Desi swara: ನೀಲಿ ಸಮುದ್ರದ ನೀಸ್ ನಗರ : ಆಲ್ಪಸ್ ಪರ್ವತ ಶ್ರೇಣಿಗಳ ಸುಂದರ ನೋಟ
Team Udayavani, Nov 18, 2023, 12:13 PM IST
ಫ್ರಾನ್ಸ್ ಎಂದರೆ ಹೆಚ್ಚಾಗಿ ನಮ್ಮೆಲ್ಲರಿಗೂ ಥಟ್ಟನೆ ನೆನಪಾಗುವುದು ಪ್ಯಾರಿಸ್ ಮತ್ತು ಜಗತ್ತಿನ ಅದ್ಭುತಗಳಲ್ಲಿ ಒಂದಾದ ಐಫೆಲ್ ಟವರ್. ಜಗತ್ತಿನ ಮತ್ತು ಯುರೋಪ್ ಖಂಡದ ಪುರಾತನ ದೇಶಗಳಲ್ಲಿ ಒಂದಾದ ಫ್ರಾನ್ಸ್‌ನಲ್ಲಿ ಇವೆರಡನ್ನು ಹೊರತುಪಡಿಸಿ ಅನೇಕ ಪ್ರವಾಸಿ ಸ್ಥಳಗಳಿದ್ದು, ಅದರಲ್ಲಿ ನೀಸ ಎಂದು ಫ್ರೆಂಚ್ ಭಾಷೆಯಲ್ಲಿ, ನಿತ್ಸಾ ಎಂದು ಜರ್ಮನಿ ಭಾಷೆಯಲ್ಲಿ ಕರೆಯಲ್ಪಡುವ ಅತ್ಯಂತ ಸುಂದರವಾದ ನಗರವು ಒಂದು. ಜರ್ಮನಿಯಲ್ಲಿ ನಾವಿರುವ ಸ್ಥಳದಿಂದ ನೀಸ ನಗರವು ಸುಮಾರು 800 ಕಿಲೋ ಮೀಟರಗಳಷ್ಟು ದೂರ ಮತ್ತು ಮೂರು ದೇಶಗಳನ್ನು ದಾಟಿ ಈ ಫ್ರೆಂಚ್ ರಿವಿಯೆರಾನ್ನು ತಲುಪಬಹುದಾಗಿತ್ತು. ಸುಮಾರು ದಿನಗಳಿಂದ ಈ ನಗರವನ್ನು ನೋಡಬೇಕೆನ್ನುವ ಕೂತುಹಲ ದೂರವನ್ನೂ ಹತ್ತಿರವಾಗಿಸಿತ್ತು.
“It’s not the destination, it’s the journey” ಎಂಬ ಪ್ರಸಿದ್ಧ ಉಲ್ಲೇಖದಂತೆ ತಲುಪುವ ದಾರಿಯೊಂದೇ ಮುಖ್ಯವಾಗದೇ ಹೋಗುವ ದಾರಿಯುದ್ದಕ್ಕೂ ಅನೇಕ ಹೊಸ ಅನುಭವಗಳ ಪಯಣವೂ ಮುಖ್ಯವಾಗುತ್ತದೆ. ಜರ್ಮನಿಯಿಂದ ಹೊರಟು ಸ್ವಿರ್ಟ್ಜಲ್ಯಾಂಡ್, ಇಟಲಿ ಮತ್ತು ಪುಟ್ಟ ರಾಷ್ಟ್ರವಾದ ಮೊನಾಕೊ ದೇಶಗಳನ್ನು ದಾಟಿಕೊಂಡು ನೀಸ ತಲುಪಬಹುದಾಗಿತ್ತು. ಜರ್ಮನಿಯಿಂದ ಫ್ರಾನ್ಸ್ ವರೆಗೆ ನಾವು ಹೋಗುವ ದಾರಿಯುದ್ದಕ್ಕೂ ಹೆಚ್ಚಾಗಿ ಆಲ್ಪಸ್ ಪರ್ವತಗಳಿದ್ದರೂ ಅವುಗಳ ಶೈಲಿ ಮತ್ತು ರಚನೆಯಲ್ಲಿ ದೇಶದಿಂದ ದೇಶಕ್ಕೆ ಭಿನ್ನತೆಯನ್ನು ಕಾಣಬಹುದಾಗಿದೆ. ಬರೀ ಪರ್ವತ ಶ್ರೇಣಿಗಳ ಶೈಲಿ ಮತ್ತು ರಚನೆಯಲ್ಲಿಯೇ ನಾವು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗುತ್ತಿರುವುದು ಅರಿವಾಗುತ್ತಿತ್ತು.
ಸ್ವಿಟ್ಜರ್ಲ್ಲ್ಯಾಂಡ್‌ನ ಆಲ್ಪಸ್ ಪರ್ವತಗಳು ಎತ್ತರದ ಪರ್ವತಗಳಾಗಿದ್ದು ಪರ್ವತಾರೋಹಿಗಳ ಆಕರ್ಷಣೆಯ ಸ್ಥಳವಾಗಿದೆ. ಚಳಿಗಾಲದಲ್ಲಿ ಹಿಮದಿಂದ ಆವೃತಗೊಂಡ ಪರ್ವತ ಶಿಖರಗಳು ಮತ್ತು ನಿಸರ್ಗವು ಅಂತ್ಯಂತ ಆಕರ್ಷಕವೆನಿಸುತ್ತದೆ. ಸ್ವಿಸ್ ಆಲ್ಪಸ್‌ನ ಎತ್ತರದ ಶೃಂಗಗಳು ಹಿಮನದಿ ಮತ್ತು ಜಲಪಾತಗಳನ್ನು ಹೊಂದಿರುವ ಅಸಂಖ್ಯ ಕಣಿವೆಗಳನ್ನು ಹೊಂದಿವೆ. ಈ ಜಲಪಾತಗಳಲ್ಲಿ ರೈನ್ ಜಲಪಾತ ಪ್ರಮುಖ ಪ್ರವಾಸಿ ತಾಣ. ಇವೇ ಆಲ್ಪಸ್‌ನ ಪರ್ವತ ಶ್ರೇಣಿಗಳು ಮುಂದುವರೆದು ಇಟಲಿಯಲ್ಲಿ ಇಟಾಲಿಯನ್ ಆಲ್ಪಸ್ ಎಂದು ಕರೆಯಲ್ಪಟುತ್ತವೆ. ಇಟಲಿಯಲ್ಲಿ ಈ ಪರ್ವತ ಶ್ರೇಣಿಗಳ ರಚನೆಯಲ್ಲಿ ಭಿನ್ನತೆಯನ್ನು ಕಾಣುತ್ತೇವೆ. ಹೀಗೆ ನಮ್ಮ ಪ್ರವಾಸ ಜಲಪಾತ, ನದಿ, ಪರ್ವತಗಳನ್ನು ನೋಡುತ್ತಾ ಮುಂದುವರೆದು ಜಗತ್ತಿನ ಎರಡನೆಯ ಅತ್ಯಂತ ಚಿಕ್ಕ ಮತ್ತು ಶ್ರೀಮಂತ ದೇಶವಾದ ಮೊನಾಕೊ ನಗರದ ವೀಕ್ಷಣೆಗೆ ಬಂದು ತಲುಪಿದ್ದೇವು.
ಮೊನಾಕೊ ಅಂದರೆ ನನಗೆ ಗೊತ್ತಿದ್ದದ್ದು ಮೊನಾಕೊ ಬಿಸ್ಕಟ್ ಮಾತ್ರ. ಎಂದೂ ನೋಡದ ಬೃಹತ್ ವಿನ್ಯಾಸದ ವಿಲಾಸಿ ಕಟ್ಟಡಗಳು, ಟಾಪ್ ಬ್ರ್ಯಾಂಡ್‌ಗಳು, ಒಂದರ ಹಿಂದೊಂದು ಓಡುವ ಐಷಾರಾಮಿ ಕಾರ್‌ಗಳು ನಗರದ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖವಾಗಿದ್ದವು. ಈ ಐಷಾರಾಮಿ ಕಾರ್‌ಗಳನ್ನು ನೋಡಲು, ಅದರೊಂದಿಗೆ ಫೋಟೋ ಕ್ಲಿಕ್ಕಿಸಲು ಎಲ್ಲಿಲ್ಲದ ಜನಸಂದಣಿ ಮತ್ತು ಅವಶ್ಯವಾಗಿ ಇದೊಂದು ಫ್ಯಾಶನ್ ಪ್ರಿಯರ ಮತ್ತು ಮಿಲೇನಿಯರ್ ಸಂತೆಯಂತೆ ಗೋಚರಿಸುತ್ತಿತ್ತು.
ನಮ್ಮ ಪ್ರವಾಸದ ಕೇಂದ್ರ ಬಿಂದುವಾದ ಫ್ರಾನ್ಸ್‌ನ ನೀಸ ನಗರವನ್ನು ತಲುಪಿದ್ದಾಯಿತು. ಈ ನಗರದ ಪ್ರಮುಖ ಆಕರ್ಷಣೆ ಅಟ್ಲಾಂಟಿಕ್ ಮಹಾಸಾಗರದ ಒಂದು ಭಾಗವಾದ ಮೆಡಿಟರೇನಿಯನ್ ಸಮುದ್ರ. ಈ ನಗರವು ಹೆಚ್ಚಿನ ಮೆಡಿಟರೇನಿಯನ್ ಕೋಸ್ಟ್‌ನ್ನು ಹೊಂದಿದ ಫ್ರಾನ್ಸ್‌ನ ಎರಡನೆಯ ನಗರ. ನೀಸ್ ನಗರವನ್ನು ಸುತ್ತುವರಿದ ದೈತ್ಯ ನೀಲಿ ಸಮುದ್ರ, ನೀಲಿ ಆಕಾಶದ ಜತೆಗೆ ಒಂದಾದ ದೃಶ್ಯ ವಾವ್ ಎನಿಸುವುದರಲ್ಲಿ ನಿಸ್ಸಂದೇಹವಿಲ್ಲ. ಸಮುದ್ರದ ಆಚೆ ಕಾಣುವ ಫ್ರೆಂಚ್ ಆಲ್ಪಸ್‌ನ ಪರ್ವತ ಶ್ರೇಣಿಗಳು ಮೆಡಿಟರೇನಿಯನ್ ಸಮುದ್ರಕ್ಕೆ ಇನ್ನಷ್ಟು ಮೆರಗನ್ನು ನೀಡಿತ್ತು. ನೀಸ್ ನಗರವೇ ಸಮುದ್ರದ ಒಂದು ಭಾಗವಾದಂತೆ ಗೋಚರಿಸುತ್ತಿತ್ತು. ಈ ನಿಸರ್ಗದ ಸೌಂದರ್ಯವನ್ನು ಕಣ್ಣಿನಲ್ಲಿ ಸೆರೆಹಿಡಿದಷ್ಟು , ನಮ್ಮ ಕೆಮರಾಗಳಲ್ಲಿ ಸೆರೆಹಿಡಿಯುವುದು ಕಷ್ಟವೆನಿಸಿತ್ತು.
ಪ್ರವಾಸಿಗರಿಗಾಗಿ ವಿವಿಧ ಹಡಗಿನ ಪ್ರಯಾಣಗಳಿವೆ. ಕೆಲವು ಪ್ರಯಾಣಗಳು ಗಂಟೆಗಳಲ್ಲಿದ್ದರೆ, ಹೆಚ್ಚಿನ ಪ್ರಯಾಣಗಳು ದಿನಗಳಲ್ಲಿದ್ದವು. ನಗರವನ್ನು ಆವರಿಸಿದ ಮೆಡಿಟೇರಿಯನ್ ಸಮುದ್ರ ನಿಸರ್ಗದತ್ತ ಸೌಂದರ್ಯವಾದರೆ, ಪ್ರಚುರವಾಗಿ ಕೆತ್ತಿರುವ ಕಟ್ಟಡಗಳ ವಾಸ್ತುಶಿಲ್ಪಗಳು ಮಾನವ ನಿರ್ಮಿತ ಆಕರ್ಷಣೆಯಾಗಿತ್ತು. ಕೆಲವು ಕಟ್ಟಡಗಳು ಮತ್ತು ಸ್ಮಾರಕಗಳು ಫ್ರೆಂಚ್ ವಾಸ್ತುಶಿಲ್ಪಗಳಾದರೆ ಇನ್ನೂ ಕೆಲವು ಇಟಾಲಿಯನ್ ವಾಸ್ತುಶಿಲ್ಪದ ವಿನ್ಯಾಸಗಳನ್ನು ಹೊಂದಿದ್ದವು. ಈ ವಾಸ್ತುಶಿಲ್ಪಗಳಲ್ಲಿ ನನಗೆ ಪರಿಣಿತಿ ಇಲ್ಲದ ಕಾರಣ ಎಲ್ಲವೂ ಒಂದೇ ವಿನ್ಯಾಸ ಮತ್ತು ರಚನೆ ಎಂದು ಭಾಸವಾಗುತ್ತಿತ್ತು.
ಇಲ್ಲಿ ನಗರವನ್ನು ಸುತ್ತಾಡಿಸಲು ದೊಡ್ಡ ಬಸ್‌ಗಳ ಹೊರತಾಗಿ, ಪ್ರವಾಸಿಗರ ಮೋಜಿಗಾಗಿ ನಮ್ಮ ಆಟೋಗಳನ್ನು ಹೋಲುವ ಮೂರು ಚಕ್ರಗಳ ವಾಹನಗಳನ್ನು ಕಾಣಬಹುದು. ಇವುಗಳು ಎಲ್ಲ ಪ್ರವಾಸಿ ಸ್ಥಳಗಳಲ್ಲಿ ಇರುವಂತೆ, ಚಾಲಕ ನಗರವನ್ನು ಸುತ್ತಾಡಿಸಿ ಪ್ರಮುಖ ಸ್ಥಳಗಳನ್ನು ತೋರಿಸಿ, ಫೋಟೋಗಳನ್ನು ಕ್ಲಿಕ್ಕಿಸಿ ಮತ್ತೆ ಪ್ರಯಾಣಿಕರನ್ನು ಅವರಿರುವ ಸ್ಥಳಕ್ಕೆ ತಲುಪಿಸುತ್ತಾರೆ. ಹೊಸ ಹೊಸ ಫ್ಯಾಶನ್‌ಗಳಿಗೆ ಜಗತ್ತಿನಲ್ಲಿ ಫ್ರಾನ್ಸ್ ದೇಶ ಹೆಸರುವಾಸಿಯಾಗಿದೆ. ಅಲ್ಲಿನ ಫ್ಯಾಶನ್ ಪ್ರಿಯರ ವೈಖರಿಯನ್ನು ಗಮನಿಸಿದಾಗ, ನವನವೀನ ಫ್ಯಾಶನ್ ಟ್ರೆಂಡ್ ಆರಂಭವಾಗುವುದು ಇಲ್ಲಿಂದಲೇ ಎಂದು ಅರಿವಾಗುತ್ತದೆ. ಶಾಂತವಾದ ಮೆಡಿಟರೇನಿಯನ್ ಸಮುದ್ರ ರಾತ್ರಿ ಉಜ್ವಲಿಸುವ ಬೀದಿ ದೀಪಗಳಲ್ಲಿ ಬೇರೆಯದೇ ಸೌಂದರ್ಯವನ್ನು ತೋರುತ್ತದೆ. ನೀರಿನಲ್ಲಿ ಸಮಾನಾಂತರವಾಗಿ ಮೂಡುವ ಚಂದ್ರನ ಬೆಳಕಿನ ಕಿರಣಗಳು ಮನಸ್ಸಿಗೆ ಮುದವೆನಿಸುತ್ತವೆ.
*ಶಿಲ್ಪಾ ಕುಲಕರ್ಣಿ, ಜರ್ಮನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.