂದು ಮತ ಸೆಳೆಯುವ ತಂತ್ರಕ್ಕೆ ಮುಂದಾಗಿದೆ. ಬಸವರಾಜ ಬೊಮ್ಮಾಯಿ ಕೂಡ ತೆರೆಮರೆಯಲ್ಲಿ ರಣತಂತ್ರ ಹೆಣೆಯುತ್ತಿದ್ದು, ಎಲ್ಲ ಸಮುದಾಯಗಳ ಮುಖಂಡರ ಸಭೆ ನಡೆಸಿ ಸಣ್ಣ ಸಣ್ಣ ಸಮುದಾಯಗಳ ಮತ ಕೈತಪ್ಪದಂತೆ ಕಸರತ್ತು ನಡೆಸಿದ್ದಾರೆ. ಇಷ್ಟಿದ್ದರೂ ಎರಡೂ ಪಕ್ಷಗಳಿಗೆ ಒಳ ಹೊಡೆತದ ಭೀತಿ ಕಾಡುತ್ತಿದೆ.
ಶಿಗ್ಗಾಂವಿಯಲ್ಲಿ ಮೊದಲ ಬಾರಿಯ ಉಪಚುನಾವಣೆ; ಹೀಗಾಗಿ ಉಭಯ ಪಕ್ಷದ ಘಟಾನುಘಟಿಗಳು ಅಬ್ಬರಿಸುತ್ತಿದ್ದಾರೆ. ಬೊಮ್ಮಾಯಿ ಕುಟುಂಬದ 3ನೇ ಕುಡಿ ವಿಧಾನಸಭೆ ಪ್ರವೇಶಿಸುವುದೋ ಅಥವಾ ಕಾಂಗ್ರೆಸ್ ಕ್ಷೇತ್ರವನ್ನು ಕಸಿದು ಕೊಂಡು ಬೀಗುತ್ತದೆಯೋ ಎಂಬ ಕುತೂಹಲ ಹೆಚ್ಚಾಗಿದೆ.
ಅಭ್ಯರ್ಥಿಗಳ ಆಯ್ಕೆ ಹಿಂದಿನ ಗುಟ್ಟು
ಶಿಗ್ಗಾಂವಿ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಸತತ ನಾಲ್ಕು ಬಾರಿ ಗೆದ್ದು, ಕ್ಷೇತ್ರದ ಮೇಲೆ ಹಿಡಿತ ಸಾಧಿ ಸಿ ಬಿಜೆಪಿ ಭದ್ರಕೋಟೆಯಾಗಿ ಮಾಡಿಕೊಂಡಿದ್ದರು. ಇದನ್ನು ಅರಿತ ಬಿಜೆಪಿ ಹೈಕಮಾಂಡ್ ಬೇರೆಯವರಿಗೆ ಟಿಕೆಟ್ ನೀಡಿದರೆ ಕ್ಷೇತ್ರ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಅವರ ಪುತ್ರನಿಗೇ ಟಿಕೆಟ್ ನೀಡುವುದು ಸೂಕ್ತ ಎಂದು ನಿರ್ಧರಿಸಿ ಕೊನೆ ಕ್ಷಣದಲ್ಲಿ ಭರತ್ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ.
ಕಾಂಗ್ರೆಸ್‌ನಲ್ಲಿ ಈ ಬಾರಿ ಟಿಕೆಟ್ ಅಲ್ಪಸಂಖ್ಯಾಕರಿಗೆ ನೀಡಬೇಕೋ ಅಥವಾ ಲಿಂಗಾಯತರಿಗೆ ಕೊಡಬೇಕೋ ಎಂಬ ಗೊಂದಲ ಎದುರಾಗಿತ್ತು. ಅಲ್ಪಸಂಖ್ಯಾಕರ ಮುಖಂಡರು ತಮಗೇ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಮತ್ತೂಂದೆಡೆ ಈ ಬಾರಿ ಲಿಂಗಾಯತರಿಗೆ ಟಿಕೆಟ್ ನೀಡಬೇಕೆಂಬ ಕೂಗು ಕೇಳಿಬಂದಿತ್ತು. ಆದರೆ ಅಖಂಡ ಧಾರವಾಡ ಜಿಲ್ಲೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಮೀಸಲು ಕ್ಷೇತ್ರದಂತಿರುವ ಶಿಗ್ಗಾಂವಿ ಕ್ಷೇತ್ರದ ಟಿಕೆಟ್‌ನ್ನು ಈ ಬಾರಿ ಮುಸ್ಲಿಂ ಸಮುದಾಯಕ್ಕೆ ತಪ್ಪಿಸಿದರೆ ಮುಂದೆ ಭಾರೀ ಪರಿಣಾಮ ಎದುರಿಸಬೇಕಾಗಬಹುದು ಎಂಬ ಆತಂಕದಿಂದ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ಮತ್ತೆ ಮುಸ್ಲಿಂ ಸಮಾಜದ ಯಾಸೀರ್‌ಖಾನ್ ಪಠಾಣ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ.
ಅಭ್ಯರ್ಥಿಗಳ ಸಾಮರ್ಥ್ಯ
ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ
* ಮಾಜಿ ಸಿಎಂ ಪುತ್ರ ಎಂಬ ಟ್ರಂಪ್ ಕಾರ್ಡ್
* ಕ್ಷೇತ್ರದಲ್ಲಿ ಬಸವ ರಾಜ ಬೊಮ್ಮಾಯಿ ಕೈಗೊಂಡ ಅಭಿವೃದ್ಧಿ
*ಶಿಗ್ಗಾಂವಿ ಕ್ಷೇತ್ರ ಬಿಜೆಪಿ ಭದ್ರಕೋಟೆ ಆಗಿರುವುದು
* ಕ್ಷೇತ್ರದ ಮೇಲೆ ತಂದೆ ಬೊಮ್ಮಾಯಿಗೆ ಇರುವ ಬಿಗಿ ಹಿಡಿತ
*ತಂದೆ ಬಸವರಾಜ ಬೊಮ್ಮಾಯಿಯ ರಾಜಕೀಯ ಗರಡಿಯಲ್ಲಿ ಬೆಳೆದಿರುವುದು
ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ
* ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿ ಕಾರದಲ್ಲಿರುವುದು
* ಅಲ್ಪಸಂಖ್ಯಾಕ ಸಮುದಾಯದ ಅಭ್ಯರ್ಥಿ ಎಂಬ ಟ್ರಂಪ್ ಕಾರ್ಡ್
* ವೈಮನಸ್ಸು ಮರೆತು ಅಜ್ಜಂಪೀರ್ ಖಾದ್ರಿ ಕೈ ಜೋಡಿಸಿರುವುದು
* ಕಾಂಗ್ರೆಸ್‌ನ ಎಲ್ಲ ಆಕಾಂಕ್ಷಿಗಳು ಒಗ್ಗಟ್ಟಾಗಿ ಶ್ರಮಿಸುತ್ತಿರುವುದು
* ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಅನುಕಂಪ
– ವೀರೇಶ ಮಡ್ಲೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bank fraud case: ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿಗೆ 3 ವರ್ಷ ಜೈಲು ಶಿಕ್ಷೆ
Belagavi; ಮೃಗಾಲಯದಲ್ಲಿದ್ದ ಸಿಂಹಿಣಿ ನಿರುಪಮಾ ಸಾ*ವು
Invest Karnataka 2025;ಇನ್ವೆಸ್ಟ್ ಕರ್ನಾಟಕದಲ್ಲಿ 19 ದೇಶಗಳು ಭಾಗಿ: ಸಚಿವ ಎಂ.ಬಿ.ಪಾಟೀಲ್
Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ
Kambala: ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ