Cooperation: ನಬಾರ್ಡ್ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ
ಸಹಕಾರ ಕ್ಷೇತ್ರ ಕೇಂದ್ರದ ವ್ಯಾಪ್ತಿಗೆ ಬರುವ ವಿಷಯ ಅಲ್ಲ ಎಂದ ಮುಖ್ಯಮಂತ್ರಿ, ಸಹಕಾರಿ ಧುರೀಣರು ಪಕ್ಷಾತೀತವಾಗಿ ಕೇಂದ್ರದ ಮೇಲೆ ಒತ್ತಡ ತನ್ನಿ
Team Udayavani, Nov 17, 2024, 9:54 PM IST
ಬಾಗಲಕೋಟೆ: ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಬರಬೇಕಿದ್ದ ತೆರಿಗೆ ಪಾಲಿನ ಬಗ್ಗೆ ಸಮರ ಸಾರಿದ್ದ ರಾಜ್ಯ ಸರಕಾರ ಈಗ ಸಹಕಾರ ಕ್ಷೇತ್ರದಲ್ಲಿ ನಬಾರ್ಡ್‌ನಿಂದ ಬರುವ ಅನುದಾನ ಕಡಿತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.
ಬಾಗಲಕೋಟೆಯಲ್ಲಿ ರವಿವಾರ ನಡೆದ 71ನೇ ರಾಜ್ಯ ಮಟ್ಟದ ಸಹಕಾರ ಸಪ್ತಾಹ ಹಾಗೂ ಸಹಕಾರಿ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಹಕಾರ ಕ್ಷೇತ್ರ ರಾಜ್ಯ ವ್ಯಾಪ್ತಿಗೆ ಸೇರಿದ್ದು. ಆದರೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರದಲ್ಲಿ ಸಹಕಾರ ಇಲಾಖೆ ಆರಂಭಿಸಿದರು. ಇದಕ್ಕೆ ಅಮಿತ್ ಶಾ ಅವರೇ ಸಚಿವರು. ಇದು ಕೇಂದ್ರದ ವ್ಯಾಪ್ತಿಗೆ ಬರುವ ವಿಷಯ ಅಲ್ಲ. ಇದರಿಂದಾಗಿ ನಮಗೆ ನಬಾರ್ಡ್ ನಿಂದ ಬರುವ ರೈತರ ಪಾಲಿನ ನೆರವು ಕಡಿತಗೊಂಡಿದೆ. ಒಮ್ಮೆಲೇ ಶೇ. 58 ನಬಾರ್ಡ್ ನೆರವು ಕಡಿತಗೊಂಡಿದೆ. ಇದು ನಮ್ಮ ರೈತರಿಗೆ ಆದ ಬಹಳ ದೊಡ್ಡ ಅನ್ಯಾಯ ಎಂದು ಸಿದ್ದರಾಮಯ್ಯ ಟೀಕಿಸಿದರು.
ಸಾಲದಲ್ಲಿ ಕಡಿತ:
ನಬಾರ್ಡ್‌ನಿಂದ ಕಳೆದ ವರ್ಷ 5,600 ಕೋಟಿ ರೂ. ಸಾಲ ನೀಡಲಾಗಿತ್ತು. ಈ ಬಾರಿ ಕೇವಲ 2,340 ಕೋಟಿ ರೂ. ಕೊಟ್ಟಿದ್ದಾರೆ. ಇದಕ್ಕೆ ನಾವು ಶೇ.4.5ರಷ್ಟು ಬಡ್ಡಿ ಕೂಡ ಪಾವತಿಸುತ್ತೇವೆ. ಈ ಸಾಲದಿಂದ ರಾಜ್ಯದ ರೈತರಿಗೆ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗುತ್ತಿತ್ತು. ಅಲ್ಲದೇ ವಿವಿಧ ರೀತಿಯ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಆದರೆ ಕೇಂದ್ರ ಸರ್ಕಾರ ನಬಾರ್ಡ್‌ನಿಂದ ನೀಡುವ ಸಾಲದಲ್ಲಿ ಈ ಬಾರಿ 3,560 ಕೋಟಿ ರೂ. ಕಡಿತ ಮಾಡಿದೆ ಎಂದರು.
ಭಾಷಣದಿಂದ ರೈತರ ಬದುಕು ಉದ್ಧಾರವಾಗಲ್ಲ:
ರೈತರ ಬಗ್ಗೆ ಬಿಜೆಪಿ ಭಾಷಣ ಮಾತ್ರ ಚೆನ್ನಾಗಿ ಮಾಡುತ್ತದೆ. ಬರೀ ಭಾಷಣದಿಂದ ರೈತರ ಬದುಕನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಬಾರ್ಡ್ ನಿಂದ ನಮಗೆ ಆದ ಅನ್ಯಾಯವನ್ನು ಪ್ರತಿಯೊಬ್ಬರು ಪ್ರತಿಭಟಿಸಬೇಕು. 2013 ರಲ್ಲಿ ₹8,165 ಕೋಟಿ ರೈತರ ಸಾಲವನ್ನು ನಾನು ಮೊದಲು ಬಾರಿ ಮುಖ್ಯಮಂತ್ರಿಯಾಗಿ ಮನ್ನಾ ಮಾಡಿದ್ದೆ. ಇದರಿಂದ ಸಹಸ್ರಾರು ರೈತರ ಬದುಕಿಗೆ ನೆರವಾಯಿತು. ಸಹಕಾರ ಮಹಾಮಂಡಳದ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರದ ನೆರವು ನೀಡಬೇಕು ಎನ್ನುವ ಬೇಡಿಕೆ ಇದೆ. ಈ ಬೇಡಿಕೆಯನ್ನೂ ಈಡೇರಿಸಲಾಗುವುದು ಎಂದು ಹೇಳಿದರು.
ಪ್ರಧಾನಿ, ಕೇಂದ್ರ ವಿತ್ತ ಸಚಿವರಿಗೆ ಪತ್ರ ಬರೆದಿರುವೆ:
ರೈತರ ಬಗ್ಗೆ ಉದ್ದುದ್ದ ಭಾಷಣ ಮಾಡುವ ಕೇಂದ್ರದ ಬಿಜೆಪಿ ಸರ್ಕಾರದಿಂದಲೇ ಕರ್ನಾಟಕದ ರೈತರಿಗೆ ಮಹಾ ದ್ರೋಹವಾಗಿದೆ. ಕೇಂದ್ರ ಸರ್ಕಾರದ ಸಹಕಾರ ಇಲಾಖೆಯಡಿ ಬರುವ ನಬಾರ್ಡ್‌ನಿಂದ ಶೇ.58ರಷ್ಟು ಸಾಲ ನೀಡುವುದನ್ನು ಕಡಿಮೆ ಮಾಡಿದ್ದರಿಂದ ನೇರವಾಗಿ ರೈತರ ಮೇಲೆ ಪರಿಣಾಮ ಬೀರಲಿದೆ. ರೈತರಿಗೆ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲು ಅನಾನುಕೂಲವಾಗಲಿದೆ. ಅಲ್ಲದೇ ವಿವಿಧ ಸೌಲಭ್ಯ ಕಲ್ಪಿಸಲು ಅಡ್ಡಿಯಾಗಲಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರಿಗೆ ಪತ್ರ ಬರೆದಿದ್ದೇನೆ. ರಾಜ್ಯದ ಸಹಕಾರಿ ಧುರೀಣರು ಪಕ್ಷಾತೀತವಾಗಿ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದರು.
ಸಹಕಾರಿ ಇಲಾಖೆ ಇರಲಿಲ್ಲ:
ಸ್ವಾತಂತ್ರ್ಯ ಪೂರ್ವದಿಂದ ಸಹಕಾರ ಕ್ಷೇತ್ರವಿದೆ. ಸಂವಿಧಾನದ ಪ್ರಕಾರ ಕೇಂದ್ರ ವಲಯದಲ್ಲಿ ಸಹಕಾರ ಇಲಾಖೆ ಇರಲಿಲ್ಲ. ರಾಜ್ಯ ವಲಯದಲ್ಲಿ ಮಾತ್ರವಿದೆ. ಆದರೆ, 2021ರಲ್ಲಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಕೇಂದ್ರದಲ್ಲೂ ಸಹಕಾರ ಇಲಾಖೆ ಆರಂಭಿಸಿದರು. ಅದಕ್ಕೆ ಅಮಿತ್ ಶಾ ಅವರೇ ಸಚಿವರಾಗಿದ್ದಾರೆ. ಕೇಂದ್ರದ ಸಹಕಾರ ಇಲಾಖೆಯಿಂದ ಏನಾದರೂ ಲಾಭ ಆಗಿದೆಯಾ ಎಂಬುದನ್ನು ರಾಜ್ಯದ ಸಹಕಾರಿಗಳು ಪ್ರಶ್ನಿಸಬೇಕು. ನಬಾರ್ಡ್ ಸಾಲ ನೀಡಿಕೆಯಲ್ಲಿ ಆದ ಅನ್ಯಾಯದ ಕುರಿತು ಎಲ್ಲ ಸಹಕಾರಿಗಳೂ ಪಕ್ಷಾತೀತವಾಗಿ ಪತ್ರ ಬರೆಯಬೇಕು ಎಂದು ಕರೆ ನೀಡಿದರು.
ಸಹಕಾರ ಇಲಾಖೆ ನೇಮಕದಲ್ಲಿ ಸಹಕಾರಿ ಡಿಪ್ಲೊಮಾಗೆ ಆದ್ಯತೆ
ಸಹಕಾರ ಇಲಾಖೆಯಲ್ಲಿ ನಡೆಯುವ ನೇಮಕಾತಿ ವೇಳೆ ಸಹಕಾರಿ ಡಿಪ್ಲೊಮಾ ಆದವರಿಗೆ ಮೊದಲ ಆದ್ಯತೆ ನೀಡಬೇಕೆಂದು ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಒತ್ತಾಯಿಸಿದ್ದಾರೆ. ಇದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಅಲ್ಲದೇ ಸಹಕಾರ ಸಂಸ್ಥೆಗಳ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ನೀಡುವುದನ್ನು ಮುಂದಿನ ವರ್ಷದಿಂದ ಆರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಹಕಾರ ಸಂಘಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿ:
ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಮತ್ತು ಇವರಿಂದ ಹೆಚ್ಚೆಚ್ಚು ಹಾಲು ಖರೀದಿಸಬೇಕು. ಸಹಕಾರ ಸಂಘಗಳ ಹಾಲಿಗೆ ಮಾರುಕಟ್ಟೆ ವಿಸ್ತರಿಸಬೇಕು. ಚನ್ನಪಟ್ಟಣ ತಾಲೂಕು ಒಂದರಲ್ಲೇ 3 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಲೀಟರ್ ಹಾಲಿಗೆ 31 ರೂ ಅಂದರೆ 3 ಲಕ್ಷ ಲೀಟರ್ ಗೆ ಕೋಟಿ ರೂಪಾಯಿ ಆಗ್ತದೆ. ಇದು ಆರ್ಥಿಕತೆಗೂ ಹೆಚ್ಚಿನ ಕೊಡುಗೆ ನೀಡಿದಂತಾಗುತ್ತದೆ. ಹಾಲು ಉತ್ಪಾದಕರಿಗೆ ಅನುಕೂಲ ಮಾಡುವ ಉದ್ದೇಶದಿಂದಲೇ ನಮ್ಮ ಸರ್ಕಾರ ಕ್ಷೀರಭಾಗ್ಯ ಆರಂಭಿಸಿತು. ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡುವುದನ್ನು ನಮ್ಮ ಅವಧಿಯಲ್ಲಿ ಆರಂಭಿಸಲಾಯಿತು. ರೈತರ ಕೈಯಲ್ಲೇ ಹಾಲು ಉತ್ಪಾದಕ ಸಂಘಗಳು ಇರಬೇಕು ಎನ್ನುವ ಉದ್ದೇಶದಿಂದ ಡೇರಿಗಳನ್ನು ರೈತರಿಗೇ ನೀಡುವ ತೀರ್ಮಾನ ಮಾಡಿದೆವು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.