Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!
ನಾಯಿಗೆ ಹೇಗೆ ನಮ್ಮ ಭಾಷೆ ಗೊತ್ತು! ನನಗಂತೂ ಗೊಂದಲ ಆಗಿಬಿಟ್ಟಿತು.
Team Udayavani, May 11, 2024, 1:00 PM IST
ಇಲ್ಲಿಯ ಗ್ರಂಥಾಲಯಗಳೆಂದರೇ ಕೇವಲ ಪುಸ್ತಕಗಳು ಮಾತ್ರ ಇರುವ ಸ್ಥಳವಲ್ಲ. ಸಕಲ ವಿಧವಿಧವಾದ ಅನುಕೂಲಗಳನ್ನು ಸುತ್ತಲಿನ ಜನಗಳಿಗೆ ಒದಗಿಸುವ ಬಹು ಮುಖ್ಯ ಜಾಗ ಅಂದರೇ ತಪ್ಪಿಲ್ಲ. ನನಗೆ ತಿಳಿದ ಮಟ್ಟಿಗೆ ನಮ್ಮ ದೇಶದಲ್ಲಿ ಗ್ರಂಥಾಲಯಗಳಿಗೆ ಒಂದಷ್ಟು ಜನರು ತಮ್ಮ ಜೀವಮಾನದಲ್ಲಿ ಎಂದು ಸಹ ತಮ್ಮ ಕಾಲನ್ನು ಇಟ್ಟಿರುವುದಿಲ್ಲ. ಅಲ್ಲಿಗೆ ಹೋಗಿ ಏನು ಓದಬಹುದು ಎಂಬುದನ್ನೇ ತಿಳಿದಿರುವುದಿಲ್ಲ. ಅಲ್ಲಿ ಕೇವಲ ಪುಸ್ತಕಗಳು ಮಾತ್ರ ಇರುತ್ತವೆ. ಅಲ್ಲಿ ಹೋಗಿ ಕೂತು ಓದುವಷ್ಟು ಸಮಯವೆಲ್ಲಿ ? ಹಾಗಾಗಿಯೇ ನಮ್ಮ ಕೆಲವು ಹಿರಿಯರಂತೂ ತಲೆಯನ್ನು ಸಹ ಹಾಕಿರುವುದಿಲ್ಲ. ಇನ್ನೂ ತರುಣ ಜನಾಂಗವನ್ನು ಕೇಳುವುದೇ ಬೇಡಬಿಡಿ !
ನಮ್ಮ ದೇಶದಲ್ಲಿ ಲೈಬ್ರರಿ ಎಂದರೇ ಓದುವ ಮಕ್ಕಳು ತಮಗೆ ಖರೀದಿ ಮಾಡಲು ಸಾಧ್ಯವಿಲ್ಲದಂತಹ ಪುಸ್ತಕಗಳನ್ನು ಶಾಲೆಯಲ್ಲಿನ ಲೈಬ್ರರಿಯಲ್ಲಿ , ಕಾಲೇಜು ಲೈಬ್ರರಿಯಲ್ಲಿ ಎರವಲು ಪಡೆದು ಓದಿ ವಾಪಸು ಕೊಡುವ ಸ್ಥಳ ಮಾತ್ರ ಎಂದುಕೊಂಡಿರುತ್ತಾರೆ. ಹೆಚ್ಚು ಎಂದರೇ ವಿದ್ವಾಂಸರು, ಪಿಎಚ್.ಡಿ ಸಂಶೋಧನ ವಿದ್ಯಾರ್ಥಿಗಳು ತಮ್ಮ ಪುಸ್ತಕಕ್ಕಾಗಿ ಅಲ್ಲಿ ಇಲ್ಲಿನ ಹಳೆಯ ಪುಸ್ತಕಗಳನ್ನು ಹುಡುಕುವ ಮಂದಿರವೆಂದರೇ ತಪ್ಪಿಲ್ಲ.
ಸರಕಾರಿ ಗ್ರಂಥಾಲಯಗಳು ನಾಡಿನ ಬಹುತೇಕ ಸ್ಥಳಗಳಲ್ಲಿ ಹಾಯಾಗಿ ಕುಳಿತು ದಿನಪತ್ರಿಕೆಯನ್ನು ಓದುವ ಜಾಗ. ಹಿರಿಯರು, ಮಧ್ಯಮ ವಯಸ್ಸಿನವರು ಸಮಯ ದೂಡಲು ಯಾವುದೋ ಒಂದು ಪುಸ್ತಕ, ಪತ್ರಿಕೆ ಹಿಡಿದುಕೊಂಡು ಕೂರುವ ತಣ್ಣನೆಯ ಜಾಗ.
ಅಲ್ಲಿರುವ ಪುಸ್ತಕಗಳೆಂದರೇ ಎಲ್ಲಿಯೋ ಮಾರಾಟವಾಗದೇ ಉಳಿದ ಉಪಯೋಗಕ್ಕೆ ಬಾರದ ಪುಸ್ತಕಗಳನ್ನು ಸರಕಾರ ಹೇರಳವಾಗಿ ತುಂಬಿರುವ ಜಾಗ ಮಾತ್ರ ಎಂಬ ಮಾತು ಸಹ ಇದೆ.
ಆ ಪುಸ್ತಕಗಳನ್ನು ನೋಡಿದರೇ ಗೊತ್ತಾಗುತ್ತದೆ ಎಂದೂ ಯಾರೊಬ್ಬರೂ ಓದದೇ ಹಾಗೆಯೇ ದೊಡ್ಡ ದೊಡ್ಡ ಕಪಾಟುಗಳಲ್ಲಿದ್ದು ಧೂಳು ಹಿಡಿದ ಪುಟಗಳು, ಮುಟ್ಟಲು ಭಯವಾಗುತ್ತದೆ! ಸರಕಾರಿ ಗ್ರಂಥಾಲಯಗಳಲ್ಲಿ ಯುವಕ ಯುವತಿಯರನ್ನು ಕಾಣುವುದು ಅಸಾಧ್ಯದ ಮಾತು. ಈ ರೀತಿಯ ನನ್ನ ಗ್ರಂಥಾಲಯ ಕಲ್ಪನೆಯನ್ನು ಸುಳ್ಳು ಮಾಡುವಂತೆ ಕಂಡದ್ದು ಅಮೆರಿಕದ ಲೈಬ್ರರಿಗಳನ್ನು ಕಣ್ಣಾರೆ ನೋಡಿದಾಗ. ನಾನು ಇಲ್ಲಿಯ ಗ್ರಂಥಾಯಲಗಳೊಳಗಿನ ಜನಜಂಗುಳಿಯನ್ನು ನೋಡಿ ದಂಗಾಗಿ ಹೋಗಿದ್ದೇ. ಇಷ್ಟೊಂದು ಸಂಖ್ಯೆಯಲ್ಲಿ ಇಲ್ಲಿನ ಜನರು ಲೈಬ್ರರಿಯ ಕಡೆ ನಿತ್ಯ ಬರುವುದು ಸೋಜಿಗವನ್ನುಂಟು ಮಾಡಿತ್ತು.
ನಮ್ಮೂರಿನ ಲೈಬ್ರರಿಯನ್ನು ನೋಡಬೇಕು. ಹೆಚ್ಚು ಎಂದರೇ 10 ಜನಗಳನ್ನು ಕಾಣುವುದು ದಿನಪತ್ರಿಕೆ, ಮ್ಯಾಗಜಿನ್ ವಿಭಾಗದಲ್ಲಿ ಮಾತ್ರ. ಮೈನ್ ಗ್ರಂಥಾಲಯದ ಒಳಾಂಗಣ ಬೀಕೋ ಎನ್ನುತ್ತಿರುತ್ತದೆ. ಒಬ್ಬರೆ ಕುಳಿತುಕೊಳ್ಳಲು ಭಯವಾಗುವ ರೀತಿಯಲ್ಲಿ ಗೋಚರಿಸುತ್ತದೆ. ಮಕ್ಕಳನ್ನಂತೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಬಿಡಿ. ಹೀಗೆ ಇರುವ ಚಿತ್ರಣಕ್ಕೆ ವಿರುದ್ಧವಾಗಿ ಕಂಡಿದ್ದು ಇಲ್ಲಿನ ಅಮೆರಿಕದ ಗ್ರಂಥಾಲಯಗಳು. ಅತ್ಯಂಥ ಬ್ಯುಸಿ ಸ್ಥಳವೆಂದರೇ ತಪ್ಪಿಲ್ಲ. ಪ್ರತೀ ಕುಟುಂಬವು ಈ ಲೈಬ್ರರಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಭೇಟಿ ಮಾಡಿ ಗ್ರಂಥಾಲಯದ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ.
ಓದುವ ಚಿಕ್ಕ-ಚಿಕ್ಕ ಮಕ್ಕಳಂತೂ, ರಾಶಿ-ರಾಶಿ ಪುಸ್ತಕಗಳನ್ನು ತಮ್ಮ ಚೀಲದ ತುಂಬ ತುಂಬಿಕೊಂಡು ಹೋಗುವುದನ್ನು ನೋಡಿದರೇ ಈ ಲೈಬ್ರರಿಗಳು ನಮ್ಮ ದೇಶದ ಗ್ರಂಥಾಲಯಗಳಿಗಿಂತ ಎಷ್ಟು ಮುಂದುವರಿದ್ದಿದ್ದೇವೇ ಅನಿಸುತ್ತದೆ. ಹಾಗೆಯೇ ನಮ್ಮ ಲೈಬ್ರರಿಗಳನ್ನು ಹೋಲಿಸಿ ನೋಡಿದಾಗ ಬೇಸರವು ಆಗುತ್ತದೆ.
ಯಾವುದೇ ಪ್ರಸಿದ್ಧ, ಮುಖ್ಯ, ಹೊಚ್ಚ ಹೊಸ ಪುಸ್ತಕಗಳು ಇಲ್ಲಿ ಲಭ್ಯವಿರುವುದು. ವಿಶಾಲವಾದ ಜಾಗದಲ್ಲಿ ಅನುಕೂಲವಾದ ರೀತಿಯಲ್ಲಿ ಮಕ್ಕಳಿಗೆ, ಹಿರಿಯರಿಗೆ, ಓದುವ ವಿದ್ಯಾರ್ಥಿಗಳಿಗೆ, ಹಿರಿಯರಿಗೆ ಹೀಗೆ ನಾನಾ ವಿಭಾಗಗಳನ್ನು ಮಾಡಿರುವುದು. ಯಾವುದೇ ಪುಸ್ತಕಗಳು ಸಿಗದಿದ್ದಾಗ ಅಲ್ಲಿಯ ಸಿಬಂದಿಯೇ ಹುಡುಕಿಕೊಡುವುದು. ಆನ್‌ಲೈನ್‌ನಲ್ಲಿ ಕಾದಿರಿಸಿದರೇ ಅವರೇ ಹುಡುಕಿ ಇಟ್ಟು ಈ ದಿನ ಬಂದು ನೀವು ತೆಗೆದುಕೊಂಡು ಹೋಗಿ ಎನ್ನುವುದು. ಪುಸ್ತಕಗಳಲ್ಲದೇ ಚಲನಚಿತ್ರ, ಸೀರಿಯಲ್ ಡಿವಿಡಿ, ಸಿಡಿಗಳನ್ನು ತೆಗೆದುಕೊಂಡು ಹೋಗಬಹುದು.
ಹಾಗೆಯೇ ವರ್ಷವಿಡೀ ಮಕ್ಕಳಿಗಾಗಿ, ಹಿರಿಯರಿಗಾಗಿ ನಾನಾ ಕಲಿಕಾ ಕಾರ್ಯಕ್ರಮಗಳು. ಓದುವುದು ಒಂದೇ ಅಲ್ಲದೇ ವಿಧವಿಧವಾದ ವಿಷಯಗಳನ್ನು ಕೌಶಲವನ್ನು ಕಲಿಯಬೇಕು ಎನ್ನುವ ಪ್ರತೀ ಮನಸ್ಸುಗಳಿಗೂ ನಾನಾ ಅವಕಾಶವನ್ನು ಒದಗಿಸುವ ಯೋಜನೆ ಮತ್ತು ಯೋಚನೆ ನನ್ನಂತೂ ಚಿಂತನೆಗೀಡು ಮಾಡಿತು. ಅಲ್ಲ ಕೇವಲ ಗ್ರಂಥಾಲಯವೊಂದು ಇಷ್ಟರ ಮಟ್ಟಿಗೆ ಜನರೊಡನೇ ನಿರಂತರವಾಗಿ ಸಂಪರ್ಕವನ್ನಿಂಟುಕೊಂಡಿರುವುದನ್ನು ನೋಡಿ ಖುಷಿಯಾಗುತ್ತದೆ. ಇಲ್ಲಿನ ಜನಗಳಿಗೆ ತಮ್ಮ ಜೀವನದಲ್ಲಿ ಅತೀ ಹತ್ತಿರವಾದ ಸ್ಥಳವೆಂದರೇ ಲೈಬ್ರರಿಯೆಂದರೇ ತಪ್ಪಿಲ್ಲ. ಹಾಗೆಯೇ ಮನಸ್ಸಿಗೆ ಹೊಸ ಹೊಸ ಯೋಚನೆಯನ್ನು ಪ್ರಚೋದಿಸುವ ಸ್ಥಳವೆಂದರೇ ತಪ್ಪಿಲ್ಲ.
ಓದಿಗೆ ಹೊಂದಿಂಕೊಂಡಂತೆ ವಿವಿಧ ರೀತಿಯ ಕಲಿಕಾ ಕಾರ್ಯಕ್ರಮಗಳನ್ನು ವ್ಯಕ್ತಿಯ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳ ಆಚೆ ನಡೆಸುತ್ತಿರುವ ಇಲ್ಲಿಯ ಸರಕಾರಿ ಲೈಬ್ರರಿಗಳು ನನಗಂತೂ ಸರಸ್ವತಿಯ ದೇವಾಲಯದಂತೆ ಭಾಸವಾಗುತ್ತದೆ. ಅಲ್ಲಿಯ ವಾತವರಣ ಪ್ರತಿಯೊಬ್ಬರಿಗೂ ಆಹ್ಲಾದಕರವಾದ ಪಾಸಿಟಿವ್ ವೈಬ್ರೇಷನ್ ಕೊಡುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ, ಚಿಕ್ಕ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಗ್ರಂಥಾಲಯಗಳ ಕಡೆಗೆ ಆಕರ್ಷಣೆಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿವೆ ಎನ್ನುವುದಕ್ಕೆ ಸಾಕ್ಷಿ. ಇಲ್ಲಿಯ ಮಕ್ಕಳ ಒಂದೇ ಮೊರೆತ- ಮತ್ತೇ ಯಾವಾಗ ಲೈಬ್ರರಿಗೆ ಹೋಗೋಣ ಎನ್ನುವ ಅಪೇಕ್ಷೆ.
ಟೈಲ್ ವ್ಯಾಗಿಂಗ್ ಟ್ಯೂಟರ್:
ಒಂದು ವಾರ ಮಗ ಮತ್ತು ಹೆಂಡಿತಿ ಮುಂದಿನ ವಾರ ನಮ್ಮನ್ನು ಸರಿಯಾದ ಸಮಯಕ್ಕೆ ಲೈಬ್ರರಿಗೆ ಕರೆದುಕೊಂಡು ಹೋಗಿ ಅಂದರು. ನಾನು ಏನು ವಿಶೇಷ ಎಂದೇ. ಮಗ ನಾನು ಪುಸ್ತಕವನ್ನು ನಾಯಿಗೆ ಓದಿ ಹೇಳಬೇಕು ಎನ್ನಬೇಕೆ. ನನಗೆ ಅಚ್ಚರಿಯಾಯಿತು. ನಾಯಿ ಏನು ಕೇಳುತ್ತೇ ನೀನು ಓದುವುದು? ಅಲ್ಲಾ ನಿಜವಾದ ನಾಯಿಯನ್ನು ಅದು ಹೇಗೆ ಕರೆದುಕೊಂಡು ಬರುತ್ತಾರೆ ? ಹಾಗೆಯೇ ನಾಯಿಗೆ ಹೇಗೆ ನಮ್ಮ ಭಾಷೆ ಗೊತ್ತು! ನನಗಂತೂ ಗೊಂದಲ ಆಗಿಬಿಟ್ಟಿತು.
ಇದಂತೂ ಹೊಸ ವಿಷಯವೇ ಸರಿ! ನಮ್ಮ ನಮ್ಮ ಬುದ್ಧಿಯಂತೇ ಅದು ನಿಜವಾದ ನಾಯಿ ಇರಲ್ಲ ಅನಿಸುತ್ತದೆ. ಅದು ಕಂಪ್ಯೂಟರ್ ನಾಯಿಯಿರಬೇಕು. ಆದ್ದರಿಂದಲೇ ನೀನು ಓದುವುದು ಸರಿನೋ ತಪ್ಪು ಎಂಬುದನ್ನು ನಾಯಿ ಕಂಡು ಹಿಡಿಯುತ್ತದೆ. ನೀನು ಪದಗಳನ್ನು ತಪ್ಪು ಉತ್ಛರಿಸಿದರೇ ಬಾಲ ಅಲ್ಲಾ ಡುವಂತೆ ಪ್ರೋಗ್ರಾಮ್ ಮಾಡಿರುತ್ತಾರೆ. ಹೀಗೆ ಏನೇನೋ ಗೊತ್ತಿರುವ ರೀತಿಯ ನನ್ನ ಕಲ್ಪನೆಯ ಲಹರಿಯನ್ನು ಹರಿಬಿಟ್ಟೆ. ಅವನ ಅಮ್ಮ ಇಲ್ಲಾ ರೀ ಅದು ನಿಜವಾದ ನಾಯಿನೇ ಇರುತ್ತೆ.
ಅವುಗಳಿಗೆ ಟ್ರೈನಿಂಗ್ ಕೊಟ್ಟಿರುತ್ತಾರೆ ಅಂಥ ತನ್ನ ಅನಾಲಿಸಿಸ್ ಉತ್ತರ ಕೊಟ್ಟಳು. ನಾನು ಆಯ್ತು ನೋಡೆ ಬೀಡೋಣಾ. ಇದು ಸಹ ಹೊಸ ಅನುಭವ. ಹೋಗೋಣ ಅಂದೇ. ಒಂದು ದಿನ ಮುಂಚೆ ಲೈಬ್ರರಿಯನ್ ಕಾಲ್ ಮಾಡಿ ಬರುತ್ತಿರೋ ಇಲ್ಲವೋ ಎಂದು ನಿಗದಿ ಮಾಡಿಕೊಂಡರು. ಅಂದು ನನ್ನ ಮಗನಿಗೆ ಫುಲ್ ಟೆನ್‌ಶನ್ ಹೇಗೆ ಓದಬೇಕು? ಯಾವ ಪುಸ್ತಕ ಓದಬೇಕು? ಅವರು ಹೇಳಿದಂತೆ 15 ನಿಮಿಷ ಓದಬೇಕಂತೆ. ಮೂರು ಪುಸ್ತಕಗಳಂತೂ ಬೇಕು. ನಾನು ಜೋರಾಗಿ ಓದಬೇಕು. ನಾಯಿಗೆ ಸರಿಯಾಗಿ ಕೇಳಬೇಕು ಎಂದೆಲ್ಲ….
ಅಂತೂ ಆ ದಿನ ಬಂದೇ ಬಿಟ್ಟಿತು. ನಾವೆಲ್ಲ ಸಿದ್ಧವಾಗಿ ಹೋಗಿ ನೋಡಿದರೇ. ಆಗಾಗಲೇ ಅಲ್ಲಿ ನಾಲ್ಕಾರು ಮಕ್ಕಳು ಕುಳಿತುಕೊಂಡು ಪುಟಾಣಿ ನಾಯಿ ಮರಿಗಳನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಕಥೆ ಓದುತ್ತಿದ್ದಾರೆ. ನನ್ನ ಮಗನಿಗೆ ದೊಡ್ಡ ನಾಯಿಯನ್ನು ಕೊಟ್ಟಿದ್ದರೂ ಅದು ಮಲಗಿಕೊಂಡು ಇವನ ಕಡೆ ಒಮ್ಮೆ ನೋಡಿತು. ಇವನು ಅದರ ಹತ್ತಿರ ಒಬ್ಬನೇ ಹೋಗಿ ಕೂತುಕೊಂಡ.
ನಾವುಗಳು ಹೊರಗಿಂದ ಚಿಕ್ಕ ಗ್ಲಾಸ್ ಮೊಲಕ ನೋಡಿ ಅಚ್ಚರಿಯಾಯಿತು. ಹೋಗುವ ಮೊದಲು ಅದು ಹೇಗೋ ಏನೋ ಎಂದು ಅವನು ಆತಂಕಕ್ಕೊಳಗಾಗಿದ್ದ. ಅದರೇ ಅವರು ಕರೆದ ತತ್‌ಕ್ಷಣ ಖುಷಿಯಾಗಿ ಹೋಗಿದ್ದು ಕಂಡು ಊಫ್ ಅಂದೇವು. 15 ನಿಮಿಷ ಕಥೆಯನ್ನು ಓದಿ ಬಂದವನ ಅನುಭವ ಕಂಡು ಅಚ್ಚರಿಯಾಯಿತು. ನಾಯಿ ಅವನು ಓದುವ ಪುಸ್ತಕವನ್ನು ಮುಟ್ಟಲು ತವಕಿಸುತ್ತಿತ್ತಂತೆ. ಅವನು ಓದುವಾಗ ಒಮ್ಮೆಯು ಬಾಲವನ್ನು ಅಲ್ಲಾಡಿಸಲಿಲ್ಲವಂತೆ. ಅಂದರೇ ನಾನು ಓದಿದ್ದು ಏನೂ ತಪ್ಪಿಲ್ಲ ಎಂದು ಜಂಬಪಟ್ಟುಕೊಂಡಿದ್ದ. ಇನ್ನೊಮ್ಮೆ ನಾನು ಬರಬೇಕು, ಪ್ಲೀಸ್ ರಿಜಿಸ್ಟರ್ ಮಾಡಿಸು ಎಂದು ಅಮ್ಮನಿಗೆ ದಂಬಾಲು ಬಿದ್ದ ದಾರಿಯುದ್ದಕ್ಕೂ. ಈ ಇವೇಂಟ್‌ಗೆ ಟ್ರೈನ್ ಮಾಡಿದ ನಾಯಿಗಳನ್ನು ಮಕ್ಕಳಿಗಾಗಿ ಕರೆದುಕೊಂಡು ಬಂದಿರುತ್ತಾರೆ.
ಮಕ್ಕಳಿಗೆ ತಾವುಗಳು ಸ್ವತಂತ್ರವಾಗಿ ಬೇರೆಯವರಿಗೆ ಓದಿ ಅರ್ಥವಾಗುವಂತೆ ಹೇಳುವ ಕೌಶಲವನ್ನು ಅಳವಡಿಸಿಕೊಳ್ಳುವ ಅವಕಾಶ ಕಲ್ಪಿಸಿಕೊಡುತ್ತಾರೆ. ಇದರಿಂದ ಮಕ್ಕಳ ಆತ್ಮವಿಶ್ವಾಸವು ಹೆಚ್ಚುತ್ತದೆ. ಹಾಗೆಯೇ ಯಾವ ಮಕ್ಕಳಿಗೆ ತಾನೇ ಡಾಗಿ ಡಾಗಿ ಡಾಲ್ ಇಷ್ಟ ಆಗಲ್ಲ ನೀವೇ ಹೇಳಿ? ಈ ರೀತಿಯಲ್ಲಿ ನಾನಾ ಕಾರ್ಯಕ್ರಮಗಳು ಮಕ್ಕಳನ್ನು ಗ್ರಂಥಾಲಯಗಳ ಕಡೆಗೆ ಕರೆದೊಯ್ಯುವಂತೆ ಮಾಡಿವೆ. ಲೈಬ್ರರಿಯೆಂದರೇ ಹೊಸ ಹೊಸ ಅನುಭವಗಳ ಹೊಂಗಿರಣವನ್ನು ಸೂಸುವ ಮಂದಿರ ಎನ್ನುವಂತಿದೆ ಅಮೆರಿಕದ ಎಲ್ಲ ಸ್ಥಳಗಳ ಗ್ರಂಥಾಲಯಗಳು. ನಮ್ಮ ದೇಶದ ಗ್ರಂಥಾಲಯಗಳು ಹೀಗೆಯೇ ಸರಕಾರದ ಕೃಪಾಕಟಾಕ್ಷದಿಂದ ಮಕ್ಕಳು ಮರಿಗಳನ್ನು ಆಕರ್ಷಿಸುವಂತಾಗಲಿ ಎಂಬುದು ನಮ್ಮಯ ಕೋರಿಕೆ.
ತಿಪ್ಪೇರುದ್ರಪ್ಪ ಹೆಚ್.ಈ., ಓಹಾಯೋ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.