ಕಾಂಗ್ರೆಸ್ ಧ್ವಜವೇ ನನ್ನ ಧರ್ಮ,ಪಕ್ಷ ಪೂಜೆಗೆ ಪರಮ ಆದ್ಯತೆ: ಡಿ.ಕೆ.ಶಿವಕುಮಾರ್
ಪಕ್ಷ ಸಂಘಟನೆಗೆ ರಾಜಶೇಖರ ರೆಡ್ಡಿ ಮಾದರಿ ಪಾದಯಾತ್ರೆಗೆ ಸಲಹೆ
Team Udayavani, Mar 20, 2020, 9:12 PM IST
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ದಿ|ರಾಜಶೇಖರ ರೆಡ್ಡಿ ಮಾದರಿಯಲ್ಲಿ ರಾಜ್ಯಾದ್ಯಂತ ಪಾದಯಾತ್ರೆ ಮಾಡುವಂತೆ ಪಕ್ಷದ ಮಾಜಿ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರು ಸಲಹೆ ನೀಡಿದ್ದಾರೆ.
ಶುಕ್ರವಾರ ಪಕ್ಷದ ಕಚೇರಿಯಲ್ಲಿ ನಡೆದ ಮಾಜಿ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರ ಸಭೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಬಲಗೊಳಿಸಬೇಕು. ಅದಕ್ಕಾಗಿ ರಾಜ್ಯಾದ್ಯಂತ ಪಾದಯಾತ್ರೆ ಮಾಡಿ ಜನರನ್ನು ಪಕ್ಷದ ಕಡೆಗೆ ಮುಖ ಮಾಡುವಂತೆ ಮಾಡಬೇಕು. ಎಲ್ಲ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಸಮಾವೇಶಗಳನ್ನು ನಡೆಸಬೇಕು ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷವನ್ನು ತಳ ಮಟ್ಟದಿಂದ ಬಲಗೊಳಿಸಲು ಬೂತ್ ಹಾಗೂ ಬ್ಲಾಕ್ ಮಟ್ಟದ ಕಾರ್ಯಕರ್ತರಿಗೆ ಜಿಲ್ಲಾ ಮಟ್ಟದಲ್ಲಿ ಕಾರ್ಯಾಗಾರ ಏರ್ಪಡಿಸಿ ನಿಷ್ಠೆಯಿಂದ ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಅಲ್ಲದೇ ಕೆಪಿಸಿಸಿ ಅಧ್ಯಕ್ಷರ ಹುದ್ದೆಯಿಂದ ಹಿಡಿದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹುದ್ದೆವರೆಗೂ ಅಧಿಕಾರದ ಅವಧಿ ನಿಗದಿ ಮಾಡಿ ಹೊಸಬರಿಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಮಾಜಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷದ ಧ್ವಜವೇ ನನ್ನ ಧರ್ಮ
ಕಾಂಗ್ರೆಸ್‌ನಲ್ಲಿ ಯಾರೂ ಹೆಚ್ಚಲ್ಲ, ಯಾರೂ ಕಡಿಮೆ ಇಲ್ಲ. ಎಲ್ಲರೂ ಸಮಾನರು. ಇಲ್ಲಿ ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆಗೆ ಆದ್ಯತೆ. ಕಾಂಗ್ರೆಸ್ ಪಕ್ಷದ ಧ್ವಜವೇ ನನ್ನ ಧರ್ಮ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಸಭೆಯಲ್ಲಿ ಮಾಜಿ ಪದಾಧಿಕಾರಿಗಳೊಂದಿಗೆ ಚರ್ಚಿಸಿರುವ ಅವರು, ಪಕ್ಷವನ್ನು ಕಟ್ಟಿ, ಸದೃಢಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದವರಿಗೆ ಅಧಿಕಾರ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ನೀವು ಅಧಿಕಾರದ ಹಿಂದೆ ಹೋಗುವ ಅಗತ್ಯವೇ ಇರುವುದಿಲ್ಲ. ಪಕ್ಷದಲ್ಲಿ ಶ್ರಮಕ್ಕೆ ಮಾತ್ರ ಬೆಲೆ ಇದೆಯೇ ಹೊರತು ಪ್ರಭಾವಕ್ಕೆ ನಾನು ಮಣಿಯುವುದಿಲ್ಲ. ಎಲ್ಲರನ್ನು ಒಟ್ಟಿಗೆ ಕೆರೆದುಕೊಂಡು ಹೋಗುವ ಸಂಕಲ್ಪ ನನ್ನದು ಎಂದರು.
ನನಗೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇದೆ. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಎಲ್ಲರೂ ಸಮಾನರೆ. ನನಗೆ ಮತ್ತು ಕಾರ್ಯಾಧ್ಯಕ್ಷರಿಗೆ ಪಕ್ಷ ಅಧಿಕಾರ ಕೊಟ್ಟಿಲ್ಲ, ಜವಾಬ್ದಾರಿ ಕೊಟ್ಟಿದೆ. ಅದನ್ನು ಸಮರ್ಥವಾಗಿ ನಿಭಾಯಿಸಲು ನಿಮ್ಮೆಲ್ಲರ ಸಹಕಾರ, ಕಾರ್ಯನಿಷ್ಠೆ ಹಾಗೂ ಬದ್ಧತೆ ಬಹಳ ಮುಖ್ಯ.
ಕಾರ್ಯಕರ್ತರಿಲ್ಲದೇ ನಾಯಕರೂ ಗಟ್ಟಿಯಾಗುವುದಿಲ್ಲ, ಪಕ್ಷವೂ ಗಟ್ಟಿಯಾಗುವುದಿಲ್ಲ. ಕಾರ್ಯಕರ್ತರಿದ್ದರೆ ಮಾತ್ರ ಎಲ್ಲರಿಗೂ ಶಕ್ತಿ ಬರುತ್ತದೆ. ಹೀಗಾಗಿ ಇಲ್ಲಿ ಕಾರ್ಯಕರ್ತರು ಮತ್ತು ನಾಯಕರು ಸಮಾನ ಭಾವದಿಂದ ದುಡಿಯುವ ಆವಶ್ಯಕತೆ ಇದೆ. ನಮ್ಮ ಸಾಮರ್ಥ್ಯ ಮತ್ತು ಶಕ್ತಿಯನ್ನು ಬಿಜೆಪಿ ವಿರುದ್ಧ ಹೋರಾಡಲು, ಪಕ್ಷವನ್ನು ಕಟ್ಟುವುದಕ್ಕಾಗಿ ವಿನಿಯೋಗವಾಗಬೇಕು. ಆ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು.
ಪಕ್ಷದಲ್ಲಿ 20-30 ವರ್ಷಗಳ ಕಾಲ ಕೆಲಸ ಮಾಡಿದ ಹಿರಿಯ ನಾಯಕರಿದ್ದಾರೆ. ಅವರ ಹಿರಿತನ, ಅನುಭವ, ಸಲಹೆಗಳನ್ನು ನಾವು ಮುಕ್ತವಾಗಿ ಸ್ವೀಕರಿಸಬೇಕು. ಪಕ್ಷವನ್ನು ಬೇರು ಮಟ್ಟದಿಂದ ಬಲಗೊಳಿಸಿ, ಮತ್ತೆ ಅಧಿಕಾರಕ್ಕೆ ತರಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.