“ಲೋಕಲ್’ ಚುನಾವಣೆಗೆ ಆಯೋಗದ ಸಿದ್ಧತೆ
Team Udayavani, May 7, 2019, 3:11 AM IST
ಬೆಂಗಳೂರು: ಎರಡನೇ ಹಂತದಲ್ಲಿ ರಾಜ್ಯದ 63 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿರುವ ರಾಜ್ಯ ಚುನಾವಣಾ ಆಯೋಗ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿ ಹಾಗೂ ಚುನಾವಣಾ ವೆಚ್ಚದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ, ಚುನಾವಣಾಧಿಕಾರಿಗಳು ಹಾಗೂ ವೆಚ್ಚ ವೀಕ್ಷಕರ ಸರಣಿ ಸಭೆಗಳನ್ನು ನಡೆಸಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.
ಇದರ ಜತೆಗೆ ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಆಯೋಗ, ವರ್ಗಾವಣೆಗೊಳಿಸುವ ಮೊದಲು ಇಲಾಖೆಗಳು ಚುನಾವಣಾ ಆಯೋಗದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ.
ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳಿಂದ ಬರುವ ವರ್ಗಾವಣೆ ಪ್ರಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರುವ ಆಯೋಗ, ಪ್ರತಿಯೊಂದು ಪ್ರಸ್ತಾವನೆ ಕುರಿತು ಪ್ರತ್ಯೇಕವಾಗಿ ಪರಾಮರ್ಶೆ ನಡೆಸಿ ಒಪ್ಪಿಗೆ ಕೊಡುತ್ತಿದೆ. ಒಂದೇ ಕಡೆ ಅನೇಕ ವರ್ಷಗಳಿಂದ ಬೀಡು ಬಿಟ್ಟಿರುವ ಅಧಿಕಾರಿಗಳ ಪೂರ್ವಾಪರ ಪರಿಶೀಲಿಸಲಾಗುತ್ತಿದ್ದು, ಈ ಬಗ್ಗೆ ದೂರುಗಳು ಬಂದರೆ ತಕ್ಷಣ ಕ್ರಮ ಜರುಗಿಸಲಾಗುತ್ತಿದೆ.
ಚುನಾವಣೆ ಘೋಷಣೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಮೇ 2ರಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಚುನಾವಣಾಧಿಕಾರಿಗಳು ನೀತಿ ಸಂಹಿತೆ ಜಾರಿಗೆ ಕ್ರಮ ಕೈಗೊಳ್ಳುತ್ತಿದ್ದಾರೆ.
ಕಾನೂನು-ಸುವ್ಯವಸ್ಥೆಗೆ ರಾಜ್ಯ ಪೊಲೀಸ್ ಇಲಾಖೆಯ ನೆರವು ಪಡೆದುಕೊಳ್ಳಲಾಗುತ್ತಿದ್ದು, ಕಾನೂನು-ಸುವ್ಯವಸ್ಥೆ ದೃಷ್ಟಿಯಿಂದ ಸೂಕ್ಷ್ಮ ಎಂದು ಪರಿಗಣಿಸಲಾಗಿರುವ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶಿಸಲಾಗಿದೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದು, ಚುನಾವಣಾ ಪ್ರಚಾರ ಆರಂಭಗೊಂಡ ಬಳಿಕ ನೀತಿ ಸಂಹಿತೆ ಜಾರಿ ಮತ್ತು ಕಾನೂನು-ಸುವ್ಯವಸ್ಥೆ ಮತ್ತಷ್ಟು ಬಿಗಿಗೊಳ್ಳಲಿದೆ. ಯಾವುದೇ ಕಾರಣಕ್ಕೂ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಆಯೋಗದ ಅಧಿಕಾರಿಗಳು ಹೇಳುತ್ತಾರೆ.
ಈಗಷ್ಟೇ ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ಮುಗಿದಿದೆ. ಆದರೂ, ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ, ಮತದಾನ ಮುಗಿದಿರುವ ಕಾರಣ ನೀತಿ ಸಂಹಿತೆಯನ್ನು ಕೇಂದ್ರ ಚುನಾವಣಾ ಆಯೋಗ ಒಂದಿಷ್ಟು ಸಡಿಲಗೊಳಿಸಿದೆ. ಆದರೆ, ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ರಾಜ್ಯ ಚುನಾವಣಾ ಆಯೋಗದಿಂದ ನೀತಿ ಸಂಹಿತೆ ಜಾರಿಗೊಳಿಸಲಾಗಿದ್ದು,
ಹಿಂದಿನ ಲೋಕಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು, ಚುನಾವಣಾ ಅಕ್ರಮಗಳು ಹೆಚ್ಚು ನಡೆದಿರುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈಗ ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ನಗರ ಮತ್ತು ಪಟ್ಟಣ ಪ್ರದೇಶಗಳಿದ್ದರೆ, ಆ ವಿಚಾರವನ್ನೂ ಸಹ ರಾಜ್ಯ ಚುನಾವಣಾ ಆಯೋಗ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
40 ಚುನಾವಣಾ ವೆಚ್ಚ ವೀಕ್ಷಕರ ನೇಮಕ: ಚುನಾವಣೆ ನಡೆಯುತ್ತಿರುವ 63 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಗೆ ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಜತೆಗೆ ಚುನಾವಣೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳಿಗೆ ಐಎಎಸ್ ಅಧಿಕಾರಿಗಳನ್ನು ವಿಶೇಷ ವೀಕ್ಷಕರನ್ನಾಗಿ, ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿಗಳನ್ನು ಸಾಮಾನ್ಯ ವೀಕ್ಷಕರನ್ನಾಗಿ ನೇಮಿಸಲಾಗಿದೆ.
ಮುಖ್ಯವಾಗಿ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಜಂಟಿ ನಿಯಂತ್ರಕರು ಮತ್ತು ಉಪ ನಿಯಂತ್ರಕರನ್ನು ಸೇರಿಸಿ ಒಟ್ಟು 40 ಮಂದಿಯನ್ನು ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಇದಲ್ಲದೇ ಚುನಾವಣಾ ಕರ್ತವ್ಯಕ್ಕೆ ಎರಡು ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಈಗಾಗಲೇ ಇವರಿಗೆ ತರಬೇತಿ ನೀಡಲಾಗಿದ್ದು, ಹಲವು ಸುತ್ತಿನ ಸಭೆಗಳನ್ನು ನಡೆಸಿ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಗಿದೆ ಎಂದು ಆಯೋಗದ ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ರಾಜ್ಯದ 63 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆಗಳನ್ನು ಚುರುಕುಗೊಳಿಸಲಾಗಿದೆ. ನೀತಿ ಸಂಹಿತೆ ಜಾರಿ, ಚುನಾವಣಾ ವೆಚ್ಚದ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸರಣಿ ಸಭೆಗಳನ್ನು ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಬಗ್ಗೆಯೂ ನಿಗಾ ಇಡಲಾಗಿದ್ದು, ವರ್ಗಾವಣೆ ಪ್ರಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಒಪ್ಪಿಗೆ ಕೊಡಲಾಗುತ್ತಿದೆ.
-ಪಿ.ಎನ್.ಶ್ರೀನಿವಾಸಾಚಾರಿ, ರಾಜ್ಯ ಚುನಾವಣಾ ಆಯುಕ್ತ
* ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.