Canada Temple Attack: ಕೆನಡಾ ದೇಗುಲ ದಾಳಿ: ಜಾಗತಿಕ ವಿರೋಧ ಪ್ರತಿಧ್ವನಿಸಲಿ
Team Udayavani, Nov 5, 2024, 6:00 AM IST
ಕೆನಡಾದ ಬ್ರಾಂಪ್ಟನ್‌ನಲ್ಲಿ ಇರುವ ಹಿಂದೂ ಸಭಾ ದೇಗುಲದಲ್ಲಿ ಖಲಿಸ್ಥಾನಿ ಪ್ರತ್ಯೇಕತಾವಾದಿಗಳು ದಾಳಿಯಂತಹ ದುಷ್ಕತ್ಯ ನಡೆಸಿರುವುದು ತೀವ್ರ ಕಳವಳಕಾರಿಯಾಗಿದೆ. ಕೆನಡಾ ಮತ್ತು ಭಾರತದ ನಡುವಣ ರಾಜತಾಂತ್ರಿಕ ಸಂಬಂಧ ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರಾಡೋ ಅವರಿಂದಾಗಿ ತೀರಾ ಕೆಳಮಟ್ಟಕ್ಕೆ ಕುಸಿದಿದೆ. ಇದಕ್ಕೆ ಟ್ರಾಡೊ ಅನುಸರಿಸುತ್ತಿರುವ ಖಲಿಸ್ಥಾನಿ ಪ್ರತ್ಯೇಕತಾವಾದಿ ಪರ ಧೋರಣೆಯೇ ನೇರ ಕಾರಣವಾಗಿದೆ.
ಟ್ರಾಡೊ ಅವರ ಈ ನೀತಿಯ ದುರ್ಲಾಭ ಪಡೆದು ಖಲಿಸ್ಥಾನಿ ಪ್ರತ್ಯೇಕತಾವಾದಿ ದುರುಳರು ಹಿಂದೂಗಳ ಮೇಲೆ, ಹಿಂದೂ ದೇಗುಲಗಳ ಮೇಲೆ ಆಕ್ರಮಣದಂತಹ ಕೃತ್ಯಗಳಿಗೆ ಮುಂದಾಗುತ್ತಿರುವುದು ತೀವ್ರ ಆತಂಕಕಾರಿ. ಕೆನಡಾ, ಬಾಂಗ್ಲಾ, ಪಾಕಿಸ್ಥಾನ ಹೀಗೆ ಹಿಂದೂ ಜನರು, ಶ್ರದ್ಧಾಕೇಂದ್ರಗಳ ಮೇಲೆ ದಾಳಿಗಳು ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಇದಕ್ಕೆ ಪೂರ್ಣ ವಿರಾಮ ಹಾಕಲು ವಿಶ್ವ ನಾಯಕರು ಧ್ವನಿಗೂಡಿಸಬೇಕಾಗಿದೆ.
ರವಿವಾರ ಬ್ರಾಂಪ್ಟನ್‌ನಲ್ಲಿ ಈ ಘಟನೆ ನಡೆದಿದ್ದು, ಖಲಿಸ್ಥಾನಿ ಧ್ವಜ ಹಿಡಿದಿದ್ದ ಪುಂಡರು ದೇವಾಲಯದಲ್ಲಿ ಸೇರಿದ್ದವರ ಮೇಲೆ ಆಕ್ರಮಣ ನಡೆಸಿದ್ದರು. ಘಟನೆಯಲ್ಲಿ ಮಕ್ಕಳು, ಹೆಂಗಸರ ಮೇಲೂ ಅಟಾಟೋಪ ಪ್ರದರ್ಶಿಸಲಾಗಿದೆ. ಘಟನೆ ನಡೆದ ಬಳಿಕ ಅಲ್ಲಿನ ಪೊಲೀಸರು ದುಷ್ಕರ್ಮಿಗಳನ್ನು ಸದೆಬಡಿಯುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕೂಡ ವರದಿಯಾಗಿದ್ದು, ಇದು ನಿಜಕ್ಕೂ ಕಳವಳಕಾರಿಯಾಗಿದೆ. ಜಸ್ಟಿನ್ ಟ್ರಾಡೊ ಸರಕಾರ ಅನುಸರಿಸುತ್ತಿರುವ ಭಾರತ ವಿರೋಧಿ ನೀತಿ ಕೆನಡಾದ ಅಧಿಕಾರಿ ವರ್ಗ, ಜನತೆಯ ನಡುವಿಗೂ ಪಸರಿಸಿದರೆ ಅದಕ್ಕಿಂತ ಖೇದಕರ ಮತ್ತು ಅಪಾಯಕಾರಿಯಾದ ವಿಷಯ ಇನ್ನೊಂದಿಲ್ಲ.
ಕೆನಡಾದಲ್ಲಿ ಖಲಿಸ್ಥಾನಿ ಪ್ರತ್ಯೇಕತಾವಾದಿಗಳು ಭಾರತೀಯರು, ಹಿಂದೂಗಳು, ಭಾರತ ಪರ ಇರುವವರ ಮೇಲೆ ದುರ್ವರ್ತನೆ ತೋರುತ್ತಿರುವುದು ಇದೇ ಮೊದಲ ಸಲವೇನೂ ಅಲ್ಲ. ಅಲ್ಲಿ ಸಾಕಷ್ಟು ಬಾರಿ ಇಂತಹ ದಾಳಿಗಳು ನಡೆದಿವೆ. ಮಾತ್ರವಲ್ಲದೆ ಭಾರತ ವಿರೋಧಿ ಪ್ರದರ್ಶನ, ಸಭೆಗಳು, ಭಾರತದ ಪ್ರಧಾನಿ-ಮಾಜಿ ಪ್ರಧಾನಿಗಳು, ಉನ್ನತ ನಾಯಕರು, ರಾಜತಾಂತ್ರಿಕರನ್ನು ಖಲಿಸ್ಥಾನಿ ಪ್ರತ್ಯೇಕತಾವಾದಿಗಳು ಹೀನಾಯವಾಗಿ ಅವಮಾನಿಸಿದಂತಹ ಘಟನೆಗಳು ಕೂಡ ಹಲವಾರು ಬಾರಿ ನಡೆದಿವೆ.
ಭಾರತ ಇವೆಲ್ಲವನ್ನೂ ತೀವ್ರವಾಗಿ ವಿರೋಧಿಸಿ, ಜಾಗತಿಕ ಮಟ್ಟದಲ್ಲಿ ಧ್ವನಿಯೆತ್ತಿದ್ದರೂ ಜಸ್ಟಿನ್ ಟ್ರಾಡೋ ಅವರ ಕ್ಷುಲ್ಲಕ ರಾಜಕೀಯ ಸ್ವಹಿತಾಸಕ್ತಿಯಿಂದಾಗಿ ಇದರ ವಿರುದ್ಧ ಕಠಿನ ಕ್ರಮಗಳನ್ನು ಕೈಗೊಳ್ಳುವ ಪ್ರಯತ್ನಗಳು ಅಲ್ಲಿ ನಡೆದೇ ಇಲ್ಲ. ಅಧಿಕಾರಸ್ಥರೇ ತಮ್ಮ ಪರ ಇದ್ದಾರೆ ಎಂಬ ಪರಿಸ್ಥಿತಿಯ ದುರ್ಲಾಭವನ್ನು ಪಡೆಯುತ್ತಿರುವ ಖಲಿಸ್ಥಾನ ಬೆಂಬಲಿಗರು ಈಗ ಒಂದೊಂದೇ ಹೆಜ್ಜೆ ಮುಂದಿಡುತ್ತಿದ್ದಾರೆ.
ಇದು ತೀವ್ರ ಕಳವಳಕಾರಿ ಮತ್ತು ಇದಕ್ಕೆ ಹೇಗಾದರೂ ತಡೆ ತರಲೇ ಬೇಕಾಗಿದೆ. ರವಿವಾರ ನಡೆದ ಘಟನೆಯ ಬಗ್ಗೆ ಭಾರತ ತೀಕ್ಷ್ಣವಾಗಿ ಪ್ರತಿರೋಧ, ಪ್ರತಿಭಟನೆ ವ್ಯಕ್ತಪಡಿಸಿದೆ. ಆದರೆ ಇಷ್ಟು ಮಾತ್ರ ಸಾಲದು. ಈ ಬಗ್ಗೆ ಮತ್ತು ಕೆನಡಾದಲ್ಲಿ ಉಂಟಾಗಿರುವ ಭಾರತ ಮತ್ತು ಹಿಂದೂ ತ್ವೇಷಮಯ ವಾತಾವರಣದ ಬಗ್ಗೆ ಜಾಗತಿಕ ವೇದಿಕೆಗಳಲ್ಲಿ ಭಾರತ ಧ್ವನಿಯೆತ್ತಬೇಕು.
ಕೆನಡಾದಲ್ಲಿ ಅಪಾರ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಇದಕ್ಕೆ ಈಗಿಂದೀಗಲೇ ತಡೆ ಹಾಕದೆ ಹೋದರೆ ಈ ವಿಷ ನಿಧಾನಗತಿಯಲ್ಲಿ ಕೆನಡಾದ ಸಮಾಜದೊಳಕ್ಕೂ ವ್ಯಾಪಿಸುವ ಅಪಾಯ ಇದೆ. ಹಾಗೆಲ್ಲಾದರೂ ಆದರೆ ಅದಕ್ಕಿಂತ ದೊಡ್ಡ ಸಮಸ್ಯೆ ಇನ್ನೊಂದಿಲ್ಲ. ಹೀಗಾಗಿ ಕೆನಡಾದಲ್ಲಿ ಖಲಿಸ್ಥಾನಿ ದುಷ್ಟರ ಉಪಟಳಕ್ಕೆ ಕಡಿವಾಣ ಹಾಕುವ ಪ್ರಯತ್ನವನ್ನು ಭಾರತ ಜಾಗತಿಕ ವೇದಿಕೆಗಳಲ್ಲಿ ಕೈಗೆತ್ತಿಕೊಳ್ಳಬೇಕು. ಜಸ್ಟಿನ್ ಟ್ರಾಡೊ ಅವರ ನಿಜಬಣ್ಣವನ್ನು ಜಾಗತಿಕ ಮಟ್ಟದಲ್ಲಿ ಬಯಲಿಗೆಳೆದು ಈ ವಿಷ ಇನ್ನಷ್ಟು ವ್ಯಾಪಿಸದಂತೆ ತಡೆಯಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.