Congress Government: ಒಳ ಮೀಸಲಿಗಾಗಿ ಎಡಗೈ ಬಣ ರಾಹುಲ್ ಗಾಂಧಿಗೆ ಮೊರೆ
ಅನ್ಯರಾಜ್ಯದ ಕೈ ದಲಿತ ನಾಯಕರ ಮೂಲಕ ಒತ್ತಡ ತಂತ್ರ ಕೈಗೆ ಸಿಗದ ಸೆಂಥಿಲ್ !
Team Udayavani, Oct 14, 2024, 7:50 AM IST
ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದನ್ವಯ ದಲಿತ ಮೀಸಲು ವರ್ಗೀಕರಣದ ಆಗ್ರಹ ರಾಜ್ಯ ಸರಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಂಡಿಸುವುದಕ್ಕೆ ರಾಜ್ಯ ಕಾಂಗ್ರೆಸ್ಸಿನ ಎಡಗೈ ಸಮುದಾಯದ ದಲಿತ ಮುಖಂಡರು ಈಗ ನೆರೆ ರಾಜ್ಯದ ದಲಿತ ನಾಯಕರ ಮೊರೆ ಹೋಗಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.
ಮೀಸಲು ವರ್ಗೀಕರಣಕ್ಕೆ ಸಂಬಂಧಪಟ್ಟಂತೆ ಹೈಕಮಾಂಡ್ ನಿರ್ಣಯ ಆಧರಿಸಿ ಕ್ರಮ ತೆಗೆದುಕೊಳ್ಳುವ ನಿಲುವನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ತೆಗೆದುಕೊಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ರಾಷ್ಟ್ರಮಟ್ಟದ ಕಾಂಗ್ರೆಸ್ ಕೋರ್ ಕಮಿಟಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕಿದೆ. ಇದರಿಂದ ಸುಪ್ರೀಂ ಆದೇಶ ಜಾರಿ ವಿಳಂಬವಾಗಬಹುದೆಂಬುದು ಎಡಗೈ ದಲಿತ ನಾಯಕರ ಚಿಂತೆಯಾಗಿದ್ದು, ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ವಸ್ತುಸ್ಥಿತಿ ವಿವರಿಸಲು ಮುಂದಾಗಿದ್ದಾರೆ. ಆದರೆ ಕಾಂಗ್ರೆಸ್‌ನ “ಒಳ ರಾಜಕಾರಣ’ ಇದಕ್ಕೆ ಅವಕಾಶ ನಿರಾಕರಿಸುತ್ತಿದ್ದು, ರಾಹುಲ್ ಗಾಂಧಿಯವರಿಗೆ ಆಪ್ತರಾದ ನೆರೆ ರಾಜ್ಯದ ದಲಿತ ನಾಯಕರ ಸಹಕಾರ ಪಡೆಯುವ ಪ್ರಯತ್ನ ನಡೆಯುತ್ತಿದೆ.
ಪ್ರಣತಿ ಶಿಂಧೆಗೆ ಮೊರೆ
ತಮಿಳುನಾಡಿನ ಸಂಸದರಾಗಿರುವ ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮುಖಾಂತರ ರಾಹುಲ್ ಗಾಂಧಿಯ “ಅಪಾಯಿಂಟ್‌ಮೆಂಟ್’ ಪಡೆಯಲು ಈ ನಿಯೋಗ ಪ್ರಯತ್ನಿಸಿತ್ತು. ಆದರೆ ಸೆಂಥಿಲ್ ಸಹಕಾರ ನೀಡುವ ಸಾಧ್ಯತೆ ಬಗ್ಗೆ ಸ್ಪಷ್ಟತೆ ಸಿಗದ ಹಿನ್ನೆಲೆಯಲ್ಲಿ ಕೇಂದ್ರದ ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆಯವರ ಪುತ್ರಿ ಹಾಗೂ ಸೊಲ್ಲಾಪುರದ ಸಂಸದೆಯಾಗಿರುವ ಪ್ರಣತಿ ಶಿಂಧೆಯವರ ಸಹಾಯ ಪಡೆಯಲು ಪ್ರಯತ್ನ ಸಾಗಿದೆ.
ಮುನಿಯಪ್ಪ ಮುನಿಸು:
ಇದೆಲ್ಲದರ ಮಧ್ಯೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಸರಕಾರದ ನಡೆಯ ಬಗ್ಗೆ
ಬೇಸರಗೊಂಡಿದ್ದಾರೆ. ಖರ್ಗೆ ಅಧ್ಯಕ್ಷತೆಯಲ್ಲಿ ದಿಲ್ಲಿ ಯಲ್ಲಿ ನಡೆದ ಸಭೆಯಲ್ಲಿ ತಮಗೆ ಭಾಗಿಯಾಗು ವುದಕ್ಕೆ ಅವಕಾಶ ನೀಡದೇ ಇರುವುದು ಕಾರಣ.
ಸಿಎಂ ನಿಲುವೇನು?
ಸಿಎಂ ಸಿದ್ದರಾಮಯ್ಯ ಈ ವಿಚಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ತಟಸ್ಥ ನಿಲುವು ಪಾಲಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಆದಾಗಿಯೂ ಕಳೆದ ವಾರ ಕಾಂಗ್ರೆಸ್‌ನ ಎಡಗೈ ಸಮುದಾಯದ ದಲಿತ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮೀಸಲು ವರ್ಗೀಕರಣಕ್ಕೆ ಆಗ್ರಹಿಸಿದ್ದಾರೆ. ಹೈಕಮಾಂಡ್ ತೀರ್ಮಾನ ಆಧರಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ನಿಯೋಗದ ಸದಸ್ಯರೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಬಿಜೆಪಿ ಜಿಲ್ಲಾವಾರು ಹೋರಾಟ
ಈ ವಿಚಾರದಲ್ಲಿ ಬೃಹತ್ ಹೋರಾಟ ನಡೆಸುವುದಕ್ಕೆ ಬಿಜೆಪಿ ತಯಾರಿ ನಡೆಸುತ್ತಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆಸಲಾಗಿದ್ದು, ಮೀಸಲು ವರ್ಗೀಕರಣಕ್ಕೆ ಆಗ್ರಹಿಸಿ ಜಿಲ್ಲಾವಾರು ಹೋರಾಟ ನಡೆಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.