Desi Swara: ಮಾತೇ ಮುತ್ತು ಮಾತೇ ಮೃತ್ಯು…
ಕೆಲಸ ಮಾಡುವವರ ಬಗ್ಗೆ ಕೀಳು ಭಾವನೆ ಇರಬಾರದು
Team Udayavani, Mar 30, 2024, 12:35 PM IST
ರಾಜ ಭರ್ತೃಹರಿ ಹೇಳಿದಂತೆ ಮನುಷ್ಯನನ್ನು ಅಂದಗೊಳಿಸುವುದು ಒಡವೆ ವಸ್ತ್ರಗಳೂ ಅಲ್ಲ, ಸೌಂದರ್ಯ ಪ್ರಸಾದನ ಲೇಪನಗಳೂ ಅಲ್ಲ, ಕೇಶಾಲಂಕಾರಗಳೂ, ಹೂವುಗಳೂ ಅಲ್ಲ; ಮನುಷ್ಯನನ್ನು ಅಂದಗೊಳಿಸುವುದು ಕೇವಲ ಅವನ ಮಾತು. ಮಾತಿಗೆ ಅಂತಹ ಶಕ್ತಿ ಇದೆ. ಮಾತಿಗೆ ನಿರ್ಮಾಣ ಮಾಡುವ ಶಕ್ತಿಯೂ ಇದೆ, ನಿರ್ನಾಮ ಮಾಡುವ ಶಕ್ತಿಯೂ ಇದೆ. ಬಾಯಿಯಿಂದ ಹೊರಟ ಮಾತು ಬಿಟ್ಟ ಬಾಣದಂತೆ, ಮತ್ತೆ ಹಿಂದಿರುಗಲಾರದು.
ಸಮಾಜದಲ್ಲಿ ನಾವು ಇತರರನ್ನು ಸಂಬೋಧಿಸುವ ಪರಿ ಬಹಳ ಮುಖ್ಯವಾದದ್ದು. ನಾವು ಉಪಯೋಗಿಸುವ ಶಬ್ದಗಳು ಕೇಳುಗರ ಮನಸ್ಸಿಗೆ ಮುದ ನೀಡುವಂತದ್ದಾಗಿರಬೇಕು. ಮನಸ್ಸೊಂದು ಮರ್ಕಟವಿದ್ದಂತೆ. ಮನಸ್ಸು ನೂರೆಂಟು ಚಿತ್ರ ವಿಚಿತ್ರ ಭಾವನೆಗಳನ್ನು ಹೊಂದಿರುತ್ತದೆ. ಇತರರ ಮಾತುಗಳು ಧನಾತ್ಮಕವಾಗಿದ್ದರೆ ಕೇಳುಗರ ಭಾವನೆಗಳು ಧನಾತ್ಮಕವಾಗಿರುತ್ತದೆ. ಅದೇ ಇತರರ ಮಾತುಗಳು ಋಣಾತ್ಮಕವಾಗಿದ್ದರೆ ಕೇಳುಗರ ಮನಸ್ಸಿನಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ. ಹೀಗಿರುವಾಗ ನಾವು ಸಂಬೋಧಿಸುವ ಶಬ್ದಗಳು ಬಹಳ ಪ್ರಾಮುಖ್ಯವನ್ನು ಪಡೆದುಕೊಳ್ಳುತ್ತದೆ.
ಉದಾಹರಣೆಗೆ ಅರವತ್ತು ದಾಟಿದವರನ್ನು ಅವರ ಮೊಮ್ಮಕ್ಕಳು ಅಜ್ಜ, ಅಜ್ಜಿ ಎಂದು ಕರೆದಾಗ ಹಿತವೆನಿಸಿದರೆ, ಇತರರು ಅಜ್ಜ, ಅಜ್ಜಿ, ಮುದುಕ, ಮುದುಕಿ ಎಂದು ಸಂಬೋಧಿಸಿದರೆ ಇರುಸು ಮುರುಸಾಗುವುದು ಸಹಜ. ಪೀಳಿಗೆಗಳ ನಡುವಿನ ಅಂತರವಿರುವ ವಯಸ್ಸಿನವರೊಂದಿಗೆ ಸಂಬೋಧಿಸಲು ನಾವು ಉಪಯೋಗಿಸುವ ಶಬ್ದಗಳು ಬಹಳ ಮಹತ್ವವನ್ನು ಪಡೆದು ಕೊಳ್ಳುತ್ತದೆ.
ಹುಟ್ಟಿದ ಜೀವಿಗೆ ವಯಸ್ಸಾಗುವುದು ಸಹಜ ಪ್ರಕ್ರಿಯೆ. ಮನಸ್ಸು ಎಷ್ಟೇ ಕುಣಿದಾಡಿದರೂ ದೇಹ ನಮಗೆ ಪ್ರಾಯ ಆಗುತ್ತಿರುವುದನ್ನು ಅರಿವಾಗಿಸುತ್ತಾ ಬರುತ್ತದೆ. ಇಂತಹ ಸಮಯದಲ್ಲಿ ಮನಸ್ಸನ್ನು ಹುರಿದುಂಬಿಸುತ್ತಾ, ಉತ್ಸಾಹದಿಂದ ಇರಿಸಿಕೊಳ್ಳುವುದು ಅತೀಮುಖ್ಯ. ಇದಕ್ಕೆ ಅವಶ್ಯವಿರುವ ಪರಿಸರವನ್ನು ಸೃಷ್ಟಿ ಮಾಡಿಕೊಡುವುದು ನಮ್ಮೆಲ್ಲರ ಕರ್ತವ್ಯ. ಅರುಳು ಮರುಳು ಅಲ್ಲ ಮರಳಿ ಅರಳು ಎಂಬುದನ್ನು ಗಮನದಲ್ಲಿಟ್ಟುಕೊಂಡು ಅರವತ್ತರ ವಸಂತದಲ್ಲಿರುವವರನ್ನು ಸರ್, ಮೇಡಂ, ಅಕ್ಕ, ಅಣ್ಣ, ಬ್ರೋ, ಬಾಸ್ ಎಂದೆಲ್ಲ ವಿಭಿನ್ನವಾಗಿ ಸಂಬೋಧಿಸುವುದರಿಂದ ಒಂಟಿತನದಲ್ಲಿ, ಪ್ರಾಮುಖ್ಯದ ಹಂಬಲವಿರುವ ಅವರಲ್ಲಿ ಜೀವನ ಉತ್ಸಾಹ ತುಂಬಿದಂತಾಗುವುದು.
ಅಷ್ಟೇ ಅಲ್ಲದೆ ಸ್ವತ್ಛತಾ ಕರ್ಮಚಾರಿಗಳನ್ನು, ಮನೆಗೆಲಸದವರನ್ನು ಸಂಬೋಧಿಸುವ ಶಬ್ದಗಳು ನಮ್ಮ ಹಿಡಿತದಲ್ಲಿಯೇ ಇರಬೇಕು. ನಮ್ಮ ಗೌರವ ಬೇರೆಲ್ಲೂ ಇಲ್ಲ, ನಮ್ಮ ನಾಲಗೆಯಲ್ಲಿಯೇ ಇದೆ ಎಂಬ ಮಾತಿದೆ. ನಾವು ಇತರರನ್ನು ಸಂಬೋಧಿಸಲು ಉಪಯೋಗಿಸುವ ಶಬ್ದಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಬಸವಣ್ಣನವರು ತಮ್ಮ ವಚನದಲ್ಲಿ ಬಹಳ ಸೊಗಸಾಗಿ ತಿಳಿ ಹೇಳಿದ್ದಾರೆ. ಅಯ್ನಾ ಎಂದೊಡೆ ಸ್ವರ್ಗ, ಎಲವೋ ಎಂದೊಡೆ ನರಕ – ಸ್ವಚ್ಛತಾ ಕರ್ಮಚಾರಿಗಳನ್ನೂ ನಾವು ಅಣ್ಣ, ಅಕ್ಕ, ಅಯ್ನಾ, ಅವ್ವ, ಸರ್, ಮೇಡಂ ಎಂದು ಸಂಬೋಧಿಸಿ ಗೌರವ ಕೊಟ್ಟಾಗ ಅವರುಗಳ ಮುಖದಲ್ಲಿ ಮೂಡುವ ಸಂತೃಪ್ತಿಯ ಮಂದಹಾಸ ನಮಗೆ ಆಶೀರ್ವಾದ ನೀಡಿದಂತಾಗುವುದು. ಮನುಷ್ಯ ಮಾಡುವ ವೃತ್ತಿ ಮೇಲೆ ಅವರ ವ್ಯಕ್ತಿತ್ವವನ್ನು ಮಾಪನ ಮಾಡುವುದು ಸರಿಯಲ್ಲ. ಯಾವುದೇ ನಿಯತ್ತಿನಲ್ಲಿ ಮಾಡುವ ಕೆಲಸ ಅಥವಾ ಆ ಕೆಲಸ ಮಾಡುವವರ ಬಗ್ಗೆ ಕೀಳು ಭಾವನೆ ಇರಬಾರದು. ಬದಲಿಗೆ ಲಂಚ ಭ್ರಷ್ಟಾಚಾರ, ಅನಾಚಾರ ಮಾಡುವವರ ಮೇಲೆ ಕೀಳು ಭಾವನೆ ಬರಬೇಕು ಯಾವ ಕೆಲಸವೂ ಕೀಳಲ್ಲ. ಎಲ್ಲರೂ ಸಮಾನರು ಎಂಬ ಭಾವ ಸಮಾಜದಲ್ಲಿ ಮೂಡುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ.
ಅಂತೆಯೇ ಆಸ್ಪತ್ರೆಗಳಲ್ಲಿ ದಾಖಲಾಗುವವರನ್ನು ರೋಗಿಗಳು ಎಂದು ಸಂಬೋಧಿಸುವುದಕ್ಕಿಂತ ಅವರ ಹೆಸರುಗಳನ್ನೇ ಉಪಯೋಗಿಸುವುದು ಬಹಳ ಸೂಕ್ತ. ಮೊದಲೇ ಮಾನಸಿಕವಾಗಿ ಕುಗ್ಗಿರುವವರನ್ನು ರೋಗಿ ಎಂದು ಕರೆದಾಗ ಮನಸ್ಸಿಗೆ ಮತ್ತೆ ಘಾಸಿ ಮಾಡಿದಂತೆ. ಮಾತೇ ಮುತ್ತು ಮಾತೇ ಮೃತ್ಯು – ಎಂಬಂತೆ ನಮ್ಮ ಮಾತು ಮುತ್ತಿನಂತೆ ಇತರರ ಬದುಕಿನಲ್ಲಿ ಬೆಳಕನ್ನು ಚೆಲ್ಲುವಂತಿರಬೇಕು. ಮೊದಲೇ ಜರ್ಜರಿತವಾಗಿರುವವರನ್ನು ಇನ್ನಷ್ಟು ದುರ್ಬಲಗೊಳಿಸುವ ಬದಲು ಪ್ರೋತ್ಸಾಹ ಜನಕವಾಗಿ ಸರ್, ಮೇಡಂ, ಸೇಠ್, ಗುರೂ ಹೀಗೆ ಕರೆದರೆ ಔಷಧದೊಂದಿಗೆ ಧನಾತ್ಮಕ ಬದಲಾವಣೆಯನ್ನು ಅನಾರೋಗ್ಯ ಪೀಡಿತರಲ್ಲಿ ಕಾಣಬಹುದು.
“ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್‌ನ ಬ್ರೂಯಾತ್ ಸತ್ಯಮಪ್ರಿಯಂ’ ಎಂದರೆ ಸತ್ಯವನ್ನೇ ಹೇಳಬೇಕು, ಪ್ರಿಯವಾದದ್ದನ್ನೇ ಹೇಳಬೇಕು, ಆದರೆ ಅಪ್ರಿಯವಾದ ಸತ್ಯವನ್ನು ಎಂದಿಗೂ ಹೇಳಬಾರದು. ನಮ್ಮ ಚಿಂತನೆ, ನಮ್ಮ ಮಾತು, ನಮ್ಮ ಕೃತಿ ಎಲ್ಲವೂ ನಮ್ಮ ಹಾಗೂ ಇತರರ ಬದುಕಿನ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮ ಎರಡನ್ನೂ ಉಂಟುಮಾಡುವುದರಿಂದ ನಮ್ಮ ಮಾತಿನ ಮೇಲೆ ಸದಾ ಗಮನವಿರಬೇಕು. ಮಾತು ಬೆಳ್ಳಿ ಮೌನ ಬಂಗಾರ ಎಂಬಂತೆ ಆಡಿದ ಮಾತು ಬೆಳ್ಳಿಯಂತಿದ್ದರೆ ಮೌನ ಬಂಗಾರದಂತಿರಬೇಕು.
*ನಾನಕ್ ಶೆಟ್ಟಿ ಕಿನ್ನಿಗೋಳಿ, ಮಸ್ಕತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.