Desi Swara: ನಾ ಕಂಡ ನನ್ನ ನೆಚ್ಚಿನ ಶಾಲೆ- ಮಾಸದ ಬಾಲ್ಯದ ಮಧುರ ನೆನಪುಗಳು


Team Udayavani, Dec 30, 2023, 1:40 PM IST

Desi Swara: ನಾ ಕಂಡ ನನ್ನ ನೆಚ್ಚಿನ ಶಾಲೆ- ಮಾಸದ ಬಾಲ್ಯದ ಮಧುರ ನೆನಪುಗಳು

ಪ್ರತಿಯೊಬ್ಬರಿಗೂ ಬಾಲ್ಯದ ಗೆಳೆಯರು, ಶಿಕ್ಷಣ ಪಡೆದ ಶಾಲೆಯ ಅಭಿಮಾನ ಅಳಿಸಲಾಗದ ಭಾವನಾತ್ಮಕ ಸಂಬಂಧವಾಗಿರುತ್ತದೆ. ನನಗೆ ಪ್ರಾಥಮಿಕ, ಮಾಧ್ಯಮಿಕ, ವಿದ್ಯಾಭ್ಯಾಸ ನೀಡಿದ ಶಾಲೆ ವೈಶಿಷ್ಟ ಪೂರ್ಣವಾಗಿತ್ತು. ಅಲ್ಲಿಯ ಪರಿಸರ, ವ್ಯವಸ್ಥೆ, ಭೋದನಾಕ್ರಮ, ಶಿಸ್ತು, ಸಂಸ್ಕೃತಿ, ಶುಚಿತ್ವ, ಸ್ವಾವಲಂಬನೆ, ಸಂಸ್ಕಾರ ಕಲಿಸಿದ ಕನ್ನಡ ಮಾಧ್ಯಮದ ಮೂಲ ಶಿಕ್ಷಣ ಶಾಲೆ ವಿದ್ಯಾನಗರ.

ವಿದ್ಯಾನಗರವಿದದ್ದು ಬೆಂಗಳೂರಿನಿಂದ ಸುಮಾರು 50 ಮೈಲಿ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ. ಈಗಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲಿ. ಪೂರ್ವಕ್ಕೆ ಒಂದು ಮೈಲಿ ಹೋದರೆ ಒಂದು ರೀತಿ ಏಕಾಂಗಿಯಂತೆ ಕಾಣುತಿದ್ದ ಪುಟ್ಟ ಊರು. ಸುತ್ತಲೂ ತಂತಿಬೇಲಿಯ ಸುಭದ್ರ ಕಾವಲು ಮರಗಿಡಗಳ ಹಸುರಿನ ಮಧ್ಯೆ ತಲೆ ಎತ್ತಿನಿಂತ ಕಟ್ಟಡಗಳು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಇಲ್ಲಿ ಬ್ರಿಟಿಷ್‌ ಸೈನಿಕರ ತರಬೇತಿ ಕೇಂದ್ರವಾಗಿತ್ತಂತೆ. ತಾತ್ಕಾಲಿಕವಾಗಿ ನಿರ್ಮಾಣವಾಗಿದ್ದರು ವಿದ್ಯುತ್‌ ನೀರಿನ ಅನುಕೂಲವಿತ್ತು. ಸೈನಿಕರಿಗಾಗಿ ಕಟ್ಟಿದ ಸಾಲು ಸಾಲು ಕೊಠಡಿಗಳು ಸಾರ್ವಜನಿಕ ಶೌಚಾಲಯಗಳು ಅಡಿಗೆ ಮನೆ ಊಟದ ದೊಡ್ಡ ಹಾಲ್‌. ತರಬೇತಿಗಾಗಿ ಎರಡು ವಿಶಾಲವಾದ ಮೈದಾನಗಳು. ಆಡಳಿತ ಕಚೇರಿಗಳು, ಅಧಿಕಾರಿಗಳಿಗಾಗಿ ನಿರ್ಮಿಸಿದ ಸುಂದರ ಮನೆಗಳು. ಮರದ ಮಂಚಗಳು, ಪೀಠೊಪಕರಣಗಳು, ಎಲ್ಲವೂ ಇದ್ದ ಈ ಸ್ಥಳಕ್ಕೆ ಹೊರಗಿನವರಿಗಾರಿಗೂ ಪ್ರವೇಶವಿರಲಿಲ್ಲವಂತೆ. ದೂರ ದೂರದಲ್ಲಿದ್ದ ಹಳ್ಳಿಯ ಜನಗಳು ತಂತಿಯಾಚೆ ನಿಂತು ಸೈನಿಕರ ಚಟುವಟಿಕೆಗಳನ್ನು ವೀಕ್ಷಿಸುತ್ತಿದ್ದರಂತೆ. ಕೇವಲ ಹಾಲು, ಮೊಸರು, ತರಕಾರಿ, ಮೊಟ್ಟೆ, ಮಾಂಸ ಮಾರುತ್ತಿದ್ದವರನ್ನು ಒಳಗೆ ಬಿಡುತ್ತಿದ್ದರಂತೆ. ಜತೆಗೆ ಬಟ್ಟೆ ಒಗೆದು ಕೊಡಲು ಅಗಸರೊಂದಿಬ್ಬರಿಗೆ ಅವಕಾಶವಿರುತ್ತಿತ್ತಂತೆ. ಮಿಲಿಟರಿ ವಾಹನಗಳನ್ನು ಹೊರತುಪಡಿಸಿ ಮತ್ಯಾವ ವಾಹನಗಳಿಗೂ ಅವಕಾಶವಿರಲಿಲ್ಲವಂತೆ.

ಎರಡನೇ ಮಹಾಯುದ್ಧ ಮುಗಿದು ಎಲ್ಲವೂ ಶಾಂತವಾದ ಮೇಲೆ ಸೈನಿಕರು ಎಲ್ಲರೂ ಜಾಗ ಖಾಲಿ ಮಾಡಿದ ಮೇಲೆ ಕ್ಯಾಂಪ್‌ ಅನ್ನು ಸರಕಾರ ವಶಕ್ಕೆ ತೆಗೆದುಕೊಂಡಿತು. ಶಾಲಾಶಿಕ್ಷಕರಿಗೆ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಮೂಲ ಶಿಕ್ಷಣ ನೀಡಬೇಕೆನ್ನುವುದು ಮಹಾತ್ಮ ಗಾಂಧೀಜಿಯವರ ಕನಸಾಗಿದ್ದುದರಿಂದ ಆ ಸ್ಥಳವನ್ನು ವಿದ್ಯಾನಗರ ಎಂದು ನಾಮಕರಣ ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲೊಂದು ಬೋರ್ಡ್‌ ಅನ್ನು ನೆಟ್ಟು ಮತ್ತೂಂದು ಫಲಕವನ್ನು ಸಂಸ್ಥೆಯ ಹೆಬ್ಟಾಗಿಲಿನಲ್ಲಿ ನೆಟ್ಟು ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸಿದರು. ಟೀಚರ್ ಟ್ರೈನಿಂಗ್‌ ಕ್ಯಾಂಪ್‌ ಎಂದೂ ಕರೆಯುತ್ತಿದ್ದರು. ಮಕ್ಕಳಿಗೆ ಪ್ರಾರಂಭದಿಂದಲೇ ವಿದ್ಯಾಭ್ಯಾಸದ ಜತೆಜತೆಯಲ್ಲಿ ಗ್ರಾಮೋದ್ಯೋಗಗಳನ್ನು ಪ್ರಾತ್ಯಕ್ಷಿಕವಾಗಿ ಕಲಿಸಬೇಕು, ನಿರುದ್ಯೋಗ ಸಮಸ್ಯೆ ನಿರ್ಮೂಲವಾಗಬೇಕು, ಯುವ ಜನಾಂಗ ಸ್ವಾವಲಂಬಿಗಳಾಗಿ ಜೀವನ ನಿರ್ವಹಿಸಬೇಕು, ವೃತ್ತಿ ಜೀವನದ ಆಯ್ಕೆಯಲ್ಲಿ ಅವರಿಗೆ ಸ್ವಾತಂತ್ರ್ಯವಿರಬೇಕೆಂಬುದು ಮೂಲ ಶಿಕ್ಷಣದ ಉದ್ದೇಶ.

ನನ್ನ ತಂದೆ ಉಪಾಧ್ಯಾರಾಗಿದ್ದರಿಂದ 1960ನೇ ಇಸವಿಯಲ್ಲಿ ಅವರಿಗೆ ವಿದ್ಯಾನಗರಕ್ಕೆ ವರ್ಗವಾಗಿ ನಾವೆಲ್ಲ ಅಲ್ಲಿಗೆ ಹೋದೆವು. ಅಲ್ಲಿನ ಪರಿಸರ ತುಂಬಾ ಭಿನ್ನವಾಗಿತ್ತು. ವಾಹನಗಳ ಓಡಾಟವಿರಲಿಲ್ಲ. ಆ ಸಂಸ್ಥೆಗೆ ಸಂಬಂಧ ಪಟ್ಟವರಲ್ಲದೆ ಅನ್ಯರಾರೂ ಅಲ್ಲಿಗೆ ಬರುತ್ತಿರಲಿಲ್ಲ, ಹಾಗಾಗಿ ವಾಯುಮಾಲಿನ್ಯ, ಶಬ್ದ ಮಾಲಿನ್ಯವಿರಲಿಲ್ಲ. ಸುತ್ತಲೂ ಬೇಕಾದಷ್ಟು ಹಳ್ಳಿಗಳಿದ್ದರು ಯಾವುದೂ ನಮಗೆ ಕಾಣಿಸುತ್ತಿರಲಿಲ್ಲ. ನಮ್ಮ ಬೇಲಿಯಾಚೆ ಸುತ್ತಲೂ ಹೊಲ, ತೋಟಗಳಿದ್ದವು. ಹತ್ತಿರದಲ್ಲಿ ಒಂದು ಬೆಟ್ಟವಿತ್ತು. ಧಾರಾಳವಾಗಿ ಗಾಳಿ, ಬೆಳಕು ಸಿಗುತಿತ್ತು. ಎಲ್ಲರ ಮನೆಯ ಮುಂದೆ ಹೂವಿನ, ಹಣ್ಣಿನ ಗಿಡಗಳನ್ನು ಬೆಳೆಸುತ್ತಿದ್ದರು. ಪ್ರಕೃತಿ ಪ್ರಿಯರಿಗೆ ಹೇಳಿಮಾಡಿಸಿದ ಊರು ಎಂದು ಹೇಳಬಹುದು.

ಶಿಕ್ಷಕ, ಶಿಕ್ಷಕಿಯರು ಒಂದು ವರ್ಷದ ತರಬೇತಿಗಾಗಿ ಅಲ್ಲಿ ಬರುತ್ತಿದ್ದರು. ಅವರಾರಿಗೂ ಸಂಸಾರವನ್ನು ಕರೆತರುವ ಅನುಮತಿಯಿರಲಿಲ್ಲ. ನಮ್ಮ ಶಾಲೆ ತುಂಬಾ ಆಕರ್ಷಣೀಯವಾಗಿತ್ತು. ಅಲ್ಲಿ ಚಿಕ್ಕ ಮಕ್ಕಳಿಗಾಗಿ ನರ್ಸರಿ ಶಾಲೆಯೂ ಇತ್ತು. ಅಲ್ಲಿಯ ಚಟುವಟಿಕೆಗಳು ಶುಭ್ರತೆಗೆ ಆದ್ಯತೆ. ಶಿಸ್ತು, ಶಾಂತಿ ಸಮಯ ಪಾಲನೆ ಇಂದಿಗೂ ಮರೆಯುವಂತಿಲ್ಲ.
ಸುತ್ತಮುತ್ತಲು ಸಾಕಷ್ಟು ಗ್ರಾಮಗಳಿದ್ದರು ಎಲ್ಲಿಯೂ ಶಾಲೆಗಳಿರಲಿಲ್ಲ. ಅಲ್ಲಿಯ ಮಕ್ಕಳೆಲ್ಲ ನಮ್ಮ ಶಾಲೆಗೇ ಬರುತ್ತಿದ್ದರು. ಆದರೂ ಒಂದೊಂದು ತರಗತಿಯಲ್ಲಿ ಕೇವಲ ಇಪ್ಪತ್ತೈದರಿಂದ ಮೂವತ್ತು ಮಕ್ಕಳಿರುತ್ತಿದ್ದರು.

ವಿಶಾಲವಾದ ತರಗತಿಯ ಕೊಠಡಿಗಳು. ಯಾರಿಗೂ ಕೂಡಲು ಯಾವ ಆಸನಗಳು ಇರಲಿಲ್ಲ. ಎಲ್ಲ ವಿದ್ಯಾರ್ಥಿಗಳು ಮನೆಯಿಂದ ಪುಟ್ಟ ಪುಟ್ಟ ಚಾಪೆಗಳನ್ನು ತೆಗೆದುಕೊಂಡು ಹೋಗಬೇಕಾಗಿತ್ತು. ಪ್ರಾರಂಭದಲ್ಲಿ ಸ್ಲೇಟು ಬಳಪದಲ್ಲಿ ಅಭ್ಯಾಸ ಮಾಡುತ್ತಿದ್ದೆವು.
ದಿನಚರಿ ಪ್ರಾರಂಭವಾಗುತ್ತಿದ್ದುದ್ದೇ ದೇವರ ಪ್ರಾರ್ಥನೆಯಿಂದ. ವಿಶಾಲವಾದ ಪ್ರಾರ್ಥನಾ ಮಂದಿರವಿತ್ತು, ಎತ್ತರವಾದ ವೇದಿಕೆಯ ಮೇಲೆ ಎಲ್ಲ ತರಗತಿಯ ಉಪಾಧ್ಯಾಯರು, ಮುಖ್ಯೋಪಾಧ್ಯರು ಕುಳಿತುಕೊಳ್ಳುತ್ತಿದ್ದರು. ಮಕ್ಕಳೆಲ್ಲ ಅವರವರ ತರಗತಿಯ ಸಾಲಿನಲ್ಲಿ ಅವರವರ ಚಾಪೆ ಹಾಸಿಕೊಂಡು ಒಬ್ಬರ ಹಿಂದೆ ಒಬ್ಬರಂತೆ ಸಾಲಾಗಿ ಕುಳಿತುಕೊಳ್ಳುತ್ತಿದ್ದೆವು. ಎಲ್ಲರಿಗೂ ಆದೇಶಿಸಲು ಆಯ್ಕೆಯಾದ ಪ್ರಾರ್ಥನಾ ಮಂತ್ರಿ ಮತ್ತು ಉಪಮಂತ್ರಿ ವಿದ್ಯಾರ್ಥಿಗಳ ಎದುರಲ್ಲಿ ಮಧ್ಯದಲ್ಲಿ ಕುಳಿತುಕೊಳ್ಳುತ್ತಿದ್ದರು.

ಗಣೇಶ, ಶಾರದಾ ಸ್ತುತಿಯೊಂದಿಗೆ ಪ್ರಾರಂಭಿಸಿ ಕೊನೆಯಲ್ಲಿ ಎರಡು ನಿಮಿಷ ಕಾಲ ಮೌನ ಪ್ರಾರ್ಥನೆ ಮಾಡಬೇಕಿತ್ತು. ಇದ್ದನೆಲ್ಲ ಪ್ರಾರ್ಥನಾ ಮಂತ್ರಿ ಆದೇಶಿಸಿದರೆ, ಅಂದಿನ ವಾರ್ತೆಗಳ ಮುಖ್ಯಾಂಶಗಳು, ಸುಭಾಷಿತ ಎಲ್ಲವನ್ನು ಆ ದಿನ ಚುನಾಯಿಸಲ್ಪಟ್ಟ ವಿದ್ಯಾರ್ಥಿ ಓದಬೇಕಾಗಿತ್ತು. ಪ್ರತಿಯೊಬ್ಬರೂ ಸರದಿಯ ಪ್ರಕಾರ ತಯಾರಾಗಬೇಕಿತ್ತು. ಒಂದೊಂದೇ ತರಗತಿಯವರು ಹೊರಟಾಗ ಇನ್ನೊಂದು ತರಗತಿಯ ಮಕ್ಕಳು ನಿಲ್ಲಬೇಕಾಗಿತ್ತು. ಸದ್ದುಗದ್ದಲ ಮಾಡದೆ ಶಿಸ್ತು ಪಾಲಿಸುತ್ತಿದ್ದೆವು.

ಪ್ರಜಾಪ್ರಭುತ್ವ ಮತ್ತು ಮೂಲಭೂತ ಹಕ್ಕುಗಳನ್ನು ಕಲಿಸಲು ಮಕ್ಕಳಿಗೆ ಮಂತ್ರಿಮಂಡಲವನ್ನು ರಚಿಸಿ ಪ್ರತಿಯೊಬ್ಬ ವಿದ್ಯಾರ್ಥಿಯು ಮತದಾನ ಮಾಡಿ, ಮಂತ್ರಿಗಳನ್ನು ಚುನಾಯಿಸಲು ಅವಕಾಶಕೊಟ್ಟು, ವಿದ್ಯಾರ್ಥಿಗಳನ್ನೇ ವಿವಿಧ ಮಂತ್ರಿಗಳನ್ನಾಗಿ ಮಾಡಿ ಕಾರ್ಯ ನಿರ್ವಹಿಸುವಂತೆ ಪ್ರೇರೇಪಿಸಿ ಪ್ರೋತ್ಸಾಹಿಸಿ ತಿಂಗಳ ಕೊನೆಯ ಶನಿವಾರದಂದು ಕಾರ್ಯ ನಿರ್ವಹಣೆಯ ಶಿಕ್ಷಣವನ್ನು ನೀಡುತ್ತಿದ್ದರು. ತಿಂಗಳ ಮೊದಲ ಶನಿವಾರ ಸಾಂಸ್ಕೃತಿಕ ಸಭೆಗಳು ನಡೆಯುತ್ತಿದ್ದವು. ಪ್ರತಿಯೊಬ್ಬರೂ ಅವರವರ ಪ್ರತಿಭೆಯನ್ನು ಪ್ರದರ್ಶಿಸಬೇಕಾಗಿತ್ತು.

ಸಭಾಕಂಪನ ಹೋಗಲಾಡಿಸುವ ಉದ್ದೇಶದಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಏನಾದರೊಂದು ಕಾರ್ಯಕ್ರಮ ನೀಡಬೇಕಾಗಿತ್ತು. ಜತೆಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ವಿವಿಧ ಮೌಲ್ಯಯುತ ಚಟುವಟಿಕೆಗಳು ನಡೆಯುತ್ತಿದ್ದವು. ಧೈರ್ಯ ವಾಕ್ಚಾತುರ್ಯ ಬರವಣಿಗೆಯನ್ನು ಪ್ರೋತ್ಸಾಹಿಸಿ ಬೆಳೆಸುವ ಉದ್ದೇಶದಿಂದ ನಡೆಯುತ್ತಿದ್ದ ಈ ಕಾರ್ಯಕ್ರಮಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅವಕಾಶಕೊಡುತ್ತಿದ್ದವು. ಅಲ್ಲದೆ ಸುತ್ತಲಿನ ಹೊಲಗಳು, ತೋಟಗಳಿಗೆ ಭೇಟಿ ನೀಡಿ ಸಸ್ಯಗಳ ಪರಿಚಯ ಮಾಡಿಸಿ ಬಹಳಷ್ಟು ಔಷಧೀಯ ಸಸ್ಯಗಳ ಪರಿಚಯ ಉಪಯೋಗಗಳನ್ನು ತಿಂಗಳಿಗೊಮ್ಮೆ ಹೇಳಿಕೊಡುತ್ತಿದ್ದರು.
ಶಾಲಾ ಮಕ್ಕಳ ಪ್ರಯೋಗಕ್ಕಾಗಿ ಒಂದು ತೋಟವಿತ್ತು. ಒಂದೊಂದು ತರಗತಿಗೆ ಜಾಗಗಳನ್ನು ಗೊತ್ತು ಪಡಿಸಿದಿದ್ದರು.

ಸಹಪಾಠಿಗಳಾದ ರೈತರ ಮಕ್ಕಳು ನಮಗೆ ಮಾರ್ಗದರ್ಶನ ಮಾಡಿ ವಿವಿಧ ಬಗೆಯ ಫಸಲನ್ನು ಬೆಳೆಯುತ್ತಿದ್ದೆವು. ಕಬ್ಬಿಣದ ಕೆಲಸ ಮಾಡುವ ಕಮ್ಮಾರರ ಬಳಿ ವ್ಯವಸಾಯಕ್ಕೆ ಬಳಸುವ ಸಾಧನಗಳನ್ನು ತೋರಿಸಿ ತಯಾರಿಸುವ ಬಗೆಯನ್ನು ವಿವರಿಸುತ್ತಿದ್ದರು. ಮಣ್ಣಿನಲ್ಲಿ ಗಣೇಶ, ಹಣತೆಗಳು, ಮಡಕೆಗಳು, ಹೂವಿನ ಕುಂಡಗಳನ್ನು ಮಾಡುವುದನ್ನು ಕಲಿಸುತ್ತಿದ್ದರು. ಗಣೇಶನ ಹಬ್ಬದಲ್ಲಿ ಮಕ್ಕಳೇ ಮಾಡಿದ ಮಣ್ಣಿನ ಗಣೇಶನನ್ನು ಮಂಟಪ ನಿರ್ಮಿಸಿ, ಅಲಂಕರಿಸಿ, ರಂಗೋಲಿ ಹಾಕಿ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪೂಜಿಸಿ ಸಂಭ್ರಮಿಸುತ್ತಿದ್ದೆವು.

ಕೈಮಗ್ಗದಲ್ಲಿ ಬಟ್ಟೆ ನೇಯಲು ಹತ್ತಿಯನ್ನು ಹೇಗೆ ಸಂಸ್ಕರಿಸಬೇಕು ಎಂಬುದನ್ನು ಹಂತ ಹಂತವಾಗಿ ಹೇಳಿ ಕೊಡುತ್ತಿದ್ದರು. ಹತ್ತಿಯನ್ನು ಶುಚಿಗೊಳಿಸಿ ಹಂಜಿಯ ಮಣೆಯಲ್ಲಿ ಹಂಜಿ ಮಾಡಿ ತಕ್ಕಲಿ ಮತ್ತು ಚರಕಗಳಲ್ಲಿ ಹೇಗೆ ದಾರ ತೆಗೆಯ ಬೇಕೆಂಬುದು ಎಲ್ಲ ಮಕ್ಕಳಿಗೂ ತಿಳಿದಿತ್ತು. ನಮ್ಮ ಮನೆಯಲ್ಲಿ ಚರಕ, ತಕಲಿ ಎರಡೂ ಇತ್ತು. ಗಾಂಧಿಜಯಂತಿಯ ಸಂದರ್ಭದಲ್ಲಿ ದಾರ ತೆಗೆಯುವ ಸ್ಪರ್ಧೆಯನ್ನು ಏರ್ಪಡಿಸಿಸುತ್ತಿದ್ದರು. ಬಹುಮಾನ ಪಡೆಯಲು ಎಲ್ಲರೂ ಸಿದ್ಧವಾಗಿರುತ್ತಿದ್ದೆವು. ಮತ್ತೂಂದು ವಿಶೇಷವೆಂದರೆ ಅಲ್ಲಿಗೆ ಆಗಮಿಸುತ್ತಿದ್ದ ಹಿರಿಯ ವ್ಯಕ್ತಿಗಳಿಗೆ ಹೂವಿನ ಹಾರದ ಬದಲು ಹತ್ತಿಯ ಲಡಿಗಳನ್ನು ಹಾಕುತ್ತಿದ್ದರು.

ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಎಲ್ಲ ತರಗತಿಯ ಮಕ್ಕಳು ಧ್ವಜಸ್ತಂಭದ ಸುತ್ತಲು ವೃತ್ತಾಕಾರವಾಗಿ ನಿಂತು ದೇಶ ಭಕ್ತಿಗೀತೆಗಳನ್ನು ಹಾರಾಡುತ್ತಿದ್ದ ಧ್ವಜಕ್ಕೆ ವಂದಿಸುತ್ತಾ ಒಕ್ಕೊರಲಿನಿಂದ ಹಾಡುತ್ತಿದ್ದ ದೃಶ್ಯ ಮರೆಯುವಂತಿಲ್ಲ. ಗಣರಾಜ್ಯೋತ್ಸವಕ್ಕೆ ಅಂತರ ಶಾಲಾ ಸ್ಪರ್ಧೆಗಳಿಗೆ ಸುತ್ತಲಿನ ಗ್ರಾಮೀಣ ಶಾಲೆಯ ಮಕ್ಕಳು ನಮ್ಮ ಶಾಲೆಗೇ ಬರುತ್ತಿದ್ದರು. ಕ್ರೀಡೆಗಳು, ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಮೂರನೇಯ ದಿನ ಬಹುಮಾನ ವಿತರಣೆ ಮತ್ತು ಅನೇಕ ಮುಖ್ಯ ಅತಿಥಿಗಳು ಹೊಸ ವಿಚಾರದ ಬಗ್ಗೆ ಭಾಷಣಗಳನ್ನು ಮಾಡುತ್ತಿದ್ದರು. ಆಗೆಲ್ಲ ಮೂರುದಿನ ಶಾಲೆಯಲ್ಲಿ ಹಬ್ಬದ ವಾತಾವರಣವಿರುತ್ತಿತ್ತು. ಏಳನೆಯ ತರಗತಿ ಮುಗಿಸಿದಾಗ ಮಡಿಲು ತುಂಬಾ ಬಹುಮಾನಗಳನ್ನು ತುಂಬಿಸಿಕೊಂಡು ತರಗತಿಗೆ ಮೊದಲನೆಯವಳಾಗಿ ಉತ್ತೀರ್ಣಳಾಗಿ ಹೊರಬಂದಿದ್ದೆ, ಎಷ್ಟೇ ವರುಷಗಳು ಕಳೆದಿದ್ದರೂ , ಎಲ್ಲೇ ಇದ್ದರು, ಬಾಲ್ಯದ ಮಧುರ ನೆನಪುಗಳು ಮಾಸಿಲ್ಲ.


*ಸಾವಿತ್ರಿ ರಾವ್‌, ಕ್ಲೀವ್‌ಲ್ಯಾಂಡ್‌

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.