Karnataka Election 2023: 2ನೇ ಪಟ್ಟಿ: ಹಳೆ-ಹೊಸ ಮುಖಗಳ ಮಿಶ್ರಣ
ಅಳೆದೂ ತೂಗಿ 42 ಕ್ಷೇತ್ರಗಳ 2ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ ಹೈಕಮಾಂಡ್
Team Udayavani, Apr 7, 2023, 5:45 AM IST
ಬೆಂಗಳೂರು: ಉಳಿದ ನೂರು ಕ್ಷೇತ್ರಗಳ ಪೈಕಿ ಅಳೆದು-ತೂಗಿ ಅಂತಿಮಗೊಳಿಸಿರುವ 42 ಸೀಟುಗಳ ಕಾಂಗ್ರೆಸ್‌ನ ಎರಡನೇ ಪಟ್ಟಿ ಹಳೆಯ ಮತ್ತು ಹೊಸ ಮುಖಗಳ ಮಿಶ್ರಣವಾಗಿದೆ.
ಇದರಲ್ಲಿ ಹಾಲಿ-ಮಾಜಿ ಶಾಸಕರು, ಮಾಜಿ ಸಚಿವರಿಗೆ ಮಣೆ ಹಾಕಲಾಗಿದೆ. ಇದರ ಜತೆಗೆ ಹೊಸಬರಿಗೂ ವೇದಿಕೆ ಕಲ್ಪಿಸಲಾಗಿದೆ. ಎಲ್ಲ ವರ್ಗಗಳ ನಾಯಕರಿಗೆ ಅವಕಾಶವನ್ನೂ ನೀಡಲಾಗಿದೆ. ಈ ನಿಟ್ಟಿನಲ್ಲಿ ಗೆಲುವಿನ ಮಾನದಂಡದೊಂದಿಗೆ ಸಾಮಾಜಿಕ ನ್ಯಾಯ, ಸಾಧ್ಯವಾದಷ್ಟು ಬಂಡಾಯ ಭುಗಿಲೇಳದಂತೆ ನೋಡಿಕೊಳ್ಳುವ ಜಾಣ ನಡೆ, ಬಣಗಳ ನಡುವೆ ಕೊಡು-ಕೊಳ್ಳುವಿಕೆ, ಇದಕ್ಕಾಗಿ ಹಾಲಿ ಶಾಸಕರಿಗೂ ಕೊಕ್ ಕೊಡುವ ವರಿಷ್ಠರ ದಿಟ್ಟ ನಿಲುವು ಕಾಣಬಹುದು. ಆದರೂ ಅಸಮಾಧಾನ ಬೀದಿಗೆ ಬಂದಿದೆ.
ಎರಡನೇ ಪಟ್ಟಿಯಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಸಿಂಹಪಾಲು ನೀಡಲಾಗಿದೆ. ಒಟ್ಟಾರೆ 42 ಸೀಟುಗಳಲ್ಲಿ ತಲಾ 11 ಅಭ್ಯರ್ಥಿಗಳು ಈ ಎರಡೂ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಉಳಿದಂತೆ ಕುರುಬ ಮತ್ತು ಅಲ್ಪಸಂಖ್ಯಾಕರಿಗೆ ತಲಾ 3, ಬೆಸ್ತ-ಕೋಲಿ, ವಾಲ್ಮೀಕಿ, ಮರಾಠ, ಪರಿಶಿಷ್ಟ ಜಾತಿ ಎಡ ಮತ್ತು ಬಲ ತಲಾ 2, ರೆಡ್ಡಿ, ರಜಪೂತ, ಈಡಿಗ, ನಾಯ್ಡು ಸಮುದಾಯಕ್ಕೆ ಸೇರಿದ ತಲಾ ಒಬ್ಬರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತೀವ್ರ ಕುತೂಹಲ ಮೂಡಿಸಿರುವ ಕೋಲಾರಕ್ಕೆ ಯಾರು? ಅದೇ ರೀತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಠಕ್ಕರ್ ಕೊಡುವವರು ಯಾರು? ನಿರೀಕ್ಷೆಗಳನ್ನು ಹೊತ್ತು ಪಕ್ಷ ಸೇರಿದವರ ಕತೆ ಏನು? ಇಂತಹ ಹಲವು ಕುತೂಹಲಗಳಿಗೆ ಎರಡನೇ ಪಟ್ಟಿಯಲ್ಲೂ ಉತ್ತರ ಸಿಕ್ಕಿಲ್ಲ. ಈ ಮಧ್ಯೆ ಸಿಎಂ ಕ್ಷೇತ್ರ ಶಿಗ್ಗಾವಿಗೆ ವಿನಯ್ ಕುಲಕರ್ಣಿ ಹೆಸರು ಕೇಳಿಬರುತ್ತಿತ್ತು. ಆದರೆ ಧಾರವಾಡಕ್ಕೆ ಅವರ ಹೆಸರು ಘೋಷಣೆಯಾಗಿದ್ದು, ವದಂತಿಗೆ ತೆರೆಬಿದ್ದಿದೆ. ಇನ್ನು ಧಾರವಾಡ ಪಶ್ಚಿಮ ಕ್ಷೇತ್ರ, ಚಿಕ್ಕಮಗಳೂರು, ಬೆಂಗಳೂರಿನ ಪುಲಕೇಶಿನಗರಕ್ಕೆ ಇನ್ನೂ ಅಭ್ಯರ್ಥಿ ಘೋಷಿಸಿಲ್ಲ. ಕಾರಣ ಬಿಜೆಪಿಯಿಂದ ಬಂದ ಮೋಹನ್ ಲಿಂಬಿಕಾಯಿ, ಸಿ.ಟಿ. ರವಿ ಆಪ್ತರಾಗಿದ್ದ ಚಿಕ್ಕಮಗಳೂರಿನ ಎಚ್.ಡಿ. ತಮ್ಮಯ್ಯ, ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಭವಿಷ್ಯ ಕುತೂಹಲ ಮೂಡಿಸಿದೆ.
ಹಾಗೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದವರಲ್ಲಿ ಟಿಕೆಟ್ ಘೋಷಣೆಯಾಗಿರುವ ಹೆಸರು ಬಾಬುರಾವ್ ಚಿಂಚನಸೂರ ಮಾತ್ರ. ನಿರೀಕ್ಷೆಯಂತೆ ಗುರುಮಿಠRಲ್‌ನಿಂದ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ಹೊಸ ಮುಖಗಳನ್ನು ಪರಿಚಯಿಸ ಲಾಗಿದ್ದರೂ ಗೆಲ್ಲುವ ಸಾಧ್ಯತೆಗಳು ತುಂಬಾ ಕಡಿಮೆ ಇರುವ ಕ್ಷೇತ್ರಗಳಿಗೇ ಹೆಚ್ಚಾಗಿ ಅವರನ್ನು ಕಣಕ್ಕಿಳಿಸಲಾಗಿದೆ.
ಇನ್ನು ವರಿಷ್ಠರ ಮ್ಯಾರಥಾನ್ ಸಭೆಗಳು, ಸಾಕಷ್ಟು ಲೆಕ್ಕಾಚಾರಗಳ ನಡುವೆಯೂ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಪ್ಪಿಲ್ಲ. ಚಿತ್ರದುರ್ಗದಲ್ಲಿ ರಘು ಆಚಾರ್ ಟಿಕೆಟ್ ನೀಡದಿದ್ದಕ್ಕೆ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿ, ಬಾದಾಮಿ, ಕಿತ್ತೂರು, ಕಲಘಟಗಿ ಮತ್ತಿತರ ಕಡೆಗಳಲ್ಲಿ ಅಸಮಾಧಾನದ ಹೊಗೆ ಕಂಡುಬರುತ್ತಿದೆ.
ಯಾವ ಸಮುದಾಯಕ್ಕೆ ಎಷ್ಟು ?
ಇದುವರೆಗೆ ಒಟ್ಟಾರೆ 166 ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಅಂತಿಮಗೊಳಿಸಿದೆ. ಈ ಪೈಕಿ ಯಾವ ಸಮುದಾಯಕ್ಕೆ ಎಷ್ಟು ಎಂಬುದರ ವಿವರ ಹೀಗಿದೆ. ಲಿಂಗಾಯತ- 41, ಒಕ್ಕಲಿಗ- 35, ವಾಲ್ಮೀಕಿ- 12, ಎಸ್ಸಿ ಬಲ- 12, ಅಲ್ಪಸಂಖ್ಯಾಕ- 11, ಕುರುಬ- 8, ಎಸ್ಸಿ ಎಡ- 7, ಈಡಿಗ- 7, ಬ್ರಾಹ್ಮಣ- 5, ಎಸ್ಸಿ ಲಂಬಾಣಿ- 4, ಮರಾಠ- 4, ಬೆಸ್ತ/ ಕೋಲಿ/ ಮೊಗವೀರ- 4, ಬಂಟ್ಸ್- 3, ರೆಡ್ಡಿ- 2, ಜೈನ, ಕೊಡವ, ಕ್ರಿಶ್ಚಿಯನ್, ನಾಯ್ಡು ತಲಾ 1.
ಮಾಜಿ ಸಚಿವರಿಗೂ ಅವಕಾಶ
ಅಂತಿಮಗೊಂಡ 2ನೇ ಪಟ್ಟಿಯಲ್ಲಿ ಮಾಜಿ ಸಚಿವರು- ಆರ್.ಬಿ.ತಿಮ್ಮಾಪುರ, ಎಚ್.ವೈ. ಮೇಟಿ, ಬಾಬುರಾವ್ ಚಿಂಚನಸೂರು, ಇಕ್ಬಾಲ್ ಅನ್ಸಾರಿ, ವಿನಯ್ ಕುಲಕರ್ಣಿ, ಸಂತೋಷ್ ಲಾಡ್, ಎಚ್. ಆಂಜನೇಯ, ಕಿಮ್ಮನೆ ರತ್ನಾಕರ, ಎಸ್.ಆರ್. ಶ್ರೀನಿವಾಸ ಹಾಗೂ ಬಿ.ಶಿವರಾಂ.
ಟಿಕೆಟ್ ಘೋಷಣೆ ಆಗದ ಪ್ರಮುಖ ಕ್ಷೇತ್ರಗಳು
ಕೋಲಾರ, ಪುಲಕೇಶಿನಗರ, ಸರ್.ಸಿ.ವಿ.ರಾಮನ್‌ನಗರ, ದಾಸರಹಳ್ಳಿ, ಚಿಕ್ಕಪೇಟೆ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಕೆ.ಆರ್.ಪುರ, ಅರಸೀಕೆರೆ, ಅರಕಲಗೂಡು, ತರೀಕೆರೆ, ಚಿಕ್ಕಮಗಳೂರು, ಅಥಣಿ, ತೇರದಾಳ, ಜಗಳೂರು, ದೇವರ ಹಿಪ್ಪರಗಿ, ಶಿಕಾರಿಪುರ, ಶಿಗ್ಗಾವಿ, ಕುಮಟಾ, ಮಂಗಳೂರು ಉತ್ತರ, ಮಂಗಳೂರು ನಗರ, ಹರಿಹರ, ಬಳ್ಳಾರಿ, ಲಿಂಗಸುಗೂರು, ಕುಂದಗೋಳ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.