Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?
ಯುಗಗಳ ಆರಂಭದಿಂದಲೇ ಈ ದಿನವಿತ್ತು...
Team Udayavani, Jul 6, 2024, 2:05 PM IST
ಜುಲೈ 7ರಂದು ವಿಶ್ವ ಕ್ಷಮಾ ದಿನಾಚರಣೆ ಎಂದು ಆಚರಿಸಲಾಗುತ್ತದೆ. ವಿಶ್ವಾದ್ಯಂತ ಏನೇನೆಲ್ಲ ದಿನಾಚರಣೆಗಳನ್ನು ನೋಡುತ್ತೇವೆ, ಕೇಳಿದ್ದೇವೆ, ಅರಿತಿದ್ದೇವೆ ಆದರೆ ನನ್ನ ಮಟ್ಟಿಗೆ ವಿಶ್ವ ಕ್ಷಮಾ ದಿನಾಚರಣೆ ಒಂದು ಅದ್ಭುತ ದಿನ. ಎಂದೋ ಮಾಡಿದ ಪಾಪವನ್ನು ತೊಳೆದುಕೊಳ್ಳಲು ಏನಾದರೂ ಒಂದು ಮಾರ್ಗ ಇರಲೇಬೇಕಲ್ಲವೇ? ಒಬ್ಬರನ್ನು ಕ್ಷಮಿಸುವುದೂ ಅಂಥಾ ಮಾರ್ಗಗಳಲ್ಲೊಂದು ಎಂದುಕೊಂಡರೆ ಕ್ಷಮಾದಿನ ಎಂಬುದು ದಿನನಿತ್ಯವೂ ಆಚರಿಸಬೇಕಾದ ದಿನ ಅಥವಾ ಶುಭದಿನ ಎನ್ನಬಹುದು.
ಜುಲೈ 7 ಎಂಬ ದಿನವೇ ವಿಶೇಷ. ದಿನವೂ 7, ಆಂಗ್ಲ ವರ್ಷದಲ್ಲಿನ ತಿಂಗಳ ಸಂಖ್ಯೆಯೂ 7. ಏಳು ಕ್ಷಮೆ ಯಾಚಿಸು ಮತ್ತು ಏಳು ಕ್ಷಮಿಸು ಎಂದೇಕೆ ಈ 7/7 ಎಂಬ ದಿನವನ್ನು ಅರ್ಥೈಸಿಕೊಳ್ಳಬಾರದು? ಇಷ್ಟೆಲ್ಲ ಹೇಳಿದ ಮೇಲೆ, ಇಂದಿನ ವಿಷಯದ ಬಗ್ಗೆ ಮಾತನಾಡುವ. ಎಲ್ಲಿಂದ ಆರಂಭಿಸುವಾ? ಮೊದಲಿಗೆ ಈ ವಿಷಯ ಅರ್ಥೈಸಿಕೊಳ್ಳುವ.
ಜುಲೈ 7 ಎಂಬುದೇನೋ ವಿಶ್ವ ಕ್ಷಮಾ ದಿನಾಚರಣೆಯ ದಿನವೇ ಸರಿ. ಆದರೆ ಎಲ್ಲ ದಿನಗಳಂತೆ ಈ ದಿನವೂ ಎಂದಿನಿಂದಲೋ ಆಚರಣೆಯಲ್ಲಿತ್ತು ಆದರೆ ಅದಕ್ಕೊಂದು ದಿನ ಎಂದು ನಿಗದಿಯಾಗಿರಲಿಲ್ಲ ಅಷ್ಟೇ. ಬನ್ನಿ ಸೀದಾ ಯುಗಗಳ ಆರಂಭಕ್ಕೇ ಸಾಗುವ. ಜಯ-ವಿಜಯರು ವೈಕುಂಠ ದ್ವಾರದ ದ್ವಾರಪಾಲಕರು. ಸಕಾರಾತ್ಮಕ ಬ್ರಹ್ಮ ಮಾನಸಪುತ್ರರು ಸ್ವಾಮಿದರ್ಶನಕ್ಕೆ ಬಂದರು. ಆದರೆ ಅಂದೇನೋ ಭಿನ್ನ ದಿನವಾಗಿತ್ತಷ್ಟೆ. ಮುಂದಿನ ದಿನಗಳಿಗೆ ಹಾದಿಯಾಗಿತ್ತು ಎನ್ನೋಣ. ದ್ವಾರಪಾಲಕರಿಂದ ತಪ್ಪಾಯ್ತು. ಕುಮಾರರು ಕ್ಷಮಿಸಲಿಲ್ಲ ಬದಲಿಗೆ ಶಪಿಸಿದರು. ಏಕೆ?
ತಪ್ಪು ಮಾಡಿದವರಿಗೆ ಮೊದಲು ಶಿಕ್ಷೆಯಾಗಬೇಕು, ಅವರ ತಪ್ಪಿನ ಅರಿವು ಮೂಡಿಸಬೇಕು, ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ನೀಡಬೇಕು. ಇಷ್ಟೆಲ್ಲ ಆದ ಮೇಲೆ, ಉತ್ತಮ ನಡೆಗಾಗಿ ಕ್ಷಮಿಸಿದಲ್ಲಿ ಮುಂದಿನ ದಿನಗಳಲ್ಲಿ ಆ ವ್ಯಕ್ತಿ ಸುಧಾರಿಸುತ್ತಾರೆ ಎಂದರ್ಥ. ಆದರೆ ಪ್ರತೀ ಬಾರಿಯೂ ಅಲ್ಲ. ಕೆಲವರು ಸುಧಾರಿಸಿದಂತೆ ತೋರ್ಪಡಿಸಿದರೂ ಸೇಡಿನ ಅಗ್ನಿಪರ್ವತವನ್ನೇ ತಳೆದಿರುತ್ತಾರೆ.
ಇರಲಿ ತಪ್ಪೂ ಆಗಿತ್ತು, ಶಾಪವೂ ಆಯ್ತು. ಅದಾದ ಮೇಲೆ ನಡೆದದ್ದೇ ಕ್ಷಮಾ ಯಾಚನೆ. ದ್ವಾರಪಾಲಕರು ತಮ್ಮ ತಪ್ಪನ್ನು ಅರಿತು, “ಒಪ್ಪು’ ಮಾಡಿಕೊಳ್ಳಲು, “ಕ್ಷಮೆ’ಯಾಚಿಸುತ್ತಾರೆ.
ಆದರೆ ಅವರು ಕ್ಷಮಾಯಾಚನೆ ಮಾಡಿದ್ದು ಆ ಭಗವಂತನ ಬಳಿ. ಎಲ್ಲ ಅವನ ಲೀಲೆ, ಅವನೇ ಆಡಿಸಿದ ಆಟ ಎಂದ ಮೇಲೆ ಅವನು ಸುಮ್ಮನೆ ಕ್ಷಮಿಸಿ ಕಳಿಸಿಯಾನೇ ? ಕ್ಷಮಿಸುವ ಬದಲಿಗೆ ಶಾಪವನ್ನು ಸ್ವೀಕರಿಸಿ ಅನುಭವಿಸಲು ಮಾರ್ಗವನ್ನು ಸೂಚಿಸುತ್ತಾನೆ. ಅವರುಗಳೋ, ಶಾಪವನ್ನು ಸ್ವೀಕರಿಸಿ, ಅನುಭವಿಸಿ, ಲೋಕಕಲ್ಯಾಣಕ್ಕೂ ಕಾರಣರಾಗುತ್ತಾರೆ.
ಅಲ್ಲೊಂದು ಕ್ಷಮೆ ಎಂಬುದು ಮಾತ್ರ ಇದ್ದಿದ್ದರೆ, ಇಂದಿಗೆ ಬಹುಶ: ನಮಗೆ ಯಾವ ಮಹಾಪುರಾಣಗಳೂ, ಭಗವದ್ಗೀತೆಯು ಇರುತ್ತಿರಲಿಲ್ಲ. ಮೊದಲಿಗೆ ಹೆಚ್ಚಿನ ಅವತಾರಗಳೇ ಇರುತ್ತಿರಲಿಲ್ಲ ಎನ್ನಿ. “ಕ್ಷಮೆ’ ಎಂಬುದರ ಆಟ ಮತ್ತು ಅವತಾರ ಬಲು ಹಿರಿದು.ಕೋಪದಿಂದ ಹೊರಹೊಮ್ಮುವುದೇ ಶಾಪ.
ಕ್ರೋಧಾಗ್ನಿಯನ್ನೂ ಶಮನಗೊಳಿಸುವ ಶಕ್ತಿ ಇರುವುದೇ ಈ ಕ್ಷಮೆಗೆ. ಇಂಥಾ ಕ್ಷಮೆಗೆ ಯಾವ ಸ್ಥಾನ ಇದೆ ಎಂದರೆ “ಕ್ಷಮಯಾ ಧರಿತ್ರಿ’ ಎನ್ನುವಷ್ಟು. “ಸಮುದ್ರವಸನೇ ದೇವಿ ಪರ್ವತ ಸ್ಥನ ಮಂಡಲೇ, ವಿಷ್ಣುಪತ್ನಿ ನಮಸ್ತುಭ್ಯಮ್ ಪಾದಸ್ಪರ್ಶಮ್ ಕ್ಷಮಸ್ವಮೇ’. ಹಗಲಿನಲ್ಲಿ ಎದ್ದ ಕೂಡಲೇ “ಕರಾಗ್ರೇ’ ಪಠಿಸಿ, ಭೂಸ್ಪರ್ಶ ಮಾಡುವ ಮೊದಲೇ ಭೂದೇವಿಯನ್ನು “ಪಾದಸ್ಪರ್ಶಮ್ ಕ್ಷಮಸ್ವಮೇ’ ಎಂದು ಬೇಡಿಕೊಂಡಾಗ ಆ ತಾಯಿ ಮನ್ನಿಸುತ್ತಾಳೆ. ಒಂದೊಂದೂ ಜೀವಿಯ ಪಾದಸ್ಪರ್ಶ, ಭೂದೇವಿಗೆ ಸೇರುವ ನಾನಾ ತ್ಯಾಜ್ಯ, ಸೌಧಕಟ್ಟಿಕೊಳ್ಳಲು ಜೀವಿಗಳು ನಡೆಸುವ ಭೂ-ಅಗೆತ ಒಂದೇ ಎರಡೇ. ಇಂಥಾ ಕೃತ್ಯ-ಕುಕೃತ್ಯಗಳನ್ನೆಲ್ಲ ಕ್ಷಮಿಸುವ ಭೂದೇವಿಯ ಕ್ಷಮಾಗುಣ ಎಷ್ಟು ಹೇಳಿದರೂ ಸಾಲದು. ಇಂಥಾ ತಾಕತ್ತಿದೆ ಈ ಕ್ಷಮಾಗುಣಕ್ಕೆ.
ಕ್ಷಮೆ ಯಾಚಿಸಿದವರು ಎಂದಿಗೂ ಚಿಕ್ಕವರಲ್ಲ. ಕ್ಷಮಿಸಿದವರು ಎಂದಿಗೂ ದೊಡ್ಡವರೇ ಅಲ್ಲ. ಎರಡೂ ಸಹ ಬಲು ಹಿರಿದಾದ ಗುಣವೇ ಹೌದು, ಜತೆಗೆ ಎರಡೂ ಕ್ರಿಯೆಗಳಿಗೆ ಧೈರ್ಯವೂ ಬೇಕು, ಇಸಂ ಇರಕೂಡದು. ಒಬ್ಬರು ಕ್ಷಮೆ ಯಾಚಿಸಿದಾಗ ಅವರದ್ದು ತಪ್ಪಿದೆಯೋ ಸರಿ ಇದೆಯೋ ಅದು ಮುಖ್ಯವಲ್ಲ, ಬದಲಿಗೆ ಕ್ಷಮೆಯಾಚಿಸಿದವರ ಹಿರಿಯ ಗುಣವನ್ನು ಗುರುತಿಸಿಯೇ ಶ್ಲಾ ಸಬೇಕು. ನಮ್ಮೆಲ್ಲರ ಜೀವನದಲ್ಲಿ ಅರಿತೋ ಅರಿಯದೆಯೋ ದಿನನಿತ್ಯದಲ್ಲಿ ತಪ್ಪುಗಳು ಆಗುತ್ತಲೇ ಇರುತ್ತದೆ.
ತಪ್ಪು ದೊಡ್ಡದೋ ಅಥವಾ ಚಿಕ್ಕದೋ, ದೈವದ ಮುಂದೆ ದೀಪ ಹಚ್ಚಿಟ್ಟು ಕ್ಷಮೆ ಯಾಚಿಸುವಂತೆ, ಸಹಜೀವಿಗಳ ಮುಂದೆಯೂ ಕ್ಷಮೆಯಾಚಿಸಿದರೆ ತಪ್ಪೇನಿದೆ. ಕ್ಷಮೆ ಯಾಚಿಸಿದ ಒಬ್ಬ ವ್ಯಕ್ತಿ ತಲೆ ಎತ್ತಿ ನಿಲ್ಲುತ್ತಾನೆ. ಕ್ಷಮಿಸಿದವನು ಎತ್ತರಕ್ಕೆ ಬೆಳೆದು ನಿಲ್ಲುತ್ತಾನೆ. ಆದರೆ ಈ ಸೌಭಾಗ್ಯ ಎಲ್ಲರಿಗೂ ಸಿಗಬೇಕಲ್ಲ? ಹಿಂದೊಮ್ಮೆ ಹೇಳಿದ್ದೆ, ರೋಷಾಗ್ನಿಯಿಂದ ದೇಹದ ಒಳಗಿನ ಅಂಗಗಳನ್ನು ಕೊಳೆಸಬೇಡಿ, ಮಣ್ಣೊಳಗೆ ಸೇರಿದ ಮೇಲೆ ದೇಹ ಕೊಳೆಯೋದು ಇದ್ದೇ ಇದೆ ಅಂತ.
ಸರ್ವಧರ್ಮಗಳಲ್ಲೂ ಒಂದಲ್ಲ ಒಂದು ರೀತಿ ಇಂಥಾ ಸುದಿನಗಳು ಇದ್ದೇ ಇರುತ್ತದೆ, ಅದನ್ನು ನಾವು ಗುರುತಿಸಿಕೊಂಡು ಮೇಲು-ಕೀಳು ಎಂಬ ತಾರತಮ್ಯ ತೋರದೇ ಪಾಲಿಸಬೇಕು. ಇಷ್ಟಕ್ಕೂ ಕ್ಷಮೆ ಕೇಳ್ಳೋದು ಯಾಕೆ? ತುಂಬಾ ಸರಳ. ಎಲ್ಲವೂ ಚೆನ್ನಾಗಿರುವಾಗ ದೊಡ್ಡ ದೊಡ್ಡ ತಪ್ಪುಗಳೂ ಸಹ್ಯವೇ. ಎಲ್ಲೋ ಒಂದು ಕಡೆ ಶ್ರುತಿ ತಪ್ಪಿದರೆ, ಚಿಕ್ಕ ಚಿಕ್ಕ ತಪ್ಪುಗಳೂ ಮಹಾಪರಾಧಗಳೇ ಆಗುತ್ತದೆ.
ಸ್ನೇಹಿತರ ಮಧ್ಯೆ no sorry, no thanks, ಅವೆಲ್ಲ ಏನು ಫಾರ್ಮಾಲಿಟಿ ?’ ಎಂಬೆಲ್ಲ ಮಾತುಗಳೂ ಸಿನಿಮೀಯವಾಗಿ ಹೊರಬರುತ್ತದೆ. ವೈಯುಕ್ತಿಕವಾಗಿ ನನಗೆ ಈ ವಿಷಯದಲ್ಲಿ ನಂಬಿಕೆ ಇಲ್ಲ. ಚಿಕ್ಕಂದಿನಿಂದ ಬೆಳೆದ ಸ್ನೇಹಕ್ಕೂ, ಒಂದು ವಯೋಮಾನದ ಅನಂತರ ಹುಟ್ಟುವ ಮತ್ತು ಬೆಳೆವ ಸ್ನೇಹಕ್ಕೂ ಬಹಳ ವ್ಯತ್ಯಾಸವಿದೆ. ಅಷ್ಟೇ ಅಲ್ಲದೇ ಚಿಕ್ಕಂದಿನ ಸ್ನೇಹವೂ ಸಹ, ಬೆಳೆಯುತ್ತಾ ಸಾಗಿದಂತೆ ವಿಷಯಾಸಕ್ತಿಯ ಮೇಲೆ ಸ್ನೇಹವು ಗಟ್ಟಿಯಾಗಲೂಬಹುದು, ಬೇರೆಯಾಗಲೂಬಹುದು. ಇರಲಿ, ವಿಷಯ ಇಷ್ಟೇ, ತಪ್ಪಿರುವಾಗ “ಕ್ಷಮೆ ಕೇಳಬೇಕಾಗಿರುವುದು, ಕ್ಷಮೆಯಾಚನೆ ಮಾಡಿದಾಗ ಕ್ಷಮಿಸುವುದು’ ಎಂಬುದು ಬಲು ಮುಖ್ಯ.
ಕ್ಷಮೆ ಕೇಳುವುದು ದೊಡ್ಡತನ. ಕ್ಷಮೆ ಕೇಳುವುದಕ್ಕೆ ದೊಡ್ಡತನ ಅಡ್ಡ ಬಂದರೆ, ಸ್ನೇಹಿತರು ವೈರಿಗಳಾಗುತ್ತಾರೆ. ದಾಯಾದಿಗಳಲ್ಲಿ ದಾಯಾದಿ ವೈರತ್ವ ಏಳುತ್ತದೆ. ಇನ್ನು ಕೂಡು ಕುಟುಂಬದಲ್ಲಿ ಶೀತಲಯುದ್ಧವೂ ಆಗಬಹುದು, ಮನಗಳ ನಡುವೆ ಗೋಡೆ ಏಳಬಹುದು, ಮನೆಗಳೇ ಭಾಗವಾಗಿ ಇಟ್ಟಿಗೆಯ ಗೋಡೆಗಳೂ ಏಳಬಹುದು. ಇವೆಲ್ಲವನ್ನೂ ತಡೆಯಬಹುದು ಎಂದರೆ ಬೇಕಿರುವುದೇ ಒಂದು ಏನಪ್ಪಾ ಎಂದರೆ, ಒಂದು, ತಪ್ಪಾದಾಗ “ಹೃದಯ ಪೂರ್ವಕವಾಗಿ ಕ್ಷಮೆ ಯಾಚನೆ’. ಮತ್ತೂಂದು, ಕ್ಷಮೆ ಯಾಚಿಸಿದವರನ್ನು ಹೃದಯಪೂರ್ವಕವಾಗಿ ಕ್ಷಮಿಸುವುದು. ಎರಡೂ ಬಹಳ ಮುಖ್ಯ.
ಜೈನರಲ್ಲಿ ವರ್ಷಕ್ಕೊಮ್ಮೆ ಕ್ಷಮಾದಿನ ಎಂಬ ಸುದಿನವಿದೆ. “ನಾನೂ ಎಲ್ಲರನ್ನೂ ಕ್ಷಮಿಸುತ್ತೇನೆ, ನನ್ನನ್ನೂ ಎಲ್ಲರೂ ಕ್ಷಮಿಸಿ’ ಎಂಬ ಅರ್ಥವುಳ್ಳ ನುಡಿಗಳಿಂದ ಕೊನೆಯಲ್ಲಿ “ಮಿಚ್ಚಾಮಿ ಡುಕ್ಕಡಮ್’ ಎಂದು ನುಡಿದು ಒಬ್ಬರು ಮತ್ತೂಬ್ಬರಲ್ಲಿ ತಾವು ಅರಿತೋ – ಅರಿಯದೆಯೋ ಮಾಡಿದ ತಪ್ಪನ್ನು ಮನ್ನಿಸುವಂತೆ ಕೇಳಿಕೊಳ್ಳುತ್ತಾರೆ. ಇಲ್ಲಿನ ಮುಖ್ಯವಾದ ಅಂಶವೆಂದರೆ ವಯಸ್ಸಿನ ತಾರತಮ್ಯವೇ ಇಲ್ಲ. ಮನೆಯಲ್ಲಿ ಅತೀ ಹಿರಿಯರೂ ಕಿರಿಯರಲ್ಲಿ ಕೇಳಿಕೊಳ್ಳುತ್ತಾರೆ.
ಅಲ್ಲಲ್ಲೇ ಎಷ್ಟೋ ಪಾಪಗಳು ಕಡಿಮೆಯಾಗಿಬಿಡುತ್ತದೆ ಅಲ್ಲವೇ? ತಪ್ಪು ಮಾಡಿದವರಿಗೆ ತಪ್ಪು ತಿದ್ದಿಕೊಳ್ಳಲು ಅದಾವುದೋ ಶಕ್ತಿ ಅವಕಾಶ ನೀಡಿರುತ್ತದೆ. ಅದೇ ಶಕ್ತಿ ಕ್ಷಮೆಯಾಚಿಸಲೂ ಅವಕಾಶ ಕೊಡುತ್ತದೆ. ಆ ಸಮಯದಲ್ಲಿ ತಾವು ದೊಡ್ಡವರು ಕ್ಷಮೆ ಕೇಳಬಾರದು ಅಂತೆಲ್ಲ ದೊಡ್ಡದಾಗಿ ನುಡಿದು ಮತ್ತೆ ಅವರನ್ನು ಪಾಪದ ಕೂಪಕ್ಕೆ ತಳ್ಳುವುದು ಬೇಡ. ಕ್ಷಮಾಗುಣ ಬೆಳೆಸಿಕೊಳ್ಳೋಣ. ಕ್ಷಮೆ ಕೇಳ್ಳೋಣ, ಕ್ಷಮಿಸೋಣ. ನಿಮ್ಮ ಅನುಭವ, ಅನಿಸಿಕೆಗಳು ಸಹಮತವೂ ಆಗಿರಬಹುದು ಅಥವಾ ವಿರುದ್ಧವೂ ಆಗಿರಬಹುದು. ಎಲ್ಲರಿಗೂ ಅವರದ್ದೇ ಅಭಿಪ್ರಾಯಗಳು ಇರುತ್ತದೆ. ಅವನ್ನು ತಪ್ಪು ಎನ್ನಲಾಗದು, ಅಂತೆಯೇ ಸರಿ ಅಂತಲೂ ಎನ್ನಲಾಗದು. ಈಗಲೇ “ಮಿಚ್ಚಾಮಿ ಡುಕ್ಕಡಮ್’ ಎಂದು ಹೇಳಿಬಿಡುತ್ತೇನೆ. ಆದರೆ ನಿಮ್ಮ ಅನಿಸಿಕೆ ತಿಳಿಸುವುದನ್ನು ಮರೆಯದಿರಿ.
*ಶ್ರೀನಾಥ್ ಭಲ್ಲೇ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.