Desi Swara: ತಾಂತ್ರಿಕ ಆಧಾರಿತ ಜೀವನ…ಆ ಕಾಲವೇ ಚೆನ್ನಾಗಿತ್ತು!
Team Udayavani, Nov 18, 2023, 3:20 PM IST
ಅಲೆಕ್ಸಾ, ಆ ಮೋಡ ಬಾನಲ್ಲಿ ತೇಲಾಡುತಾ ಹಾಡು ಹಾಕು. ಹಾಂ, ಹಾಡು ಶುರುವಾಯ್ತು (ಗೊಣಗುತ್ತಾ). ಇಷ್ಟು ದಿನ ಕೈಯಲ್ಲಿ ಜಗತ್ತಿದೆ ಅನ್ಕೊಂಡಿದ್ದೆ, ಉಹೂಂ ಈಗ ಬಾಯಲ್ಲೇ ಜಗತ್ತು. ಆ ಕೃಷ್ಣ ಪರಮಾತ್ಮ ಆ ಕಾಲದಲ್ಲೇ ಬಾಯಲ್ಲಿ ಜಗತ್ತನ್ನ ತೋರಿಸಿದ್ದ, ಈ ಕಾಲದ ಸಿಲ್ಲಿ ವಿಜ್ಞಾನಿಗಳು ಸುಮ್ನೆ ಕುಣೀತಾರೆ ನಾವೇ ಎಲ್ಲ ಕಂಡುಹಿಡದ್ವಿ ಅಂತ.
ಜಾಜಿ: ಅಪ್ಪ ಎಲ್ಲ ನಿಮ್ಮ ಕಾಲದಲ್ಲೇ ಆಗಿತ್ತು, ಆಯ್ತಾ!!!
ಅಪ್ಪ: ಮತ್ತಿನ್ನೇನು, ಏನು ಬೇಕು ಹೇಳು! ಈಗಿನ ಕಾಲದಲ್ಲಿರೋ ವೀಡಿಯೋ ಕಾಲ್ ಆವಾಗ್ಲೇ ಇತ್ತು. ಪುಷ್ಪಕ ವಿಮಾನ ಇತ್ತು…ಜನ ಎಲ್ಲೆಂ ದರಲ್ಲಿ ಪ್ರತ್ಯಕ್ಷವಾಗುತ್ತಿದ್ದರು.
ಜಾಜಿ: ಅಯ್ಯೋ ಅಪ್ಪ!! ಸಾಕು ಸಾಕು, ಅವೆಲ್ಲ ಕಾಲ್ಪನಿಕ ಅಷ್ಟೇ…ಈಗ ಏನಿದ್ರೂ ರಿಯಾಲಿಟಿ ಗೊತ್ತಾ!!?
ಅಪ್ಪ: ಹಾಗೇನಿಲ್ಲ ಇಂದಿನ ವಿಜ್ಞಾನ ಚಿಕ್ಕ ಮಗು, ನಿನ್ ಥರ. ಅಂದಿನ ವಿಜ್ಞಾನ ಏನೇ ಆದ್ರೂ ಅದರ ಅಪ್ಪ …ಅಂದ್ರೆ ನನ್ ಥರ.
ಜಾಜಿ: ಆಯ್ತು, ನೀನು ಅದೇ ಕಲ್ಪನಾ ಲೋಕದಲ್ಲಿ ಇರಬೇಕಿತ್ತು, ಈಗ ಎಲ್ಲ ಕೆಲಸಗಳು ಆಗ್ತಾ ಇಲ್ಲವಲ್ಲ ಅದಕ್ಕೆ ಈ ರೀತಿ ಮಾತನಾಡ್ತಾ ಇದ್ದಿಯಾ. ನೀನು ಗಂಟೆ ಗಟ್ಟಲೆ ಮಾತನಾಡೋ ಮೊಬೈಲು, ಕೇಳಿದ್ ತತ್‌ಕ್ಷಣ ಉತ್ತರ ಕೊಡೊ ಅಲೆಕ್ಸಾ, ಬೇಕೆಂದಾಗ ಕಾಫಿ ಬಿಸಿ ಮಾಡೋ ಓವನ್ .. ಇವೆಲ್ಲ ಕೆಲಸ ನಿಲ್ಲಿಸಿದ್ರೆ ಗೊತ್ತಾಗುತ್ತೆ ನಿನ್ನ ಹಳೇ ಕಾಲದ್ ಬಣ್ಣ……
ಅಪ್ಪ: ಅಯ್ಯೋ ಅದಕ್ ನಾವ್ಯಾಕ ಜಗಳಾಡೋದು ಬಿಡು. ಯಾವ ಕಾಲದಲ್ಲಿ ಏನಿರುತ್ತೋ ಅದನ್ನೇ ಅನುಭವಿಸುವುದು ಅಷ್ಟೇ!!! ಅಂದ ಹಾಗೆ ನಾನು ಆವಾಗ್ಲೇ ಕಾಫಿ ಬೆರೆಸಿಟ್ಟಿದ್ದೆ, ಸ್ವಲ್ಪ ಬಿಸಿ ಮಾಡ್ಕೊಂಡು ಬರ್ತಿಯಾ?? ಓವನ್‌ಲ್ಲಿ ಮಾಡು ಹತ್ತು ಸೆಕೆಂಡ್‌ನಲ್ ಆಗ್ಬಿಡುತ್ತೆ.
ಜಾಜಿ: ಹೂಂ!! ಎಲ್ಲಿಗೆ ಬಂತು ಸಂಗಯ್ಯ ಅಂದ್ರೆ….ಅಲ್ಲಿಗೇ ಬಂದೆ ನೋಡು.
ಅಪ್ಪ: ಆ ಮೊಬೈಲ್‌ನ ಚಾರ್ಜ್ ಮಾಡಮ್ಮ. ನಿನ್ ಟ್ಯೂಶನ್ ಮಕ್ಕಳು ಏನೇನೋ ಕೇಳ್ತವೆ. ನಾನು ಗೂಗಲ್ ಮಾಡಿ ಅವ್ರಿಗೆ ಉತ್ತರ ಕೊಡ್ತೇನೆ.
ಜಾಜಿ: ಅಪ್ಪ ಅವ್ರು ಅದ್ರಲ್ಲೇ ಟೈಮ್ ಪಾಸ್ ಮಾಡ್ತಾರೆ, ಪರೀಕ್ಷೇಲಿ ಕಮ್ಮಿ ಮಾರ್ಕ್ಸ್ ತಗೊಂಡ್ರೆ ಅವರ ಅಪ್ಪ ಅಮ್ಮ ನನ್ನನ್ನ ಕೇಳ್ತಾರೆ. ನೀನು ಸುಮ್ನೆ ಇದ್ದು ಬಿಡು ಆಯ್ತಾ.
ಅಪ್ಪ: ಆಯ್ತಮ್ಮ, ಹಾಗಾದ್ರೆ ನಾನು ಬಿಪಿ ಮತ್ತೆ ಶುಗರ್ ಕಮ್ಮಿ ಮಾಡೋ ಟಿಪ್ಸ್ ನೋಡ್ತೇನೆ.
ಜಾಜಿ: ಹ್ಞೂಣ…ಅದ್ರ ಜತೆಗೆ ಕಥೆಗಳ ಆ್ಯಪ್‌ಗಳಲ್ಲಿ ಒಳ್ಳೊಳ್ಳೆ ಕಥೆಗಳಿವೆ, ಸುಮ್ನೆ ಕೂತ್ಕೊಂಡು ಓದು. ಬರಿಯೊಕಾದ್ರೆ ನೀನೂ ಒಂದೆರಡು ಕಥೆಗಳನ್ನ ಬರಿ. ಆಮೇಲೆ ನಾನು ಟೈಪ್ ಮಾಡಿ ಹಾಕ್ತೀನಿ.
ಅಪ್ಪ: ಅಬ್ಟಾ!! ಒಳ್ಳೆ ಐಡಿಯಾ ಕೊಟ್ಟೆ ನೋಡಮ್ಮ. ನಾನು ಸ್ವಲ್ಪ ಬಟ್ಟೆ ತೊಳೆಯೋದಿದೆ ಅದಾದ ಅನಂತರ ಮಾಡ್ತೀನಿ.
ಜಾಜಿ: ಆ ಬಟ್ಟೆಗಳನ್ನು ನಾನು ವಾಷಿಂಗ್ ಮಷಿನ್‌ಗೆ ಹಾಕ್ತೀನಿ ಬಿಡು. ಹತ್ತು ನಿಮಿಷದಲ್ಲಿ ಆಗಿ ಬಿಡುತ್ತೆ.
ಅಪ್ಪ: ಆಹಾ…!! ನನ್ನ ಮಗಳು ಎಷ್ಟು ಜಾಣೆ, ಥ್ಯಾಂಕ್ಯೂ ಪುಟ್ಟ.
ಜಾಜಿ: ನನ್ ಟ್ಯೂಶನ್ ಟೈಮ್ ಆಯ್ತು, ಕೆಲಸದವಳು ಬಂದ್ರೆ ಫುಡ್ ಪ್ರೊಸೆಸರ್‌ನಲ್ಲಿ ನೆನೆಸಿಟ್ಟ ಅಕ್ಕಿ ಬೇಳೆ ಹಾಕಿ, ಹತ್ತು ನಿಮಿಷಕ್ಕೆ ಸೆಟ್ ಮಾಡಿ, ಬೇರೆ ಕೆಲಸ ಮಾಡೋಕೆ ಹೇಳು. ಹಾಗೇ ನಿನಗೆ ಹತ್ತ ನಿಮಿಷ ಫೂಟ್ ಮಸಾಜರ್ ಹಾಕಸ್ಕೊಂಡು ನಿನ್ ಫೇವರೇಟ್ ಧಾರಾವಾಹಿ ನೋಡು.
ಅಪ್ಪ: ಆಯ್ತು,ಅಲ್ಲಿವರೆಗೂ ಒಂದ್ ಹತ್ತ ನಿಮಿಷ ಟ್ರೆಡ್ ಮಿಲ್ ಮಾಡ್ತೆನೆ.
ಲಚ್ಚಿ (ಕೆಲಸದವಳು): ಸಾರ್!! ಸಾರ್!!….ಅಕ್ಕಾ!!
ಅಪ್ಪ: ಬಂದ್ಯನಮ್ಮಾ !! ಬಾ….
ಲಚ್ಚಿ: ಸಾರ್, ಇಲ್ನೋಡಿ ನನ್ ಮಗ ನಂಗೆ ದುಬೈಯಿಂದ ಈ ವಾಚ್ ತಂದ್ ಕೊಟ್ಟಿದ್ದಾನೆ. ನಾನು ಎಷ್ಟು ನಡಿತಿದೀನಿ, ಎಷ್ಟು ನೀರು ಕುಡೀಬೇಕು!! ಅಂತ ಹೇಳುತ್ತೆ, ಫೋನ್ ಕೂಡ ಇದ್ರಲ್ಲೇ ಮಾಡಬಹುದು. ಇನ್ನೂ ಏನೇನಿದೆಯೋ ಇದ್ರಲ್ಲಿ, ಮುಂದಿನ ಸಾರಿ ಬಂದಾಗ ಎಲ್ಲ ಕಲಿಸ್ತೀನಿ ಅಂದಿದಾನೆ.
ಅಪ್ಪ: ಅರೆ ವಾಹ್!! ಲಚ್ಚಿ ಅದಕ್ಕೆ ಸ್ಮಾರ್ಟ್ ವಾಚ್ ಅಂತಾರೆ.
ಲಚ್ಚಿ: ಅಯ್ಯೋ! ಅದೆಲ್ಲ ನಂಗೆ ಅನ್ನೋಕೇ ಬರಲ್ಲ ಬಿಡಿ. ಫೋನೇ ಒಳ್ಳೆದು ಬಿಡಿ. ಇದ್ರಲ್ಲಿ ಏನೂ ಚೆನ್ನಾಗಿ ಕಾಣೋದಿಲ್ಲ. ಫೋನ್ ಕಲಿಯೋಕೇ ಎಷ್ಟೊಂದು ದಿನಾ ಹಿಡೀತು. ಈಗ ಕಲಿತಿರೋದನ್ನ ಬಿಟ್ಟು ಮತ್ತೊಂದು ಕಲೀಬೇಕು.
ಅಪ್ಪ: ಅದು ಹಾಗೇ ಲಚ್ಚಿ!!.. ಸ್ವಲ್ಪ ಟೈಮ್ ಬೇಕು ಒಂದ್ಸಾರಿ ಕಲಿತರೆ ಆಯ್ತು. ಆದ್ರೆ ಈ ಜೀವನ ಮುಗಿಯೋತನ ಮಾತ್ರ ಒಂದಿಲ್ಲ ಒಂದು ವಿಷಯನ ಕಲೀತಾನೇ ಇರ್ತೀವಿ.
ಟಿಂಗ್ ಟಾಂಗ್…….
ಅಪ್ಪ: ನೋಡು ಲಚ್ಚಿ ಯಾರು ಅಂತ.
ಲಚ್ಚಿ: ಸಾರ್ ಅದೇ ನಿಮ್ಮ ವೈ-ಫೈ ಫ್ರೆಂಡ್
ಅಪ್ಪ: ಬರ್ಲಿ ಬಿಡು.
ನರಸಪ್ಪ: ಏನ್ ಮಾಡ್ತಾ ಇದ್ದೀಯಪ್ಪ, ನಂಗ್ ಸ್ವಲ್ಪ ವೈ-ಫೈ ಬೇಕಿತ್ತು. ಮಗನಿಗೆ ವೀಡಿಯೋ ಕಾಲ್ ಮಾಡಬೇಕಿತ್ತು.
ಅಪ್ಪ: ಬಾರಪ್ಪ….ಅದಕ್ಕೇನಂತೆ ತಗೋ ಪಾಸವರ್ಡ್.
ಮಗಳು ಹೇಗಿದ್ದಾಳೆ?
ನರಸಪ್ಪ: ಚೆನ್ನಾಗಿದ್ದಾಳೆ. ಮೊದಲನೇ ಸಂಬಳದಲ್ಲಿ ಅರ್ಧ ನನ್ ಅಕೌಂಟ್‌ಗೆ ಆನ್‌ಲೈನ್ ಟ್ರಾನ್ಸ್‌ಫರ್ ಮಾಡಿದ್ದಾಳೆ. ನಾನಿಲ್ಲಿ ಮೆಟ್ರಿಮೋನಿಯಲ್ಲಿ ಅವಳ ಹೆಸರನ್ನು ರಿಜಿಸ್ಟರ್ ಮಾಡಿದ್ದೇನೆ. ಆದ್ರೆ ಅವಳು ಅಮೆರಿಕದಲ್ಲೇ ಹುಡುಗನ್ನ ನೋಡ್ಕೊಂಡ್ರೆ ಏನ್ ಗತಿ… ಏನ್ ಮಾಡೋದು, ಅದೇ ಚಿಂತೆ ನಂಗೆ.
ಅಪ್ಪ: ಇರ್ಲಿ ಬಿಡು ಈಗೆಲ್ಲ ಆನ್‌ಲೈನ್‌ನಲ್ಲೇ ಮದುವೆಗಳಾಗ್ತಿವೆ. ಹೆಂಗಾದ್ರೂ ಆಗ್ಲಿ ಅವಳು ಖುಷಿಯಿಂದ ಇದ್ರೆ ಸಾಕು.
ಜಾಜಿ: ಓಹ್!! ಅಂಕಲ್, ಹೇಗಿದ್ದೀರಿ.
ನರಸಪ್ಪ: ಚೆನ್ನಾಗಿದ್ದೀನಮ್ಮ, ನೀನು ಹೇಗಿದ್ದೀಯಾ??
ಅಪ್ಪ: ಅವಳಿಗೇನು!! ವಾಟ್ಸ್ ಆ್ಯಪ್, ಫೇಸ್‌ಬುಕ್, ಇದ್ದರೆ ಸಾಕು ಹಾಯಾಗಿರ್ತಾಳೆ.
ನರಸಪ್ಪ: ಹೌದು, ಮೊದ್ಲು ಜೀವಿಸೋಕೆ ಗಾಳಿ, ನೀರು, ಆಹಾರ ಬೇಕಿತ್ತು, ಆದ್ರೆ ಈಗ ವೈ-ಫೈ, ವಾಟ್ಸ್ ಆ್ಯಪ್, ಫೇಸ್‌ಬುಕ್ ಇದ್ರೆ ಆಯ್ತು ಅನ್ನೋ ಹಾಗಾಗಿದೆ.
ಅಪ್ಪ: ಹೌದು. ಈ ಜೀವನ ತಂತ್ರಜ್ಞಾನಮಯ, ವಿಜ್ಞಾನಮಯ ಒಟ್ಟಿನಲ್ಲಿ ಆನಂದಮಯವಾಗಿದೆ.
ಜಾಜಿ, ಕಾಫಿ ತಗೊಂಡ ಬಾ. ಬಾರಪ್ಪ ನರಸಪ್ಪ ಹಾಡು ಕೇಳ್ತಾ ಹಾಯಾಗಿ ಕಾಫಿ ಕುಡಿಯೋಣ. ಅಲೆಕ್ಸಾ…..ಮೆರೆ ಸಪನೋ ಕೀ ರಾನಿ ಕಬ್ ಆಯೆಗಿ ತು, ಹಾಡು ಹಾಕು.
ಅಲೆಕ್ಸಾ: ಮೆರೆ ಸಪನೋ ಕೀ ರಾನಿ ಕಬ್ ಆಯೆಗಿ ತು…
ಅಪ್ಪ: ಅಬ್ಬಾ! ಇದ್ರಲ್ಲಿರೊ ಸುಖ ಬೇರೆ ಯಾವದ್ರಲ್ಲೂ ಇಲ್ಲ ನೋಡು……ಎನ್ನುತ್ತಲೇ ಅಯ್ಯೋ!! ಅಪ್ಪಾ!! ಎದೆ ನೋವು!!
ಜಾಜಿ: ಅಪ್ಪ !! ಏನಾಯ್ತು…ನರಸಪ್ಪ, ಲಚ್ಚಿ…..ಓಡಿ ಬಂದು ಏನಾಯ್ತು! ಏನಾಯ್ತು! ಎನ್ನುತ್ತಾ ಅಪ್ಪನನ್ನು ಹಿಡಿದುಕೊಂಡ್ರು.
ಅಪ್ಪಂಗೆ ಹಾರ್ಟ್ ಅಟ್ಯಾಕ್ ಆಯ್ತು. ಬ್ರೈನ್ ಹ್ಯಾಮರೇಜ್ ಕೂಡ ಆಗಿತ್ತಂತೆ. ಇಂದಿನ ದಿನಗಳಲ್ಲಿ ನಾವು ಆಧುನಿಕ ತಂತ್ರಜ್ಞಾನಕ್ಕೆ ಅತಿಯಾಗಿ ಮೊರೆ ಹೊಕ್ಕು ನಮ್ಮ ಜೀವನವನ್ನ ಹಾಳು ಮಾಡಿಕೊಳ್ಳುವುದಷ್ಟೇ ಅಲ್ಲ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮದಿಂದ ಜೀವವನ್ನೇ ಕಳೆದುಕೊಳ್ತಾ ಇದ್ದೀವಿ. ಅಷ್ಟೇ ಅಲ್ಲ ಇತ್ತೀಚೆಗೆ ವೈ-ಫೈ ಬಳಕೆಯಿಂದ ಪಕ್ಷಿಗಳ ನರಮಂಡಲ ಹಾಳಾಗಿ ಸಾಯುತ್ತಿವೆಯಂತೆ.
ಅಯ್ಯೋ!! ಮನುಷ್ಯರ ಮೇಲಾಗೊ ದುಷ್ಪರಿಣಾಮವನ್ನೇ ಕೇಳೋರಿಲ್ಲ, ಇನ್ನು ಪಕ್ಷಿಗಳನ್ನ ಯಾರು ಕೇಳೋರು???
ಅಪ್ಪ ಹೇಳೋ ಹಾಗೆ ಮೊದಲಿನ ಕಾಲಾನೇ ಚೆನ್ನಾಗಿತ್ತು ಅನ್ಸುತ್ತೆ. ತಂತ್ರಜ್ಞಾನವನ್ನು ಬರೀ ಊಹಿಸ್ಕೊಂಡು ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ಮಾಡ್ಕೊಂಡು ಉಂಡು ತಿಂದು ಹಾಯಾಗಿ ಗಟ್ಟಿಯಾಗಿದ್ರು.
ಆದ್ರೆ ಈ ಕಾಲದ ವಿಜ್ಞಾನ ಮಗು ಅನ್ನೊ ಅಪ್ಪಾನೇ ಇಂದಿನ ತಂತ್ರಜ್ಞಾನದ ಮೋಹದಿಂದ ಹೊರಬರಲು ಸಾಧ್ಯವಾಗಲಿಲ್ಲ. ಬನ್ನಿ ಆದಷ್ಟು ತಂತ್ರಜ್ಞಾನದ ಬಳಕೆಯನ್ನ ಮಿತಗೊಳಿಸಿ ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳೋಣ. ನಮ್ಮ ಹಾಗೂ ನಮ್ಮವರ ಜೀವವನ್ನ ಉಳಿಸಿಕೊಳ್ಳೋಣ. ಆರೋಗ್ಯಕರ ಸಮಾಜ ನಿರ್ಮಿಸೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.