Chaitra Kundapur:ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ ಚಾರ್ಜ್, CCB ತನಿಖೆ ಪುನರಾರಂಭ
ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಗೆ ಯಾವುದೇ ಸಮಸ್ಯೆ ಇಲ್ಲ ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ.
Team Udayavani, Sep 18, 2023, 6:16 PM IST
ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ವಿಚಾರಣೆ ವೇಳೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಚೈತ್ರಾ ಕುಂದಾಪುರಳನ್ನು ಸೋಮವಾರ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಮಹಿಳಾ ಸಾಂತ್ವಾನ ಕೇಂದ್ರದಿಂದ ಸಿಸಿಬಿ ಕಚೇರಿಯಲ್ಲಿ ಚೈತ್ರಾ ಕುಂದಾಪುರಳನ್ನು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಾಯಲ್ಲಿ ನೊರೆ ಬಂದು ಕುಸಿದು ಬಿದ್ದಿದ್ದು, ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಗೆ ಫಿಟ್ಸ್ (ಅಪಸ್ಮಾರ) ಇತ್ತೆಂದು ಹೇಳಲಾಗಿತ್ತು. ಆದರೆ ಕಳೆದ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಆಕೆಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಗೆ ಯಾವುದೇ ಸಮಸ್ಯೆ ಇಲ್ಲ ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ.
ವಿಚಾರಣೆ ಪುನರಾರಂಭ:
ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆದ ನಂತರ ಚೈತ್ರಾ ಕುಂದಾಪುರಳನ್ನು ಸಿಸಿಬಿ ಪೊಲೀಸರು ಕಚೇರಿಗೆ ಕರೆತಂದಿದ್ದು, ಇಂದಿನಿಂದಲೇ ವಿಚಾರಣೆ ಮತ್ತೆ ಆರಂಭಿಸಲು ಸಿದ್ಧತೆ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರ ದೂರಿನ ಆಧಾರದ ಮೇಲೆ ಚೈತ್ರಾ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಎಫ್ ಐಆರ್ ನಲ್ಲಿ ಆರೋಪಿಗಳೆಂದು ಉಲ್ಲೇಖಿಸಿದ್ದರು. ಬೆಂಗಳೂರ ನ್ಯಾಯಾಲಯವು ಚೈತ್ರಾ ಕುಂದಾಪುರ ಸೇರಿದಂತೆ ಏಳು ಮಂದಿಗೆ ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ಒಪ್ಪಿಸಿತ್ತು. ಪ್ರಕರಣದಲ್ಲಿ ಅಭಿನವ ಹಾಲಶ್ರೀ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಕ್ರವರ್ತಿ ಸೂಲಿಬೆಲೆ ಹೆಸರು ತಳಕು!
ಚೈತ್ರಾ ಪ್ರಕರಣದಲ್ಲಿ ವಜ್ರದೇಹಿ ಸ್ವಾಮೀಜಿ ಹಾಗೂ ಚಕ್ರವರ್ತಿ ಸೂಲಿಬೆಲೆ ಹೆಸರು ಪ್ರಸ್ತಾವ ವಾಗಿದ್ದು, ಅಚ್ಚರಿ ಮೂಡಿಸಿದೆ.
ಇದರ ಬೆನ್ನಲ್ಲೆ ಸುದ್ದಿಗಾರರ ಜತೆಗೆ ಸೂಲಿಬೆಲೆ ಮಾತನಾಡಿ, ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ. ಪ್ರಕರಣ ಮಾಧ್ಯಮಗಳಲ್ಲಿ ಬರುವುದಕ್ಕೂ ಮುನ್ನವೇ ನನಗೆ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿಗಳು ತಿಳಿಸಿದ್ದರು. ವಂಚನೆಗೆ ಒಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ ನನಗೂ ಆತ್ಮೀಯರಾಗಿದ್ದಾರೆ. ಆದರೆ ವಂಚನೆ ಬಗ್ಗೆ ನನಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಸಿಸಿಬಿ ಕರೆದರೆ ವಿಚಾರಣೆಗೆ ಹೋಗುತ್ತೇನೆ, ಮಾಹಿತಿ ಕೇಳಿದರೆ ನೀಡುತ್ತೇನೆ. ಚೈತ್ರಾ ಕುಂದಾಪುರ ಅವರನ್ನು ಸುಮಾರು 10 ವರ್ಷಗಳ ಹಿಂದೆ ಒಮ್ಮೆ ನೋಡಿದ್ದೆ ಎಂದು ತಿಳಿಸಿದ್ದಾರೆ.
ರವಿ ಗಮನಕ್ಕೆ ತಂದಿದ್ದೆ
ನಾನು ಈ ಹಿಂದೆಯೇ ಸಿ.ಟಿ.ರವಿ ಗಮನಕ್ಕೂ ಈ ವಿಚಾರ ತಂದಿದ್ದೆ. ಬಿಜೆಪಿಯಲ್ಲಿ ಈ ರೀತಿ ನಡೆಯುವುದಿಲ್ಲ ಎಂದು ಜನರಿಗೆ ಗೊತ್ತಾಗ ಬೇಕೆಂದು ಸಿ.ಟಿ.ರವಿ ಹೇಳಿರುವುದಾಗಿ ಸೂಲಿಬೆಲೆ ಹೇಳಿದರು.
ಗೋವಿಂದಬಾಬು ವಿರುದ್ಧ ಚೈತ್ರಾಳಿಂದ ಇ.ಡಿ.ಗೆ ದೂರು!
ಗೋವಿಂದ ಬಾಬು ಪೂಜಾರಿಯವರು ಅಕ್ರಮ ಹಣ ವರ್ಗಾವಣೆ ಮಾಡಿರುವುದಾಗಿ ಚೈತ್ರಾ ಜಾರಿ ನಿರ್ದೇಶನಾಲಯ(ಇ.ಡಿ.)ಕ್ಕೆ ದೂರು ನೀಡಿರುವುದು ಸಂಶಯಕ್ಕೀಡು ಮಾಡಿದೆ. ಗೋವಿಂದ ಪೂಜಾರಿ ಹಾಗೂ ಹಾಲಶ್ರೀ ನಡುವೆ ನಡೆದಿದೆ ಎನ್ನಲಾದ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿ, ಪೂಜಾರಿ ಹಿನ್ನೆಲೆ ಬಗ್ಗೆ ಆಕೆ ದೂರಿನಲ್ಲಿ ತಿಳಿಸಿದ್ದಾಳೆ. ಸುಮಾರು 6 ಕೋಟಿ ರೂ. ಅಕ್ರಮವಾಗಿ ವರ್ಗಾಯಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಹಾಲಶ್ರೀ ಅಭಿನವ ಸ್ವಾಮೀಜಿಗೆ 1.5 ಕೋಟಿ ರೂ. ಸಂದಾಯವಾಗಿರುವ ಕುರಿತೂ ತಿಳಿಸಿದ್ದಾಳೆ.
ಗೋವಿಂದ ಪೂಜಾರಿ, ಬಿಎಸ್‌ವೈ, ಹಾಲಶ್ರೀ ಫೋಟೋ ವೈರಲ್
ಗೋವಿಂದ ಪೂಜಾರಿಯಿಂದ ರೂ. 1.5 ಕೋಟಿ ಪಡೆದಿರುವ ಆರೋಪ ಹೊತ್ತಿರುವ ಹಾಲಶ್ರೀ ಅಭಿನವ ಸ್ವಾಮಿ ಚುನಾವಣೆಗೆ ಕೆಲವು ತಿಂಗಳ ಹಿಂದೆ ಗೋವಿಂದ ಬಾಬು ಪೂಜಾರಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಪರಿಚಯ ಮಾಡಿಸಿದ್ದರು ಎನ್ನಲಾಗಿದೆ. ಯಡಿಯೂರಪ್ಪ ಜತೆಗೆ ಹಾಲಶ್ರೀ, ಗೋವಿಂದ ಪೂಜಾರಿ ಮಾತನಾಡುತ್ತಿರುವ ಫೋಟೊವೊಂದು ವೈರಲ್ ಆಗಿದೆ.ಇವರು ಏನು ಮಾತುಕತೆ ನಡೆಸಿದ್ದಾರೆ ಎಂಬುದು ಭಾರೀ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.
ವೈದ್ಯಕೀಯ ರಿಪೋರ್ಟ್ ನಾರ್ಮಲ್
ಚೈತ್ರಾಳ ಎಲ್ಲ ವೈದ್ಯಕೀಯ ವರದಿಗಳೂ ನಾರ್ಮಲ್ ಎಂದು ಬಂದಿದೆ. ಸದ್ಯ ಆರೋಗ್ಯವಾಗಿದ್ದಾಳೆ. ಚೈತ್ರಾಳಿಗೆ ಇಸಿಜಿ ಮಾಡಿದಾಗ ಸ್ವಲ್ಪ ವ್ಯತ್ಯಾಸ ಕಂಡುಬಂದಿತ್ತು. 24 ಗಂಟೆ ಬಳಿಕ ಇಸಿಜಿ ಮಾಡಿದಾಗ ನಾರ್ಮಲ್ ಆಗಿದೆ. ಸದ್ಯ ಚೈತ್ರಾ ಕುಂದಾಪುರ ಆರೋಗ್ಯವಾಗಿದ್ದಾರೆ. ನ್ಯೂರಾಲಜಿಸ್ಟ್ ಕೆಲವು ಔಷಧ ಕೊಟ್ಟಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಗೋವಿಂದ ಪೂಜಾರಿಗೆ ನೋಟಿಸ್
ಮತ್ತೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಪೊಲೀಸರು ಗೋವಿಂದ ಬಾಬು ಪೂಜಾರಿಗೆ ನೋಟಿಸ್ ನೀಡಿದ್ದಾರೆ.
ಹಣದ ಮೂಲ ಕೆದಕಲು ಸಿಸಿಬಿ ಮುಂದಾಗಿದೆ. ಹಣದ ಮೂಲ ಹಾಗೂ ಇದಕ್ಕೆ ದಾಖಲೆ ಸಲ್ಲಿಸದಿದ್ದರೆ ಗೋವಿಂದ ಬಾಬು ಪೂಜಾರಿಗೂ ಸಂಕಷ್ಟ ಎದುರಾಗಲಿದೆ. ಈಗಾಗಲೇ ಮಹಜರು ಪ್ರಕ್ರಿಯೆ ಮುಗಿದಿದೆ. ವಿಜಯನಗರದ ನಿವಾಸ, ಕೆಕೆ ಗೆಸ್ಟ್ ಹೌಸ್, ಗೋವಿಂದ ಬಾಬು ಪೂಜಾರಿ ಕಚೇರಿ ಸಹಿತ ಹಲವೆಡೆ ಮಹಜರು ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.