ಮಕ್ಕಳಿಗೆ ಕೊರೊನಾ ಲಸಿಕೆ ಪ್ರಯೋಗ: ಆಶಾದಾಯಕ ಬೆಳವಣಿಗೆ
Team Udayavani, May 22, 2021, 6:55 AM IST
ದೇಶದಲ್ಲಿ ಸದ್ಯ ವ್ಯಾಪಿಸಿರುವ ಕೊರೊನಾ ಎರಡನೇ ಅಲೆಯು ಯುವ ಸಮುದಾಯ ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡಿರುವುದು ಈಗಾಗಲೇ ಅಂಕಿಅಂಶಗಳಿಂದ ಸಾಬೀತಾಗಿದೆ. ಕಳೆದ ವರ್ಷ ಕೊರೊನಾ ಕಾಣಿಸಿಕೊಂಡ ವೇಳೆ ಇದು 60 ವರ್ಷ ಮೇಲ್ಪಟ್ಟವರು ಮತ್ತು ವಿವಿಧ ರೋಗಗಳಿಂದ ಬಳಲುತಿ¤ರುವವರನ್ನು ಹೆಚ್ಚಾಗಿ ಬಾಧಿಸಿತ್ತು. ಆದರೆ ಈ ಬಾರಿ ಯುವ ಸಮುದಾಯ ಮತ್ತು ಮಧ್ಯ ವಯಸ್ಕರಲ್ಲಿಯೇ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು ಅಧಿಕ ಸಂಖ್ಯೆಯಲ್ಲಿ ಮಕ್ಕಳಿಗೂ ಸೋಂಕು ತಗಲುತ್ತಿದೆ. ಪ್ರಥಮ ಅಲೆ ನಿಯಂತ್ರಣಕ್ಕೆ ಬಂದ ತತ್‌ಕ್ಷಣ ಯುವ ಸಮುದಾಯ ತನ್ನ ಹಿಂದಿನ ಜೀವನಶೈಲಿಗೆ ಮರಳಿದುದು ಮತ್ತು ಕೊರೊನಾ ನಿರೋಧಕ ಲಸಿಕೆಯನ್ನು ಸರಕಾರ ಆದ್ಯತೆಯ ಮೇಲೆ ಹಿರಿಯ ನಾಗರಿಕರಿಗೆ ನೀಡಿದ್ದರಿಂದಾಗಿ ಈ ಬಾರಿ ಯುವ ಸಮುದಾಯವನ್ನು ಕೊರೊನಾ ಸೋಂಕು ಬಾಧಿಸುತ್ತಿದೆ ಎಂದು ವೈದ್ಯರು ಮತ್ತು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅಷ್ಟು ಮಾತ್ರವಲ್ಲದೆ ಕೆಲವೇ ತಿಂಗಳುಗಳಲ್ಲಿ ದೇಶಕ್ಕೆ ಕೊರೊನಾ ಮೂರನೇ ಅಲೆಯೂ ಕಾಡಲಿದ್ದು ಈ ವೇಳೆ ಹದಿಹರೆಯದವರು ಮತ್ತು ಮಕ್ಕಳು ಸೋಂಕಿಗೊಳಗಾಗುವ ಸಾಧ್ಯತೆಗಳು ಅಧಿಕ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಅಂಕಿಅಂಶಗಳ ಪ್ರಕಾರ ಎರಡನೇ ಅಲೆಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹದಿಹರೆಯದವರು ಮತ್ತು ಮಕ್ಕಳಿಗೆ ಸೋಂಕು ತಗಲಿರುವುದು ಆತಂಕಕಾರಿ ವಿಚಾರವಾಗಿದೆ. 2 ತಿಂಗಳ ಅವಧಿಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆಯಲ್ಲಿ 0-9 ವರ್ಷದೊಳಗಿನ ಮಕ್ಕಳ ಸಂಖ್ಯೆ 39,846ಕ್ಕೆ ಏರಿಕೆಯಾಗಿದ್ದರೆ 10-19 ವರ್ಷದೊಳಗಿನವರ ಸಂಖ್ಯೆ 1,05,044ಕ್ಕೆ ಹೆಚ್ಚಳವಾಗಿದೆ. ಅಂದರೆ ಕ್ರಮವಾಗಿ ಶೇ. 143 ಮತ್ತು ಶೇ. 160ರಷ್ಟು ಹೆಚ್ಚಳ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಈ ಎಲ್ಲ ಬೆಳವಣಿಗೆಗಳ ನಡುವೆ 18 ವರ್ಷಕ್ಕಿಂತ ಕೆಳ ಹರೆಯದವರಿಗೆ ಲಸಿಕೆ ಸಂಶೋಧನೆ ಕಾರ್ಯ ಮತ್ತಷ್ಟು ಚುರುಕು ಪಡೆದುಕೊಂಡಿದೆ. ಝೈಡಸ್ ಕ್ಯಾಡಿಲಾ ಕಂಪೆನಿ ಅಭಿವೃದ್ಧಿಪಡಿಸುತ್ತಿರುವ ಝೈಕೋವ್-ಡಿ ಮೂರು ಹಂತಗಳ ವೈದ್ಯಕೀಯ ಪ್ರಯೋಗ ಪ್ರಕ್ರಿಯೆ ಭರದಿಂದ ಸಾಗಿದೆ. ಮಕ್ಕಳಿಗಾಗಿ ಸಂಶೋಧಿಸಲಾಗುತ್ತಿರುವ ಈ ಲಸಿಕೆಯು ಮೂರು ಡೋಸ್‌ಗಳನ್ನು ಹೊಂದಿರಲಿದೆ. ಈಗಾಗಲೇ ಪ್ರಾಯೋಗಿಕವಾಗಿ ಆಯ್ದ ಮಕ್ಕಳಿಗೆ ಮೊದಲ ಡೋಸ್ ನೀಡಲಾಗಿದ್ದು ಈವರೆಗೆ ಯಾವುದೇ ಅಡ್ಡಪರಿಣಾಮ ಕಂಡುಬಂದಿಲ್ಲ. ಇದೇ ವೇಳೆ ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ನೀಡುವ ಸಂಬಂಧ ಪ್ರಯೋಗಗಳು ನಡೆಯುತ್ತಿವೆ. ಈ ಎರಡೂ ಪ್ರಯೋಗಗಳೂ ಯಶಸ್ವಿಯಾದಲ್ಲಿ ಕೆಲವೇ ತಿಂಗಳುಗಳಲ್ಲಿ ಮಕ್ಕಳಿಗೂ ಕೊರೊನಾ ನಿರೋಧಕ ಲಸಿಕೆ ಲಭಿಸಲಿದೆ. ಇನ್ನು 18 ವರ್ಷ ಮೇಲ್ಪಟ್ಟ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ಗುಂಪುಗಳನ್ನು ಗುರುತಿಸಿ ಮೇ 22ರಿಂದ ಕೊರೊನಾ ಲಸಿಕೆ ನೀಡಲು ರಾಜ್ಯ ಸರಕಾರ ತೀರ್ಮಾನಿಸಿದೆ. ಮೇ 1ರಿಂದ ಈ ಪ್ರಕ್ರಿಯೆ ಆರಂಭಗೊಳ್ಳಬೇಕಿತ್ತಾದರೂ ಲಸಿಕೆ ಕೊರತೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಆದ್ಯತಾ ವಲಯಗಳ ಗುರುತಿಸುವಿಕೆ ಮತ್ತು ಅವರಿಗೆ ಲಸಿಕೆ ನೀಡುವಲ್ಲಿ ಯಾವುದೇ ಗೊಂದಲಗಳಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಸರಕಾರದ ಜವಾಬ್ದಾರಿ. ಏಕೆಂದರೆ ಈಗಾಗಲೇ ನಡೆಯುತ್ತಿರುವ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಹಲವಾರು ಮಂದಿಯ ಮೊಬೈಲ್‌ಗೆ ಸಂದೇಶ ಬಂದ ಬಳಿಕ ಲಸಿಕಾ ಕೇಂದ್ರಕ್ಕೆ ಹೋದಾಗ ಅಲ್ಲಿ ಲಸಿಕೆ ಇರದೆ ಗೊಂದಲದ ಪರಿಸ್ಥಿತಿ ಉಂಟಾಗಿತ್ತು. ಇಂತಹ ಅವ್ಯವಸ್ಥೆಗಳು ಆಗದಂತೆ ಎಚ್ಚರಿಕೆ ವಹಿಸುವುದು ಸರಕಾರದ ಆದ್ಯ ಕರ್ತವ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.