ಇಂದು ಸಂಜೆ ಸಂಪುಟ ತೀರ್ಮಾನ?
ಮೊದಲ ಹಂತದಲ್ಲಿ 15-20 ಸಚಿವರ ಆಯ್ಕೆ ಸಾಧ್ಯತೆ
Team Udayavani, Aug 17, 2019, 6:00 AM IST
ಬೆಂಗಳೂರು: ದಿಲ್ಲಿ ಪ್ರವಾಸ ದಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ಸಂಜೆ ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದು, ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಸಿಗುವುದೇ ಎಂಬ ಕುತೂಹಲ ಮೂಡಿದೆ.
ವರಿಷ್ಠರು ಒಪ್ಪಿಗೆ ನೀಡಿದರೆ ರವಿ ವಾರ ಸಂಜೆ ಇಲ್ಲವೇ ಸೋಮವಾರ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ. ಮೊದಲ ಹಂತದಲ್ಲಿ 15ರಿಂದ 20 ಶಾಸಕರಿಗೆ ಸಂಪುಟದಲ್ಲಿ ಅವಕಾಶ ಸಿಗುವ ನಿರೀಕ್ಷೆಯಿದ್ದು, ಆಕಾಂಕ್ಷಿಗಳು ವರಿಷ್ಠರ ನಿಲುವಿನ ಬಗ್ಗೆ ಕಾತರರಾಗಿದ್ದಾರೆ.
ಯಡಿಯೂರಪ್ಪ ಅವರು ಶುಕ್ರವಾರ ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯಾ ಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಯಾಗಿ ಚರ್ಚಿಸಿದರು. ಶನಿವಾರ ಸಂಜೆ ಅಮಿತ್ ಶಾ ಅವರೊಂದಿಗಿನ ಚರ್ಚೆ ವೇಳೆ ನೂತನ ಸಚಿವರ ಹೆಸರು, ಸಂಖ್ಯೆ, ಖಾತೆ ಬಗ್ಗೆ ಸ್ಪಷ್ಟತೆ ಸಿಗುವ ನಿರೀಕ್ಷೆ ಇದೆ.
ಸಂತೋಷ್- ಬಿಎಸ್‌ವೈ ಚರ್ಚೆ
ಬಿ.ಎಲ್. ಸಂತೋಷ್ ಮತ್ತು ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಸಂಜೆ ಪ್ರತ್ಯೇಕವಾಗಿ ಕೆಲವು ಸಮಯ ಚರ್ಚಿಸಿದರು. ಈ ಸಂದರ್ಭ ದಲ್ಲಿ ಸಚಿವಾಕಾಂಕ್ಷಿಗಳು ಹಾಗೂ ಸಂಭಾವ್ಯರ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಉತ್ತಮ ಆಡ ಳಿತ ನೀಡುವ ಜತೆಗೆ ಪಕ್ಷ, ಸರ ಕಾರದ ವರ್ಚಸ್ಸು ಹೆಚ್ಚಿಸಲು ಪೂರಕ ವಾಗಿರುವ ಸಂಪುಟ ವಿಸ್ತರಣೆ ಸಂಬಂಧ ಮಾತುಕತೆಯಾಗಿದೆ. ಈ ಹಂತ ದಲ್ಲಿ ಉಭಯ ನಾಯಕರಿಗೂ ಒಮ್ಮತ ವಿರುವ ಒಂದಿಷ್ಟು ಹೆಸರುಗಳಿದ್ದು, ಉಳಿದವರ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿ ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಜೆ.ಪಿ. ನಡ್ಡಾ ಭೇಟಿ
ಚರ್ಚೆ ಬಳಿಕ ಬಿ.ಎಲ್. ಸಂತೋಷ್ ಹಾಗೂ ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಚರ್ಚಿ ಸಿದರು. ಇದರಿಂದ ಸಂಪುಟ ವಿಸ್ತರಣೆಗೆ ಒಂದು ಹಂತದ ಚರ್ಚೆ ಪ್ರಕ್ರಿಯೆ ಪೂರ್ಣಗೊಂಡಂತಾಗಿದೆ ಎನ್ನಲಾಗಿದೆ.
ವರಿಷ್ಠರ ಆಣತಿಯಂತೆ ಸಂಪುಟ
ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾದಾಗಿನಿಂದ ಈವರೆಗೆ ಎಲ್ಲ ಹಂತದ ಪ್ರಮುಖ ನಿರ್ಧಾರಗಳಲ್ಲೂ ವರಿಷ್ಠರ ಪಾತ್ರವಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಆ ಮೂಲಕ ವರಿಷ್ಠರ ಆಣತಿಯಂತೆಯೇ ಮುಂದಿನ ಎಲ್ಲ ಪ್ರಕ್ರಿಯೆ ನಡೆಯಲಿದೆ ಎಂಬ ಸಂದೇಶ ರವಾನಿಸಿದಂತಾಗಿದೆ. ಹಾಗಾಗಿ ಸಂಪುಟ ವಿಸ್ತರಣೆಯಲ್ಲೂ ವರಿಷ್ಠರ ನಿರ್ಧಾರವೇ ಅಂತಿಮವಾಗಿರಲಿದೆ. ಹಾಗಾಗಿ ಯಡಿಯೂರಪ್ಪ ಅವರು ಶಿಫಾರಸು ಮಾಡಿದ ಎಲ್ಲರಿಗೂ ಸಚಿವ ಸ್ಥಾನ ಸಿಗುವ ಬಗ್ಗೆ ಅನುಮಾನ ಮೂಡಿದೆ.
ಗ್ರೀನ್ ಸಿಗ್ನಲ್ ಪಡೆಯುವೆ
ಜೆ.ಪಿ.ನಡ್ಡಾ ಭೇಟಿ ಬಳಿಕ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಶನಿವಾರ ಸಂಜೆ 5 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದೇನೆ. ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಪಡೆಯುವ ವಿಶ್ವಾಸವಿದೆ. ಶನಿವಾರ ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಹೇಳಿದರು.
ಸಚಿವ ಸ್ಥಾನಕ್ಕೆ ಸಂಭಾವ್ಯರು
ನಾಯಕರ ಹಿರಿತನ, ಅನುಭವ, ಕಾರ್ಯಕ್ಷಮತೆ, ಪ್ರಾಮಾಣಿಕತೆ, ಬುದ್ಧಿವಂತಿಕೆ, ಖಾತೆಯನ್ನು ನಿಭಾಯಿಸುವ ಸಾಮರ್ಥ್ಯ, ಪಕ್ಷ ನಿಷ್ಠೆಯ ಮಾನ ದಂಡದ ಆಧಾರದ ಮೇಲೆ ಸಚಿವ ಸ್ಥಾನ ಹಂಚಿಕೆ ಮಾಡುವ ಸಾಧ್ಯತೆ ಇದೆ. ಸಚಿವ ಸ್ಥಾನಕ್ಕೆ ಸಂಭಾವ್ಯರು ಎನ್ನಲಾದ ಪ್ರಮುಖರ ಹೆಸರು ಹೀಗಿದೆ.
ಶೆಟ್ಟರ್, ಈಶ್ವರಪ್ಪ, ಕಾರಜೋಳ, ಲಿಂಬಾವಳಿ, ಆರ್.ಅಶೋಕ್, ಶ್ರೀರಾಮುಲು, ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಸಿ.ಟಿ.ರವಿ, ಸುರೇಶ್ ಕುಮಾರ್, ರಾಮದಾಸ್, ಅಂಗಾರ, ಓಲೇಕಾರ್, ಶಿವನಗೌಡ, ಬೊಮ್ಮಾಯಿ, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಧುಸ್ವಾಮಿ ಮೊದಲಾದವರ ಹೆಸರು ಕೇಳಿಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.