Curb crimes: ಆರೋಪಿಗಳ ಸ್ಪರ್ಧೆ ತಡೆಗೆ ಚುನಾವಣ ಸುಧಾರಣೆ ಅಗತ್ಯ
ಒಟ್ಟು 151 ಮಂದಿ ಚುನಾಯಿತ ಜನಪ್ರತಿನಿಧಿಗಳು ಮಹಿಳೆಯರ ವಿರುದ್ಧದ ವಿವಿಧ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ
Team Udayavani, Aug 22, 2024, 6:00 AM IST
ದೇಶಾದ್ಯಂತ ದಿನನಿತ್ಯ ಎಂಬಂತೆ ಮಹಿಳೆಯರ ಮೇಲಣ ದೌರ್ಜನ್ಯ, ಕಿರುಕುಳ, ಅತ್ಯಾಚಾರ ಸಹಿತ ವಿವಿಧ ತೆರನಾದ ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇದ್ದು ಪ್ರಜ್ಞಾವಂತರನ್ನು ಚಿಂತೆಗೀಡು ಮಾಡಿದೆ. ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಲವು ಆಯಾಮಗಳಲ್ಲಿ ಚರ್ಚೆಗಳು ತೀವ್ರಗೊಂಡಿರುವಂತೆಯೇ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಒಂದಿಷ್ಟು ಆತಂಕಕಾರಿ ವರದಿಯೊಂದನ್ನು ಬುಧವಾರ ಬಿಡುಗಡೆ ಮಾಡಿದೆ.
ಇದು ದೇಶದ ಹಾಲಿ ರಾಜಕೀಯ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುವುದರ ಜತೆಯಲ್ಲಿ ಚುನಾವಣ ವ್ಯವಸ್ಥೆಯಲ್ಲಿ ಕೆಲವು ಸುಧಾರಣೆಗಳನ್ನು ಜಾರಿಗೆ ತರುವ ಅಗತ್ಯವನ್ನು ಸಾರಿ ಹೇಳಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸಲ್ಲಿಸಿದ್ದ ಅಫಿದವಿತ್‌ನಲ್ಲಿನ ಮಾಹಿತಿಗಳನ್ನು ಕಲೆ ಹಾಕಿ ಎಡಿಆರ್ ಈ ವರದಿಯನ್ನು ಬಿಡುಗಡೆ ಮಾಡಿದೆ.
ಈ ವರದಿಯ ಪ್ರಕಾರ ಹಾಲಿ ಸಂಸದರಾಗಿರುವ 16 ಮಂದಿ ಮತ್ತು 135 ಶಾಸಕರ ಸಹಿತ ಒಟ್ಟು 151 ಮಂದಿ ಚುನಾಯಿತ ಜನಪ್ರತಿನಿಧಿಗಳು ಮಹಿಳೆಯರ ವಿರುದ್ಧದ ವಿವಿಧ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಈ ಪೈಕಿ ಇಬ್ಬರು ಹಾಲಿ ಸಂಸದರು ಮತ್ತು 14 ಶಾಸಕರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿರುವುದಾಗಿ ಸ್ವತಃ ಈ ಜನಪ್ರತಿನಿಧಿಗಳೇ ಆಯೋಗಕ್ಕೆ ಸಲ್ಲಿಸಿರುವ ತಮ್ಮ ಚುನಾವಣ ಅಫಿದವಿತ್‌ನಲ್ಲಿ ಹೇಳಿಕೊಂಡಿದ್ದಾರೆ.
ಈ ಅಂಕಿಅಂಶಗಳನ್ನು ಪರಿಗಣಿಸಿದಾಗ ಇಂತಹವರನ್ನೂ ನಾವು ನಮ್ಮ ಪ್ರತಿನಿಧಿಗಳನ್ನಾಗಿ ಪ್ರಜಾಸತ್ತೆಯ ದೇಗುಲವೆಂದೇ ಪರಿಗಣಿಸಲ್ಪಟ್ಟಿರುವ ಸಂಸತ್ ಮತ್ತು ವಿಧಾನಸಭೆಗೆ ಕಳುಹಿಸಿದ್ದೇವೆಯೇ ಎಂಬ ಕೀಳರಿಮೆ ಆಯಾಯ ಕ್ಷೇತ್ರದ ಜನತೆಯನ್ನು ಕಾಡದಿರಲಾರದು. ಹಾಗೆಂದು ಇವೆಲ್ಲವೂ ಆರೋಪಗಳ ಆಧಾರದಲ್ಲಿ ದಾಖಲಾದ ಪ್ರಕರಣಗಳಾಗಿದ್ದು, ನ್ಯಾಯಾಲಯಗಳಲ್ಲಿ ವಿಚಾರಣ ಹಂತದಲ್ಲಿದ್ದು ಈಗಲೇ ಇವರೆಲ್ಲರಿಗೂ ಅಪರಾಧಿಗಳ ಹಣೆಪಟ್ಟಿ ಕಟ್ಟಿದರೆ ಅವಸರದ ನಡೆಯಾದೀತು.
ಆದರೆ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಸಹಿತ ಮಹಿಳೆಯರ ವಿರುದ್ಧದ ಅಪರಾಧ, ಕೊಲೆ, ಸುಲಿಗೆ ಸಹಿತ ವಿವಿಧ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವವರು ಕೂಡ ಚುನಾವಣೆಗೆ ಸ್ಪರ್ಧಿಸುವುದು ನೈತಿಕವಾಗಿ ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತದೆ. ಇಂತಹ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಿ ಅವರು ಗೆಲುವು ಸಾಧಿಸಿದಲ್ಲಿ ಅವರ ವಿರುದ್ಧ ದಾಖಲಾದ ಅಪರಾಧ ಪ್ರಕರಣಗಳ ತನಿಖಾ ಪ್ರಕ್ರಿಯೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
ಪ್ರಜಾಸತ್ತೆಯನ್ನು ಅಪರಾಧೀಕರಣದಿಂದ ಮುಕ್ತಗೊಳಿಸಬೇಕೆಂಬ ಕೂಗು ಇಂದು-ನಿನ್ನೆಯದೇನಲ್ಲ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳಿಂದ ಧನಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದು ಕೂಡ ಹುಂಬತನವಾದೀತು. ಹೀಗಾಗಿ ಚುನಾವಣ ಆಯೋಗ ದೇಶದ ಚುನಾವಣ ವ್ಯವಸ್ಥೆಯಲ್ಲಿ ಒಂದಿಷ್ಟು ಕ್ರಾಂತಿಕಾರಿ ಸುಧಾರಣೆಗಳನ್ನು ತರಲು ಮುಂದಾಗಬೇಕು. ಇಂತಹ ವಿಷಯಗಳ ಬಗೆಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಆಯೋಗ ಮಾಡಬೇಕಿದೆ.
ಜನರು ಜಾಗೃತರಾದಾಗ ಚುನಾವಣ ಕಾನೂನಿನಲ್ಲಿ ಸೂಕ್ತ ಮತ್ತು ಸಮರ್ಪಕ ಮಾರ್ಪಾಡುಗಳನ್ನು ತರಲು ಸಹಜವಾಗಿಯೇ ಸರಕಾರದ ಮೇಲೆ ಒತ್ತಡ ಬೀಳಲಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರುವ ಕಾನೂನು ಜಾರಿಯಾದಲ್ಲಿ ಆ ಕಾನೂನನ್ನು ಪ್ರತಿಸ್ಪರ್ಧಿಗಳು ತಮ್ಮ ಗುರಾಣಿಯನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ ಕಾನೂನು ರೂಪಣೆಯ ಸಂದರ್ಭದಲ್ಲಿಯೇ ಇದಕ್ಕೆ ಸೂಕ್ತವಾದ ನೀತಿ, ನಿಯಮಾವಳಿಯನ್ನು ರೂಪಿಸಬೇಕು. ಇಂತಹ ಸುಧಾರಣ ಕ್ರಮಗಳು ಸಮಾಜದ ಮೇಲೂ ಸಕಾರಾತ್ಮಕ ಪರಿಣಾಮವನ್ನು ಬೀರಿ ಹಾಲಿ ಎದುರಾಗಿರುವ ಸಮಸ್ಯೆಗಳಿಗೆ ಒಂದಿಷ್ಟು ಪರಿಹಾರ ಲಭಿಸಲು ಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.