Desi Swara: ಸತ್ಯವೆಂಬ ಕಹಿ ಗುಳಿಗೆ
"ಸತ್ಯವೆಂಬುದದೆಲ್ಲಿ ? ನಿನ್ನಂತರಂಗದೊಳೊ ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ
Team Udayavani, Sep 30, 2023, 11:59 AM IST
ಆಗಷ್ಟೇ ಶಾಲೆ ಮುಗಿದು ಬೇಸಗೆ ರಜೆ ಪ್ರಾರಂಭವಾಗಿತ್ತು. ಪುಟ್ಟನೋ ಸದಾ ಆಟವಾಡುವುದರಲ್ಲಿ ಮಗ್ನ. ತನ್ನ ಕೋಣೆಯಲ್ಲಿ ಆಟವಾಡುತ್ತಿದ್ದ ಪುಟ್ಟನಿಗೆ ಔಷಧ ಕುಡಿಯಲು ಬಾರೋ ಕಂದ ಎಂದು ಅಡುಗೆ ಮನೆಯಿಂದ ಕೂಗಿ ಕರೆದಿದ್ದೆ. ಜ್ವರವಿಲ್ಲ, ನೆಗಡಿಯಿಲ್ಲ, ಅನಾರೋಗ್ಯದ ಯಾವ ಲಕ್ಷಣಗಳೂ ಇಲ್ಲ, ಆದರೂ ಅಮ್ಮ ಯಾವ ಔಷಧವನ್ನು ಕುಡಿಯಬೇಕೆಂದು ಕರೆಯುತ್ತಿತ್ತಾಳೆಂದು ಯೋಚಿಸಿದ ಪುಟ್ಟ ಅರೆಮನಸ್ಸಿನಿಂದಲೇ ಅಡುಗೆ ಮನೆಗೆ ಬಂದಿದ್ದ. ನಾನು ಹುಷಾರಾಗೇ ಇದ್ದೀನಿ, ಅಂದ್ರುನೂ ಅದೇನೋ ಔಷಧವನ್ನು ಕುಡಿಯಬೇಕೆಂದೆಯಲ್ಲಮ್ಮ? ಎಂದು ಮುಗ್ಧತೆಯಿಂದ ಪ್ರಶ್ನಿಸಿದ ಮಗುವಿನ ತಲೆಸವರಿ, ಮುಂದಿನವಾರ ಇಂಡಿಯಾಗೆ ಹೋಗ್ತಾ ಇದ್ದೀವಲ್ಲ ಪುಟ್ಟ, ಅಲ್ಲಿಗೆ ಹೋದಾಗ ಮಲೇರಿಯಾ ಜ್ವರ ಬರದೆ ಇರೋಕೆ ಈ ಔಷಧ ತೊಗೋಬೇಕು. ಹೋದ್ಸಲ ಊರಿಗೆ ಹೋದಾಗ, ನಿನಗೆ ಜ್ವರ ಬಂದಿತ್ತಲ್ವ? ಎಂದೆ.
ಪಾಪ ಪುಟ್ಟ, ಹಿಂದಿನ ವರ್ಷ ಜ್ವರದಿಂದ ಬಳಲಿದ್ದನ್ನು ನೆನಪಿಸಿಕೊಂಡು ಔಷಧವನ್ನು ಕುಡಿಯಲು ಒಪ್ಪಿಕೊಂಡನಾದರೂ, ತುಂಬಾ ಕಹಿಯಾಗಿದೆಯಾ? ಆಮೇಲೆ ತಿನ್ನೋಕೆ ಸಕ್ಕರೆ ಕೊಡ್ತಿಯಾ? ಎಂದ. ಮಲೇರಿಯಾ ಜ್ವರ ಬರದಂತೆ ತಡೆಗಟ್ಟಲು ಅಥವಾ ಆ ಜ್ವರ ನಿಯಂತ್ರಿಸಲು ಕೊಡುವ ಏಕೈಕ ಔಷಧವಾದ ಕ್ವಿನೈನಿನ ಕಹಿ ರುಚಿಯನ್ನು ಅವನಿಗೆ ಏನೆಂದು ಹೇಳುವುದು? “ಕ್ವಿನೈನ್’ ಮಾತ್ರೆಯ ಬಗ್ಗೆ ಓದಿ ತಿಳಿದಿದ್ದೆನಾದರೂ ಅದರ ಕಹಿ ರುಚಿಯನ್ನು ತಿಳಿದಿರಲಿಲ್ಲ. ಮಾತ್ರೆಯನ್ನು ಹಣ್ಣಿನ ರಸದಲ್ಲಿ ಬೆರೆಸಿ ಪುಟ್ಟನಿಗೆ ಕುಡಿಸುವ ಮೊದಲು ರೂಢಿಯಂತೆ ಎರಡು ಹನಿಯನ್ನು ನಾನು ಕುಡಿದಾಗ ಅದರ ಕಹಿ ರುಚಿಯ ಅನುಭವವಾಗಿತ್ತು. ಇಷ್ಟು ಕಹಿಯಾದ ಔಷಧವನ್ನು ಮಗುವಿಗೆ ಕುಡಿಸಬೇಕಲ್ಲ ಎಂದು ಯೋಚಿಸುತ್ತಿದ್ದಾಗ, ಮಲೇರಿಯಾ ವಾಸಿಯಾಗಬೇಕೆಂದರೆ, ಕ್ವಿನೈನಿನ ಕಹಿಯನ್ನು ನುಂಗಲೇಬೇಕಾಗುತ್ತದೆ ಎನ್ನುವ ಹಳೆ ಸಿನೆಮಾ ಒಂದರ ಡೈಲಾಗ್ ನೆನಪಿಗೆ ಬಂದಿತ್ತು. ಸಿನೆಮಾ ಕಥೆಯಲ್ಲಿ ಬರುವ ದೃಶ್ಯವೊಂದರಲ್ಲಿ ಜೀವನದ ಕಷ್ಟಗಳನ್ನು ಎದುರಿಸಲು ಈ ಕ್ವಿನೈನಿನ ಕಹಿಯ ಹೋಲಿಕೆಯನ್ನು ನೀಡಿ ಹೇಳಿದ್ದ ಮಾತದು. ಕಹಿ ಗುಳಿಗೆಯ ಮಿಶ್ರಣವನ್ನು ನುಂಗಿ, ಸಕ್ಕರೆ ತಿಂದು ಆಟವಾಡಿಕೊಂಡಿದ್ದ ಪುಟ್ಟ.
ಶಾಲೆಯ ರಜೆ ಸಮಯದಲ್ಲಿ ಪುಟ್ಟನನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಬರುವ ತಯಾರಿ ನಡೆಸಿದ್ದೆ. ಹಲವಾರು ವರುಷಗಳಿಂದ ಅಮೆರಿಕದಲ್ಲಿ ನೆಲೆಸಿದ ನನಗೆ ತಾಯ್ನಾಡಿಗೆ ಭೇಟಿಕೊಡುವ ಪ್ರತೀ ಅವಕಾಶವೂ ಹೊಸ ಉತ್ಸಾಹವನ್ನು ಮೂಡಿಸುತ್ತದೆ. ತವರು ಮನೆಯ ಸೆಳೆತವಿರಬಹುದು, ಬಂಧು-ಮಿತ್ರರನ್ನು ಭೇಟಿ ಮಾಡುವುದಿರಬಹುದು, ಸಭೆ-ಸಮಾರಂಭಗಳಲ್ಲಿ, ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವುದಿರಬಹುದು, ಬಗೆ-ಬಗೆಯ ವಸ್ತುಗಳ ಖರೀದಿಯಿರಬಹುದು, ಅಲ್ಲದೇ ಇತ್ತೀಚಿನ ವರುಷಗಳಲ್ಲಿ ಫೇಸ್‌ಬುಕ್, ವ್ಯಾಟ್ಸ್‌ಆ್ಯಪ್‌ಗಳಿಂದ ಮತ್ತೆ ಸಂಪರ್ಕಕ್ಕೆ ಸಿಕ್ಕಿರುವ ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಂಭ್ರಮವಿರಬಹುದು. ಹೀಗೆ ಎಲ್ಲವೂ ಮನಸ್ಸಿಗೆ ಮುದ ನೀಡುವ ಸಂಗತಿಗಳೇ ಆಗಿರುತ್ತವೆ. ಆದರೆ ಈ ಎಲ್ಲ ಸಂತೋಷ, ಸಂಭ್ರಮಗಳೊಂದಿಗೆ ಈ ಬಾರಿಯೂ ಆತಂಕ ಮೂಡಿಸಿದ ವಿಷಯವೆಂದರೆ ಪ್ರವಾಸದ ಸಮಯದಲ್ಲಿ ನನ್ನ ಮತ್ತು ಪುಟ್ಟನ ಆರೋಗ್ಯವನ್ನು ಕಾಪಾಡಿಕೊಳ್ಳುವುದು.
ಈ ಮೊದಲು ಬೆಂಗಳೂರಿಗೆ ಹೋದಾಗಲೆಲ್ಲ ನಾನು ಮತ್ತು ಮಗು ಅನಾರೋಗ್ಯದಿಂದ ಬಳಲಿದ ಕ್ಷಣಗಳು ನೆನಪಿನಲ್ಲಿ ಸುಳಿದು, ವೈದ್ಯರ ಸಲಹೆಯಂತೆ ಈ ಸಲ ಪುಟ್ಟನಿಗಾದರೂ ಮಲೇರಿಯಾ ತಡೆಗಟ್ಟಲು ಔಷಧವನ್ನು ಕುಡಿಸಿದರಾಯಿತೆಂದುಕೊಂಡೆ. ಆ ಕಹಿ ಗುಳಿಗೆಯನ್ನು ವಾರಕ್ಕೊಮ್ಮೆ ಎಂಬಂತೆ ಹತ್ತು ವಾರಗಳವರೆಗೆ ಮಗುವಿಗೆ ಕುಡಿಸಬೇಕೆಂದು ತಿಳಿದಾಗ, ಮಾತ್ರೆಯ ಕಹಿಯನ್ನು ಒಪ್ಪಿಕೊಳ್ಳಲು ಮನಸ್ಸು ತನ್ನದೇ ಆದ ತಯಾರಿ ನಡೆಸಿತ್ತು.
ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು, ಅನಾರೋಗ್ಯದಿಂದ ಆರೋಗ್ಯವನ್ನು ಪಡೆಯಲು ನಾವೆಲ್ಲ ಮಾಡುವುದೇನು? ಕಹಿಯಾದ ಗುಳಿಗೆಗಳನ್ನು ನುಂಗಿ, ನಾಲಗೆಗೆ ರುಚಿಸದ, ಮನಸೊಪ್ಪದ ಔಷಧ-ಪಥ್ಯಗಳನ್ನು ಪಾಲಿಸಿ ಆರೋಗ್ಯವಂತರಾಗಿರಲು ಪ್ರಯತ್ನಿಸುತ್ತೇವಲ್ಲವೇ? ಎಂದು ಮನದಲ್ಲಿ ಮೂಡುತ್ತಿದ್ದ ಪ್ರಶ್ನೆಗಳು, ವಾರಗಳು ಕಳೆದಂತೆ ಯಾವ ಹಿಂಜರಿಕೆಯಿಲ್ಲದೆ ಕಹಿ ಕ್ವಿನೈನನ್ನು ಕುಡಿಯುವ ಪುಟ್ಟನನ್ನು ನೋಡಿ ತಮ್ಮ ದಾರಿ ಬದಲಿಸಿದ್ದವು. ದೇಹದ ಆರೋಗ್ಯವನ್ನು ಕಹಿ ಗುಳಿಗೆ ನುಂಗಿ ಸುಧಾರಿಸಿಕೊಂಡಂತೆ, ಮನಸ್ಸಿನ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಾಧ್ಯವೇ?, “ಕಹಿ’ ಉಣಿಸಿ ಮನಸ್ಸಿನ ಆರೋಗ್ಯವನ್ನು ಸುಧಾರಿಸುವ ಆ ಗುಳಿಗೆ ಯಾವುದಿರಬಹುದು? ಎಂಬ ಪ್ರಶ್ನೆಗಳಿಗೆ ನಾನು ಕಂಡುಕೊಂಡ ಉತ್ತರ ಸತ್ಯವೆಂಬ ಕಹಿ ಗುಳಿಗೆ!
ಜೀವನದಲ್ಲಿ “ಸತ್ಯ’ ವನ್ನು ಮಾತನಾಡಿ, ಎದುರಿಸಿ, ಅದರ ಕಹಿಯನ್ನು ನುಂಗಿ ಮನಸ್ಸನ್ನು ಆರೋಗ್ಯದಿಂದಿರಿಸಿಕೊಳ್ಳಲು ಪ್ರಯತ್ನಿಸಿಬಹುದಲ್ಲ ಎಂದು ಆಲೋಚಿಸಲು ಮುಂದಾದೆ. ಮಲೇರಿಯಾಕ್ಕೆ ನೀಡುವ ಕ್ವಿನೈನ್ ಗುಳಿಗೆಯ ಕಹಿಯೊಂದಿಗೆ ಸತ್ಯದ ಕಹಿಯನ್ನು ಹೋಲಿಸಿ ಗೊಂದಲಕ್ಕೀಡಾದೆನೇನೋ ಅಂದುಕೊಂಡಾಗ, ಡಿ.ವಿ.ಜಿ.ಯವರ “ಮಂಕುತಿಮ್ಮನ ಕಗ್ಗ’ದ ಪದ್ಯವೊಂದರ ಸಾಲುಗಳು ನೆನಪಿನಲ್ಲಿ ಸುಳಿದಿದ್ದವು.
” ಸತ್ಯವೆಂಬುದದೆಲ್ಲಿ ? ನಿನ್ನಂತರಂಗದೊಳೊ | ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ಸರಿನೋಡೆ | ತತ್ತ್ವದರ್ಶನವಹುದು- ಮಂಕುತಿಮ್ಮ || ”
ನಿಜ, ಮನುಷ್ಯನ ಮನಸ್ಸು ರೋಗಗ್ರಸ್ತವಾಗದೇ, ಆರೋಗ್ಯದಿಂದಿದ್ದು ಪಕ್ವವಾಗುವಲ್ಲಿ “ಸತ್ಯ’ದ ಅರಿವು ಅತೀ ಮುಖ್ಯವಾಗಿದೆ ಎನಿಸಿತೊಡಗಿತ್ತು. ಹಾಗಾದರೆ ನಾವು ಜೀವನದಲ್ಲಿ ಒಪ್ಪಿಕೊಂಡು ನಡೆಯಬೇಕಾದ ಸತ್ಯ ಯಾವುದಿರಬಹುದೆಂದು ಪಟ್ಟಿ ಮಾಡುತ್ತಾ ಹೋದಾಗ, ಬದುಕಿನಲ್ಲಿ ಬರುವ ಕಹಿಯೆನಿಸುವ ಸತ್ಯದ ಪುಟಗಳು ತೆರೆದುಕೊಳ್ಳಲಾರಂಭಿಸಿದವು. ಪರಿಸ್ಥಿತಿಯ ಅಸಹಾಯಕತೆಯ ಸತ್ಯವನ್ನು ಎದುರಿಸಿದಾಗ ಅದರಿಂದ ಹೊರಬರುವ ದಾರಿಗಳನ್ನು ಕಂಡುಕೊಳ್ಳುವಲ್ಲಿ ಪ್ರಯತ್ನಿಸಬಹುದೆನ್ನಿಸಿತು.
ಆ ಸತ್ಯವನ್ನು ಒಪ್ಪಿಕೊಳ್ಳದೇ ಬದುಕನ್ನು ದೂಷಿಸಿತ್ತಾ ಕುಳಿತರೆ ಜೀವನ ನೀಡುವ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುವಂತಾಗುತ್ತದೆ ಎನ್ನಿಸಿತು. ಹಾಗೆಯೇ ಸೋಲಿನ ಕಹಿಯನ್ನು ಮನವರಿಕೆ ಮಾಡಿಕೊಂಡು ಯೋಚಿಸಿದಾಗ, ಮುಂದಿನ ಪ್ರಯತ್ನಗಳಲ್ಲಿ ಗೆಲುವು ಪಡೆಯುವ ಮಾರ್ಗವನ್ನು ಹುಡುಕಿಕೊಳ್ಳಬಹುದಲ್ಲವೇ? ಸೋಲಿನ ಸತ್ಯವನ್ನು ಒಪ್ಪಿಕೊಳ್ಳದೇ ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿದರೆ ಗೆಲುವಿನ ಸಿಹಿ “ಕನ್ನಡಿಯೊಳಗಿನ ಗಂಟು’ ಎನಿಸಿಕೊಳ್ಳುವುದಲ್ಲವೇ? ಅಂದುಕೊಂಡೆ. ಇನ್ನು ಸತ್ಯವನ್ನು ಎದುರಿಸುವ ಸರದಿ ನಮ್ಮದಾದಾಗ ನೀಡಲು ಮುಂದಾಗುವ ಅನವಶ್ಯಕ ಸಮರ್ಥನೆಗಳು, ಆರೋಪ, ಪ್ರತ್ಯಾರೋಪಗಳು ಮನಸ್ಸನ್ನು ಅನಾರೋಗ್ಯ ಗೊಳಿಸುವುದರೊಂದಿಗೆ ದೇಹದ ಆರೋಗ್ಯವನ್ನೂ, ಸ್ನೇಹ-ಬಾಂಧವ್ಯಗಳನ್ನೂ ಹಾಳುಗೆಡಹುದರೆಲ್ಲಿ ಮುಂಚೂಣಿಯಲ್ಲಿರುತ್ತವೆ ಎನ್ನುವುದನ್ನು ನನಗಾದ ಕೆಲವು ಅನುಭವಗಳಿಂದ ಕಂಡುಕೊಂಡಿದ್ದೆ. ಆಗ ಸತ್ಯವೆಂಬ ಕಹಿ ಗುಳಿಗೆ ಮನುಷ್ಯನ ಮನುಸ್ಸಿಗೆ ಅದೆಷ್ಟು ಪರಿಣಾಮಕಾರಿ ಎನ್ನುವ “ಸತ್ಯ’ದ ಅರಿವಾಗಿತ್ತು! ಈ ಕಹಿಯ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳುಬೇಕೆಂಬ ನಿಟ್ಟಿನಲ್ಲಿ ಮನಸ್ಸು ಕೆಲವು ಪ್ರಶ್ನೆಗಳನ್ನು ಕೇಳಿ, ಹಲವು ಉತ್ತರಗಳನ್ನು ಕಂಡುಕೊಂಡಿತ್ತು.
ಕಹಿಯೆನಿಸುವ ಸತ್ಯವನ್ನು ಒಪ್ಪಿಕೊಂಡು ಮನುಷ್ಯ ತನ್ನ ಮನಸ್ಸಿನ ಆರೋಗ್ಯದ ಸುಧಾರಣೆಯ ಬಗ್ಗೆ ಯೋಚಿಸಿದಾಗ, ಆರೋಗ್ಯವಂತ ಮನಸ್ಸು ವ್ಯಕ್ತಿಯ ವ್ಯಕ್ತಿತ್ವವನ್ನು ಸುಂದರವಾಗಿಸುವುದಿಲ್ಲವೇ? ಆಗ “ಸತ್ಯಂ ಶಿವಂ ಸುಂದರಂ’ ಎನ್ನುವ ಈ ಸಾಲು ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಅರ್ಥವನ್ನು ನೀಡುತ್ತದೆ ಎಂದುಕೊಂಡೆ. ನಿಜ. ಸತ್ಯವನ್ನು ನುಡಿಯುವ, ಸತ್ಯವನ್ನು ಎದುರಿಸುವ, ಸತ್ಯದ ಕಹಿಯನ್ನು ನುಂಗುವ ಮನಸ್ಸಿನಲ್ಲಿ ದೈವತ್ವವಿರುತ್ತದೆ.
ದೈವತ್ವವಿರುವಲ್ಲಿ ಕುರೂಪವಿರಲು ಅವಕಾಶವೇ ಇರುವುದಿಲ್ಲವೆಂದಾಗ ಅದು ಸಹಜವಾಗಿ ಸುಂದರವಾದ ಮನಸ್ಸಾಗಿರುತ್ತದೆ. ಜಗವನ್ನು, ಜನರನ್ನು ತನ್ನತ್ತ ಸೆಳೆಯುವ ಬಾಹ್ಯ ಸೌಂದರ್ಯಕ್ಕಿಂತ, ಮನಸ್ಸಿನ ಸುಂದರತೆಗೆ ಯಾವುದೇ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ, ಕಿರೀಟ ಧರಿಸುವ ಅಗತ್ಯವಿರುವುದಿಲ್ಲ ಅಲ್ಲವೇ? ಹೀಗೆ ಸತ್ಯದ ಕಹಿಯನ್ನು ಉಂಡು ಮನಸ್ಸನ್ನು ಸುಂದರಗೊಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿರುವಾಗಲೇ ಹೊರಗಿನಿಂದ ಪುಟ್ಟನ ಕೂಗು ಕೇಳಿಸಿತ್ತು.
ಟಿವಿಯಲ್ಲಿ ಬರುತ್ತಿದ್ದ ತನಗೆ ಮೆಚ್ಚುಗೆಯಾಗಿದ್ದ ಸಿನೆಮಾ ಒಂದರ ಹಾಡೊಂದನ್ನು ನಾನೂ ನೋಡಬೇಕೆಂದು ಕರೆದಿದ್ದ. ಅಲ್ಲೇ ಸೋಫಾದಲ್ಲಿ ಕುಳಿತು ಪುಟ್ಟನೊಂದಿಗೆ ಆ ಹಾಡನ್ನು ನೋಡಿದ್ದಾಯ್ತು. ಹಾಡು ಮುಗಿಯುವುದರೊಂದಿಗೆ ಪುಟ್ಟನಿಗೆ ಆ ಸಿನೆಮಾ ಮುಂದುವರೆಸಲು ಇಷ್ಟವಾಗದೇ ರಿಮೋಟ್ ಕೈಯಲ್ಲಿ ಹಿಡಿದು ಒಂದೊಂದಾಗಿ ಚಾನೆಲ್ ಬದಲಿಸಲು ಪ್ರಾರಂಭಿಸಿದ. ಕನ್ನಡ ಚಾನೆಲ್‌ವೊಂದರೆಲ್ಲಿ “ರಸ ಪ್ರಶ್ನೆಗಳ ಕಾರ್ಯಕ್ರಮ’ ಪ್ರಸಾರವಾಗುತ್ತಿದುದನ್ನು ಕಂಡು, ಪುಟ್ಟನ ಕೈಯಿಂದ ರಿಮೋಟ್ ಕಿತ್ತುಕೊಂಡು ಅಲ್ಲಿ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನದಲ್ಲಿ ತೊಡಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಪರ್ಧಿಗಳು ಉತ್ತರ ಕೊಡುವ ಮೊದಲೇ ನನಗೆ ನಾನೇ ಸರಿ ಉತ್ತರ ಹೇಳಿಕೊಂಡು ಸಂತೋಷಗೊಂಡಿದ್ದೆ. ಅಲ್ಲಿ ಹಾಡೊಂದನ್ನು ಕೇಳಿಸಿ, ಗಾಯಕನನ್ನು ಗುರುತಿಸಿ ಎಂದು ಪ್ರಶ್ನೆ ಕೇಳಿದರು. ಜತೆಗೆ ಆ ಗಾಯಕರು ಹಿಂದಿ ಚಿತ್ರರಂಗದ ಹೆಸರಾಂತ ಹಿರಿಯ ಗಾಯಕರಾಗಿದ್ದರು ಎಂಬ ಮಾಹಿತಿಯನ್ನೂ ನೀಡಿದರು. ಅದು “ಕಲ್ಪವೃಕ್ಷ’ ಚಿತ್ರದಲ್ಲಿನ “ಜಯತೆ, ಜಯತೆ, ಜಯತೆ … ಸತ್ಯಮೇವ ಜಯತೇ’ ಎನ್ನುವ ಗಾಯಕ ಮನ್ನಾಡೇ ಅವರು ಹಾಡಿದ ಹಾಡು. ಉಪನಿಷತ್ತಿನಲ್ಲಿ ಉಲ್ಲೇಖಿಸಿದ “ಸತ್ಯಮೇವ ಜಯತೇ’ (ಸತ್ಯ ಮಾತ್ರ ಗೆಲ್ಲುವುದು) ಎಂಬ ಸಾಲುಗಳನ್ನು ಆಧರಿಸಿ, ಶ್ರೀಯುತ ಕು.ರಾ.ಸೀತಾರಾಮ ಶಾಸ್ತ್ರೀ ಯವರು ಬರೆದ ಈ ಗೀತೆ ಅದೆಷ್ಟು ಅರ್ಥಗರ್ಭಿತ! ಅಲ್ಲಿನ ಪ್ರತೀ ಸಾಲುಗಳು ಗೀತೆಯನ್ನು ಮತ್ತೆ, ಮತ್ತೆ ಓದುವಂತೆ, ಕೇಳುವಂತೆ, ನನ್ನಷ್ಟಕ್ಕೇ ಹಾಡಿಕೊಳ್ಳುವಂತೆ ಮಾಡಿದ್ದವು. ಅಲ್ಲದೇ ಪ್ರತೀ ಸಾಲಿನ ಅರ್ಥವನ್ನು ನಮ್ಮ ಜೀವನಾನುಭವಗಳಿಗೆ ಹೋಲಿಸಿ ನೋಡುವಂತೆಯೂ ಮಾಡಿದ್ದವು. ಈಗ ಸತ್ಯದ ಬಗೆಗಿನ ನನ್ನ ಯೋಚನೆ ಹೊಸ ತಿರುವನ್ನು ಪಡೆದುಕೊಂಡಿತ್ತು.
“ಸತ್ಯ’ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದರೊಂದಿಗೆ ಯಾವುದೇ ಸಂಬಂಧಗಳ ಪರಸ್ಪರ ಘನತೆ, ಮಾನ್ಯತೆ, ಗೌರವಗಳನ್ನು ಹೆಚ್ಚಿಸುವುದಿಲ್ಲವೇ? ಸತ್ಯವನ್ನಾಡುವ ರೂಢಿ ನಮ್ಮನ್ನು ಆತ್ಮವಂಚನೆ ಮಾಡಿಕೊಳ್ಳದಂತೆ ಮಾಡುವುದು. “ಆಸೆ ಫಲಿಸದೇನೋ ಎಂದು ಅಳುಕಲೇಕೆ ಅಳ್ಳೆದೆ, ಅಂತರಂಗದಲ್ಲೇ ಇರುವ ಅಂತರಾತ್ಮ ಕಾಯದೆ | ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷವೆಲ್ಲಿದೆ, ಸತ್ಯವಾದ ಘನತೆ, ಸೋಲೆ ಕಾಣದಂತೆ || ‘ ಎನ್ನುವ ಸಾಲುಗಳು ಅದೆಷ್ಟು ಅರ್ಥಪೂರ್ಣವಾಗಿವೆ ಎನ್ನಿಸಿತ್ತು. ಆತ್ಮಶಕ್ತಿ ಎನ್ನುವ ಕಲ್ಪವೃಕ್ಷವನ್ನು ಅಂತರಂಗದಲ್ಲಿ ಬೆಳೆಸಿಕೊಂಡಾಗ ಅಲ್ಲಿ “ಸೋಲು’ ಎಂಬುದು ಬರಿಯ ಶಬ್ದವಾಗುವುದೇ ವಿನಃ ನಮ್ಮ ಅನುಭವವಾಗುವುದಿಲ್ಲ ಎನ್ನುವ ನಿಜದ ಅರಿವಾಗಿತ್ತು.
ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಿಕೊಂಡಾಗ ತೋರುವ ನಮ್ಮ ಬಾಹ್ಯ ಸೌಂದರ್ಯದಂತೆ, ಅಂತರಾತ್ಮವೆಂಬ ಕನ್ನಡಿಯಲ್ಲಿ ಮನಸ್ಸಿನ ಪ್ರತಿಬಿಂಬವನ್ನು ಕಂಡಾಗ ಅದು ಸುಂದರವಾಗಿ ಕಾಣಬೇಕಲ್ಲವೇ? ಯಾವಾಗಲೂ ಸುಂದರತೆಯನ್ನು ನೋಡಲು ಬಯಸುವ ಮನುಷ್ಯ, ಸತ್ಯವನ್ನೊಪ್ಪದೇ ಇ¨ªಾಗ ಕಂಡುಬರುವ ಮನಸ್ಸಿನ ವಿರೂಪವನ್ನು ಒಪ್ಪಿಕೊಳ್ಳುತ್ತಾನೆಯೇ? ಅಥವಾ ತಾನೊಪ್ಪದ ಸತ್ಯವನ್ನು ಬೇರೊಬ್ಬರಿಂದ ತಿಳಿಯಲ್ಪಡುವ ಸಂದರ್ಭದಲ್ಲಿ ತನ್ನ ಮನಸ್ಸಿನ ವಿರೂಪವನ್ನು ತೋರ್ಪಡಿಸಿಕೊಳ್ಳುವನೋ? ಎನ್ನುವುದು ಅವರವರ ಆತ್ಮಶಕ್ತಿಯನ್ನು ಅವಲಂಬಿಸಿರುತ್ತದೆ ಎನ್ನುವುದು ನಮಗಾಗುವ ಅನುಭವಗಳಿಂದ ಮನವರಿಕೆಯಾಗುವುದು ಎನ್ನಿಸಿತು.
ಪುಟ್ಟನಿಗೋ ಬೆಂಗಳೂರಿನ ಹತ್ತು ಹಲವು ಸ್ಥಳಗಳ ಬಗ್ಗೆ ತಿಳಿದುಕೊಳ್ಳುವ ಆಸೆ. ನಮ್ಮ ಮೆಟ್ರೋ, ಲಾಲ್‌ಬಾಗಿನ ಪುಷ್ಪ ಪ್ರದರ್ಶನ, ಚನ್ನಪಟ್ಟಣದ ಆಟಿಕೆಗಳು, ಪುರಾತನ ದೇವಸ್ಥಾನಗಳು, ವಿಧಾನ ಸೌಧ, ಕರ್ನಾಟಕ ಉಚ್ಚ ನ್ಯಾಯಾಲಯ ಹೀಗೆ ಎಲ್ಲವೂ ಅವನಿಗೆ ಆಸಕ್ತಿಯ ವಿಷಯಗಳು. ತನ್ನ ತಾತ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸುತ್ತಿದ್ದರೆಂದು ತಿಳಿದಾಗಲಂತೂ ತಾನು ಸಿನೆಮಾಗಳಲ್ಲಿ, ಟಿವಿ ಸೀರಿಯಲ್ ಗಳಲ್ಲಿ ನೋಡಿದ್ದ ಕೋರ್ಟ್‌ನ ದೃಶ್ಯಗಳಲ್ಲಿ ಕಟಕಟೆಯಲ್ಲಿ ನಿಂತು ಮಾತನಾಡುವ ಜನರನ್ನು, ಅಲ್ಲಿ ತೆಗೆದುಕೊಳ್ಳುವ ಪ್ರಮಾಣವನ್ನು, ಕಪ್ಪು ಕೋಟ್‌ನ ವಕೀಲರನ್ನು, ವಾದ ವಿವಾದಗಳನ್ನು ಕೇಳಿಸಿಕೊಳ್ಳುವ ನ್ಯಾಯಾಧೀಶರನ್ನು ನೆನಪಿಸಿಕೊಂಡು, ನಿಜವಾಗಿಯೂ ಕೋರ್ಟ್‌ನ ವಾತಾವರಣ ಹಾಗೆಯೇ ಇರುವುದೇ? ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದಲ್ಲವೇ? ಎಂದು ನೂರೆಂಟು ಪ್ರಶ್ನೆಗಳನ್ನು ಕೇಳಿದ.
ಶಾಲಾದಿನಗಳಿಂದಲೂ ನ್ಯಾಯಾಲಯದ ಆಗುಹೋಗುಗಳನ್ನು ಹತ್ತಿರದಿಂದ ನೋಡಿದ ನನಗೆ ಅಲ್ಲಿ ಸಾಕ್ಷಿ ಹೇಳುವ ಮೊದಲು ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲ ಸತ್ಯ ಎನ್ನುವ ಪ್ರಮಾಣ ನೆನಪಿಗೆ ಬಂದು ಮತ್ತೆ ಸತ್ಯದ ಬಗ್ಗೆ ಆಲೋಚಿಸುವಂತೆ ಮಾಡಿತ್ತು. ಅಲ್ಲದೇ ಕೆಲವೊಮ್ಮೆ ಮನುಷ್ಯ ಸತ್ಯವನ್ನು ಮುಚ್ಚಿಟ್ಟು ಸುಳ್ಳಾಡುವುದೇಕೆ? ಎನ್ನುವ ಪ್ರಶ್ನೆಗೆ ಮನಸ್ಸು ಉತ್ತರವನ್ನು ಹುಡುಕಲು ಪ್ರಾರಂಭಿಸಿತು.
ಜೀವನದ ಆಗುಹೋಗುಗಳನ್ನು ಹಗುರವಾಗಿ ಪರಿಗಣಿಸುವ ಬೇಜವಾಬ್ದಾರಿತನದ ಮನುಷ್ಯ ಸತ್ಯಕ್ಕೆ ಬೆಲೆಕೊಡದೆ ಸುಳ್ಳಾಡಬಹುದೇನೋ, ಸತ್ಯವನ್ನು ತಿಳಿದ ವ್ಯಕ್ತಿ ಕೋಪಗೊಳ್ಳಬಹುದು ಅಥವಾ ಮನನೊಂದುಕೊಳ್ಳಬಹುದೆಂದು ಸುಳ್ಳು ಹೇಳಬಹುದೇನೋ ಮತ್ತು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸುಳ್ಳಿನ ಮೊರೆ ಹೋಗಬಹುದೇನೋ ಎಂದೆಲ್ಲ ಯೋಚಿಸಿದೆ.
ಕೆಲವೊಮ್ಮೆ ಆಘಾತಕಾರಿ, ಅಹಿತಕಾರಿ ಮತ್ತು ಮುಗ್ಧ ಮನಗಳನ್ನು ನೋಯಿಸುವ ಸತ್ಯವನ್ನು ಪರಾಮರ್ಶಿಸಿಕೊಂಡು ಅಂತಹ ಸಂದರ್ಭಗಳಲ್ಲಿ ಅದನ್ನು ಮರೆಮಾಚುವುದೇ ಸಮಯೋಚಿತವಾದದ್ದೆನಿಸಿತು. ಆದರೆ ಆತ್ಮವಂಚನೆ ಮಾಡಿಕೊಂಡು ಸುಳ್ಳು ಮಾತನಾಡಲಾಗುವುದೇ ಎಂದು ಯೋಚಿಸುತ್ತಿರುವಾಗ, ಮಾನವನ ಮನ ನೊಂದಿತೆಂದು ಸತ್ಯಕ್ಕೆ ಅವಮಾನ ಮಾಡಬೇಡ ಎನ್ನುವ ಸಾಲುಗಳು ಸ್ನೇಹಿತರೊಬ್ಬರ ಫೇಸಬುಕ್ ಪುಟದಲ್ಲಿ ಕಂಡಿದ್ದವು. ನಾವು ಮಾತನಾಡುವ ಸತ್ಯ ಪ್ರಿಯವಾಗಿರಲಿ, ಅಪ್ರಿಯವಾಗಿರಲಿ ಮನುಷ್ಯನ ಮನಸ್ಸಿನ ಆರೋಗ್ಯಕ್ಕೆ ಸತ್ಯದ ಆವಶ್ಯಕತೆ ಏನೆಂಬುದನ್ನು ಮನವರಿಕೆ ಮಾಡಿಸಿದ್ದವು.
ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ “ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು, ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು’ ಎನ್ನುವ ಸಾಲುಗಳು ಬದುಕಿನ ಅನಿಶ್ಚಿತತೆಯನ್ನು, ಅಭದ್ರತೆಯನ್ನು ತಿಳಿಸಿಕೊಡುವಾಗ, ಸತ್ಯದ ಕಹಿ ಗುಳಿಗೆಯನ್ನು ನುಂಗಿ, ಆರೋಗ್ಯವಂತ, ಸುಂದರವಾದ ಮನಸ್ಸನ್ನು ಪಡೆದು ಜೀವನ ನಡೆಸುವ ಪ್ರಯತ್ನ ನಮ್ಮದಾಗಬೇಕು ಎನ್ನುವ ವಿಚಾರ ಮನದಲ್ಲಿ ಮನೆ ಮಾಡಿತ್ತು. ಅಮ್ಮ, ಇವತ್ತು ಈ ಕಹಿ ಔಷಧ ತೊಗೊಳ್ಳೋದು ಮುಗೀತಲ್ವ ಪುಟ್ಟ ಕೇಳಿದಾಗ, ಹೌದು ಪುಟ್ಟ ಎಂದು ಹೇಳಿ “ಸತ್ಯವೆಂಬ ಕಹಿ ಗುಳಿಗೆ’ ಯ ಬಗ್ಗೆ ನನಗನ್ನಿಸಿದ್ದನ್ನು ನೋಟ್ ಪುಸ್ತಕದಲ್ಲಿ ಬರೆದಿಟ್ಟುಕೊಂಡೆ.
*ಸರಿತಾ ನವಲಿ, ನ್ಯೂಜೆರ್ಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.