Desi Swara: ಶಿಷ್ಯನಿಂದ ಪರಾಭವವನ್ನಿಚ್ಛಿಸುವ ಗುರು

ಹಕ್ಕಿಯಂತೆ ಹಾರಲು ಕಲಿತ ಮಾನವ

Team Udayavani, Jul 27, 2024, 12:14 PM IST

Desi Swara: ಶಿಷ್ಯನಿಂದ ಪರಾಭವವನ್ನಿಚ್ಛಿಸುವ ಗುರು

ಕಳೆದ ರವಿವಾರ ಜುಲೈ 21ರಂದು ಹಿಂದೂಗಳು ಎಲ್ಲ ಕಡೆ ಗುರು ಪೂರ್ಣಿಮೆಯನ್ನು ಆಚರಿಸಿ ತಮ್ಮ ಗುರುಗಳನ್ನು ಸ್ಮರಿಸಿದರು. ಗುರು ಯಾರು? ಗು ಅಂದರೆ ಕತ್ತಲೆ ಅಥವಾ ಅಜ್ಞಾನ, ರು ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದು ಅರ್ಥವೆಂದು ನನ್ನ ಗುರುಗಳು ಕಲಿಸಿದ್ದು. ಶಿಷ್ಯನ ಅಜ್ಞಾನವನ್ನು ದೂರ ಮಾಡಿ ಜ್ಞಾನ ಅಥವಾ ತಿಳಿವಳಿಕೆಯನ್ನು ಕೊಡುವವನೇ ಗುರು. ಎಲ್ಲ ಜನರೂ, ಗುರು ಸಹ, ಎಲ್ಲ ಕಡೆ ವಿಜಯವನ್ನೇ ಅಪೇಕ್ಷಿಸಿದರೂ, ತಾನು ಕಲಿಸಿದ ಒಬ್ಬನಾದರೂ ಶಿಷ್ಯ ತನ್ನನ್ನು ಮೀರುವ ಜ್ಞಾನಿ, ಬುದ್ಧಿವಂತ ಯಾ ಶೂರ ಆಗುವುದನ್ನೇ ಬಯಸುತ್ತಾನೆ ಎನ್ನುವ ಆಶಯವನ್ನು ಹೇಳುವ ಒಂದು ಸುಂದರ ಸಂಸ್ಕೃತ ಶ್ಲೋಕ ಅಥವಾ ಸುಭಾಷಿತ: “ಸರ್ವತ್ರ ಅನ್ವಿಚ್ಛೇತ್‌ ಜಯಂ; ಶಿಷ್ಯಾತ್‌ ಇಚ್ಛೇತ್‌ ಪರಾಜಯಂ’ ಇದನ್ನು ಬಹಳ ಜನರು ಕೇಳಿರಲಿಕ್ಕೆ ಸಾಕು.

ನಮ್ಮೂರಿನ ಅಪರೂಪದ “ಏರೋ ವೆಂಚರ್‌’ ಎನ್ನುವ ವಿಮಾನಗಳ ಮ್ಯೂಸಿಯಂಗೆ ಭೇಟಿ ನೀಡಿದೆವು. ಈಗ ಇಲ್ಲಿ ಎಲ್ಲ ಕಡೆ ಶಾಲೆಗಳಿಗೆ ರಜೆಯಿರುವುದರಿಂದ ಜನರು ಮಕ್ಕಳು, ಕುಟುಂಬ ಸಮೇತವಾಗಿ ಪ್ರತೀ ದಿನ ಒಂದೊಂದು ಕಡೆ ಡೇ ಟ್ರಿಪ್‌ ಪ್ರವಾಸವನ್ನು ಮಾಡುತ್ತಿರುತ್ತಾರೆ ಅಥವಾ ಶಾಪಿಂಗ್‌ ಮಾಲ್‌ ನಲ್ಲಿ ಸಿಗುತ್ತಾರೆ. ಕೆಲವರ ಮುಖದಲ್ಲಿ ಲವಲವಿಕೆ, ಮಂದಹಾಸ, ಬದಿಯಲ್ಲಿಯ ಚಿಣ್ಣರ ಕಲರವ, ಅದರ ಜತೆಗೆ ಮುಖದಲ್ಲಿ ಅವರನ್ನು ಖುಷಿಯಿಂದಿಡಲು ಮಾಡಿದ ಖರ್ಚಿನ ಲೆಕ್ಕ ಎದ್ದು ಕಾಣುತ್ತಿರುತ್ತದೆ!

ಈ ಸಲ ಅಪರೂಪಕ್ಕೆಂದು ಒಂದೈದು ದಿನ ನನ್ನ ಮೊಮ್ಮಕ್ಕಳು ನಮ್ಮ ಮನೆಯಲ್ಲಿ ಕಳೆದದ್ದು ಅವಿಸ್ಮರಣೀಯ ಅನುಭವ. ಅವರಿಬ್ಬರೂ ಒಂಬತ್ತು ಮತ್ತು ಹನ್ನೆರಡು ವರ್ಷದ ಹುಡುಗರೆಂದ ಮೇಲೆ, ಅವರ ಬುದ್ಧಿಮತ್ತೆ, ಭಾಷೆ, ಆಟ, ಕ್ವಿಜ್‌, ರಸಪ್ರಶ್ನಾವಳಿಗಳ ಅಭಿರುಚಿಗಳೊಂದಿಗೆ ಅವರ ತಿಳುವಳಿಕೆ ಮತ್ತು ಜನರಲ್‌ ನಾಲೇಜ್‌ ಚಕಿತಗೊಳಿಸುವಂತಿತ್ತು.

ನಾನಿರುವ ಊರು ಡೋಂಕಾಸ್ಟರ್‌, ರೈಲ್ವೇ ಮತ್ತು ಕುದುರೆ ರೇಸಿಗಷ್ಟೇ ಅಲ್ಲದೆ ವಿಮಾನ ಮತ್ತು ರಾಯಲ್‌ ಏರ್‌ಫೋರ್ಸ್‌ (Royal Air Force, RAF)ಗೂ ಪ್ರಸಿದ್ಧ. Avro XH558 “ವಲ್ಕನ್‌’ ಒಂದು ಬೃಹತ್‌ ವಿಮಾನದ ಹೆಸರು. ವಲ್ಕನ್‌ ಹೆಸರು ಹದ್ದಿನ ಜಾತಿಯ ವಿಸ್ತಾರದ ರೆಕ್ಕೆಗಳ ಹಕ್ಕಿಯನ್ನು ಸೂಚಿಸುತ್ತದೆ. ನಮ್ಮೂರಿನ ಹತ್ತಿರದ ಫಿನಿಂಗ್ಲಿ ವಿಮಾನಾಗಾರ ಬಹಳ ವರ್ಷಗಳ ಕಾಲ ಟೇಲ್‌ ವಿಂಗ್‌ ಇಲ್ಲದ, ತ್ರಿಕೋನಾಕೃತಿಯ ಡೆಲ್ಟಾ ರೆಕ್ಕೆಗಳ ಕೆಳಗೆ ಅಣುಬಾಂಬ್‌ ಅನ್ನು ಒಯ್ಯಬಹುದಾದ ವಲ್ಕನ್‌ ವಿಮಾನದ ತವರೂರಾಗಿತ್ತು. (ಈಗ ಅದರ ಉಡಾವಣೆ ನಿಂತು ಹೋಗಿದೆ.) ಇಷ್ಟೆಲ್ಲ ಇತಿಹಾಸ ಇರುವಾಗ ಇಲ್ಲಿ ವಿಮಾನ, ಉಡಾವಣೆ ಬ್ರಿಟನ್‌ ಭಾಗವಹಿಸಿದ ಎರಡನೆಯ ಮಹಾಯುದ್ಧ ಮತ್ತಿತರ ಯುದ್ಧಗಳಲ್ಲಿ ಉಪಯೋಗಿಸಿದ ಫೈಟರ್‌ ವಿಮಾನಗಳು ಮತ್ತು ಹೆಲಿಕಾಪ್ಟರ್‌ ಇವೆಲ್ಲವುಗಳು ಮನೆ ಮಾಡಿರುವ ಒಂದು ಮ್ಯೂಸಿಯಂ ಅನ್ನು ಇಲ್ಲಿಯೇ ಸ್ಥಾಪಿಸಿರುವುದು ಅಚ್ಚರಿಯನ್ನುಂಟು ಮಾಡುವ ವಿಷಯ ಅಲ್ಲ.

ಇಲ್ಲಿ ನಲವತ್ತಕ್ಕೂ ಹೆಚ್ಚು ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಇಟ್ಟಿದ್ದಾರೆ. ಕೆಲವು ಒಂದು ದೊಡ್ಡ ಹ್ಯಾಂಗರ್‌(ಶೆಡ್‌ ತರ)ದಲ್ಲಿ, ಉಳಿದವು ಹೊರಗೇ ಅದರ ಸುತ್ತಲೂ ನಿಂತಿವೆ. ಒಂದನೆಯ ಮಹಾಯುದ್ಧದಲ್ಲಿ ಪಾಲುಗೊಂಡ ದೊಡ್ಡ ಜೆಟ್‌ ಎಂಜಿನ್‌ ವಿಮಾನಗಳನ್ನು ಹಿಡಿದು ಇತ್ತೀಚಿನ ಕಾಲದ ವಿಮಾನಗಳ ವರೆಗೆ. ಅಲ್ಲಿ ದಟ್ಟವಾಗಿ ಪ್ರದರ್ಶಿತವಾಗಿರುವ ನೂರಕ್ಕೂ ಹೆಚ್ಚಿನ ಎಂಜಿನ್‌ಗಳು ಶಾಲಾ ಮಕ್ಕಳಿಂದ ಹಿಡಿದು ಉಡಾವಣೆಯಲ್ಲಿ ಆಸಕ್ತಿಯುಳ್ಳ ದೊಡ್ಡವರನ್ನು ಸದಾ ಅಯಸ್ಕಾಂತದಂತೆ ಆಕರ್ಷಿಸುತ್ತವೆ.

ಎಳೆಯ ಮಕ್ಕಳಿಗಾಗಿಯೇ ತೆರೆದಿಟ್ಟ ಹಲವಾರು ವಿಮಾನ ಚಾಲಕನ ಓಪನ್‌ ಕಾಕ್‌ ಪಿಟ್‌ಗಳಲ್ಲಿ ನನ್ನಿಬ್ಬರು ಮಕ್ಕಳು ಓಡಿ ಹೋಗಿ ಹತ್ತಿ ಕುಳಿತು ತಮ್ಮ ಮುಂದಿನ ಕಂಟ್ರೋಲ್‌ ಪ್ಯಾನಲ್‌ನಲ್ಲಿ ಡಜನ್‌ ಬಟನ್‌ಗಳನ್ನು ಒತ್ತಿ ಅಥವಾ ಕಾಲುಗಳ ಮಧ್ಯದ ಸ್ಟಿಕ್ಕನ್ನು ಎಡಕ್ಕೋ ಬಲಕ್ಕೋ ತಿರುಗಿಸಿ, ಅದನ್ನು ತಮ್ಮತ್ತ ಎಳೆದು ಆ ವಿಮಾನವನ್ನು ಹಿಡಿತದಲ್ಲಿಟ್ಟು ಕೊಂಡು ತಾವೇ ಮೇಲಕ್ಕೆ ಹಾರಿಸುತ್ತಿರುವಂತೆ ಕಲ್ಪನೆ ಮಾಡುತ್ತ ಅಥವಾ ಜಾಯ್‌ ಸ್ಟಿಕ್ಕನ್ನು ಮುಂದೆ ತಳ್ಳಿ ಆಕಾಶದಲ್ಲಿ ಅಧೋಮುಖ ಉಡಾವಣೆಯಲ್ಲಿ ಕೆಳಗಿಳಿದು ನೆಲಕ್ಕೆ ಬಂದಂತೆ ಅನುಭವ ಪಟ್ಟು ಆನಂದಿಸಿದರು.

ಹಿಂದಿನ ಭಾಗದಿಂದ ಬೇರ್ಪಡಿಸಿ ಪೈಲಟ್‌ ಕುಳಿತುಕೊಳ್ಳುವ ಬರೀ ಎಂಜಿನ್‌ನ ಕಾಕ್‌ ಪಿಟ್‌ ಒಂದನ್ನೇ ಪ್ರದರ್ಶನಕ್ಕಿಟ್ಟಿದ್ದ ಐದಾರು ಎಂಜಿನ್ನುಗಳನ್ನು ತಾವೇ ನಡೆಸಿ ತೃಪ್ತಿಪಟ್ಟರು. ಅಲ್ಲಿ ನಿಂತ ಅನೇಕಾನೇಕ ವಿಮಾನಗಳನ್ನು ಹತ್ತಿ ಇಳಿದು, ಪ್ರತಿಯೊಂದು ಏರೋಪ್ಲೇನ್‌ನ ಇತಿಹಾಸವನ್ನು ಫಲಕದಲ್ಲಿ ನೋಡಿ, ಓದಿ, ತಾವು ಮನೆ- ಶಾಲೆಯಲ್ಲಿ ಓದಿದ WW2 ಇತಿಹಾಸದೊಡನೆ ಒರೆ ಹಚ್ಚಿ ನೋಡಿ ಉತ್ಸುಕರಾದರು. ಫಲಕಗಳನ್ನು ಓದಿ ಪ್ರಶ್ನೆ ಕೇಳಿದರು. ಒಬ್ಬ ಹುಡುಗ VJ Day (ಜಪಾನನ್ನು ಸೋಲಿಸಿದ ದಿನ) ಮತ್ತು VE Day (ಯೂರೋಪಿನಲ್ಲಿ ವಿಜಯ) ವಿಜೆ ಡೇ ಮತ್ತು ವಿಈ ಡೇ ಅವುಗಳ ವ್ಯತ್ಯಾಸವನ್ನು ಹೇಳು ಅಂತ ತಾನು ಮಿಲಿಟರಿಧಾರಿ ಯೋಧ ಅಂತ ನಟಿಸಿ ನನ್ನ ಪರೀಕ್ಷೆ ತೊಗೊಂಡು ನನ್ನನ್ನೇ ಪರಾಜಯಗೊಳಿಸಿದನು! ಮೇಲೆ ಹೇಳಿದ ಆ ಶುಭಾಶಯ ಇನ್ನೂ ಅನ್ವರ್ಥಕ! ಅದರ ಇನ್ನೊಂದು ಮುಖವಾದ ಸರ್ವತೋ ಇಚ್ಛೇತ್‌ ವಿಜಯಮ್‌ ಪುತ್ರಾತ್‌ ಅಥವಾ ಪೌತ್ರಾತ್‌ ಇಚ್ಛೇತ್‌ ಪರಾಜಯಮ್‌, ತಂದೆ ತನ್ನ ಮಕ್ಕಳು ತನಗಿಂತ ಬಲಶಾಲಿ, ಬುದ್ಧಿವಂತನಾಗಲಿ, ಎಂದು ಇಚ್ಛಿಸುತ್ತಾನೆ ಅನ್ನುವುದು ಎಷ್ಟು ಸತ್ಯ!

ಎರಡನೆಯ ಮಹಾಯುದ್ಧ ಮತ್ತು ಬ್ಯಾಟಲ್‌ ಆಫ್‌ ಬ್ರಿಟನ್‌ತನಗಿಂತ ಬಲಶಾಲಿಯಾದ ಮತ್ತು ಹೆಚ್ಚಿನ ಸಂಖ್ಯೆಯ ಯೋಧರು ಮತ್ತು ವಿಮಾನಗಳಿದ್ದರೂ ಎರಡನೆಯ ಮಹಾಯುದ್ಧದಲ್ಲಿ ಜರ್ಮನಿಯ ವಿರುದ್ಧ ಹೋರಾಡಿ ಅದನ್ನು ಸೋಲಿಸುವುದಕ್ಕೆ ಮುಖ್ಯ ಕಾರಣ ಬ್ರಿಟನ್‌ನ ವಿಮಾನ ದಳ. 1940ರ ಜುಲೈ ತಿಂಗಳಿಂದ ಅಕ್ಟೋಬರ್‌ ವರೆಗಿನ ಸಮಯದಲ್ಲಿ ಬ್ರಿಟನ್‌ನ ರಾಯಲ್‌ ಏರ್‌ಫೋರ್ಸ್‌ (RAF) ಆಕಾಶದಲ್ಲಿ ಜರ್ಮನಿಯನ್ನು ಮೀರಿಸಿದ್ದರಿಂದಲೇ ಅದರ ವಿಜಯಕ್ಕೆ ನಾಂದಿಯಾಯಿತು. ಜರ್ಮನಿ ಮುಖ್ಯವಾಗಿ ರಾತ್ರಿ ವಿಮಾನಗಳಿಂದ ಲಂಡನ್‌ ಮತ್ತು ಸುತ್ತಮುತ್ತಲಿನ ಪ್ರದೇಶದ ಮೇಲೆ ಮತ್ತು ಅದರ ವಿಮಾನ ಮತ್ತು ಶಸ್ತ್ರಾಗಾರಗಳ ಮೇಲೆ ಬಾಂಬ್‌ ಸುರಿಮಳೆ ಮಾಡಿ ಲಂಡನ್‌ ಉರಿದು ಬಹಳಷ್ಟು ನಾಶವನ್ನುಂಟು ಮಾಡಿತು. ಇದನ್ನೇ ಬ್ಲಿಟ್ಜ್ ಅಥವಾ ಬ್ಲಿಟ್ಹ್ ಕ್ರೈಗ್‌ (ಮಿಂಚಿನ ವೇಗದ ಪ್ರಹಾರ) ಎಂದು ಕರೆಯುತ್ತಾರೆ. ಆದರೆ ಆರ್‌ಏಎಫ್‌ ತನ್ನ ಸ್ಪಿಟ್‌ ಫೈಯರ್‌ ಮುಂತಾದ ವಿಮಾನಗಳ ಬಲದಿಂದ ಮೇಲುಗೈ ಸ್ಥಾಪಿಸಿ ಹಿಟ್ಲರ್‌ನ ಜರ್ಮನಿ, ಬ್ರಿಟನ್‌ನನ್ನು ಮುಗ್ಗರಿಸಿ ಶಾಂತಿ ಒಪ್ಪಂದಕ್ಕೆ ಪುಸಲಾಯಿಸುವ ಯೋಜನೆ ವಿಫಲವಾದದ್ದು ಈ ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲಾಗಿದೆ. ಇದನ್ನು ಎದೆಯುಬ್ಬಿಸಿ ಹೇಳುವ ಫಲಕಗಳನ್ನು ಈ ಮ್ಯೂಸಿಯಂನಲ್ಲಿ ಓದಿ ಎಳೆಯ ಮಕ್ಕಳು ಪ್ರಭಾವಿತರಾಗುತ್ತಿದ್ದರು.

ಹಕ್ಕಿಯಂತೆ ಹಾರಲು ಕಲಿತ ಮಾನವ
ಪುರಾತನ ಗ್ರೀಕ್‌ ದಂತಕಥೆಗಳಲ್ಲಿ ಮೇಣದಿಂದ ಭುಜಗಳಿಗೆ ರೆಕ್ಕೆಗಳನ್ನು ಅಂಟಿಸಿಕೊಂಡು ಹಾರಿದ ಮನುಷ್ಯ ಐಕೇರಸ್‌ನ ಸಾಹಸ ಮತ್ತು ರಾಮಾಯಣದಲ್ಲಿಯ ಪುಷ್ಪಕ ವಿಮಾನದ ಕಥೆಯಿಂದ ಪ್ರೇರಿತನಾದ ಮಾನವ ತಲೆತಲಾಂತರಗಳಿಂದ ಹಕ್ಕಿಯಂತೆ ಹಾರಲು ಪ್ರಯತ್ನ ಪಡುತ್ತಲೇ ಇದ್ದಾನೆ. ಅಲ್ಲಿಂದ ಇಂದಿನ ವರೆಗೆ ಅನೇಕ ರೋಮಾಂಚನಕಾರಿ ಐತಿಹಾಸಿಕ ಸಾಹಸಗಳ ಕಥೆಗಳಿವೆ. ಅದರಲ್ಲಿ ಪ್ರಮುಖವಾಗಿ ನೀರಿನ ಮೇಲೆ ಒಬ್ಬನೇ ಇಪ್ಪತ್ತೆರಡು ಮೈಲುಗಳ ಅಗಲದ ಫ್ರಾನ್ಸ್‌-ಇಂಗ್ಲೆಂಡ್‌ ಮಧ್ಯದ ಇಂಗ್ಲಿಷ್‌ ಚಾನೆಲ್‌ ಅನ್ನು ತನ್ನ ಹಗುರಾದ ರೆಕ್ಕೆಯ ಆದರೆ “ಹೆವಿಯರ್‌ದ್ಯಾನ್‌ ಏರ್‌’ ವಿಮಾನದಲ್ಲಿ ಮೊದಲ ಸಲ ದಾಟಿದ ಕೀರ್ತಿ ಸಲ್ಲುತ್ತದೆ ಲೂಯಿ ಬ್ಲೇರಿಯೋ (Bleriot) ಎನ್ನುವ ಫ್ರಾನ್ಸಿನ ಪ್ರಜೆಗೆ.

ಆತ ಹಿಂದಿನ ದಿನದ ಟೆಸ್ಟ್‌ ಫ್ಲೈಟ್‌ ಅಪಘಾತದಲ್ಲಿ ಪೆಟ್ಟು ಬಿದ್ದು ನೋವಿನಿಂದ ನರಳುತ್ತಿದ್ದರೂ ಫ್ರಾನ್ಸ್‌ನ ಕ್ಯಾಲೇದಿಂದ ಇಂಗ್ಲೆಂಡಿನ ದಕ್ಷಿಣ ದಂಡೆಯಲ್ಲಿನ ಡೋವರ್‌ ವರೆಗೆ ಬರೀ ಮೂವತ್ತಾರೂವರೆ ನಿಮಿಷಗಳಲ್ಲಿ ಹಾರಿ ಡೇಲಿ ಮೇಲ್‌ ಪತ್ರಿಕೆ ಏರ್ಪಡಿಸಿದ್ದ ಸ್ಫರ್ಧೆಯಲ್ಲಿ ಜಯಗಳಿಸಿ 1,000 ಪೌಂಡುಗಳ ಬಹುಮಾನವನ್ನು ಗೆದ್ದನು. ಆತನಿಗೆ ಅರ್ಧ ದಾರಿಯಲ್ಲಿ ಹವಾಮಾನ ಕೆಟ್ಟು ಮುಂದಿನ “ದಾರಿ’ ಸರಿಯಾಗಿ ಕಾಣದಿದ್ದರೂ, “ನಾನು ಏಕಾಕಿ; ನನಗೆ ಏನೂ ಕಾಣಲೊಲ್ಲದು’ ಎಂದು ಅಂದುಕೊಳ್ಳುತ್ತ ಡೊವರ್ಗೆ ಬಂದಿಳಿದು ಮುಗ್ಗರಿಸಿದ್ದರೂ, ಗೆದ್ದ ಆತನ Blériot Type XI ಎನ್ನುವ “ವಾಯುಗಿಂತ ಸ್ವಲ್ಪವೇ ಒಜ್ಜೆ’ ವಿಮಾನದ ಪ್ರತೀ ಸಹ ಪ್ರದರ್ಶನಾಲಯದ ಮೇಲ್ಮಾಳಿಗೆಯಲ್ಲಿ ನೋಡಲು ಸಿಗುತ್ತದೆ. ಆ ಕ್ಷಣವನ್ನು ಕಲ್ಪಿಸಿಕೊಂಡರೆ ಎಂಥವರಿಗೂ ರೋಂಮಾಂಚನವಾದೀತು. ಅಂದ ಮೇಲೆ ಅದರ ಕನಸು ಕಾಣುವ ಮಕ್ಕಳಿಗಂತೂ ಆಕಾಶವೇ ಮಿತಿ!

ಕೊನೆಯದಾಗಿ, 1982ರಲ್ಲಿ ಎಂಟು ಸಾವಿರ ಮೈಲುಗಳಾಚೆಯ ಬ್ರಿಟನ್‌ ಆಧಿಪತ್ಯದ ಫಾಕ್ಲಂಡ್ಸ್‌ ಎನ್ನುವ ಎರಡು ಪುಟ್ಟ ನಡುಗಡ್ಡೆಗಳನ್ನು ತನ್ನ ಸಮೀಪ ಇದೆ ಅಂತ ಕಬಳಿಸಲು ಹೊಂಚು ಹಾಕಿದ್ದ ದಕ್ಷಿಣ ಅಮೆರಿಕೆದ ಅರ್ಜೆಂಟೀನಾವನ್ನು ಸೋಲಿಸಿದ ಯುದ್ಧದಲ್ಲಿ ಕೆಡವಿದ ಅಲ್ಲಿ ಪ್ರದರ್ಶನಕ್ಕಿಟ್ಟಿದ್ದ ಒಂದು ವಿಮಾನದ ಅವಶೇಷಗಳನ್ನು ಸಹ ನೋಡಿ, ಫೋಟೋಗಳನ್ನು ತೆಗೆಸಿಕೊಂಡು ಮನೆಗೆ ಮರಳಿದಾಗ ಸರಿಯಾಗಿ ಆಂಗ್ಲರ ಸಂಜೆಯ ಟೀ ಟೈಮ್‌, ಆಗಿತ್ತು!

*ಶ್ರೀವತ್ಸ ದೇಸಾಯಿ,
ಡೋಂಕಾಸ್ಟರ್‌

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್: ಶಿಕ್ಷಕರ ದಿನಾಚರಣೆ- ಶಿಕ್ಷಕರನ್ನು ಸನ್ಮಾನಿಸಿದ ಇಂಡಿಯನ್‌ ಕಲ್ಚರಲ್‌ ಸೆಂಟರ್

ಕತಾರ್: ಶಿಕ್ಷಕರ ದಿನಾಚರಣೆ- ಶಿಕ್ಷಕರನ್ನು ಸನ್ಮಾನಿಸಿದ ಇಂಡಿಯನ್‌ ಕಲ್ಚರಲ್‌ ಸೆಂಟರ್

Dubai Green Planet: ವಿಶ್ವದ ಗಮನ ಸೆಳೆಯುವ ದುಬೈ ಗ್ರೀನ್‌ ಪ್ಲಾನೆಟ್‌ ಬೇಸಗೆ ಶಿಬಿರಾನುಭವ

Dubai Green Planet: ವಿಶ್ವದ ಗಮನ ಸೆಳೆಯುವ ದುಬೈ ಗ್ರೀನ್‌ ಪ್ಲಾನೆಟ್‌ ಬೇಸಗೆ ಶಿಬಿರಾನುಭವ

ಮೊಗವೀರ್ಸ್‌ ಬಹ್ರೈನ್‌ ಸಂಘಟನೆ;ವಿದ್ಯುಕ್ತ ಪದಗ್ರಹಣ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ಮೊಗವೀರ್ಸ್‌ ಬಹ್ರೈನ್‌ ಸಂಘಟನೆ;ವಿದ್ಯುಕ್ತ ಪದಗ್ರಹಣ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ಹೊನ್ನುಡಿ: ಜೀವನಾನುಭವ ಮುಖ್ಯ-ಭರವಸೆಯೊಂದು ಬಾಳಿನ ಆಶಾಕಿರಣವಿದ್ದಂತೆ…

ಹೊನ್ನುಡಿ: ಜೀವನಾನುಭವ ಮುಖ್ಯ-ಭರವಸೆಯೊಂದು ಬಾಳಿನ ಆಶಾಕಿರಣವಿದ್ದಂತೆ…

NRI: “ಸತ್ಕುಲ ಪ್ರಸೂತರು’ ಶ್ರೇಣಿಕೃತ ಸಮಾಜದ ಕಥನ-ಕಾದಂಬರಿ ಲೋಕಾರ್ಪಣೆ

NRI: “ಸತ್ಕುಲ ಪ್ರಸೂತರು’ ಶ್ರೇಣಿಕೃತ ಸಮಾಜದ ಕಥನ-ಕಾದಂಬರಿ ಲೋಕಾರ್ಪಣೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.