ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ
Team Udayavani, Jun 13, 2021, 7:00 AM IST
ಇಂತಹದ್ದೊಂದು ಸನ್ನಿವೇಶವನ್ನು ನಾವ್ಯಾರೂ ಊಹೆಯೂ ಮಾಡಿರಲಿಲ್ಲ. ಕಳೆದ ವರ್ಷ ಕೊರೊನಾದಿಂದ 9 ತಿಂಗಳು ಒಂದೇ ಬ್ಯಾಡ್ಮಿಂಟನ್ ಕೂಟಗಳಿರಲಿಲ್ಲ. ಇನ್ನೇನು ಪರಿಸ್ಥಿತಿ ಸುಧಾರಿಸುತ್ತಿದೆ, ಕೂಟಗಳು ಆರಂಭವಾಗುತ್ತಿವೆ ಎನ್ನುವಾಗ ಈ ಬಾರಿ ಮತ್ತೂಮ್ಮೆ ಕೊರೊನಾ ಬಡಿದು, ಕೂಟಗಳೆಲ್ಲ ಸಾಲುಸಾಲಾಗಿ ರದ್ದಾಗಿವೆ. ಇದು ಕಠಿನಾತಿ ಕಠಿನ ಸ್ಥಿತಿ. ನಾವು ಆಟಗಾರರು ಸದಾ ಪ್ರವಾಸ ಮಾಡುತ್ತ, ಬೇರೆ ಕೂಟಗಳಲ್ಲಿ ಆಡುತ್ತೇವೆ. ಆದರೆ ಒಮ್ಮೆಗೇ ಮನೆಯಲ್ಲೇ ಅಂಟಿಕೊಂಡಿರಬೇಕು. ಆಡುವ ಹಾಗಿಲ್ಲ, ತರಬೇತಿಯ ಮಾತೂ ಇಲ್ಲ ಎಂಬ ಪ್ರಸಂಗ ಕಳೆದ ವರ್ಷ ಎದುರಾದಾಗ; ಎಲ್ಲವೂ ಬಹಳ ವಿಚಿತ್ರವಾಗಿ ಭಾಸವಾಗಿತ್ತು. ಆದರೆ ಈ ಬಾರಿ ಪರಿಸ್ಥಿತಿ ಇನ್ನೂ ವಿಕೋಪಕ್ಕೆ ಹೋಗಿದೆ; ಹತಾಶಸ್ಥಿತಿಗೆ ತಳ್ಳಿದೆ. ಆದರೂ ನಾವು ದೊಡ್ಡದಾಗಿ ಯೋಚಿಸಬೇಕು. ಎಲ್ಲಕ್ಕಿಂತ ಜೀವನ ಮೊದಲು, ಕೊರೊನಾ ಸೃಷ್ಟಿಸಿರುವ ಈ ಭೀಕರ ಸನ್ನಿವೇಶಕ್ಕೆ ಹೋಲಿಸಿದರೆ ನಮ್ಮ ಸಮಸ್ಯೆಗಳೆಲ್ಲ ಚಿಕ್ಕದಾಗಿ ಕಾಣುತ್ತವೆ.
2020ರಲ್ಲಿ ನಾನು ಬ್ಯಾಡ್ಮಿಂಟನ್ ವಿಶ್ವ ಚಾಂಪಿ ಯನ್ ಆಗಿ ಆ ವರ್ಷ ಟೋಕಿಯೊದಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್‌ಗೆ ಸಜ್ಜಾಗಿದ್ದೆ. ಇನ್ನೇನು ಕೂಟ ಶುರುವಾಗಲು ಮೂರು ತಿಂಗಳುಗಳಿವೆ ಎನ್ನುವಾಗ, ಒಲಿಂಪಿಕ್ಸ್ ಮುಂದೂಡಿಕೆಯಾಗಿದೆ ಎನ್ನುವ ವರ್ತಮಾನ ಬಂತು! ನಾವು ಒಲಿಂಪಿಕ್ಸ್‌ನಂತಹ ಕೂಟಕ್ಕಾಗಿ ನಾಲ್ಕು ವರ್ಷಗಳ ಕಾಲ ತರಬೇತಿ ನಡೆಸಿರು ತ್ತೇವೆ. ಇಂತಹ ಹೊತ್ತಿನಲ್ಲಿ ಮುಂದೂಡಿಕೆಯಾಗಿದೆ ಎನ್ನುವ ಸುದ್ದಿಯನ್ನು ಅರಗಿಸಿಕೊಳ್ಳಲೇ ಕಷ್ಟವಾಯಿತು.
ಸುರಕ್ಷೆಗೆ ಅದ್ಯತೆ
ಇದು ಹಿಂದೆಂದೂ ಕಾಣದ ಸನ್ನಿವೇಶ.
ಬೇಸರ ತರುವ ಸಂಗತಿಗಳನ್ನು ಚಿಂತಿಸಿ ಕೊರಗುವುದಕ್ಕಿಂತ, ಧನಾತ್ಮಕ ವಿಚಾರಗಳನ್ನು ಗಮನಿಸಿ, ಹಾಗೆ ಮುಂದುವರಿಯುವುದು ಅನಿವಾರ್ಯ. ಎಲ್ಲಕ್ಕಿಂತ ಮುಖ್ಯ ಸುರಕ್ಷೆ ಎನ್ನುವುದನ್ನು ಮರೆಯುವಂತಿಲ್ಲ. ಹಾಗಾಗಿ ನಾನು ಸಮಯ ಕಳೆಯಲು ಹಲವು ದಾರಿಗಳನ್ನು ಕಂಡುಕೊಂಡೆ. ನನ್ನಳಿಯ ಆರ್ಯನ್‌ನನ್ನು ಆಡಿಸುತ್ತ ಸಂಭ್ರಮಿಸಿದೆ. ರಿಯೋ ಹೆಸರಿನ ನಾಯಿಯೂ ನಮ್ಮ ಜತೆಗಿತ್ತು. ಎಲ್ಲಕ್ಕಿಂತ ಮುಖ್ಯವೆಂದರೆ ಇಡೀ ಕುಟುಂಬ ಸದಸ್ಯರೆಲ್ಲ ಎಷ್ಟೋ ವರ್ಷಗಳ ಅನಂತರ ಒಟ್ಟಾಗಿ ಕಳೆಯಲು ಸಾಧ್ಯವಾಯಿತು. ಆ ಸಂದರ್ಭದಲ್ಲಿ ಇವೆಲ್ಲ ನಮಗೆ ಹೊಸ ಸಂಗತಿಯಾಗಿತ್ತು. ನಾವೆಲ್ಲ ಇದು ತಾತ್ಕಾಲಿಕ ಮಾತ್ರ ಅಂದುಕೊಂಡಿದ್ದೆವು. ಆದರೆ ಇಂದಿಗೂ ಕೊರೊನಾ ನಮ್ಮನ್ನೆಲ್ಲ ಎಲ್ಲಿಗೆ ತಲುಪಿಸುತ್ತದೆ, ಯಾವಾಗ ಪರಿಸ್ಥಿತಿ ಸಹಜಗೊಳ್ಳುತ್ತದೆ ಎಂಬ ಸುಳಿವು ಯಾರಲ್ಲೂ ಇಲ್ಲ! ಎಲ್ಲ ದೇಶಗಳು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸುತ್ತಿವೆ. ಬಹಳ ಹುಷಾರಾಗಿ ಎಲ್ಲವನ್ನೂ ನಿಭಾಯಿಸುತ್ತಿವೆ.
ಇಂತಹ ನೋವು, ಗೊಂದಲಗಳನ್ನೆಲ್ಲ ಮರೆತು ಏನು ಮಾಡಬಹುದೆಂದು ನಾನು ಯೋಚಿಸಿದೆ. ಮುಂದಿನ ಕೂಟಗಳಿಗೆ ಸಿದ್ಧತೆ ಮಾಡಿಕೊಳ್ಳಲು, ಅಗತ್ಯ ಎದುರಾದಾಗ ಸಿದ್ಧವಾಗಿರಲು ತಯಾರಿ ಮಾಡಿಕೊಳ್ಳತೊಡಗಿದೆ. ನಮ್ಮ ಹೊಡೆತಗಳನ್ನು ಸುಧಾರಿಸಿಕೊಳ್ಳಲು, ಕೌಶಲವನ್ನು ವೃದ್ಧಿಸಿ ಕೊಳ್ಳಲು, ಆಟವನ್ನು ಬಲಪಡಿಸಿಕೊಳ್ಳಲು ಇಲ್ಲಿ ಸಾಕಷ್ಟು ಸಮಯಾವಕಾಶ ಲಭ್ಯವಾಗಿದೆ. ಅದೇ ನನ್ನ ಆದ್ಯತೆ.
ವಿದೇಶ ಪ್ರಯಾಣವೆಂಬ ಸಂದಿಗ್ಧ
ಕೊರೊನಾ ಹೊತ್ತಿನಲ್ಲಿ ವಿದೇಶಗಳಿಗೆ ಪ್ರಯಾಣಿಸುವುದು ಇನ್ನೊಂದು ಸಮಸ್ಯೆ. ನಾವೆಲ್ಲ ಹೆದರಿಕೊಂಡೇ ಇರುತ್ತಿದ್ದೆವು. ಅದೇ ಕಾರಣಕ್ಕೆ ಪದೇಪದೇ ಸ್ಯಾನಿಟೈಸ್ ಮಾಡಿ ಕೊಳ್ಳುವುದು, ಅಂತರ ಕಾಪಾಡಿಕೊಳ್ಳುವುದರತ್ತ ಕಡ್ಡಾಯವಾಗಿ ಗಮನ ಹರಿಸಿದ್ದೆವು. ಒಂದು ವೇಳೆ ನಿಮಗೆ ಕೊರೊನಾ ಇದೆ ಅಂತ ಗೊತ್ತಾದರೆ; ವಿದೇಶಗಳಲ್ಲಿ ಕಠಿನ ಕ್ವಾರಂಟೈನ್ ನಿಯಮಗಳನ್ನು ಎದುರಿಸಬೇಕಾಗುತ್ತದೆ. 10 ದಿನಗಳ ಕಾಲ ಒಂದೇ ಕೋಣೆಯಲ್ಲಿ ಅಡಗಿಕೊಂಡಿರಬೇಕು. ಆಟವಾಡುವ ಹಾಗಿಲ್ಲ, ಕೂಟದಿಂದ ಹಿಂದೆ ಸರಿದು, ಕೋಣೆಯೊಳಗೆ ಬಂಧಿಯಾಗಿರಬೇಕು. ಇನ್ನೂ ಕೆಲವು ರಾಷ್ಟ್ರಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗು. ತಂಡದ ಒಬ್ಬ ಆಟಗಾರನಿಗೆ ಕೊರೊನಾ ಖಚಿತವಾದರೆ, ಇಡೀ ತಂಡವೇ ಕೂಟದಿಂದ ಹಿಂದೆ ಸರಿಯ ಬೇಕು. ಆದ್ದರಿಂದ ಪ್ರತಿಯೊಬ್ಬರೂ ವಿಪರೀತ ಎಚ್ಚರದಿಂದಿರಬೇಕು. ಹೀಗಾಗಿ ನಮ್ಮ ಬಗ್ಗೆ ಮಾತ್ರ ಗಮನ ಹರಿಸುವ ಸ್ಥಿತಿಯಲ್ಲಿರಲಿಲ್ಲ, ಬದಲಿಗೆ ಇಡೀ ತಂಡದ ಹಿತವನ್ನು ತಲೆಯಲ್ಲಿಟ್ಟು ಕೊಳ್ಳುವುದು ಅನಿವಾರ್ಯವಾಗಿತ್ತು.
ಜೈವಿಕ ಸುರಕ್ಷ ವಲಯದ ಸವಾಲು
ಜೈವಿಕ ಸುರಕ್ಷ ವಲಯ ಎನ್ನುವುದು ನಾವೆಂದೂ ಎದುರಿಸದ ಸನ್ನಿವೇಶ. ಹಾಗಾಗಿ ಅದು ಬಹಳ ಕಷ್ಟವೆನಿಸಿತ್ತು. ಇದರ ಮಧ್ಯೆ ಸಂಘಟಕರು ಬಹಳ ಎಚ್ಚರಿಕೆ ವಹಿಸಿದ್ದರು. ನಾವು ಆ ವಾತಾವರಣದಲ್ಲಿ ಸುರಕ್ಷಿತವಾಗಿರುತ್ತೇವೆ ಎಂಬ ಭಾವ, ಭರವಸೆ ಹುಟ್ಟಿಸಲು ಅವರು ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದರು. ತರಬೇತಿಗೆ ಹೋಗುವುದು, ಮರಳಿ ಕೊಠಡಿಗೆ ಬರುವುದು ಇದಷ್ಟೇ ನಮ್ಮ ಕೆಲಸ. ಬೇರೆಲ್ಲೂ ಹೋಗಬೇಡಿ ಎಂದು ನಮಗೆ ಸೂಚಿಸಲಾಗಿತ್ತು. ಇಷ್ಟಾದರೂ ಕೆಲವರಿಗೆ ಕೊರೊನಾ ಬಂತು! ನಂಗೆ ಎದುರಾದ ದೊಡ್ಡ ಸಮಸ್ಯೆಯೆಂದರೆ ಪ್ರೇಕ್ಷಕರಿಲ್ಲದೇ ಆಡುವುದು. ಪ್ರೇಕ್ಷಕರ ಪ್ರೋತ್ಸಾಹದ ನಡುವೆ, ಅವರ ಚಪ್ಪಾಳೆ ಸದ್ದಿನಲ್ಲಿ ಮುಂದುವರಿ ಯುವುದು ನನಗೆ ರೂಢಿಯಾಗಿಬಿಟ್ಟಿತ್ತು. ಅದೇನೆ ಇರಲಿ, ಸುರಕ್ಷೆಯೆನ್ನುವುದು ಮೊದಲು. ಬಾಕಿಯೆಲ್ಲ ಆಮೇಲೆ.
ಪ್ರಯೋಜನಕಾರಿಯಾದ ತರಬೇತಿ
ಕಳೆದ ವರ್ಷ ಒಂದು ಸಣ್ಣ ಗೊಂದಲವೂ ಆಯಿತು. ನಾನು ಗ್ಯಾಟೊರೇಡ್ ನ್ಪೋರ್ಟ್ಸ್ ಸೈನ್ಸ್ ಇನ್‌ಸ್ಟಿಟ್ಯೂಟ್‌ನ (ಜಿಎಸ್‌ಎಸ್‌ಐ) ಪೌಷ್ಟಿಕ ಆಹಾರ, ದೈಹಿಕ ವಿಶ್ಲೇಷಣ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದೆ, ಅಲ್ಲಿಂದ ನನಗೆ ಆಹ್ವಾನವೂ ಬಂದಿತ್ತು. ದೀರ್ಘಾವಧಿಯಲ್ಲಿ ಒಬ್ಬ ಕ್ರೀಡಾಪಟು ಉಳಿದುಕೊಂಡು, ಬೆಳೆಯಬೇಕಾದರೆ ಈ ರೀತಿಯ ಜ್ಞಾನ ಅನಿವಾರ್ಯ. ಆ ವೇಳೆ ನನಗೆ ಕೂಟಗಳಿರಲಿಲ್ಲ. ಹಾಗಾಗಿ ಸ್ವಂತ ವೆಚ್ಚದಲ್ಲಿ ಇಂಗ್ಲೆಂಡ್‌ಗೆ ತೆರಳುವ ನಿರ್ಧಾರ ಮಾಡಿದೆ. ಅದೇ ಹೊತ್ತಿನಲ್ಲಿ ಹೈದರಾಬಾದ್‌ನಲ್ಲಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಶಿಬಿರವಿತ್ತು. ಅದನ್ನು ಬಿಟ್ಟು ಅಲ್ಲಿಗೆ ಹೋದಾಗ ತುಸು ಗೊಂದಲ ಉಂಟಾಯಿತು. ಆದರೂ ಇಂಗ್ಲೆಂಡ್‌ನಲ್ಲಿನ ವಿಭಿನ್ನ ವಾತಾವರಣ, ವಿಭಿನ್ನ ಆಟಗಾರರು, ಹೊಸ ತರಬೇತು ದಾರರೊಂದಿಗೆ ಪಡೆದ ತರಬೇತಿ ಬಹಳ ಪ್ರಯೋಜನಕಾರಿಯಾಗಿತ್ತು.
ಈ ವರ್ಷ ಮತ್ತೆ ಬ್ಯಾಡ್ಮಿಂಟನ್ ಅಂಗಳಕ್ಕೆ ಮರಳಿದೆವು. ಹಾಗಂತ ನನಗೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಆದರೂ ಆಟದಲ್ಲಿ ಸುಧಾರಣೆಯಾ ಯಿತು. ಥಾಯ್ಲೆಂಡ್‌ನಲ್ಲಿ ನನ್ನ ಆಟ ಚೆನ್ನಾಗಿರಲಿಲ್ಲ. ಮುಂದೆ ತಪ್ಪುಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿದೆ, ಪರಿಣಾಮ ಸ್ವಿಸ್ ಓಪನ್‌ನಲ್ಲಿ ದ್ವಿತೀಯ, ಆಲ್ ಇಂಗ್ಲೆಂಡ್‌ನಲ್ಲಿ ಉಪಾಂತ್ಯ ಕ್ಕೇರಲು ಸಾಧ್ಯವಾಯಿತು. ಈ ಹಿಂದೆ ಇಂಗ್ಲೆಂಡ್‌ನಲ್ಲಿ ಪಡೆದ ತರಬೇತಿ ಇಲ್ಲಿ ಬಹಳ ನೆರವಿಗೆ ಬಂತು. ಏನೇ ಇದ್ದರೂ ನನ್ನ ನಿರೀಕ್ಷೆಗೆ ತಕ್ಕಂತೆ ಫಲಿತಾಂಶಗಳು ಸಿಗಲಿಲ್ಲ. ಎಲ್ಲ ಕಡೆ ನಾವು ಗೆಲ್ಲುತ್ತೇವೆ ಎಂದುಕೊಳ್ಳುವುದೂ ಸರಿಯಲ್ಲ. ಮತ್ತೆ ಮೈದಾನಕ್ಕೆ ಮರಳಿದ್ದೇವೆ ಎಂಬುದೇ ಸಮಾ ಧಾನಕರ ಸಂಗತಿ.
ಸವಾಲು ದೊಡ್ಡದಿದೆ
ಈ ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಬೇಕೆನ್ನು ವುದು ಸೇರಿದಂತೆ ನನ್ನ ಮೇಲೆ ಬಹಳ ಒತ್ತಡವಿದೆ. ಇದರ ಜತೆಗೆ ನಾನೂ ಒಂದಷ್ಟು ಗುರಿ ಹಾಕಿ ಕೊಂಡು ನನ್ನ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲಾರೆ. ಚಿನ್ನ ಗೆಲ್ಲಬೇಕು ಎನ್ನುವ ಗುರಿಯಿರುವುದಂತೂ ಸತ್ಯ. ಇದೇ ವೇಳೆ ನಮಗೆ ಪ್ರತಿಯೊಂದು ಪಂದ್ಯವೂ ಅಷ್ಟೇ ದೊಡ್ಡ ಸವಾಲು ನೀಡುತ್ತದೆ ಎಂಬ ಅರಿವೂ ಇರಬೇಕು. ಆದ್ದರಿಂದ ಒಮ್ಮೆ ಎದುರಿಗಿರುವ ಒಂದು ಪಂದ್ಯದತ್ತ ಮಾತ್ರ ನನ್ನ ಗಮನ. ಅದನ್ನು ಮುಗಿಸಿ ಮತ್ತೂಂದರ ಕುರಿತು ಯೋಚಿಸುತ್ತೇನೆ. ಈಗ ಬಹಳ ವಿಶ್ರಾಂತಿ ಸಿಕ್ಕಿರುವುದರಿಂದ ಪ್ರತಿಯೊಬ್ಬರೂ ಹೊಸಹೊಸ ತಂತ್ರಗಳನ್ನು ಕಲಿತಿರುತ್ತಾರೆ. ಶೇ.100ರಷ್ಟು ಪರಿಶ್ರಮ ಹಾಕಿ ಆಡುತ್ತಾರೆ. ಅವರನ್ನೆಲ್ಲ ಎದುರಿ ಸಲು ನಾನು ಪೂರ್ಣ ಸಿದ್ಧಳಾಗಿರ ಬೇಕಾಗುತ್ತದೆ. ನನಗೆ ಎದುರಾಗಿ ಬರುವ ಪ್ರತಿಯೊಂದು ಸವಾಲು ಅಷ್ಟೇ ಪ್ರಮುಖ. ಅದನ್ನು ನಿರ್ಲಕ್ಷಿಸುವುದು ಸಲ್ಲ. ಗುರಿ ಸಾಧನೆಯ ಹಾದಿಯಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಜ್ಜಾಗುತ್ತಿದ್ದೇನೆ.
ಒಲಿಂಪಿಕ್ಸ್ ಅಲ್ಲ, ಸಿದ್ಧತೆ ಮುಖ್ಯ
ಕಳೆದ ವರ್ಷ ರದ್ದಾಗಿದ್ದ ಒಲಿಂಪಿಕ್ಸ್ ಈ ಬಾರಿ ಆರಂಭವಾಗಲು ಇನ್ನೇನು ಎರಡು ತಿಂಗಳು ಬಾಕಿಯಿದೆ. ಅದು ನಡೆಯುತ್ತಾ ಇಲ್ಲವಾ ಎಂಬ ಗೊಂದಲ ಹಾಗೆಯೇ ಇದೆ. ಆದರೆ ನಾನು ಅದನ್ನೆಲ್ಲ ತಲೆಗೆ ಹಾಕಿಕೊಳ್ಳಲಾರೆ. ನನ್ನ ನಿಯಂತ್ರಣದಲ್ಲಿಲ್ಲದ ಸಂಗತಿಗಳನ್ನು ಚಿಂತಿಸುವುದರಲ್ಲಿ ಅರ್ಥವಿಲ್ಲ. ಏನಾಗುತ್ತದೆ ಎನ್ನುವುದು ಕಡೆಯವರೆಗೆ ಗೊತ್ತಾಗದೇ ಇರುವ ಸನ್ನಿವೇಶ ಇರುವಾಗ, ಆ ಬಗ್ಗೆ ಯೋಚಿಸು ವುದಕ್ಕಿಂತ ನನ್ನ ಆಟ, ತರಬೇತಿಯೇ ನನಗೆ ಮುಖ್ಯ. ಒಲಿಂಪಿಕ್ಸ್ ಯಾವಾಗಲೇ ನಡೆಯಲಿ, ನಾನಂತೂ ಸಿದ್ಧಳಾಗಿರಬೇಕು. ಅಷ್ಟೆಲ್ಲ ಸಮಯವಿದ್ದರೂ ಸರಿಯಾಗಿ ತಯಾರಾಗಲಿಲ್ಲ ಎಂಬ ಕೊರಗು ನಮ್ಮನ್ನು ಕಾಡಬಾರದು. ಇದು ನನ್ನ ಯೋಚನಾಕ್ರಮ.
– ಪಿ.ವಿ.ಸಿಂಧು, ವಿಶ್ವವಿಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.