Desi Swara: ಕೆನಡಾದಲ್ಲಿ ಗಂಗಾ ದಸರಾ- 50ಕ್ಕೂ ಹೆಚ್ಚಿ ಕಲಾವಿದರಿಂದ ಪ್ರದರ್ಶನ
ಸೌಮ್ಯ ಮಿಶ್ರಾರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರಗಿತು.
Team Udayavani, Jun 29, 2024, 12:15 PM IST
ಜಗತ್ತಿನೆಲ್ಲೆಡೆ ನೆಲೆಸಿರುವ ಹಿಂದೂ ಸಮುದಾಯಕ್ಕೆ ಜೀವನದಿ ಗಂಗೆ ಬಹು ಪವಿತ್ರವಾದದ್ದು. ಹಿಮಾಲಯದಲ್ಲಿ ಹುಟ್ಟಿ ಉತ್ತರದ ಹಲವು ರಾಜ್ಯಗಳಲ್ಲಿ ಹರಿದು ಬಂಗಾಲಕೊಲ್ಲಿ ಸೇರುವ ಗಂಗೆಯ ಮುಖಜ ಭೂಮಿ ಅತೀ ಫಲವತ್ತತೆಯಿಂದ ಕೂಡಿದೆ. ಗಂಗೆ ಪಾಪನಾಶಿನಿ. ಜೀವನದಲ್ಲಿ ಒಮ್ಮೆ ಈ ನದಿಯಲ್ಲಿ ಮುಳುಗೆದ್ದರೆ, ಮಾಡಿದ ಪಾಪವೆಲ್ಲ ನಾಶವಾಗುತ್ತದೆ ಎಂಬ ನಂಬಿಕೆ.
ಭಾರತಾದ್ಯಂತ ಪ್ರತೀ ಮನೆಯ ದೇವರ ಪೀಠದಲ್ಲಿ ಗಂಗಾ ಜಲವಿರುತ್ತದೆ. ಅಷ್ಟೇ ಏಕೆ ಈಗೀಗ ವಿದೇಶಗಳಲ್ಲೂ ಭಾರತೀಯ ಅಂಗಡಿಗಳಲ್ಲಿ ಗಂಗಾಜಲ ಲಭ್ಯ. “ಸೂರತ್ ನು ಜಮಣ್, ಕಾಶಿ ನು ಮರಣ್’- ಊಟಕ್ಕೆ ಸೂರತ್, ಮರಣಕ್ಕೆ ಕಾಶಿ ಎಂಬ ಗುಜರಾತಿ ಯುಕ್ತಿಯಂತೆ ಅದೆಷ್ಟೋ ಹಿರಿಯರು ಜೀವನದ ಕೊನೆಯ ದಿನಗಳನ್ನು ಗಂಗೆಯ ತೀರದಲ್ಲೆ ಕಳೆಯ ಬಯಸುತ್ತಾರೆ.
ಗಂಗಾ ತಟದಲ್ಲಿ ದಿನ ನಿತ್ಯ ಪೂಜೆ-ಪುನಸ್ಕಾರವಿರುತ್ತದೆ. ಕುಂಕುಮಾರ್ಚಿಸಿ, ಹೂ ಸಮರ್ಪಿಸಿ, ಆರತಿ ನಡೆಯುತ್ತಿರುತ್ತದೆ. ದಶಕಗಳಿತ್ತೀಚೆಗೆ ಕಾಶಿಯಲ್ಲಿ ಮೊದಲ್ಗೊಂಡು “ಗಂಗಾ ಆರತಿ’ ಎಂಬ ವಿಶಿಷ್ಟ ಕಾರ್ಯಕ್ರಮ ಜನಪ್ರಿಯಗೊಳ್ಳುತ್ತಿದೆ. ವಾರಾಣಸಿಯ ದಶಾಶ್ವಮೇಧ ಘಾಟಿನಲ್ಲಿ ಪ್ರತೀದಿನ ಸಂಜೆ 7ರ ಸುಮಾರಿಗೆ ನಡೆಯುವ ಗಂಗಾ ಆರತಿಯನ್ನು ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಭಗೀರಥ ಗಂಗೆಯನ್ನು ಭೂಮಿಗೆ ಕರೆತಂದದ್ದು ಜ್ಯೇಷ್ಠ ಶುಕ್ಲ ದಶಮಿಯಂದು.
ಅಂದು ಗಂಗಾ ತೀರದುದ್ದಕ್ಕೂ ಹಲವೆಡೆ ಗಂಗಾ ಆರತಿ ನಡೆಯುತ್ತದೆ. ಈ ದಿನವನ್ನು “ಗಂಗಾ ದಸರಾ’ ಎಂದು ಅಚರಿಸುತ್ತಾರೆ. ಸೂರ್ಯಾಸ್ತದ ಅನಂತರ ಮಂತ್ರ ಪಠಣಗಳ ನಡುವೆ ಗಂಗೆಗೆ ಮಹಾಆರತಿ ಮಾಡಿ ಪೂಜಿಸುವುದು ವಿಶೇಷ.
ಮೊನ್ನೆ ಜೂನ್ 16ರಂದು ಕೆನಡಾದಲ್ಲಿ ಪ್ರಪ್ರಥಮ ಬಾರಿಗೆ “ಗಂಗಾ ದಸರಾ’ ಆಚರಿಸಲಾಯಿತು. ಕೆನಡಾದಲ್ಲಿ ಸನಾತನ ಧರ್ಮವನ್ನು ಉಳಿಸಿ ಬೆಳೆಸುತ್ತಿರುವ “ರೇಡಿಯೋ ಡಿಶುಂ’ನ ಸಂಸ್ಥಾಪಕಿ ಸೌಮ್ಯ ಮಿಶ್ರಾರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರಗಿತು.
ಟೊರಂಟೊ ಬಳಿಯ ಮಿಸ್ಸಿಸ್ಸಾಗ ನಗರದ ಎರಿಂಡೇಲ್ ಪಾರ್ಕ್‌ನಲ್ಲಿ ಇದನ್ನು ಆಯೋಜಿಸಲಾಗಿತ್ತು. ಷೋಡಶ ಪದ್ಧತಿಗಳ ಭಾಗವಾದ ಸಾಮೂಹಿಕ ಚೌಳ ಮತ್ತು ಕಿವಿ ಚುಚ್ಚುವ ಸಂಸ್ಕಾರಗಳೊಂದಿಗೆ ಅಂದಿನ ಕಾರ್ಯಕ್ರಮ ಆರಂಭಗೊಂಡಿತು. ಆಯೋಜಕರೇ ಎಲ್ಲ ವ್ಯವಸ್ಥೆ ಮಾಡಿದ್ದು ಯುವ ಪಾಲಕರಿಗೆ ಒಂದು ವರದಾನವಾಗಿತ್ತು. ಹಲವು ಅರ್ಚಕರ ಉಪಸ್ಥಿತಿಯಲ್ಲಿ ಪೂಜೆ-ಪುನಸ್ಕಾರ ನಡೆಯಿತು. ಜಗತ್ತಿಗೆ ಭಾರತ ಕೊಟ್ಟ ಅಸಂಖ್ಯ ಕೊಡುಗೆಗಳಲ್ಲಿ ಯೋಗವೂ ಒಂದು. ವಿಶ್ವ ಯೋಗ ದಿನದ ಸಂದರ್ಭವೂ ಆಗಿರುವುದರಿಂದ ನೆರೆದ ಜನರು ಒಂದು ಗಂಟೆಗಳ ಕಾಲ ಯೋಗ-ಧ್ಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಭಾರತೀಯ ಮೂಲದ ಸ್ಥಳೀಯ ಯೋಗ ಗುರುಗಳು ಯೋಗ ಆಸನಗಳನ್ನು ಸಲೀಸಾಗಿ ಹೇಗೆ ಮಾಡಬಹುದೆಂದು ತಿಳಿಸಿಕೊಟ್ಟರು.
ಅನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಇದಕ್ಕೋಸ್ಕರವೇ ಭವ್ಯ ವೇದಿಕೆ ಸಜ್ಜಾಗಿತ್ತು. ಭರತನಾಟ್ಯ, ಮೋಹಿನಿಯಾಟ್ಟಂ, ಕುಚಿಪುಡಿ, ಭಾಂಗ್ರಾ, ಉತ್ತರ ಪ್ರದೇಶ, ಗುಜರಾತ್, ತಮಿಳು ನಾಡಿನ ಜಾನಪದ ನ್ಯತ್ಯಗಳು ಜನರ ಮನಸೂರೆಗೊಂಡವು. ಭಾಗ್ಯದ ಲಕ್ಷ್ಮೀ ಬಾರಮ್ಮ ಎಂದು ಕರ್ನಾಟಕದ ಪುಟ್ಟ ಹುಡುಗಿ ಸುಶ್ರಾವ್ಯವಾಗಿ ಹಾಡಿದಳು. ಕಿಶೋರ ಕುಮಾರರ ಅಭಿಮಾನಿಯೊಬ್ಬರು 70ರ ದಶಕದ ಜನಪ್ರಿಯ ಹಾಡನ್ನು ಹಾಡಿದಾಗ ಜನರ ಕರತಾಡನ ಮುಗಿಲು ಮುಟ್ಟಿತು. ಒಂದು ತೆರನಾಗಿ ಆಂಗ್ಲ ಭಾಷೆಯೇ ಮಾತೃಭಾಷೆಯಂತಾಗಿರುವ ಇಲ್ಲಿನ ಭಾರತೀಯ ಮಕ್ಕಳ ಗುಂಪೊಂದು ಸ್ಪಷ್ಟವಾಗಿ ಸಂಸ್ಕೃತದಲ್ಲಿ ಮಂತ್ರೋಚ್ಛಾರ ಮಾಡಿ ವೀಕ್ಷಕರನ್ನು ತಲ್ಲಣಗೊಳಿಸಿದರು.
ಹತ್ತು ಹಲವಾರು ಸಂಘ ಸಂಸ್ಥೆಗಳು ಪ್ರಾಯೋಜಕರಾಗಿ ತಮ್ಮ ಬೆಂಬಲ ಸೂಚಿಸಿದರು. ಹಲವು ದೇವಾಲಯಗಳ, ಹಸ್ತರೇಖೆ – ಭವಿಷ್ಯಗಾರರ ಮಳಿಗೆಗಳೂ ಇದ್ದವು. ಪಂಚವಟಿಯೆಂಬ ಕುಟೀರದಲ್ಲಿ ರಾಮ, ಸೀತೆ, ಲಕ್ಷ್ಮಣ, ಲವ-ಕುಶರ ವೇಷ-ಭೂಷಣ ತೊಟ್ಟ ಐವರು ಪುಟ್ಟ ಮಕ್ಕಳು ಜನರ ಗಮನ ಸೆಳೆದರು. ಕಬ್ಬಿನಿಂದ ಅಲ್ಲೇ ಹಾಲನ್ನು ತಯಾರಿಸಿ ಕೊಡುವ ಮಳಿಗೆಯ ಜತೆಗೆ ಭಾರತದ ಹಲವು ರಾಜ್ಯಗಳ ಉಪಹಾರ ಮಳಿಗೆಗಳೂ, ಅಲ್ಲಿನ ಸಂಸ್ಕೃತಿಯ ಕುರಿತು ಮಾಹಿತಿ ನೀಡುವ ಮಳಿಗೆಗಳೂ ಇದ್ದವು. ಗಾಳಿಪಟಗಳ ಹಾರಾಟ ಮತ್ತು ಬಲೂನ್‌ಗಳ ಮಾರಾಟ ಊರಿನ ಜಾತ್ರೆಯ ನೆನಪನ್ನು ಕಾಡಿಸಿತ್ತು. ಒಟ್ಟಿನಲ್ಲಿ ಹುಟ್ಟೂರಿನಿಂದ ದೂರವಿರುವ ಸಮಸ್ತ ಜನಸಮೂಹಕ್ಕೆ ತವರೂರನ್ನೇ ಸೃಷ್ಟಿಸಿದ್ದರು – ಆಯೋಜಕರು !
ಗೋಧೂಳಿಯ ಸಮಯವಾಗುತ್ತಿದ್ದಂತೆ ಮಹಾರಾಷ್ಟ್ರದ ಡೋಲು ಬಾರಿಸುವ ತಂಡದ ಮಾರ್ದನ ಮುಗಿಲು ಮುಟ್ಟಿತ್ತು. ಶ್ರೀಲಂಕೆಯ ಮಹಿಳೆಯೊಬ್ಬರು ಅಲ್ಲಿನ ವಾದ್ಯ “ಥಪ್ಪು ಅಥವಾ ಪಾರಾಯ್’ ಎಂಬ ಡಮರು ಬಾರಿಸುತ್ತ ಅವರಿಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು. ಡೋಲನ್ನು ಅನುಸರಿಸುತ್ತ ಎಲ್ಲರೂ ಸಾಗಿದ್ದು ಅಲ್ಲೇ ಪಕ್ಕದಲ್ಲಿ ಹರಿಯುವ ಕ್ರೆಡಿಟ್ ನದಿಯೆಡೆಗೆ! ಗಂಗಾ ದಸರೆಯ ಪುಣ್ಯ ದಿನದಂದು ಮಂತ್ರ ಉದ್ಘೋಷಗಳ ನಡುವೆ ಐವರು ಅರ್ಚಕರು ಈ ನದಿಯನ್ನೇ ಗಂಗೆ ಸಮಾನವೆಂದು ಪೂಜಿಸಿ ಮಹಾಆರತಿ ಬೆಳಗಿದರು. ಐದು ಸಾವಿರಕ್ಕೂ ಹೆಚ್ಚಿನ ಜನ ಈ ಅಭೂತಪೂರ್ವ ಘಳಿಗೆಗೆ ಸಾಕ್ಷಿಯಾದರು. ತವರೂರು ನೆನೆದು ಅದೆಷ್ಟೋ ಜನರ ಕಣ್ಣಾಲಿಗಳು ತುಂಬಿ ಬಂದವು. ಜೈ ಜೈಕಾರಗಳ ನಡುವೆ ಕಾರ್ಯಕ್ರಮ ಸಮಾಪ್ತಿಯಾಯಿತು. ಹುಟ್ಟೂರಿನಿಂದ ದೂರವಿದ್ದರೂ ನಮ್ಮ ಸಂಸ್ಕೃತಿ ಉಳಿಸಿ-ಬೆಳೆಸಿಕೊಂಡು ಹೋಗುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತಿವೆ.
*ಸಹನಾ ಹರೇಕೃಷ್ಣ, ಟೊರಂಟೋ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.