ಬಿಜೆಪಿ, ಕಾಂಗ್ರೆಸ್‌ನಲ್ಲಿ ಹುರುಪು; ಜೆಡಿಎಸ್‌ಗೆ ಆಶಾಭಾವ
Team Udayavani, Dec 9, 2022, 7:00 AM IST
ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲ ವಿಧಾನಸಭೆ ಚುನಾವಣೆ ಫಲಿತಾಂಶ ರಾಜ್ಯದಲ್ಲಿ ಬಿಜೆಪಿಗೆ ಧೈರ್ಯದ ಜತೆ ಆತಂಕ, ಕಾಂಗ್ರೆಸ್‌ಗೆ ಆಘಾತದ ನಡುವೆ ಸಮಾಧಾನ. ಜೆಡಿಎಸ್‌ನದು ಎಂದಿನಂತೆ ಆಶಾಭಾವನೆ. ಗುಜರಾತ್ ಫಲಿತಾಂತ ರಾಜ್ಯ ಬಿಜೆಪಿ ನಾಯಕರಲ್ಲಿ ಹುರುಪು ತಂದಿದ್ದು, ರಾಷ್ಟ್ರೀಯ ನಾಯಕತ್ವ ಇತ್ತ ಯಾವುದೇ ಕ್ಷಣ ದಾಂಗುಡಿ ಇಡಲಿದೆ.
ಕಾಂಗ್ರೆಸ್ ನಾಯಕರಿಗೆ ಗುಜರಾತ್ ಫಲಿತಾಂಶ ಆಘಾತ ತರಿಸಿದರೂ ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಹಿಡಿಯುವ ಸಮಾಧಾನ ಪಟ್ಟುಕೊಂಡು ಇಲ್ಲೂ ಅದೇ ರೀತಿ ಅವಕಾಶ ಸಿಗಬಹುದೆಂಬ ನಿರೀಕ್ಷೆ ಮೂಡಿಸಿದೆ. ಗುಜರಾತ್‌ನಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ನ ಹಿನ್ನಡೆ, ಹಿಮಾಚಲದಲ್ಲಿ ಬಿಜೆಪಿ ಹಿನ್ನೆಡೆ ಆಧಾರದಲ್ಲಿ ಕರ್ನಾಟಕದಲ್ಲಿ ತಮಗೆ ಜನಮನ್ನಣೆ ಸಿಗಬಹುದೆಂಬ ಆಶಾಭಾವ ಜೆಡಿಎಸ್‌ನದ್ದಾಗಿದೆ. ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಗೆಲುವಿನ ಬಳಿಕ ಗುಜರಾತ್‌ನಲ್ಲೂ ಮ್ಯಾಜಿಕ್ ನಡೆಯಬಹುದೆಂಬ ನಿರೀಕ್ಷೆಯಲ್ಲಿದ್ದ ಆಮ್ ಆದ್ಮಿ ಪಕ್ಷಕ್ಕೆ ಕರ್ನಾಟಕದಲ್ಲಿ ಗಟ್ಟಿ ಪ್ರಯತ್ನ ಹಾಕಿದರೆ ಖಾತೆ ತೆರೆಯುವ ಆಸೆ ಚಿಗುರೊಡೆದಿದೆ.
ಕೈ ಲೆಕ್ಕಾಚಾರ ಬುಡಮೇಲು :
ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಾಂಗ್ರೆಸ್‌ಗೆ ನಿರೀಕ್ಷಿತವಾದರೂ ಕಾಂಗ್ರೆಸ್ ಪ್ರದರ್ಶನ ಇಷ್ಟು ಕಳಪೆ ಇರಬಹುದು ಎಂಬ ಅಂದಾಜು ರಾಜ್ಯ ಕಾಂಗ್ರೆಸ್ ನಾಯಕರಿಗೆ ಇರಲಿಲ್ಲ. ಆಮ್ ಆದ್ಮಿ ಪಾರ್ಟಿ ಬಿಜೆಪಿ ಮತ ಕಸಿಯಬಹುದೆಂಬ ಅಭಿಪ್ರಾಯವಿತ್ತು. ಆದರೆ, ಫಲಿತಾಂಶ ಕಾಂಗ್ರೆಸ್‌ನ ಲೆಕ್ಕಾಚಾರ ಬುಡಮೇಲು ಮಾಡಿದೆ. ಒಳ ಜಗಳ ಹಾಗೂ ಅತಿಯಾದ ಆತ್ಮವಿಶ್ವಾಸದಿಂದ ಮೈ ಮರೆತರೆ ಅಧಿಕಾರ ಹಿಡಿಯುವ ಕನಸು ನನಸಾಗುವುದಿಲ್ಲ ಎಂಬ ಸಂದೇಶ ಕಾಂಗ್ರೆಸ್‌ಗೆ ಸಿಕ್ಕಿದ್ದು ಒಗ್ಗಟ್ಟಿನಿಂದ ಹೋರಾಟ ಮಾಡುವ ಅನಿವಾರ್ಯತೆಯಿದೆ. ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ಗೆ ಅಧಿಕಾರ ತಂದುಕೊಟ್ಟಿದ್ದು ಆ ಪ್ರೇರಣೆಯಿಂದ ರಾಜ್ಯದಲ್ಲೂ ಅಧಿಕಾರಕ್ಕೆ ತರುವ ಸವಾಲು ಎದುರಾಗಿದೆ.
ಗುಜರಾತ್ ಮಾಡೆಲ್: ಬಿಜೆಪಿಗೆ ಭಯ:
ಗುಜರಾತ್ ಫಲಿತಾಂಶ ಬಿಜೆಪಿ ಪಾಲಿಗೆ ಟಾನಿಕ್‌ನಂತಾಗಿದೆ. ಕರ್ನಾಟಕದ 150 ಟಾರ್ಗೆಟ್ ಗುರಿ ತಲುಪುವ ಧೈರ್ಯ ಕೊಟ್ಟಿದೆ. ಆದರೆ, ಅಲ್ಲಿ ಬಿಜೆಪಿಯು ಏಳು ಸಚಿವರೂ ಸೇರಿ 42 ಹಾಲಿ ಪ್ರಭಾವಿ ಶಾಸಕರಿಗೆ ಟಿಕೆಟ್ ನಿರಾಕರಿಸಿದರೂ ಪ್ರಯೋಗ ಯಶಸ್ವಿಯಾಗಿರುವುದರಿಂದ ಅಲ್ಲಿನ ಮಾಡೆಲ್ ಇಲ್ಲಿಯೂ ಅನುಸರಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇದು ಕರ್ನಾಟಕದ ಕೆಲವು ಸಚಿವರು ಹಾಗೂ ಶಾಸಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಎಪ್ಪತ್ತು ವರ್ಷ ದಾಟಿದವರಿಗೆ ಟಿಕೆಟ್ ಅನುಮಾನ ಎಂಬ ಮಾತುಗಳ ನಡುವೆ ಇದೀಗ ಗುಜರಾತ್ ಮಾಡೆಲ್ ಸಹ ಶಾಸಕರಲ್ಲಿ ಭಯ ಹುಟ್ಟಿಸಿದೆ. ಆದರೆ, ಹೊಸ ಮುಖಗಳಿಗೆ ಅವಕಾಶ ಸಿಗಬಹುದೆಂಬ ಆಸೆಯೂ ಎರಡನೇ ಹಂತದ ನಾಯಕರಲ್ಲಿ ಮೂಡಿದೆ. ಒಟ್ಟಾರೆ, ಗುಜರಾತ್ ನಂತರ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಜನವರಿ ತಿಂಗಳಿನಿಂದ ಹದಿನೈದು ದಿನಕ್ಕೊಮ್ಮೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಪ್ರವಾಸ ಮಾಡಲಿದ್ದು, ವಾರ್ ರೂಂ ಸ್ಥಾಪನೆ ಸಹಿತ ಎಲ್ಲ ಕಾರ್ಯತಂತ್ರಗಳು ಇಲ್ಲಿಂದಲೇ ಆರಂಭವಾಗಲಿವೆ.
ಜೆಡಿಎಸ್‌ಗೆ ಅನಿರೀಕ್ಷಿತ ವಿದ್ಯಮಾನಗಳೇ ಲಾಭ :
ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಫಲಿತಾಂಶ ಜೆಡಿಎಸ್‌ಗೆ ನಿರೀಕ್ಷಿತ. ಆದರೂ ಆ ಎರಡೂ ರಾಜ್ಯಗಳ ರಾಜಕಾರಣಕ್ಕೂ ಕರ್ನಾಟಕದ ಪರಿಸ್ಥಿತಿಗೂ ವ್ಯತ್ಯಾಸ ಇರುವುದರಿಂದ ತಮ್ಮ ಗುರಿ ತಲುಪಲು ದೊಡ್ಡ ಮಟ್ಟದ ಸಮಸ್ಯೆ ಆಗದು ಎಂಬ ಆಶಾಭಾವ ಹೊಂದಿದೆ. ಕಳೆದ ಇಪ್ಪತ್ತು ದಿನಗಳಿಂದ ನಡೆಸಿದ ಪಂಚರತ್ನ ಯಾತ್ರೆಗೆ ಸ್ಪಂದನೆ, ಕಾಂಗ್ರೆಸ್‌ನಲ್ಲಿನ ಆಂತರಿಕ ಸಂಘರ್ಷ, ಬಿಜೆಪಿಯಲ್ಲಿ ಮುಂದೆ ಅನಿರೀಕ್ಷಿತ ವಿದ್ಯಮಾನ ಗಳು ನಡೆದರೆ ತಮಗೆ ವರದಾನವಾಗಬಹುದು ಎಂಬುದು ಜೆಡಿಎಸ್ ಲೆಕ್ಕಾಚಾರ.
ರಾಜ್ಯದಲ್ಲೂ ಚುನಾವಣಾ ಮೂಡ್ :
ಬಹುತೇಕ ರಾಜ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲೂ ಈಗಾಗಲೇ ಚುನಾವಣಾ ಮೂಡ್ ಆವರಿಸಿದ್ದು ಗುಜರಾತ್- ಹಿಮಾಚಲ ಪ್ರದೇಶ ಫಲಿತಾಂಶ ಒಂದೊಂದು ಪಕ್ಷಕ್ಕೆ ಒಂದೊಂದು ರೀತಿಯ ಸಂದೇಶ ಸಿಕ್ಕಂತಾಗಿದೆ. ಬೆಳಗಾವಿ ಅಧಿವೇಶ ನದ ನಂತರ ಸಂಕ್ರಾಂತಿ ವೇಳೆಗೆ ಹಾಲಿ ಶಾಸಕರೂ ರಾಜೀನಾಮೆ ನೀಡುವ ಮೂಲಕ ಪಕ್ಷಾಂತರ ಪರ್ವ ಆರಂಭವಾಗ ಲಿದ್ದು ಬಿಜೆಪಿ ಶುಕ್ರದೆಸೆಯ ನಿರೀಕ್ಷೆಯಲ್ಲಿದೆ. ಈ ಮಧ್ಯೆ, ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆಯ ಮಾತುಗಳೂ ಕೇಳಿಬರುತ್ತಿವೆ.
– ಎಸ್. ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.