Congress Session: ಸಚಿವರ ಸುಧಾರಣೆಗೆ ಎರಡು ತಿಂಗಳ ಗಡುವು
ಹೈಕಮಾಂಡ್‌ಗೆ ಸಚಿವರ ಬಗ್ಗೆ ಸಿಎಂ, ಡಿಸಿಎಂ ವರದಿ ಸಲ್ಲಿಕೆ, 8-10 ಸಚಿವರ ಕಾರ್ಯವೈಖರಿಗೆ ಅಸಮಾಧಾನ
Team Udayavani, Jan 14, 2025, 7:35 AM IST
ಬೆಂಗಳೂರು: ಸರಕಾರಕ್ಕೆ 20 ತಿಂಗಳು ತುಂಬುತ್ತಿರುವ ಬೆನ್ನಲ್ಲೇ ತಮ್ಮ ಖಾತೆಗಳ ನಿರ್ವಹಣೆ ಕುರಿತು ಸ್ವತಃ ಸಚಿವರು ನೀಡಿದ್ದ ಮಾಹಿತಿ ಆಧರಿಸಿದ ವರದಿಯನ್ನು ಸಿಎಂ-ಡಿಸಿಎಂ ಅವರು ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಅವರಿಗೆ ಹಸ್ತಾಂತರಿಸಿದ್ದಾರೆ. ಈ ವರದಿಯ ಮೌಲ್ಯಮಾಪನಕ್ಕೆ ಶೀಘ್ರ ಎಐ ಸಿಸಿ ಹಂತ ದಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲು ಉದ್ದೇಶಿಸಿದ್ದು, ಇದು ಸಚಿವ ಸಂಪುಟ ಪುನಾರಚನೆಗೆ ಮುನ್ನುಡಿ ಆಗಲಿದೆ. ಇನ್ನೆರಡು ತಿಂಗಳುಗಳಲ್ಲಿ ಮೌಲ್ಯಮಾಪನ ನಡೆಯಲಿದ್ದು, 8-10 ಸಚಿವರ ತಲೆದಂಡ ನಿಶ್ಚಿತ ಎನ್ನಲಾಗುತ್ತಿದೆ.
ಕೆಪಿಸಿಸಿ ಕಚೇರಿಯ ಭಾರತ್ ಜೋಡೊ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಪೂರ್ವಭಾವಿ ಸಭೆಯಲ್ಲಿ ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು, ವಿಧಾನಸಭಾ ಮತ್ತು ಲೋಕಸಭಾ ಅಭ್ಯರ್ಥಿಗಳು ಭಾಗವಹಿಸಿದ್ದರು. ಅವರ ಸಮ್ಮುಖದಲ್ಲೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ 31 ಸಚಿವರ ಖಾತೆಗಳ ನಿರ್ವಹಣೆ ಹಾಗೂ ಪಕ್ಷ ಸಂಘಟನೆಯಲ್ಲಿ ಅವರ ಕೊಡುಗೆ ಕುರಿತ ವರದಿಯನ್ನು ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುಜೇìವಾಲ ಅವರಿಗೆ ನೀಡಿದರು.
8-10 ಸಚಿವರ ಮೇಲೆ ತೂಗುಗತ್ತಿ?
ಇದರ ಮೌಲ್ಯಮಾಪನಕ್ಕಾಗಿ ಉನ್ನತಾಧಿಕಾರ ಸಮಿತಿ ರಚಿಸುವ ಪ್ರಸ್ತಾವನೆ ಪಕ್ಷದ ಮುಂದಿದೆ. ಮುಂದಿನ 60 ದಿನಗಳಲ್ಲಿ ಈ ಸಮಿತಿಯು ಪ್ರತಿಯೊಬ್ಬ ಸಚಿವರ ಮೌಲ್ಯಾಂಕನ ಮಾಡಲಿದೆ. ಪಕ್ಷದ ಅಧ್ಯಕ್ಷರು, ಸ್ಥಳೀಯ ಮುಖಂಡರಿಂದಲೂ ಮಾಹಿತಿ ಕ್ರೋಡೀಕರಿಸಲಿದೆ. ಅದು ನೀಡುವ ವರದಿ ಆಧರಿಸಿ ಸಚಿವರ ಕಾರ್ಯನಿರ್ವಹಣೆಯನ್ನು ನಿರ್ಧರಿಸಲಾಗುತ್ತದೆ. ಈ ಪ್ರಕ್ರಿಯೆ ಅತ್ಯಂತ ಕರಾರುವಾಕ್ಕಾಗಿ ನಡೆದರೆ 8-10 ಸಚಿವರ ಮೇಲೆ ತೂಗುಗತ್ತಿ ನಿಶ್ಚಿತ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಅಂದರೆ ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಜುಲೈ ತಿಂಗಳಿನಲ್ಲಿ ಸತ್ಯಶೋಧನ ಸಮಿತಿಯು ರಾಜ್ಯಕ್ಕೆ ಭೇಟಿ ನೀಡಿ ಅಭಿಪ್ರಾಯಗಳನ್ನು ಸಂಗ್ರಹಿಸಿತ್ತು. ಆ ವೇಳೆ ಸಮಿತಿಯ ಸಮ್ಮುಖದಲ್ಲೇ ಕೆಲವು ಶಾಸ ಕ ರು, ಪದಾಧಿಕಾರಿಗಳು ಹಲವು ಸಚಿವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದಾಗಿ 6 ತಿಂಗಳ ಅಂತರದಲ್ಲಿ ಸಚಿವರು ತಮ್ಮ ಕಾರ್ಯವೈಖರಿ ಬಗ್ಗೆ ಈ ಪ್ರಗತಿ ಪತ್ರ ನೀಡಿದ್ದಾರೆ.
ರಾಜ್ಯ ಉಸ್ತುವಾರಿ ಸುರ್ಜೇವಾಲ ಎಚ್ಚರಿಕೆ
ವರದಿ ಸ್ವೀಕರಿಸಿ ಮಾತನಾಡಿದ ರಣದೀಪ್‌ಸಿಂಗ್ ಸುರ್ಜೇವಾಲ, ಸಚಿವರ ಪ್ರಗತಿ ಪತ್ರ ನನ್ನ ಕೈತಲುಪಿದೆ. ಮುಂದಿನ 2 ತಿಂಗಳುಗಳಲ್ಲಿ ಪ್ರತೀ ಸಚಿವರ ರಿಪೋರ್ಟ್ ಕಾರ್ಡ್‌ನ್ನು ಪ್ರತ್ಯೇಕವಾಗಿ ಗಮನಿಸಲಾಗುವುದು. ಈ ಅವಧಿಯಲ್ಲಿ ಪಕ್ಷದ ಅಧ್ಯಕ್ಷರಿಂದಲೂ ಮಾಹಿತಿ ಪಡೆಯಲಾಗುವುದು ಎಂದು ಎಚ್ಚರಿಸಿದರು.
ಸಚಿವರು ಸರಕಾರ ರೂಪಿಸಿರುವ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಬೇಕು. ಮುಂದಿನ ಕಾರ್ಯಯೋಜನೆ ಬಗ್ಗೆಯೂ ವಿವರಿಸಬೇಕು. ನಿಯಮಿತವಾಗಿ ಪಕ್ಷದ ಜಿಲ್ಲಾ ಕಚೇರಿಗಳಿಗೆ ಭೇಟಿ ನೀಡಬೇಕು. ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಕೆಲಸ ಮಾಡಬೇಕು. ಪಕ್ಷದ ಅಧ್ಯಕ್ಷರೂ ನಿಮ್ಮ ಕಾರ್ಯಗಳನ್ನು ಗಮನಿಸುತ್ತಾರೆ ಎಂದು ಇದೇ ವೇಳೆ ಸೂಚನೆ ನೀಡಿದರು.
ಕಾಲ ತಳ್ಳುವ ತಂತ್ರ?
ಇದು ಸಚಿವ ಸಂಪುಟಕ್ಕೆ ಸೇರಲು ತುದಿಗಾಲಲ್ಲಿ ನಿಂತಿರುವ ಆಕಾಂಕ್ಷಿಗಳನ್ನು ಸಮಾಧಾನಪಡಿಸುವ ಮತ್ತು ಸಚಿವ ಸಂಪುಟದಲ್ಲಿ ಇದ್ದವರಿಗೆ ತುಸು ಚುರುಕು ಮುಟ್ಟಿಸುವ ಪ್ರಯತ್ನವಾಗಿದೆ. 2 ತಿಂಗಳು ಮುಗಿಯುವ ಹೊತ್ತಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊಸ್ತಿಲಲ್ಲಿ ಇರಲಿದೆ. ಅನಂತರ ಹೆಚ್ಚು-ಕಡಿಮೆ ಅಧಿಕಾರ ಹಸ್ತಾಂತರದ ಅವಧಿ ಕೂಡ ಸಮೀಪಿಸಲಿದೆ. ಆಗ ಒಮ್ಮೆಲೆ ಸಚಿವ ಸಂಪುಟ ಪುನಾರಚನೆ ಮಾಡೋಣ ಎಂಬ ಮಾತು ಕೇಳಿಬರಲಿದೆ. ಅಲ್ಲಿಯವರೆಗೆ ಕಾಲ ತಳ್ಳುವ ತಂತ್ರಗಾರಿಕೆ ಇದಾಗಿದೆ ಎಂದೂ ಪಕ್ಷದ ಮೂಲಗಳು ಹೇಳಿವೆ.
ಲೋಕಸಭಾ ಚುನಾವಣೆಗೂ ಮುನ್ನ ಕೂಡ ಸಚಿವರ ಮೌಲ್ಯಮಾಪನದ ಬಗ್ಗೆ ಉಲ್ಲೇಖವಾಗಿತ್ತು. ಆಗಲೂ ಗಡುವು ನೀಡಲಾಗಿತ್ತು. ಅನಂತರ ನೇಪಥ್ಯಕ್ಕೆ ಸರಿಯಿತು. ಇದಾದ ಅನಂತರ ಸತ್ಯಶೋಧನ ತಂಡ ಭೇಟಿ ನೀಡಿದಾಗ ಸ್ವತಃ ಪದಾಧಿಕಾರಿಗಳಿಂದ ಖಾತೆ ಬದಲಾವಣೆ ಮಾಡುವಂತೆ ಆಗ್ರಹ ಕೇಳಿಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಚಿವರ ಕಾರ್ಯ ನಿರ್ವಹಣೆ ವಿಷಯವಾಗಿ ಮುಖ್ಯಮಂತ್ರಿ ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಎಐಸಿಸಿ ಪರಿಶೀಲನೆ ನಡೆಸಲಿದೆ. -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Hubli: ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ಸ್ವಾಗತಿಸುವೆ: ಎಸ್.ಆರ್.ಪಾಟೀಲ
High Court: ಜಯಲಲಿತಾ ಸಂಬಂಧಿಗೆ ಚಿನ್ನ, ವಸ್ತು ಮರಳಿಸಲು ಹೈ ನಕಾರ
Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?
Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.