ಕಾಂಗ್ರೆಸ್, ಬಿಜೆಪಿ: ಮೂಲ-ವಲಸಿಗ ರಾಜಕಾರಣ
Team Udayavani, Jul 5, 2021, 6:30 AM IST
ರಾಜ್ಯ ಬಿಜೆಪಿಯಲ್ಲಿ ಹಾಲಿ ಇರುವ ಮುಖ್ಯಮಂತ್ರಿಯ ಬದಲಾವಣೆಯ ಚರ್ಚೆ ನಡೆಯತ್ತಿದ್ದರೆ, ಇನ್ನೊಂದೆಡೆ ಚುನಾವಣೆಗೆ ಇನ್ನೂ ಒಂದು ವರ್ಷ ಹತ್ತು ತಿಂಗಳು ಸಮಯ ಇರುವಾಗಲೇ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆ ಆರಂಭವಾಗಿದ್ದು, ಎರಡೂ ಪಕ್ಷಗಳ ನಾಯಕತ್ವದ ಗೊಂದಲಕ್ಕೆ ಕಾರಣವಾಗಿದ್ದು ಮಾತ್ರ “ಮೂಲ ಮತ್ತು ವಲಸಿಗ’ ಎನ್ನುವ ರಾಜಕಾರಣದ ಅನುಕೂಲಸಿಂಧು ಪದ.
ರಾಜಕಾರಣ ನಿಂತ ನೀರಲ್ಲ ಎನ್ನುವುದು ಸರ್ವವಿದಿತ. ನಿಂತ ನೀರಿಗಿಂತ ಹರಿಯುವ ನೀರು ಹೆಚ್ಚು ಶುಭ್ರ ಮತ್ತು ಸ್ವತ್ಛವಾಗಿರುತ್ತದೆ. ಹರಿಯುವ ನೀರು ಅಂತಿಮವಾಗಿ ಸಮುದ್ರ ಸೇರುತ್ತದೆ. ಆದರೆ ರಾಜಕಾರಣದಲ್ಲಿ ವಲಸೆ ಎಂಬ ಹರಿಯುವ ನೀರಿನ ಶುಭ್ರತೆಯ ಬಗ್ಗೆ ಅಷ್ಟು ಖಚಿತವಾಗಿ ಹೇಳುವುದು ಕಷ್ಟ. ಅಷ್ಟೇ ಅಲ್ಲದೇ ರಾಜಕಾರಣದಲ್ಲಿ ಇತ್ತೀಚಿನ ದಿನಗಳಲ್ಲಿ ಪಕ್ಷಾಂತರದ ಅಂತಿಮ ಗುರಿ ಅಧಿಕಾರವೇ ಆದಂತಾಗಿದೆ.
ರಾಜಕಾರಣದಲ್ಲಿ ವಲಸೆ ಎನ್ನುವುದು ಈಗ ಆರಂಭವಾಗಿರುವುದೇನಲ್ಲ. ರಾಜಕೀಯದ ಆಗಿನ ಕಾಲಘಟ್ಟದಲ್ಲಿ ನಾಯಕರ ನಡುವಿನ ಪ್ರತಿಷ್ಠೆ, ಅಧಿಕಾರಕ್ಕಾಗಿ ತಿಕ್ಕಾಟ, ಇರುವ ಪಕ್ಷದಲ್ಲಿನ ನಿರ್ಲಕ್ಷ್ಯ, ಅರ್ಹತೆಗೆ ಸಿಗದ ಮಾನ್ಯತೆ ಹಲವಾರು ಕಾರಣಗಳಿಂದ ರಾಜಕಾರಣದಲ್ಲಿ ವಲಸೆ ಎನ್ನುವುದು ನಿರಂತರವಾಗಿ ನಡೆಯುತ್ತಲೇ ಇದೆ.
ನಾಗರಿಕತೆಯ ಉದಯದಿಂದಲೂ ಮಾನವ ನದಿ ದಂಡೆ ಮತ್ತು ಫಲವತ್ತಾದ ಭೂಮಿ ಇರುವ ಕಡೆಗೆ ವಲಸೆ ಹೋಗುವ ಪ್ರವೃತ್ತಿ ಇದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ರಾಜಕೀಯ ವಲಸೆಗಳೂ ಅದೇ ರೀತಿಯಲ್ಲಿ ಕಾಣಿಸುತ್ತಿವೆ. ರಾಜ್ಯದಲ್ಲಿ ಈಗ ಅಧಿಕಾರಕ್ಕಾಗಿ ನಡೆಯುತ್ತಿರುವ ಸಂಘರ್ಷಕ್ಕೆ ಕಾರಣವಾಗಿರುವ ಎರಡು ಮಹಾ ವಲಸೆಗಳ ಬಗ್ಗೆ ಚರ್ಚೆಯಾಗುತ್ತಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ಗೆ ಬಂದು ದಶಕವೊಂದು ಕಳೆದು ಹೋಗಿದ್ದರೂ ಅವರನ್ನು ವಲಸಿಗರು ಎನ್ನುವ ಮಾತುಗಳು ಅಧಿಕಾರ ವಂಚಿತ ಮೂಲ ಕಾಂಗ್ರೆಸ್ ನಾಯಕರ ವಲಯದಿಂದ ಕೇಳು ಬರುತ್ತಿವೆ.
ಯಾವುದೇ ವ್ಯವಸ್ಥೆಯಲ್ಲಿ ಹೊರಗಡೆಯಿಂದ ಬಂದವರಿಗೆ ಹೆಚ್ಚಿನ ಆದ್ಯತೆ ಸಿಗುವುದು ಸಾಮಾನ್ಯ, ಅದು ಅತಿಥಿ ದೇವೋಭವ ಎನ್ನುವ ನಮ್ಮ ಸಂಸ್ಕೃತಿಯ ಭಾಗವಾಗಿರುವುದೂ ಕಾರಣವಾಗಿರಬಹುದು. ಹೀಗಾಗಿ ಯಾರೇ ಹೊರಗಿನಿಂದ ಬಂದರೂ ಅವರಿಗೆ ಹೆಚ್ಚಿನ ಮರ್ಯಾದೆ ದೊರೆ ಯುವಂತೆ ನೋಡಿಕೊಳ್ಳಲಾಗುತ್ತದೆ. ಅದು ಒಂದು ರೀತಿ ಮನೆಯ ಅಳಿಯನಿಗೆ ಕೊಡುವ ಮರ್ಯಾದೆ ಯಂತೆ. ಮನೆ ಮಗನಿಗೆ ಏನಾದರೂ ದೊರೆಯ ದಿದ್ದರೆ ಹೇಗಿದ್ದರೂ ಮನೆಯಲ್ಲಿಯೇ ಇರುತ್ತಾನೆ. ಆದರೆ ಮನೆ ಅಳಿಯನಿಗೆ ಸಿಗಬೇಕಾಗಿದ್ದು ಸಿಗದೇ ಹೋದಾಗ ಮುನಿಸಿಕೊಂಡು ಹೋದರೆ, ಮಗಳ ಸಂಸಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅದೇ ರೀತಿ ರಾಜಕೀಯದಲ್ಲಿಯೂ ವಲಸೆ ಬಂದ ನಾಯಕರು ಮುನಿಸಿಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಪಕ್ಷಕ್ಕೆ ಕರೆದುಕೊಂಡು ಬಂದ ಪಕ್ಷದ ಜವಾಬ್ದಾರಿ ಹೊತ್ತಿರುವ ನಾಯಕರ ಮೇಲೆ ಬೀಳುತ್ತದೆ. ಅದೇ ಕಾರಣಕ್ಕೆ ವಲಸಿಗರಿಗೆ ಹೆಚ್ಚಿನ ಪ್ರಾಧಾನ್ಯ ದೊರೆಯುತ್ತದೆ. ವಲಸಿಗರಿಗೆ ತಮ್ಮಿಂದಲೇ ಅಧಿಕಾರ ಎನ್ನುವ ಅಹಂ ಬರುವುದರಿಂದ ಎಷ್ಟೋ ಸಾರಿ ಅದೇ ಅವರ ಅಸ್ತ್ರವೂ ಆಗಿ ಬಿಡುತ್ತದೆ.
ಈಗ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಬಿಜೆಪಿಗೆ ವಲಸೆ ಬಂದವವರೂ ಕೂಡ ತಮ್ಮಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎನ್ನುವ ವಾದ ಮುಂದಿಡುತ್ತಿದ್ದಾರೆ. ಅವರ ವಾದವನ್ನೂ ಅಲ್ಲಗಳೆಯುವಂತಿಲ್ಲ. ಆದರೆ ಅವರಿಂದ ಮಾತ್ರ ಸರಕಾರ ರಚನೆಯಾಗಿಲ್ಲ. ನಮ್ಮದೂ ಪಾಲಿದೆ ಎನ್ನುವುದು ಮೂಲ ಬಿಜೆಪಿಗರ ವಾದ. ಇಲ್ಲಿ ಅಧಿಕಾರ ಹಿಡಿಯುವುದೇ ಮೂಲ ಉದ್ದೇಶವಾಗಿದ್ದರಿಂದ ಇಲ್ಲಿ ವಲಸೆ-ಮೂಲ ಎಂಬ ವಾದಕ್ಕೆ ಮಹತ್ವ ಇಲ್ಲ ಎನಿಸುತ್ತದೆ.
ಹಾಲಿ ಬಿಜೆಪಿ ಸರಕಾರದಲ್ಲಿ ಸಚಿವರ ಪಟ್ಟಿ ಮಾಡುತ್ತ ಹೋದರೆ, ಶೇ. 70ರಷ್ಟು ವಲಸಿಗರೇ ಇದ್ದಾರೆ, ಈ ಹಿಂದೆಯೂ ಜನತಾ ಪರಿವಾರದಿಂದ ವಲಸೆ ಬಂದವರು ಈಗ ಮೂಲ ಬಿಜೆಪಿಗರಂತಾಗಿದ್ದಾರೆ. ಆದರೆ ಅವರಿಗೂ ಮಹತ್ವದ ಹುದ್ದೆ ನೀಡುವ ವಿಚಾರ ಬಂದಾಗ ಅವರೂ ವಲಸಿಗರೇ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತವೆ.
ಬದಲಾದ ರಾಜಕಾರಣದಲ್ಲಿ ವಲಸಿಗರ ಎಲ್ಲ ಬೇಡಿಕೆಗಳನ್ನು ಈಡೇರಿಸುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಕಷ್ಟವಾಗುತ್ತಿರುವಂತೆ ಕಾಣಿಸುತ್ತಿದೆ. ಅದೇ ಕಾರಣಕ್ಕೆ ಬಿಜೆಪಿಯಲ್ಲಿ ಆಂತರಿಕ ಸಂಘರ್ಷ ಹೆಚ್ಚಾಗಲು ಕಾರಣವಾಗಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಆಗಿರಲಿ ಯಾವುದೇ ರಾಜಕೀಯ ಪಕ್ಷಕ್ಕೆ ಅಧಿಕಾರಕ್ಕೆ ಬರುವುದೇ ಅಂತಿಮ ಗುರಿಯಾದರೆ ರಾಜಕಾರಣದಲ್ಲಿ ತಣ್ತೀ ಸಿದ್ಧಾಂತ ತನ್ನ ಮಹತ್ವ ಕಳೆದುಕೊಳ್ಳುತ್ತವೆ. ಯಾವುದೇ ನಾಯಕನ ವಲಸೆ ಇರುವ ವ್ಯವಸ್ಥೆಗೆ ಬಲ ತುಂಬುವಂತಾಗಬೇಕು. ಅಲ್ಲದೇ ವ್ಯವಸ್ಥೆಯಲ್ಲಿನ ಒಗ್ಗಟ್ಟಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವಂತಿರಬೇಕು. ಆದರೆ ವಲಸೆಯ ಉದ್ದೇಶ ಹಾಗೂ ಪಕ್ಷಕ್ಕೆ ಸೇರಿಸಿಕೊಳ್ಳುವ ಉದ್ದೇಶವೂ ಬದಲಾದಂತೆ ಕಾಣಿಸುತ್ತಿದೆ.
ಸರಕಾರವನ್ನು ಪತನ ಮಾಡಿ ಹೋದವರನ್ನೇ ಮರಳಿ ಬನ್ನಿ ಎಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷರೇ ಬಹಿರಂಗವಾಗಿ ಆಹ್ವಾನ ನೀಡುವಂತಾದರೆ, ಆ ಪಕ್ಷ ತತ್ವಸಿದ್ಧಾಂತಕ್ಕಿಂತ ಅಧಿಕಾರಕ್ಕಾಗಿ ಎಷ್ಟು ಹಪಹಪಿಸುತ್ತಿದೆ ಎನ್ನುವುದು ವೇದ್ಯವಾಗುತ್ತದೆ.
ರಾಜಕೀಯ ಪಕ್ಷಗಳ ನಾಯಕರ ವಲಸೆ ಪಕ್ಷದ ಮೂಲ ನಾಯಕರನ್ನಷ್ಟೇ ಅಲ್ಲ. ಪಕ್ಷಕ್ಕಾಗಿ ನಿರಂತರವಾಗಿ ಬೆವರು ಹರಿಸುವ ಕಾರ್ಯಕರ್ತರನ್ನೂ ತೆರೆಗೆ ಸರಿಸಿ ತನ್ನ ಪ್ರಭಾವ ಹೆಚ್ಚಾಗುವಂತೆ ನೋಡಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಅಧಿಕಾರಕ್ಕಾಗಿಯೇ ರಾಜಕಾರಣ ಮಾಡುವ ಮನಃಸ್ಥಿತಿ ಹೆಚ್ಚುತ್ತಿರುವುದು ವಲಸೆ ರಾಜಕಾರಣಕ್ಕೆ ಹೆಚ್ಚು ಮಹತ್ವ ಬಂದಂತಾಗಿದೆ. ವಲಸೆ ಎನ್ನುವುದು ರಾಜಕೀಯ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರ ನಡುವೆ ಆಂತರಿಕ ಸಂಘರ್ಷ ಹೆಚ್ಚಾಗುವಂತೆ ಮಾಡುತ್ತದೆ. ಇದರ ಪರಿಣಾಮ ನಾಯಕರು ಬೇರೆ ಪಕ್ಷಗಳ ವಿರುದ್ಧ ಹೋರಾಟ ಮಾಡುವುದಕ್ಕಿಂತ ಪಕ್ಷದಲ್ಲಿನ ವಲಸೆ ನಾಯಕನ ವಿರುದ್ಧವೇ ಸಂಘರ್ಷ ನಡೆಸುವ ಪ್ರಮೇಯ ಹೆಚ್ಚಾಗುತ್ತದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿ ಮೂಲ ವಲಸಿಗರ ನಡುವಿನ ಸಂಘರ್ಷ ಕೇವಲ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ನಡೆಯದೇ ಬ್ಲಾಕ್ ಮಟ್ಟದ ಕಾರ್ಯಕರ್ತರ ನಡುವೆಯೂ ನಡೆಯು ತ್ತಿದ್ದು, ಆಂತರಿಕ ಸಂಘರ್ಷ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಿಂತ ಹೆಚ್ಚಾಗಿ, ಇನ್ನೊಬ್ಬರಿಗೆ ಅಧಿಕಾರ ದೊರೆಯದಂತೆ ನೋಡಿಕೊಳ್ಳುವುದಕ್ಕೆ ಹೆಚ್ಚಿನ ಪ್ರಾಧಾನ್ಯ ದೊರೆಯುವಂತೆ ಮಾಡುತ್ತದೆ.
ವಲಸೆ ಇರುವ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಾದರೆ, ಅದು ರಾಜಕೀಯಕ್ಕಷ್ಟೇ ಮಾತ್ರವಲ್ಲ ರಾಜ್ಯಕ್ಕೂ ಒಳ್ಳೆಯದಲ್ಲ. ಅಂತಹ ವ್ಯವಸ್ಥೆಗೆ ರಾಜಕೀಯ ಪಕ್ಷಗಳೇ ನಿಯಂತ್ರಣ ಹಾಕುವ ವ್ಯವಸ್ಥೆ ನಿರ್ಮಾಣವಾಗಬೇಕು. ಅಧಿಕಾರದ ಆಸೆಗಾಗಿ ನಡೆಯುವ ರಾಜಕೀಯ ವಲಸೆಯಿಂದ ರಾಜ್ಯ ಮತ್ತು ಸಮಾಜದ ಉದ್ಧಾರ ಆಗುವುದು ಕಷ್ಟ. ಅಧಿಕಾರಕ್ಕಾಗಿ ನಡೆಯುವ ರಾಜಕೀಯ ವಲಸೆಗೆ ತಡೆಯೊಡ್ಡದಿದ್ದರೆ, ಕೊಳಚೆ ನೀರನ್ನೇ ನದಿಯೆಂದು ಪೂಜಿಸುವ ಪರಿಸ್ಥಿತಿಗೆ ಬಂದಂತಾಗುತ್ತದೆ.
ಈಗಿನ ಪ್ರಸಕ್ತ ರಾಜ್ಯ ರಾಜಕೀಯದಲ್ಲಿನ ವಿದ್ಯ ಮಾನಗಳು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿರುವುದಕ್ಕಿಂತ ಮಾರಕವಾಗುವುದೇ ಹೆಚ್ಚು. ಈ ನಿಟ್ಟಿನಲ್ಲಿ ಹಾಲಿ ಸರಕಾರದಲ್ಲಿನ ಮೂಲ ವಲಸಿಗರ ನಡುವಿನ ಗೊಂದಲ ಹಾಗೂ ಈಗಲೇ ಅಧಿಕಾರಕ್ಕೇರುವ ಲೆಕ್ಕಾಚಾರದಲ್ಲಿ ಮೂಲ ವಲಸಿಗರೆಂದು ಬೀದಿ ರಂಪ ಮಾಡುವ ರಾಜಕಾರಣ ಬದಿಗಿಟ್ಟು ರಾಜ್ಯದ ಹಿತದೃಷ್ಟಿಯಿಂದ ರಾಜಕಾರಣ ಮಾಡುವ ಅಗತ್ಯ ಹೆಚ್ಚಿದೆ. ಅದಕ್ಕಾಗಿ ವಲಸೆ ಮತ್ತು ಅದರ ಬಗೆಗಿನ ರಾಜಕೀಯ ನಾಯಕರ ಮನಃಸ್ಥಿತಿ ಎರಡೂ ಬದಲಾಗಬೇಕಿದೆ.
– ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.