Desi Swara: ಮಹಾಯುದ್ಧದ ದಾಳಿಯಿಂದ ಎದ್ದು ನಿಂತ ನಗರ
ಯುರೋಪ್‌ನ ನಗರಗಳಲ್ಲಿ ಸುಂದರವಾದ ಒಂದು ಪಟ್ಟಣ ಇದು.
Team Udayavani, Nov 4, 2023, 11:23 AM IST
ನನ್ನ ಮೊದಲ ಯುರೋಪ್ ಪ್ರವಾಸ ಪ್ರಾರಂಭವಾಗಿದ್ದು 2014ರಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಮೂರು ಬಾರಿ ಜರ್ಮನಿ, ಫ್ರಾನ್ಸ್ ರಾಷ್ಟ್ರಗಳಿಗೆ ಭೇಟಿ ನೀಡಿದ್ದೇನೆ. ಇದಕ್ಕೂ ಮೊದಲು ಮಧ್ಯಪ್ರಾಚ್ಯರಾಷ್ಟ್ರಗಳನ್ನು ಹೊರತುಪಡಿಸಿ ಕೆನಡಾ, ತೈವಾನ್, ಚೀನ ರಾಷ್ಟ್ರಗಳಿಗೆ ಭೇಟಿ ನೀಡಿದ್ದೇನೆ. ಆದರೆ ಹೆಚ್ಚಾಗಿ ನನ್ನನ್ನ ಆಕರ್ಷಿಸಿದ್ದು ಯುರೋಪ್ ರಾಷ್ಟ್ರಗಳು. ಏಕೆಂದರೆ ಅಲ್ಲಿನ ಐತಿಹಾಸಿಕ ನಗರಗಳು, ಅಲ್ಲಿ ಆಳ್ವಿಕೆ ನಡೆಸಿದ್ದ ರಾಜಮನೆತನಗಳು, ಈ ಹಿಂದೆ ನಡೆದಿದ್ದ ಯುದ್ಧಗಳು, ಶತಮಾನಗಳ ಹಿಂದೆ ನಡೆದ ಕೈಗಾರಿಕ ಕ್ರಾಂತಿಯ ಕುರುಹುಗಳು, ಆ ನಗರಗಳಲ್ಲಿರುವ ಪಾರಂಪರಿಕ ಕಟ್ಟಡಗಳು ಅದರ ಹಿಂದಿರುವ ಇತಿಹಾಸದ ಹಿನ್ನೆಲೆ, ಹೀಗೆ ಎಲ್ಲವನ್ನು ಅರಿಯುವ ಒಂದು ಕುತೂಹಲ.
ಈ ಎರಡನೇ ಪ್ರಪಂಚ ಯುದ್ಧದ ಸಮಯದಲ್ಲಿ ಜರ್ಮನಿಯ ಹಲವು ನಗರಗಳ ಮೇಲೆ ಹೆಚ್ಚಿನ ಬಾಂಬ್ ದಾಳಿ ನಡೆದಿದ್ದವು. ಅದರಲ್ಲಿ ಪ್ರಮುಖವಾದ ಒಂದು ನಗರ ಈ ಡ್ರೆಸ್ಡೆನ್ ನಗರ. ಈ ಹಿಂದೆ ಜರ್ಮನಿ ರಾಷ್ಟ್ರ ಏಕೀಕರಣದ ಮುಂಚೆ ಪೂರ್ವ ಜರ್ಮನಿಯ ಭಾಗವಾಗಿತ್ತು. ಈ ಕಾರಣದಿಂದ ಒಮ್ಮೆ ಪೂರ್ವ ಜರ್ಮನಿಯ ಸಾಕ್ಸೋನಿ ರಾಜ್ಯದ ರಾಜಧಾನಿ ಡ್ರೆಸ್ಡೆನ್ ಪ್ರವಾಸ ಕೈಗೊಂಡಿದ್ದೆ. ಎಲ್ಬೆ ನದಿಯ ದಂಡೆಯ ಮೇಲೆ ಈ ನಗರ ಹರಡಿಕೊಂಡಿದೆ. ಉತ್ತರಕ್ಕೆ ಸುಮಾರು 30 ಕಿ.ಮೀ. ಜೆಕ್ ಗಣರಾಜ್ಯದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಈ ಪ್ರದೇಶವು ಸಾಕ್ಸೋನ್ ಪ್ರಾಂತದ ಆಡಳಿತಗಾರರ ಅಧಿಕಾರ ಕೇಂದ್ರವಾಗಿತ್ತು. ಯುರೋಪ್‌ನ ನಗರಗಳಲ್ಲಿ ಸುಂದರವಾದ ಒಂದು ಪಟ್ಟಣ ಇದು.
ಸಾಕ್ಸೋನ್ ಪ್ರಾಂತದ ಆಡಳಿತಗಾರರು ನದಿ ತೀರದಲ್ಲಿ ಅರಮನೆಗಳು ಮತ್ತು ಗಗನ ಚುಂಬಿ ಚರ್ಚ್, ಕಟ್ಟಡಗಳನ್ನು ನಿರ್ಮಿಸುವುದರತ್ತ ತಮ್ಮ ಹೆಚ್ಚಿನ ಗಮನವನ್ನು ಹರಿಸಿದ್ದರು. ಇವರ ಕಾಲದಲ್ಲಿ ಈ ಪ್ರಾಂತ ಸುಂದರವಾದ ಚಿತ್ರಕಲೆ, ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ಪ್ರಾಚೀನ ವಸ್ತುಗಳ ಸಂಗ್ರಹಗಳ ಬೀಡಾಗಿತ್ತು ಎಂದು ಇತಿಹಾಸಕಾರರು ದಾಖಲಿಸಿದ್ದಾರೆ.
ಎರಡನೇ ಪ್ರಪಂಚ ಯುದ್ಧದ ವೇಳೆ ಜರ್ಮನಿಯ ಬಹುತೇಕ ನಗರಗಳು ತೀವ್ರವಾದ ಬಾಂಬ್ ದಾಳಿಗೆ ಒಳಗಾಗಿದ್ದವು. ಡ್ರೆಸ್ಡೆನ್ ನಗರ ಒಂದರ ಮೇಲೆಯೇ ಸುಮಾರು 800 RAF ಬ್ರಿಟಿಷ್ ವಿಮಾನಗಳು 1800 ಟನ್‌ಗಳಿಗಿಂತ ಹೆಚ್ಚು ಬಾಂಬ್‌ಗಳನ್ನು ಎಸೆದಿದ್ದವು. ಅನಂತರದ ದಿನಗಳಲ್ಲಿ 520ಕ್ಕೂ ಹೆಚ್ಚು USAAF ಬಾಂಬ್‌ರಗಳು ವಿವಿಧ ಪ್ರದೇಶಗಳಲ್ಲಿ ಬಾಂಬ್ ದಾಳಿ ಮಾಡಿದ್ದರು. ಇಂತಹ ಭಯಂಕರ ದಾಳಿಯಲ್ಲಿ ಅಂದಾಜು 25 ಸಾವಿರ ಜನರು ಅಸುನೀಗಿದ್ದಲ್ಲದೆ ಹಲವಾರು ಪಾರಂಪರಿಕ ಕಟ್ಟಡಗಳು ತೀವ್ರವಾಗಿ ಹಾನಿಗೊಳಗಾಗಿದ್ದವು. ಹಿಟ್ಲರ್ ಸಾವಿನವರೆಗೂ ಜರ್ಮನಿಯ ವಿವಿಧ ಪ್ರದೇಶಗಳ ಮೇಲೆ ಬ್ರಿಟಿಷ್ ಮಿತ್ರ ಪಡೆಗಳಿಂದ ತೀವ್ರವಾದ ದಾಳಿ ನಡೆದಿತ್ತು. ಈ ದಾಳಿಯಿಂದ ಹಾನಿಗೊಳಗಾಗಿದ್ದ ಕಟ್ಟಡಗಳು ದಶಕಗಳ ಕಾಲ ಹಾಗೆಯೇ ಉಳಿದಿದ್ದವು. ಯುದ್ಧದ ಅನಂತರ ಜರ್ಮನಿ ರಾಷ್ಟ್ರ ಪೂರ್ವ ಮತ್ತು ಪಶ್ಚಿಮ ಜರ್ಮನಿ ಎಂದು ವಿಭಜನೆಯಾಯಿತು.
ಹಿಟ್ಲರ್ ಸಾವಿನ ಅನಂತರ, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ಡಮ್ ಮತ್ತು ಫ್ರಾನ್ಸ್ ಈ ಮೂರು ಮಿತ್ರರಾಷ್ಟ್ರಗಳ ಸಹಯೋಗದಲ್ಲಿ 12 ರಾಜ್ಯಗಳಿರುವ ಪಶ್ಚಿಮ ಜರ್ಮನಿ ಅಥವಾ Federal Republic of Germany(FRG)ಎನ್ನುವ ರಾಷ್ಟ್ರವನ್ನು ಮೇ 23, 1949ರಲ್ಲಿ ಸ್ಥಾಪಿಸಿದ್ದರು.
ಇತ್ತ ಪೂರ್ವ ಜರ್ಮನಿಯಲ್ಲಿ ಕಮ್ಯುನಿಸ್ಟ್ ಪರ ಒಲವಿದ್ದ ಸ್ಥಳೀಯ ನಾಯಕರ ಸಹಾಯದಿಂದ ಸೋವಿಯತ್ ರಷ್ಯಾದ ಪಡೆಗಳು ಪೂರ್ವದ ರಾಜ್ಯಗಳನ್ನ ನಿಯಂತ್ರಣದಲ್ಲಿಟ್ಟುಕೊಂಡು ಪೂರ್ವ ಜರ್ಮನಿಯೆನ್ನುವ ಇನ್ನೊಂದು ರಾಷ್ಟ್ರವನ್ನು ಅಕ್ಟೋಬರ್ 7, 1949ರಲ್ಲಿ ಕಟ್ಟಿದ್ದರು. ಈ ವಿಭಜನೆಯ ಅನಂತರ ಪಶ್ಚಿಮ ಜರ್ಮನಿ ಆಗಾಧವಾದ ಬೆಳವಣಿಗೆಯನ್ನು ಕಂಡರೆ, ಕಮ್ಯುನಿಸ್ಟ್ ಆಡಳಿತವಿದ್ದ ಪೂರ್ವ ಜರ್ಮನಿ, ಅಭಿವೃದ್ಧಿಯಲ್ಲಿ ಹಿಂದುಳಿದಿತ್ತು.
ಪೂರ್ವ ಜರ್ಮನಿಯ ಸರಕಾರ ದಾಳಿಗೊಳಗಾಗಿದ್ದ ನಗರಗಳನ್ನು ಪುನರ್ ನಿರ್ಮಾಣ ಮಾಡಲು ಆಮೆಗತಿಯಲ್ಲಿ ಸಾಗುತಿತ್ತು. ಹಣಕಾಸಿನ ಕೊರತೆ, ನಿರುದ್ಯೋಗ ಸಮಸ್ಯೆ ಆ ಸರಕಾರವನ್ನು ಕಾಡುತಿತ್ತು. ಬದಲಾಗಿ ಕಮ್ಯುನಿಸ್ಟ್ ಸರಕಾರದ ನೀತಿಗಳು ಪೂರ್ವ ಜರ್ಮನಿಯ ಅಭಿವೃದ್ಧಿಗೆ ಅಡ್ಡಗಾಲು ಹಾಕಿತ್ತು. ಕಾಲಕ್ರಮೇಣ ಪೂರ್ವ ಜರ್ಮನಿಯ ಬಹುತೇಕ ಜನರು ಪಶ್ಚಿಮಕ್ಕೆ ವಲಸೆ ಹೋಗಲು ಆರಂಭಿಸಿದರು. ಈ ವಲಸೆ ದಿನೇ ದಿನೇ ಹೆಚ್ಚುತಿತ್ತು. ಕ್ರಮೇಣ ಪೂರ್ವ ಜರ್ಮನಿಯ ಜನರು ಏಕೀಕರಣದತ್ತ ಒಲವು ತೋರಿದರು. ಬಹಳಷ್ಟು ಕಡೆ ಪ್ರತಿಭಟನೆಗಳು ನಡೆದವು, ಈ ಬಗ್ಗೆ ನ್ಯಾಟೋ ಮತ್ತು ಸೋವಿಯತ್ ಒಕ್ಕೂಟದ ನಡುವೆ ನಡೆದ ಹಲವಾರು ಮಾತುಕತೆಗಳು ವಿಫಲಕಂಡವು. ಸೋವಿಯತ್ ಒಕ್ಕೂಟ ಯಾವಾಗ ಕುಸಿತ ಕಾಣಲು ಆರಂಭಿಸಿತೋ ಆಗ ಮತ್ತೊಮ್ಮೆ ಮಾತುಕತೆಗಳು ಆರಂಭವಾಗಿ ಕೊನೆಗೆ ವಿಭಜಿತ ಜರ್ಮನಿಯು ಅಕ್ಟೋಬರ್ 3, 1990ರಂದು ಪುನರ್ ಏಕೀಕರಣಗೊಂಡಿತು.
ಈ ನಲವತ್ತು ವರ್ಷಗಳ ಅವಧಿಯಲ್ಲಿ ಪೂರ್ವ ಜರ್ಮನಿ ಅಭಿವೃದ್ಧಿಯಲ್ಲಿ ಬಹಳಷ್ಟು ಹಿಂದುಳಿದಿತ್ತು. ಆ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ಪಶ್ಚಿಮ ಜರ್ಮನಿಯ ಜನರು ಹೆಚ್ಚಿನ ತೆರಿಗೆಯನ್ನು ಪಾವತಿಸುವ ಯೋಜನೆಯನ್ನು ಜಾರಿಗೆ ತಂದು ಆ ಆದಾಯವನ್ನೆಲ್ಲ ಪೂರ್ವ ಜರ್ಮನಿಯ ಪುನರ್ ನಿರ್ಮಾಣಕ್ಕೆ ವಿನಿಯೋಗಿಸಿದರು. ತಮ್ಮದೇ ಜರ್ಮನ್ನರ ಅಭಿವೃದ್ಧಿಗಾಗಿ ಆ ಜನರು ಯಾವುದೇ ಅಡ್ಡಿ ಆಂತಂಕ ವ್ಯಕ್ತಪಡಿಸದೆ ಸಂಪೂರ್ಣ ಸಹಕಾರ ನೀಡಿ ದೇಶದ ಪೂರ್ವಭಾಗವನ್ನು ಪುನರ್ ನಿರ್ಮಾಣ ಮಾಡಲು ಕೈಜೋಡಿಸಿದ್ದರು.
ಯಾವಾಗ ಪಶ್ಚಿಮ ಜರ್ಮನಿಯ ಜನರ ತೆರಿಗೆ ಹಣ ಇದಕ್ಕೆ ವಿನಿಯೋಗವಾಯಿತೋ ಸರಕಾರದಿಂದ ವಿಶೇಷ ಯೋಜನೆಗಳನ್ನು ಜಾರಿಗೆ ತಂದು ಜರ್ಮನಿಯ ಆ ಗತ ವೈಭವವನ್ನು ಮರಳಿ ಬರುವಂತೆ ಮಾಡಲಾಯಿತು. ನಮ್ಮ ಪ್ರವಾಸಿ ಗೈಡ್, ಬಾಂಬ್ ದಾಳಿಯಿಂದ ಹಾನಿಗೊಳಗಾಗಿದ್ದ ಆ ನಗರದ ಹಳೇ ಫೋಟೋಗಳನ್ನು ತೋರಿಸಿ ಅನಂತರ, ಮತ್ತೆ ಪುನರ್ ನಿರ್ಮಾಣಗೊಂಡ ಪಾರಂಪರಿಕ ಕಟ್ಟಡಗಳನ್ನು ತೋರಿಸುತ್ತಿದ್ದ, ನಮಗೆ ಬಹಳ ಆಶ್ಚರ್ಯವಾಗುತಿತ್ತು. ಜರ್ಮನ್ನರು ತುಂಬಾ ಆಸ್ಥೆಯಿಂದ ತಮ್ಮ ನಗರಗಳನ್ನು ಮತ್ತೆ ಕಟ್ಟಿದ್ದರು. ಬಹಳಷ್ಟು ವಿವರಣೆ ನೀಡುತ್ತಾ ನಮ್ಮನ್ನ ಡ್ರೆಸ್ಡೆನ್ ನಗರದ ಪ್ರಮುಖ ಸ್ಥಳಗಳಿಗೆ ಕರೆದೊಯ್ದಿದ್ದ.
ಫ್ರೌನ್ಕಿರ್ಚೆ ಮತ್ತು ನ್ಯೂಮಾರ್ಕ್ ಸ್ಕ್ವೇರ್: ಪ್ರೊಟೆಸ್ಟಂಟ್ ಚರ್ಚ್ ಅನ್ನು 1726 ಮತ್ತು 1743 ರ ನಡುವೆ ನಿರ್ಮಿಸಲಾಯಿತು, 1945ರಂದು ನಡೆದ ದಾಳಿಗೆ ತೀವ್ರವಾಗಿ ಹಾನಿಗೊಳಗಾಗಿತ್ತು. 1990ರಿಂದ ಪುನರ್ ನಿರ್ಮಾಣ ಕಾರ್ಯಾರಂಭ ಮಾಡಲಾಯಿತು. ಸುತ್ತಮುತ್ತಲಿನ ನ್ಯೂಮಾರ್ಕ್ ಚೌಕದಲ್ಲಿ, ವಿಶಿಷ್ಟವಾದ ಬರೊಕ್ ಗೇಬಲ್ಡ್ ಮನೆಗಳನ್ನು ವಿಭಾಗವಾರು ನಿರ್ಮಿಸಲಾಯಿತು. ಅರ್ಧ ಶತಮಾನಕ್ಕೂ ಹೆಚ್ಚು ಸಮಯದ ಅನಂತರ, ನಗರದ ಪುರಾತನ ಕೇಂದ್ರ ಪ್ರದೇಶಕ್ಕೆ ಗತವೈಭವ ಮರಳಿ ದೊರೆಯಿತು.
ಪ್ರೊಸೆಶನ್ ಆಫ್ ಪ್ರಿನ್ಸೆಸ್: ಅರಮನೆಯ ಹಿಂದಿನ ಪ್ರದೇಶದಿಂದ ನ್ಯೂಮಾಕ್ಟ್ì ಮತ್ತು ಸ್ಕ್ಲೋಸ್ಲ್ಯಾ ಟ್ಜ್ ಚೌಕಗಳನ್ನು ಸಂಪರ್ಕಿಸುವ ಒಂದು ರಸ್ತೆಯ ಜಾಗವನ್ನು ಸಂಪರ್ಕಿಸುತ್ತದೆ. ಇಲ್ಲಿನ 101 ಮೀಟರ್ ಭಿತ್ತಿ ಚಿತ್ರವು ಹೌಸ್ ಆಫ್ ವೆಟ್ಟಿನ್ನ ಆಡಳಿತಗಾರರನ್ನು ಆರೋಹಿತವಾದ ಮೆರವಣಿಗೆಯಲ್ಲಿ ಹೋಗುತ್ತಿರುವುದನ್ನು ತೋರಿಸುತ್ತದೆ. ಈ ಭಿತ್ತಿ ಚಿತ್ರವನ್ನು ಮ್ಯೂರೆಲ್ ಕಲೆಗಾರಿಕೆಯಿಂದ ಮೀಸೆನ್ ಪಿಂಗಾಣಿಯ ತುಣುಕುಗಳನ್ನು ಗೋಡೆಗೆ ಟೈಲ್ಸ್ ನಂತೆ ಅಂಟಿಸಲಾಗಿದೆ.
ರಾಯಲ್ ಪ್ಯಾಲೇಸ್:ಈ ನವೋದಯ ಕಟ್ಟಡವನ್ನು 15ನೇ ಶತಮಾನದಲ್ಲಿ ಸ್ಯಾಕ್ಸನ್ ಪ್ರಾಂತದ ರಾಜಕುಮಾರರು ಮತ್ತು ರಾಜರ ಅಧಿಕಾರದ ಹೊಸ ಕೇಂದ್ರವಾಗಿ ನಿರ್ಮಿಸಲಾಯಿತು. ಎರಡನೆಯ ಮಹಾಯುದ್ಧದ ದಾಳಿಯಲ್ಲಿ, ಹಾನಿಗೊಳಗಾದ ಅನಂತರ, 1985ರಲ್ಲಿ ಕಟ್ಟಡವನ್ನು ವಸ್ತು ಸಂಗ್ರಹಾಲಯ ಸಂಕೀರ್ಣವಾಗಿ ಪುನರ್ ನಿರ್ಮಿಸಿ ಆರಂಭಿಸಲಾಯಿತು.
ಸ್ಯಾನ್ಕಿಸ್ಸಿಮೇ ಟ್ರಿನಿಟಾಟಿಸ್ ಕ್ಯಾಥೆಡ್ರಲ್: ಕ್ಯಾಥೋಲಿಕ್ ಕೋರ್ಟ್ ಚರ್ಚ್ ಎಂದೂ ಕರೆಯಲ್ಪಡುವ ಈ ಕ್ಯಾಥೆಡ್ರಲ್ ಪಾರಂಪರಿಕ ಕಟ್ಟಡ ಸ್ಕ್ಲೋಸ್ಲ್ಯಾಟ್ಜ್ ಮತ್ತು ಥಿಯೇಟರ್ಪ್ಲಾಟ್ಜ ನಡುವೆ ಇದೆ ಮತ್ತು ಇದು ಸ್ಯಾಕ್ಸೋನಿಯದ ಅತೀದೊಡ್ಡ ಚರ್ಚ್ ಕಟ್ಟಡವಾಗಿದೆ. ಇದನ್ನು 1738 ಮತ್ತು 1754ರ ನಡುವೆ ಬರೊಕ್ ಶೈಲಿಯಲ್ಲಿ ಚಿಯಾವೆರಿ ನಿರ್ಮಿಸಿದರು. 1980ರಿಂದ ಇದು ಡ್ರೆಸ್ಡೆನ್-ಮಿಸೆನ್ ಡಯಾಸಿಸ್‌ನ ಕ್ಯಾಥೆಡ್ರಲ್ ಆಗಿದೆ.
ಸೆಂಪರ್ ಒಪೇರಾ ಹೌಸ್: 1838 ಮತ್ತು 1841ರ ನಡುವೆ ಈ ಒಪೆರಾ ಹೌಸ್ ಅನ್ನು ನಿರ್ಮಿಸಲಾಯಿತು. 1945ರಲ್ಲಿ ಡ್ರೆಸ್ಡೆನ್ ಬಾಂಬ್ ದಾಳಿಗೆ ಬಲಿಯಾಯಿತು. ಸೆಂಪರ್ ಒಪೇರಾ ಹೌಸ್ ಅನ್ನು ವಿಶ್ವದ ಅತ್ಯಂತ ಸುಂದರವಾದದ್ದು ಎಂದು ಪರಿಗಣಿಸಲಾಗಿದೆ ಮತ್ತು ಡ್ರೆಸ್ಡೆನ್ನ ಮುಖ್ಯ ಸ್ಥಳಗಳಲ್ಲಿ ಇದು ಒಂದಾಗಿದೆ.
ಜ್ವಿಂಗರ್ ಅರಮನೆ: ಬರೊಕ್ ಅವಧಿಯ ಅಂತ್ಯದ ಮಹತ್ವದ ಕಟ್ಟಡ. ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ಚಿತ್ರಕಲೆಗಳು ಎಲ್ಲವೂ ಸಮ್ಮಿಳಿನಗೊಂಡ ಸುಂದರವಾದ ಕಟ್ಟಡ. 1710 ಮತ್ತು 1728ರ ನಡುವೆ ಈ ಅರಮನೆಯನ್ನು ಕಟ್ಟಲಾಗಿದೆ. ಇಂದು ಈ ಕಟ್ಟಡವು ಓಲ್ಡ್ ಮಾಸ್ಟರ್ಸ್ ಪಿಕ್ಚರ್ ಗ್ಯಾಲರಿ, ರಾಯಲ್ ಕ್ಯಾಬಿನೆಟ್ ಆಫ್ ಮ್ಯಾಥಮೆಟಿಕಲ್ ಮತ್ತು ಫಿಸಿಕಲ್ ಇನ್ಸ್‌ಸ್ಟ್ರೆಮೆಂಟ್ಸ್ ಮತ್ತು ಪಿಂಗಾಣಿ ಸಾಮಗ್ರಿಗಳ ಸಂಗ್ರಹವನ್ನು ಹೊಂದಿದೆ.
ಬ್ರೂಲ್ಸ್ ಟೆರೇಸ್: ಡ್ರೆಸ್ಡೆನ್ನಲ್ಲಿರುವ ಎಲ್ಬೆ ನದಿಯ ದಂಡೆಗಳ ಮೇಲೆ 1739 ಮತ್ತು 1748ರ ನಡುವೆ ಅತ್ಯಂತ ವಾಸ್ತುಶಿಲ್ಪಿಯವಾಗಿ ಸುಂದರವಾದ ಈ ಭಾಗವನ್ನು ಖಾಸಗಿ ಉದ್ಯಾನಗಳಾಗಿ ನಿರ್ಮಿಸಲಾಯಿತು. ಇದನ್ನು ಯುರೋಪ್‌ನ ಬಾಲ್ಕನಿ ಎಂದು ಕರೆಯಲಾಗುತ್ತದೆ. ಮತ್ತು ಟೆರೆಸ್‌ನಿಂದ ಆರ್ಟ್ ಅಕಾಡೆಮಿ, ಡ್ರೆಸ್ಡೆನ್ ಕೋಟೆ ಮತ್ತು ಆಲ್ಬರ್ಟಿನಮ್ ಅನ್ನು ಪ್ರವೇಶಿಸಬಹುದು.
ಗೋಲ್ಡನ್ ಹಾರ್ಸ್ಮನ್: ಡ್ರೆಸ್ಡೆನ್ನ ಅತ್ಯಂತ ಪ್ರಸಿದ್ಧವಾದ ಈ ಸ್ಮಾರಕವನ್ನು 1732-1734ರ ನಡುವೆ ನಿರ್ಮಿಸಲಾಯಿತು. ಅಗಸ್ಟಸ್ ದಿ ಸ್ಟ್ರಾಂಗ್ ಎಂದು ಕರೆಯಲ್ಪಡುವ ಎಲೆಕ್ಟರ್ ಫ್ರೆಡ್ರಿಕ್ ಆಗಸ್ಟ್ ಐ, ಪುರಾತನ ವಸ್ತ್ರವನ್ನು ಧರಿಸಿ ಕುದುರೆಯ ಮೇಲೆ ಸವಾರಿ ಮಾಡುವುದನ್ನು ತೋರಿಸುತ್ತದೆ. ಈ ಪ್ರತಿಮೆಯನ್ನು ಸ್ಮಿತ್ ಲುಡ್ವಿಗ್ ವೈಡೆಮನ್ ಎನ್ನುವವರು ತಯಾರಿಸಿದ್ದರಂತೆ. ಗೋಲ್ಡನ್ ಹಾರ್ಸ್ಮನ್ ಅನ್ನು ಹಲವಾರು ಬಾರಿ ಪುನಃಸ್ಥಾಪಿಸಲಾಗಿದೆ. ಈ ವಿಗ್ರಹವು ಸರಿಸುಮಾರು 500 ಗ್ರಾಂ ಚಿನ್ನದ ಲೇಪನವನ್ನು ಹೊಂದಿದೆ.
ಗ್ರಾಸರ್ ಗಾರ್ಟನ್: ಥಿಯೇಟ ಪ್ಲಾಟ್ಜನ ಆಗ್ನೇಯಕ್ಕೆ 3.5 ಕಿ.ಮೀ. ದೂರದಲ್ಲಿರುವ ಗ್ರಾಸರ್ ಗಾರ್ಟನ್, ಡ್ರೆಸ್ಡೆನ್ನಲ್ಲಿನ ಅತೀದೊಡ್ಡ ಹಸುರು ಉದ್ಯಾನವನ. 17ನೇ ಶತಮಾನದಲ್ಲಿ ಈ ಉದ್ಯಾನವನ್ನು ನಿರ್ಮಾಣ ಮಾಡಲಾಗಿತ್ತು. ಬೇಸಗೆ ಕಾಲದಲ್ಲಿ ಇಲ್ಲಿ ಸಂಗೀತ ಕಚೇರಿಗಳು, ವಿವಿಧ ಪ್ರದರ್ಶನಗಳು ಮತ್ತು ಪಟಾಕಿ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ.
ಈ ನಗರದಲ್ಲಿ ಇನ್ನು ಹಲವಾರು ವೈಶಿಷ್ಟ್ಯವಿರುವ ಸ್ಮಾರಕಗಳು, ಪಾರಂಪರಿಕ ಕಟ್ಟಡಗಳು, ಐತಿಹಾಸಿಕ ಸ್ಮಾರಕಗಳು, ಸುಂದರವಾದ ಎಲ್ಬೆ ನದಿ ಇತ್ಯಾದಿ ಇದೆ. ಜರ್ಮನಿಯ ಪ್ರವಾಸಕ್ಕೆ ಹೋದರೆ ಒಂದೆರೆಡು ದಿನ ಆರಾಮವಾಗಿ ಇಲ್ಲಿ ಸಮಯ ಕಳೆಯಬಹುದು.
*ಪಿ.ಎಸ್.ರಂಗನಾಥ, ಮಸ್ಕತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.