ನನ್ನ ನೇತೃತ್ವವಿದ್ದರೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ: ಸಿಎಂ
Team Udayavani, Apr 12, 2022, 7:20 AM IST
ಮುಂದಿನ ಚುನಾವಣೆಯು ನಿಮ್ಮ ನೇತೃತ್ವದಲ್ಲಿ ನಡೆಯಲಿದೆಯೆ?
ಬೊಮ್ಮಾಯಿ: ನಮ್ಮ ರಾಷ್ಟ್ರೀಯ ನಾಯಕರಾದ ಅಮಿತ್ ಶಾ ಅವರು ನನ್ನ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ಘೋಷಿಸಿದ್ದಾರೆ. ಕೇಂದ್ರ ನಾಯಕತ್ವ ನನ್ನ ಮೇಲೆ ವಿಶ್ವಾಸವಿರಿಸಿದ್ದು, ನಾನು ಅದಕ್ಕೆ ಬದ್ಧವಾಗಿ ಕೆಲಸ ನಿರ್ವಹಿಸುತ್ತೇನೆ. ನನ್ನ ಹೆಸರಿದ್ದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗೂಡಿಸಿಕೊಂಡು ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಯಲಿದ್ದೇವೆ.
ಶಿಗ್ಗಾಂವಿ ಕ್ಷೇತ್ರ ನಿಮ್ಮದು. ಅಲ್ಲಿ ನೂರಕ್ಕೆ ನೂರರಷ್ಟು ಕೊಳವೆ ನೀರಾವರಿ ಸಾಧ್ಯವಾದದ್ದು ಹೇಗೆ? ಇಂತಹ ಪ್ರಯತ್ನವನ್ನು ರಾಜ್ಯದ ಇತರ ಕಡೆ ವಿಸ್ತರಿಸಲು ಸಾಧ್ಯವೆ?
ಬೊಮ್ಮಾಯಿ: ಇದು ಒಂದೆರಡು ವರ್ಷಗಳ ಪ್ರಯತ್ನವಲ್ಲ. ನಮ್ಮ ಕ್ಷೇತ್ರದಲ್ಲಿ ಹರಿಯುವ ವರದಾ ನದಿಯ ಸದುಪಯೋಗ ಮಾಡಿಕೊಂಡಿದ್ದೇವೆ. ಸ್ಪ್ರಿಂಕ್ಲರ್ ಮೂಲಕ 24 ಸಾವಿರ ಎಕ್ರೆ ಜಾಗದಲ್ಲಿ ನೀರಾವರಿ ವ್ಯವಸ್ಥೆ ಮಾಡಲು ಸಾಧ್ಯವಾಗಿದೆ. 2.5 ಟಿಎಂಸಿ ನೀರು ಬೇಕಾಗಿದ್ದಲ್ಲಿ 1 ಟಿಎಂಸಿ ನೀರು ಪೂರೈಕೆಯಿಂದ ಸಾಧ್ಯವಾಗಿದೆ. ಶಿಗ್ಗಾಂವಿ ಮತ್ತು ಸವಣೂರು -ಎರಡು ಕಡೆ ಏತ ನೀರಾವರಿಯನ್ನು ಬಳಸಿಕೊಂಡು ಕೆರೆಗಳಲ್ಲಿ ನೀರು ತುಂಬುವಂತೆ ನೋಡಿಕೊಂಡಿದ್ದೇವೆ. ಇದು ಗಾರ್ಲೆಂಡ್ ಆಫ್ ವಾಟರ್ ರೀತಿ. ಇದು ಏಳೆಂಟು ವರ್ಷಗಳ ಪ್ರಯತ್ನದಿಂದ ಸಾಧ್ಯವಾಗಿದೆ. ಭೌಗೋಳಿಕವಾಗಿ ನಮ್ಮದು ಅರೆ ಮಲೆನಾಡು ಪ್ರದೇಶ. ಅಲ್ಲಿನ ಕೆರೆಗಳಿಗೆ ನೀರು ತುಂಬುವುದನ್ನು ಸಾಧ್ಯವಾಗಿಸಿದ್ದೇವೆ. ನೀರಿನ ಕೊರತೆ ಇರುವ ಬಯಲುಸೀಮೆ ಪ್ರದೇಶದಲ್ಲಿ ಜಲಸಂವರ್ಧನೆಗೆ ಪ್ರಯತ್ನಿಸುತ್ತಿದ್ದೇವೆ. ಜಲ ಸಂವರ್ಧನೆಗೆ ಇಂತಹ ಹಲವು ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ.
ಸುಮಾರು 50 ವರ್ಷಗಳ ಹಿಂದೆ ಕರಾವಳಿ ಭಾಗದಿಂದ ಮುಂಬಯಿಗೆ ಹಡಗಿನಲ್ಲಿ ಪ್ರಯಾಣ ನಡೆಸುವ ಜಲ ಸಾರಿಗೆ ವ್ಯವಸ್ಥೆ ಇತ್ತು. ಈಗ ಸಂಪೂರ್ಣವಾಗಿ ಜಲ ಸಾರಿಗೆ ನಿಂತು ಹೋಗಿದೆ. ಇದನ್ನು ಮತ್ತೆ ಆರಂಭಿಸಿದರೆ ಉತ್ತಮ. ಇದರ ಬಗ್ಗೆ ನಿಮ್ಮ ಪ್ರಯತ್ನಗಳೇನು?
ಬೊಮ್ಮಾಯಿ: ಈ ವರ್ಷ ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯಡಿ ಬಂದರುಗಳನ್ನು ಅಭಿವೃದ್ಧಿಪಡಿಸುವ ಕೆಲಸ ಹಮ್ಮಿಕೊಂಡಿದ್ದೇವೆ. ಬಂದರುಗಳನ್ನು ಹೂಳೆತ್ತಿ ಅಲ್ಲಿ ಹಡಗುಗಳನ್ನು ನಿಲ್ಲಿಸುವಂತೆ ಮಾಡಲಾಗುವುದು. ಇದರ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿಕೊಟ್ಟಿದ್ದು, ರಾಜ್ಯ ಸರಕಾರದ ಪಾಲನ್ನೂ ನೀಡುತ್ತೇವೆ. ಈ ಯೋಜನೆಯಿಂದ ಕರ್ನಾಟಕದ ಕರಾವಳಿಯಿಂದ ಕೇರಳಕ್ಕೆ, ಗುಜರಾತಿಗೆ ಜಲ ಸಾರಿಗೆಯನ್ನು ಆರಂಭಿಸಬಹುದು. ಲಕ್ಷದ್ವೀಪದಿಂದ ಮಂಗಳೂರಿಗೆ ಬರಲು ಸಾಧ್ಯ. ಇದನ್ನು ಗುಜರಾತಿಗೂ ವಿಸ್ತರಿಸಲಿದ್ದೇವೆ. ಇದು ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾಗಿದೆ.
ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಆರಂಭಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಕೇಂದ್ರದಿಂದ ಸಂದೇಶವೇನಾದರೂ ಬಂದಿದೆಯಾ?
ಬೊಮ್ಮಾಯಿ: ಕೇಂದ್ರ ಈ ರೀತಿಯ ಬೆಳವಣಿಗೆಗಳ ಆಧಾರದಲ್ಲಿ ನಿರ್ಣಯ ಮಾಡುತ್ತದೆ. ಬೆಂಗಳೂರಿನಲ್ಲಿ ಈಗಾಗಲೇ ಎನ್‌ಐಎ ಕಚೇರಿ ಇದೆ. ಇಲ್ಲಿನ ಸಂಪೂರ್ಣ ವಿಚಾರಗಳನ್ನು ಸರಕಾರ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ನಿರ್ಣಯ ಮಾಡಲಾಗುವುದು. ಬಹುತೇಕವಾಗಿ ಇಲ್ಲಿನ ಚಟುವಟಿಕೆಗಳು ಭಟ್ಕಳ, ಕೇರಳ ರಾಜ್ಯಗಳ ಸೂಕ್ಷ್ಮ ಪ್ರದೇಶಗಳನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರಕಾರ ನಿರ್ಣಯ ತೆಗೆದುಕೊಳ್ಳಲಿದೆ.
ಕರಾವಳಿಯನ್ನು ಐಟಿ ಹಬ್ ಮಾಡಲು ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬಹುದೆ?
ಮಂಗಳೂರಿನಲ್ಲಿ ಐಟಿ ಹಬ್ ಆರಂಭಗೊಂಡಿದೆ. ಇದಕ್ಕೆ ಮತ್ತಷ್ಟು ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಸಿಆರ್‌ಝಡ್ ನಿಯಮಾವಳಿ ಸರಳೀಕರಣವಾದರೆ ಎಲ್ಲ ಚಟುವಟಿಕೆಗಳೂ ಆರಂಭ ಗೊಳ್ಳುತ್ತವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.